
ಹುಬ್ಬಳ್ಳಿ(ಸೆ.29): ಕಾವೇರಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ಇಂದು(ಸೆ. 29)ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ವಿಪಕ್ಷದ ಬೆಂಬಲವೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿಗಾಗಿ ಎಲ್ಲಿವರೆಗೂ ಹೋರಾಟ ಇರುತ್ತದೆಯೋ ಅಲ್ಲಿವರೆಗೂ ನಮ್ಮ ಹೋರಾಟ, ಬೆಂಬಲ ಇದ್ದೇ ಇರುತ್ತದೆ ಎಂದರು.
ಕಾವೇರಿ ನೀರಿನ ವಿಷಯವಾಗಿ ಇವತ್ತು ಸಹ ಮುಖ್ಯಮಂತ್ರಿಗಳ ಹೇಳಿಕೆ ನೋಡಿದ್ದೇನೆ. ಈಗ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ ಬಂದಿದೆ. 10 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ ಬಂದಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾದ ವಾದ ಮಂಡನೆ ಮಾಡಿದ್ದರೆ ಇಷ್ಟು ದೊಡ್ಡ ಪ್ರಮಾಣದ ನೀರು ಬಿಡುವ ಪ್ರಮೇಯ ಬರುತ್ತಿರಲಿಲ್ಲ. ತಡವಾಗಿಯಾದರೂ ಸರ್ಕಾರಕ್ಕೆ ಬುದ್ಧಿ ಬಂದಿದೆ. ಜನ ಬೀದಿಗಿಳಿದು ಹೋರಾಟ ಮಾಡುವ ಸಂದರ್ಭ ಬಂದಿದೆ. ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ಈಗಾಗಲೇ ನೀರು ಹರಿದು ಹೋಗಿದೆ. ಟ್ರಿಬ್ಯುನಲ್ ಆದೇಶವನ್ನು ತಮಿಳುನಾಡು ಉಲ್ಲಂಘನೆ ಮಾಡಿದೆ. ಕುಡಿವ ನೀರಿಗೆ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಕಾವೇರಿಯೇ ಆಗಿರಲಿ, ಕೃಷ್ಣೆಯ ಆಗಿರಲಿ ಸರ್ಕಾರ ಜನರ ಹಿತರಕ್ಷಣೆ ಮಾಡಬೇಕು. ಸರ್ಕಾರ ಎಡವಿದರೆ ನಾವು ಹೋರಾಟ ಮಾಡುತ್ತೇವೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಕಾವೇರಿಗಾಗಿ ಮೋದಿಗೆ ಕರವೇ 1 ಲಕ್ಷ ರಕ್ತ ಪತ್ರ..!
ಕಾವೇರಿ ವಿಷಯದಲ್ಲಿ ಸರ್ಕಾರ ಎಡವಿದೆ. ನಾವು ಹೋರಾಟ ಮಾಡುತ್ತೇವೆ. ಕರ್ನಾಟಕ ಬಂದ್‌ಗೆ ನಮ್ಮದು ಸಂಪೂರ್ಣ ಬೆಂಬಲವಿದೆ. ಎಲ್ಲಿವರೆಗೂ ಹೋರಾಟ ನಡೆಯುತ್ತದೆಯೋ ಅಲ್ಲಿವರೆಗೂ ನಾವು ಹೋರಾಟದಲ್ಲಿರುತ್ತೇವೆ ಎಂದರು.
ಬೆಳೆ ಪರಿಹಾರ ಕೊಟ್ಟಿಲ್ಲ:
ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಬರಗಾಲ ಆವರಿಸಿದೆ. ಈಗಾಗಲೇ ಮುಂಗಾರು ಮುಗಿದಿದೆ. ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಆದರೆ ಬೆಳೆ ಪರಿಹಾರಕ್ಕೆ ಮಾತ್ರ ಸರ್ಕಾರ ಮುಂದಾಗಿಲ್ಲ. ಹಿಂದೆ ಪ್ರವಾಹ ಬಂದಾಗ ರೈತರಿಗೆ ಎರಡು ಪಟ್ಟು ಪರಿಹಾರ ನೀಡಿದ್ದೇವೆ. ಈ ಸರ್ಕಾರ ಏನು ಮಾಡುತ್ತಿದೆ? ಬಹುತೇಕ ಸಂದರ್ಭದಲ್ಲಿ ರಾಜ್ಯದ ರೈತರಿಗೆ ನಾವು ಪರಿಹಾರ ಒದಗಿಸಿದ್ದೇವೆ. ನಮ್ಮ ಸರ್ಕಾರದಂತೆ ಈ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಟೀಕಿಸಿದರು.
ಕಾವೇರಿ ಉಗಮ ಸ್ಥಾನ ಕೊಡಗಿನಲ್ಲೇ ಇಂದು ಬಂದ್ ಇಲ್ಲ..!
ಕಾಂಗ್ರೆಸ್‌ಗೆ ಲಾಭವಿಲ್ಲ: ಬೊಮ್ಮಾಯಿ
ಕಾಂಗ್ರೆಸ್ ಸರ್ಕಾರ ತನ್ನ ವರ್ಚಸ್ಸು ಕಳೆದುಕೊಂಡಿದೆ. ಹೀಗಾಗಿ ಮತ್ತೆ ಆಪರೇಷನ್ ಹಸ್ತದ ಮೂಲಕ ಬಿಜೆಪಿ ಮಾಜಿ ಶಾಸಕರಿಗೆ ಗಾಳ ಹಾಕಲು ಹೊರಟಿದೆ. ಆದರೆ ಇದರಿಂದ ಆ ಪಕ್ಷಕ್ಕೆ ಏನೂ ಲಾಭವಾಗಲ್ಲ ಎಂದು ಬೊಮ್ಮಾಯಿ ಹೇಳಿದರು.
ಆಪರೇಷನ್ ಕಾಂಗ್ರೆಸ್‌ಗೆ ಮುಂದಾಗಿರುವುದು ಆ ಪಕ್ಷದ ವೀಕ್‌ನೆಸ್‌ನ್ನು ತೋರಿಸುತ್ತದೆ. ಕೆಲವರು ಟಿಕೆಟ್ ಸಿಗದ ಕಾರಣ ಕಾಂಗ್ರೆಸ್‌ಗೆ ಹೋಗುತ್ತಾರೆ. ಆದರಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಿಲ್ಲ. ಇದೆಲ್ಲ ಸಹಜ. ಈ ಬಗ್ಗೆ ನಾವೇನು ತಲೆ ಕೆಡಿಸಿಕೊಳ್ಳಲ್ಲ. ಕಾಂಗ್ರೆಸ್‌ನ ಈ ಆಪರೇಷನ್‌ನಿಂದ ರಾಜಕೀಯವಾಗಿ ಅದಕ್ಕೇನು ಲಾಭವಾಗುವುದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ