ಪ್ರತಿ ರಾತ್ರಿ ಬೆಳೆಗಳಿಗೆ ಸಂಗೀತ ಕೇಳಿಸುವ ಬಾಗಲಕೋಟೆ ತೇರದಾಳದ ರೈತ ಧರೆಪ್ಪ ಕಿತ್ತೂರ

ಕನ್ನಡ ಪ್ರಭ- ಸುವರ್ಣ ನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ಬಾಗಲಕೋಟೆ ತೇರದಾಳದ ರೈತ ಧರೆಪ್ಪ ಕಿತ್ತೂರ ಅವರಿಗೆ ಸಂದಿದೆ. ಸಾಧಕ ರೈತನಿಗೆ ಗೌರವ ಸಮರ್ಪಣೆ.
 

Bagalkote Organic farming category Farmer Dhareppa Kittura honored with Raita Ratna 2022 vcs

ಶಿವಾನಂದ ಮಹಾಬಲಶೆಟ್ಟಿ

ಸುಮಾರು 30 ವರ್ಷಗಳ ಹಿಂದೆ 1991ರಲ್ಲಿ ಸಾವಯವ ಕೃಷಿಯಲ್ಲಿ ತೊಡಗಿದ ಧರೆಪ್ಪ ಅವರನ್ನು ಕಂಡು ಬಹುತೇಕರು ಮೂದಲಿಸಿದ್ದರು. ಆದರೆ ಛಲಬಿಡದ ತ್ರಿವಿಕ್ರಮನಂತೆ ಕೃಷಿ ಮಾಡಿದ ರೈತ ಧರೆಪ್ಪ ಇಂದು ಸಾವಯವ ಕೃಷಿಯಲ್ಲಿ ಬಹುಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಿ ತಮ್ಮ ಗ್ರಾಮಕ್ಕಷ್ಟೇ ಅಲ್ಲ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

ಬಾಗಲಕೋಟೆಯ ತೇರದಾಳದ ಧರೆಪ್ಪ ಒಟ್ಟು 18 ಎಕರೆ ಭೂಮಿ ಹೊಂದಿದ್ದಾರೆ. ತೇರದಾಳ-ಕಾಲತಿಪ್ಪಿ ಮುಖ್ಯರಸ್ತೆಗೆ ಅಂಟಿಕೊಂಡಿರುವ 10 ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬಹು ಬೆಳೆ ಬೆಳೆಯುತ್ತಿದ್ದಾರೆ. ಬೇರೆ ಪ್ರದೇಶದಲ್ಲಿರುವ 8 ಎಕರೆ ಭೂಮಿಯಲ್ಲಿ ಕಬ್ಬು ಬೆಳೆಯುತ್ತಾರೆ. ಜತೆಗೆ 20 ಗುಂಟೆ ಭೂಪ್ರದೇಶದಲ್ಲಿ ವಿವಿಧ ತರಕಾರಿ ಬೆಳೆದು ವರ್ಷವಿಡೀ ಮನೆ ವೆಚ್ಚ ಮತ್ತು ನಿರ್ವಹಣೆಯ ವೆಚ್ಚ ಸರಿದೂಗಿಸಿಕೊಳ್ಳುತ್ತಾರೆ.

Raita Ratna Award 2022 ಸುಸ್ಥಿರ ಕೃಷಿಯಲ್ಲಿ ಯಶಸ್ಸು ಸಾಧಿಸಿದ ಅಬ್ದುಲ್‌ ಖಾದರ್‌

ಇವರ ಕುಟುಂಬವೇ ಇವರ ಸಾಧನೆಯ ಹಿಂದೆ ಇರುವ ಶಕ್ತಿ. ಅವರ ಕುಟುಂಬದಲ್ಲಿ 12 ಜನ ಸದಸ್ಯರಿದ್ದು ಎಲ್ಲರೂ ದಿನವಿಡೀ ಕೃಷಿ ಕಾಯಕದಲ್ಲಿ ತೊಡಗುತ್ತಾರೆ. ಇವರ ಜಮೀನಿನಲ್ಲಿ ಸರ್ವ ಕಾಲಮಾನಕ್ಕೆ ಹೊಂದುವ ದೀರ್ಘಾವಧಿ ಇಳುವರಿ ನೀಡುವ ಹಾಗೂ ಆಯಾ ಕಾಲಮಾನಕ್ಕೆ ತಕ್ಕುದಾದ ಅಲ್ಪಾವಧಿಯ ಇಳುವರಿ ನೀಡುವ ವೈವಿಧ್ಯಮಯ ಬೆಳೆಗಳು ನೋಡಲು ಸಿಗುತ್ತವೆ. ದೇಸಿ ಮೂಲದ ತೆಂಗು, ನುಗ್ಗೆ, ಅಡಕೆ, ಮಾವು ಇತ್ಯಾದಿಗಳಿಂದ ಹಿಡಿದು ವಿದೇಶಿ ಮೂಲದ ಕಾಫಿ, ಬಟರ್‌ಫä್ರಟ್‌, ನಿಯಾಜಾಕಿ ಮಾವು, ಔಷಧೀಯ ಗುಣವುಳ್ಳ ಕಪ್ಪುಗೋಧಿ, ಗುಡ್ಡದನೆಲ್ಲಿ, ಸಿಲ್ವರ್‌ ಓಕ್‌ ಗಿಡಗಳನ್ನೂ ಬೆಳೆಸಿದ್ದಾರೆ.

ಸಾವಯವ ಪದ್ಧತಿಯಲ್ಲಿ ಕಬ್ಬನ್ನು 6 ಅಡಿಗೊಂದು ಕಣ್ಣು ನಾಟಿ ಮಾಡಿದ್ದು, 1 ಎಕರೆಗೆ 4 ಕ್ವಿಂಟಾಲ್‌ ಮಾತ್ರ ಬೀಜ ನಾಟಿ ಮಾಡುತ್ತಾರೆ. ಇದರಿಂದ ಹೇರಳವಾಗಿ ಗಾಳಿ-ಬೆಳಕು ದೊರೆಯುವುದರಿಂದ ಫಸಲಿನಲ್ಲಿ ಹೆಚ್ಚಳವಾಗುತ್ತದೆ ಎನ್ನುತ್ತಾರೆ. ಕಬ್ಬಿನಲ್ಲಿ ಅಂತರಬೆಳೆಯಾಗಿ ತರಕಾರಿ ಸೊಪ್ಪುಗಳಾದ ಮೆಂತ್ಯ, ಸಬ್ಬಸಗಿ, ಕೊತ್ತಂಬರಿ, ಪಾಲಕ್‌, ಉಳ್ಳಾಗಡ್ಡಿ, ಶೇಂಗಾ, ಮೂಲಂಗಿ, ಚವಳಿಕಾಯಿ ಇತ್ಯಾದಿ ಬೆಳೆಯುತ್ತಾರೆ.

Raita Ratna Award 2022 ಬಂಡೆ ಮೇಲೆ ಬತ್ತ ಬೆಳೆದ ಸಾಧಕ ಅರುಣ್‌ ಕುಮಾರ್‌

‘ಅಮಾವಾಸ್ಯೆ ಮುಂದಿಟ್ಟುಕೊಂಡು ಬೀಜ ಬಿತ್ತಬೇಕು. ಹುಣ್ಣಿಮೆ ಮುಂದಿಟ್ಟುಕೊಂಡು ಸಸಿ ನಾಟಿ ಮಾಡಬೇಕು. ಭೂಗರ್ಭದಲ್ಲಿರುವ ಜಲದಲ್ಲೂ ಈ ಅವಧಿಯಲ್ಲಿ ನೀರಿನ ಉಬ್ಬರವಿಳಿತ ಕಂಡುಬರುತ್ತದೆ. ಹೀಗಾಗಿ, ಬೇರು ಮತ್ತು ಕಾಂಡದ ಬೆಳವಣಿಗೆಗೆ ಇದು ಪೂರಕವಾಗಿರುತ್ತದೆ. ಬೆಳೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಇದಕ್ಕೆ ವೈಜ್ಞಾನಿಕವಾಗಿಯೂ ಹಲವು ಕಾರಣಗಳಿವೆ’ ಎನ್ನುತ್ತಾರೆ ಧರೆಪ್ಪ.

‘ನಾಟಿ ಮಾಡಿದ ಬೀಜಗಳನ್ನೇ ಕಾಯ್ದುಕೊಂಡಿರುವುದರಿಂದ ಬಿತ್ತನೆಗೆ ಯಾವತ್ತೂ ಅಡಚÜಣೆಯಾಗಿಲ್ಲ. ತೋಟದೆಲ್ಲೆಡೆ 200 ಮೀಟರ್‌ ಅಂತರದಲ್ಲಿ ನಿತ್ಯ ರಾತ್ರಿ 10ರಿಂದ ನಸುಕಿನ 4ರವರೆಗೆ ಬೆಳೆಗಳಿಗೆ ತಬಲಾ, ಶಹನಾಯಿ, ಜಲತರಂಗ, ಕೊಳಲು ವಾದನ ಹಾಗೂ ಶಾಸ್ತ್ರೀಯ ಸಂಗೀತ ಕೇಳಿಸುವಂತೆ ವ್ಯವಸ್ಥೆಗೊಳಿಸಿದ್ದಕ್ಕೆ ನಮ್ಮ ಬೆಳೆಯಲ್ಲಿ ಸಾಕಷ್ಟುಧನಾತ್ಮಕ ಬೆಳವಣಿಗೆಯಾಗಿದೆ. ಇದಕ್ಕೆ ವಿಜ್ಞಾನಿ ಸರ್‌ ಜಗದೀಶಚಂದ್ರ ಬೋಸ್‌ ಅವರೇ ಪ್ರೇರಣೆ. ಅವರು ಸಾಬೀತುಪಡಿಸಿರುವಂತೆ ಸಸಿಗಳಿಗೂ ಜೀವವಿದೆ. ಸಂಗೀತಕ್ಕೆ ಸ್ಪಂದಿಸುವ ಗುಣವಿದೆ’ ಎಂದು ಹೇಳುತ್ತಾರೆ.

ಧರೆಪ್ಪ ತಮ್ಮ ಜಮೀನಿನಲ್ಲಿ 2 ಸೋಲಾರ್‌ ಪಂಪ್‌ಸೆಟ್‌ಗಳನ್ನು ಸರ್ಕಾರದ ಹೆಸ್ಕಾಂ ಯೋಜನೆಯಡಿ ಅಳವಡಿಸಿಕೊಂಡಿದ್ದಾರೆ. ನರೇಗಾ ಯೋಜನೆಯಡಿ 21 ಮೀಟರ್‌ ಉದ್ದ ಮತ್ತು ಅಗಲ ಹಾಗೂ 3 ಮೀಟರ್‌ ಆಳದ ಕೃಷಿಹೊಂಡ ನಿರ್ಮಾಣ ಮಾಡಿದ್ದು, ಅದರಲ್ಲಿ 1 ಸಾವಿರ ರೋಬೋ ಮತ್ತು ಕಾಟ್ಲಾ ಜಾತಿಯ ಮೀನು ಸಾಕಣೆ ಮಾಡಿದ್ದಾರೆ. ಕೃಷಿ ಹೊಂಡದ ಮೇಲೆ ಕೋಳಿ ಸಾಕಣೆಯನ್ನೂ ಆರಂಭಿಸಿದ್ದಾರೆ. ತಮ್ಮ ಜಮೀನಿನಲ್ಲಿರುವ 2 ಬೋರ್‌ವೆಲ್‌ಗಳಲ್ಲಿ ಒಂದಕ್ಕೆ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿದ್ದಾರೆ. ಹೀಗಾಗಿ ಆ ಬೋರ್‌ವೆಲ್‌ನಲ್ಲಿ ಬೇಸಿಗೆಯಲ್ಲೂ ನೀರು ಬತ್ತುವುದಿಲ್ಲ.

ದಾಸೋಹಕ್ಕೆ ಬೇಕಾದ ದವಸ ತಾವೇ ಉತ್ತು, ಬೆಳೆಯುವ ಸಂತ ರೈತ ರತ್ನ ಪ್ರಶಸ್ತಿಗೆ ಆಯ್ಕೆ

ಅರಿಸಿನ, ಗೋಧಿ, ಕಡಲೆಹಿಟ್ಟು, ಹೆಸರು, ಉದ್ದು ಮೊದಲಾದ ಬೆಳೆಗಳನ್ನು ಮೌಲ್ಯವರ್ಧಿಸಿ ನೇರ ಗ್ರಾಹಕರಿಗೆ ನೀಡುವ ಮೂಲಕ ತಮ್ಮ ಬೆಳೆಗಳನ್ನು ಇವರೇ ನೇರವಾಗಿ ಮಾರುಕಟ್ಟೆಮಾಡುತ್ತಿದ್ದಾರೆ. 10 ಆಡು, 1ಹೋತಗಳನ್ನು ಸಾಕಿಟದ್ದಾರೆ. ಬೀಜದ ಹೋತದಿಂದ ಉತ್ತಮ ಆದಾಯವಿದೆ. ಅಪರೂಪದ ಕೃಷಿ ಸಾಧನೆಗೆ ಹಲವು ಪ್ರಶಸ್ತಿಗಳನ್ನು ಪಡೆದಿರು ಧರೆಪ್ಪ ಕಿತ್ತೂರ ಅವರಿಗೆ ಈಗ ಪ್ರತಿಷ್ಠಿತ ರೈತ ರತ್ನ ಗರಿಮೆ ಸಂದಿದೆ.

ಧರೆಪ್ಪ ಕಿತ್ತೂರ

ಮೊ: 9916238273

Latest Videos
Follow Us:
Download App:
  • android
  • ios