
ಧಾರವಾಡ: ಬೆಳೆಗಾರರ ಪ್ರಮುಖ ಬೇಡಿಕೆಯಾದ ಟನ್ ಕಬ್ಬಿಗೆ 5,500 ರು. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಒದಗಿಸುವ ಜವಾಬ್ದಾರಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತೆಗೆದುಕೊಳ್ಳಬೇಕು ಹಾಗೂ ಬೆಲೆ ನಿಗದಿ ಆಗುವವರೆಗೆ ರಾಜ್ಯದಲ್ಲಿ ಕಬ್ಬು ಕಾರ್ಖಾನೆಗಳು ಕಬ್ಬು ನುರಿಸುವಂತಿಲ್ಲ ಎಂಬ ಎರಡು ಷರತ್ತುಗಳೊಂದಿಗೆ ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ತಮ್ಮ ಪಾದಯಾತ್ರೆಯನ್ನು ಕಬ್ಬು ಬೆಳೆಗಾರರು ಸ್ಥಗಿತಗೊಳಿಸಿದ್ದಾರೆ.
ಭರವಸೆ ಈಡೇರಿಕೆಗೆ ನೀಡಿದ್ದ ಗಡುವಿನೊಳಗೆ ಕೇಂದ್ರ ಸರ್ಕಾರ ಭರವಸೆ ನೀಡದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಬೆಳಗಾವಿಯ ಕಿತ್ತೂರಿನಿಂದ ಪುನಾರಂಭಗೊಂಡ ರೈತರ ಪಾದಯಾತ್ರೆ ರಾತ್ರಿ ವೇಳೆ ಧಾರವಾಡ ಗಡಿ ಗ್ರಾಮ ತೇಗೂರಿಗೆ ಬಂದು ತಲುಪಿತು. ಅಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕೇಂದ್ರ ಸರ್ಕಾರದ ಪರವಾಗಿ ನೀಡಿದ ಕೆಲವು ಭರವಸೆಗಳ ಹಿನ್ನೆಲೆಯಲ್ಲಿ ರೈತ ಮುಖಂಡ ಚೂನಪ್ಪ ಪೂಜಾರ ಅವರು ರೈತರ ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಜಿಲ್ಲಾಧಿಕಾರಿ ಮೇಲಿನ ನಂಬಿಕೆಯಿಂದ ಸದ್ಯಕ್ಕೆ ಈ ಹೋರಾಟ ಸ್ಥಗಿತ ಮಾಡುತ್ತಿದ್ದೇವೆ. ಶೀಘ್ರವೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಇಲ್ಲದೇ ಹೋದಲ್ಲಿ ಮತ್ತೆ ಹೋರಾಟ ಶುರುವಾಗಲಿದೆ ಎಂದು ಎಚ್ಚರಿಸಿದರು.
ಸಕ್ಕರೆ ಕಾರ್ಖಾನೆ ಆರಂಭಿಸುವುದಿಲ್ಲ
ಎಂಎಸ್‌ಪಿ ನಿಗದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಭೆ ಕರೆಯಬೇಕು. ಆ ಸಭೆಗೆ ರೈತರನ್ನು ಆಹ್ವಾನಿಸಬೇಕು ಎಂದು ರೈತ ಮುಖಂಡರು ಷರತ್ತು ಹಾಕಿದರು. ಇದಕ್ಕೆ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಪರಿಹಾರ ಕೊಡಿಸುವ ಜವಾಬ್ದಾರಿ ತಮ್ಮದು ಎಂದು ಹೇಳಿದರು. ಅಲ್ಲದೆ, ಸಮಸ್ಯೆ ಬಗೆಹರಿಯುವವರೆಗೆ ಸಕ್ಕರೆ ಕಾರ್ಖಾನೆ ಆರಂಭಿಸುವುದಿಲ್ಲ ಎಂದು ಭರವಸೆ ನೀಡಿದರು.
ಕಳೆದ ಅ.14ರಂದು ಬೆಳಗಾವಿಯ ಹತ್ತರಗಿ ಟೋಲ್‌ಗೇಟ್ ನಿಂದ ರೈತರ ಪಾದಯಾತ್ರೆ ಆರಂಭ ಆಗಿತ್ತು. ಐದನೇ ದಿನ ಭಾನುವಾರ ಧಾರವಾಡ ಪ್ರವೇಶ ಆಗಿತ್ತು. ಬೇಡಿಕೆ ಈಡೇರಿಕೆ ಆಗದೇ ಹೋದಲ್ಲಿ ಅ.22ರಂದು ಧಾರವಾಡದಲ್ಲಿ ಲಕ್ಷಗಟ್ಟಲೇ ರೈತರನ್ನು ಸೇರಿಸಿ ದೊಡ್ಡ ಹೋರಾಟ ಮಾಡುವ ಎಚ್ಚರಿಕೆಯನ್ನು ರೈತ ಮುಖಂಡರು ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ