
ಮಯೂರ ಹೆಗಡೆ
ಅಬ್ದುಲ್ ಖಾದರ್ ಇಮಾಮ್ ಸಾಬ್ ನಡಕಟ್ಟಿನ 24ಕ್ಕೂ ಹೆಚ್ಚಿನ ಕೃಷಿ ಯಂತ್ರೋಪಕರಣಗಳನ್ನು ಆವಿಷ್ಕರಿಸಿದ ಸಂಶೋಧಕ. ಮುಳ್ಳಿನ ಹಾದಿಯಲ್ಲಿ ಸಾಧನೆಯ ಶಿಖರವೇರಿದ ಸಾಧಕ. ಹೊಲ ಮನೆ ಅಡವಿಟ್ಟು ಲಕ್ಷಾಂತರ ರು. ಸಾಲ ಮಾಡಿ ಕೃಷಿ ಉಪಕರಣ ಸಂಶೋಧನೆ ಮಾಡಿದವರು ಇವರು. ಇವರ ಕಾರ್ಯಕ್ಕೆ ರಾಷ್ಟ್ರ ‘ಪದ್ಮಶ್ರೀ’ ಘೋಷಿಸಿದೆ. ಇವರು ಧಾರವಾಡ ಜಿಲ್ಲೆ ಅಣ್ಣಿಗೇರಿಯವರು. ಕಲಿತಿದ್ದು ಕಡಿಮೆ. ಆದರೆ, ಕೃಷಿ ಯಂತ್ರೋಪಕರಣ ಸಂಶೋಧನೆಯಲ್ಲಿ ವಿಶ್ವವಿದ್ಯಾಲಯದಷ್ಟುಜ್ಞಾನಭಂಡಾರ ಗಳಿಸಿಕೊಂಡು ರೈತ ಮಿತ್ರ ಎನ್ನಿಸಿಕೊಂಡವರು. ದುಬಾರಿ ಖರ್ಚಿಗೆ ಕಡಿವಾಣ ಹಾಕಿ ಹೆಚ್ಚಿನ ಬೆಳೆ ಆದಾಯ ತರುವಲ್ಲಿ ನೆರವಾಗುವ ಕೃಷಿ ಉಪಕರಣ ಸಂಶೋಧಿಸಿದ್ದು ಇವರ ಹೆಗ್ಗಳಿಕೆ.
ನಡಕಟ್ಟಿನ ಅವರು ಯಶಸ್ಸಿನ ಉತ್ತುಂಗಕ್ಕೆ ಏರಲು ಮುಳ್ಳಿನ ಹಾದಿ ಸವೆಸಿದ್ದಾರೆ. ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿದ್ದಾರೆ. ಹೊಲ ಮನೆ ಅಡವಿಟ್ಟು ಲಕ್ಷಾಂತರ ರು. ಸಾಲ ಮಾಡಿ ಕೃಷಿ ಸಂಶೋಧನೆ ಉಪಕರಣಗಳ ಖರ್ಚು ವೆಚ್ಚಕ್ಕೆ ವಿನಿಯೋಗಿಸಿದ್ದಾರೆ. ಸಾಲದ ಹೊರೆಯಿಂದ ಬೀದಿಗೆ ಬರುವ ಪ್ರಸಂಗ ಎದುರಿಸಿದ್ದೂ ಇದೆ. ಆತ್ಮಹತ್ಯೆಯ ಯೋಚನೆಯನ್ನೂ ಮಾಡಿದ್ದರು. ಅಂಥವರು ಇವತ್ತು ಕೋಟ್ಯಂತರ ರು. ವ್ಯವಹಾರ ಮಾಡುತ್ತಿದ್ದಾರೆ.
ಕನ್ನಡಪ್ರಭ- ಸುವರ್ಣ ನ್ಯೂಸ್‌ನಿಂದ ಕೊಡಲ್ಪಡುವ ರೈತರತ್ನ ಪ್ರಶಸ್ತಿ ದೊರಕಿದ್ದು ತುಂಬಾ ಖುಷಿಯಾಗಿದೆ. ಮತ್ತಷ್ಟುಸಂಶೋಧನೆ ಮುಂದುವರಿಸಲು ಪ್ರೋತ್ಸಾಹ ನೀಡಿದಂತಾಗಿದೆ. ಯುವ ರೈತರಿಗೆ ಸ್ಫೂರ್ತಿಯಾಗಲು ಇಂಥ ಕಾರ್ಯಕ್ರಮಗಳು ಸಹಕಾರಿ. ಮಾಧ್ಯಮಗಳು ಇಂಥ ಕಾರ್ಯದ ಮೂಲಕ ಸಾಮಾಜಿಕ ಬದ್ಧತೆ ಮೆರೆಯಬೇಕು.- ಇಮಾಮ್ ಸಾಬ್ ನಡಕಟ್ಟಿನ
1975ರಲ್ಲಿ ವಿಶ್ವಶಾಂತಿ ಕೃಷಿ ಸಂಶೋಧನೆ ಮತ್ತು ಕೈಗಾರಿಕಾ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷಿಯಂತ್ರಗಳ ಸಂಶೋಧನೆ ಸಾಂಗವಾಗಿ ಮುಂದುವರಿದಿದೆ. ಕಷ್ಟಎದುರಾದಾಗ ನೆರವಾಗಿದ್ದು ಧಾರವಾಡ ಕೃಷಿ ವಿವಿ ಹಿಂದಿನ ಕುಲಪತಿ ಡಾ. ಎಸ್.ಎ ಪಾಟೀಲ. ಹೆಚ್ಚಿನ ಸಂಶೋಧನೆಯಲ್ಲಿ ತೊಡಗಲು ಹೇಳಿ ಕೃಷಿ ಇಲಾಖೆಯಿಂದ . 15 ಲಕ್ಷ ಕೊಡಿಸಿದ್ದರು. ಕೃಷಿ ಉಪಕರಣಗಳ ಪ್ರಾಡಕ್ಟ್ ಮಾರ್ಕೆಟಿಂಗ್ ಮಾಡಲು ಸಹಾಯ ಮಾಡಿದ್ದರು. ಅದರಂತೆ ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಕೂಡ ನಡಕಟ್ಟಿನ ಪ್ರತಿಭೆ ಜಗತ್ತಿಗೆ ಅನಾವರಣಗೊಳ್ಳಲು ನೆರವಾದರು.
ನಡಕಟ್ಟಿನ ಅವರು ಇಲ್ಲಿವರೆಗೆ 24 ಬಗೆಯ ಕೃಷಿ ಪರಿಕರಗಳನ್ನು ಸಂಶೋಧನೆ ಮಾಡಿದ್ದಾರೆ. 10 ಇನ್1 ಕೂರಿಗೆ, ಹರಗುವ ಗಾಳಿ ಕುಂಟೆ, ದಿಂಡಿನ ಕುಂಟೆ, ಬಂಡೆ ಫಾರಂ, ಹಸಿ ಗಜ್ಜೆ ಶೇಂಗಾ ಕೀಳುವ ಮತ್ತು ಒಕ್ಕುವ, ತೂರಿ ಸಾಣಿಸಿ ಚೀಲ ತುಂಬುವ ಯಂತ್ರ, ರೋಟವೇಟರ್, ಕುಡ ಹದಗೊಳಿಸುವ ಯಂತ್ರ, ಕಬ್ಬು ನಾಟಿ ಮಾಡುವ ಯಂತ್ರ, ಹುಣಸೆ
ಹಣ್ಣಿನಿಂದ ಬೀಜ ಬೇರ್ಪಡಿಸುವ ಯಂತ್ರ, ಗಾಲಿ ಕುಂಟೆ ಯಂತ್ರ, 5 ಇನ್ 1 ಕೂರಿಗೆ, ಕಬ್ಬಿಣದ ನೇಗಿಲು ಗಾಲಿಗಳು, ನೇಗಿಲು, ರೈತರ ಕೂರಿಗೆ ಪೂರೈಸುವ ಬಿಡಿಭಾಗ ತಯಾರಿಸುತ್ತಿದ್ದಾರೆ. ತಮ್ಮ ಕೇಂದ್ರದಲ್ಲಿ 40ಕ್ಕೂ ಹೆಚ್ಚಿನವರಿಗೆ ಉದ್ಯೋಗ ನೀಡಿದ್ದಾರೆ. ಪ್ರಸ್ತುತ ಅವರ ಯಂತ್ರೋಪಕರಣಗಳು ರಾಜ್ಯ ಮಾತ್ರವಲ್ಲದೆ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಒಡಿಶಾ, ತಿರುಚನಾಪಲ್ಲಿ, ಆಂಧ್ರಪ್ರದೇಶ ಹೀಗೆ ಅನೇಕ ರಾಜ್ಯಗಳಿಗೆ ಪೂರೈಕೆ ಆಗುತ್ತಿದೆ.
2022ರಲ್ಲಿ ಅಬ್ದುಲ್‌ಖಾದರ್ ಇಮಾಮ್‌ಸಾಬ್ ನಡಕಟ್ಟಿನ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ. 2015ರಲ್ಲಿ ಅವರ ಸಾಧನೆಗೆ, ವಿಶೇಷವಾಗಿ ನಡಕಟ್ಟಿನ ಕೂರಿಗೆ ಸಂಶೋಧನೆಗೆ ರಾಷ್ಟ್ರಪತಿಗಳು ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ್ದರು. 2017ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಾಣಿಜ್ಯ ರತ್ನ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಂದ ನೂರಾರು ಪುರಸ್ಕಾರಗಳು ಬಂದಿವೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಪುರಸ್ಕಾರ ನೀಡಿದ ನಗದು ಹಣವನ್ನು ಶಿಕ್ಷಣ ಸಂಸ್ಥೆಗಳು, ಮಠಮಾನ್ಯಗಳಿಗೆ ದಾನ ಮಾಡಿದ್ದಾರೆ. ಸದ್ಯ ಸಮಾಜದ ಬಡ ಕುಟುಂಬಗಳ ರಕ್ಷಣೆಗೆ ಧನಸಹಾಯವನ್ನು ದಾನ ರೂಪದಲ್ಲಿ ನೀಡಲು ಟ್ರಸ್ಟ್ ಸ್ಥಾಪಿಸಿದ್ದಾರೆ.
ಸಂಶೋಧನೆ ಗೀಳು ಹುಟ್ಟಿದ್ದು ಹೀಗೆ..
ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದ ನಡಕಟ್ಟಿನ ಎಷ್ಟೇ ಪ್ರಯತ್ನ ಪಟ್ಟರೂ ಬೆಳಗ್ಗೆ ನಿದ್ರೆಯಿಂದ ಎದ್ದು ಓದಿಕೊಳ್ಳಲು ಆಗುತ್ತಿರಲಿಲ್ಲ. ಆಗ ಯೋಚಿಸಿ ಅಲಾರಾಂ ಆದ ತಕ್ಷಣ ಮುಖದ ಮೇಲೆ ನೀರು ಬೀಳುವಂತೆ ಗಡಿಯಾರ ರೂಪಿಸಿಕೊಂಡರು! ಇದೆ ಇವರ ಮೊದಲ ಆವಿಷ್ಕಾರ. ಅಂದಿನಿಂದ ಇಂದಿನವರೆಗೆ ಈ ಕ್ರಿಯಾಶೀಲ ಮನೋಭಾವವೆ ಸಾಧನೆಗೆ ಕಾರಣವಾಗಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ