ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಲು ಶಿವರಾಜ್ ಕುಮಾರ್ ಬರಲು ಒಪ್ಪಿಕೊಂಡಿದ್ದಾರೆ. ಅವರು ಜತೆಯಾಗುತ್ತಿರುವುದರಿಂದ ನಮ್ಮ ಕೂಗಿಗೆ ಆನೆ ಬಲ ಬಂದಂತಾಗಿದೆ. ಹೋರಾಟದಲ್ಲಿ ಭಾಗಿ ಆಗುವಂತೆ ಎಲ್ಲಾ ಕಲಾವಿದರಿಗೆ ಕರೆ ಕೊಟ್ಟಿದ್ದೇವೆ. 144 ಸೆಕ್ಷನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮೆರವಣಿಗೆ ಹೋಗುತ್ತಿಲ್ಲ. ಪ್ರತಿಭಟನಾ ಧರಣಿ ಕೂರುತ್ತೇವೆ. ಚಿತ್ರರಂಗದಿಂದ 1000 ಜನ ಸೇರುವ ನಿರೀಕ್ಷೆ ಇದೆ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್. ಎಂ. ಸುರೇಶ್
ಬೆಂಗಳೂರು(ಸೆ.29): ಕಾವೇರಿ ಹೋರಾಟಕ್ಕೆ ಬೆಂಬಲ ಘೋಷಿಸಿರುವ ಚಿತ್ರರಂಗ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಧರಣಿ ಹಮ್ಮಿಕೊಂಡಿದೆ. ಶಿವರಾಜ್‌ಕುಮಾರ್, ಶ್ರೀಮುರಳಿ, ಧ್ರುವ ಸರ್ಜಾ ಸೇರಿದಂತೆ ಬಹುತೇಕ ಕಲಾವಿದರು, ತಂತ್ರಜ್ಞರು ಈ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಡುವೆ, ಇಡೀ ಚಿತ್ರರಂಗ ಶುಕ್ರವಾರ ಚಿತ್ರೀಕರಣ ಸ್ಥಗಿತಗೊಳಿಸಲಿದೆ ಮತ್ತು ಚಿತ್ರ ಪ್ರದರ್ಶನಗಳನ್ನು ನಿಲ್ಲಿಸಲಿದೆ. ಸಂಜೆಯ ನಂತರ ಎಂದಿನಂತೆ ಚಿತ್ರ ಪ್ರದರ್ಶನ ನಡೆಯಲಿದೆ ಎಂದು ಪ್ರದರ್ಶಕರ ಸಂಘ ತಿಳಿಸಿದೆ.
ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್. ಎಂ. ಸುರೇಶ್ ವಿವರ ನೀಡಿ, ‘ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಲು ಶಿವರಾಜ್ ಕುಮಾರ್ ಬರಲು ಒಪ್ಪಿಕೊಂಡಿದ್ದಾರೆ. ಅವರು ಜತೆಯಾಗುತ್ತಿರುವುದರಿಂದ ನಮ್ಮ ಕೂಗಿಗೆ ಆನೆ ಬಲ ಬಂದಂತಾಗಿದೆ. ಹೋರಾಟದಲ್ಲಿ ಭಾಗಿ ಆಗುವಂತೆ ಎಲ್ಲಾ ಕಲಾವಿದರಿಗೆ ಕರೆ ಕೊಟ್ಟಿದ್ದೇವೆ. 144 ಸೆಕ್ಷನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮೆರವಣಿಗೆ ಹೋಗುತ್ತಿಲ್ಲ. ಪ್ರತಿಭಟನಾ ಧರಣಿ ಕೂರುತ್ತೇವೆ. ಚಿತ್ರರಂಗದಿಂದ 1000 ಜನ ಸೇರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.
ಕಾವೇರಿಗಾಗಿ ಇಂದು ಕರ್ನಾಟಕ ಬಂದ್: ಏನೆಲ್ಲಾ ಇರುತ್ತೆ?, ಏನೆಲ್ಲಾ ಇರಲ್ಲ?
ಈ ಧರಣಿಯಲ್ಲಿ ಸುರೇಶ್, ಹಿರಿಯ ನಿರ್ಮಾಪಕ ಸಾ ರಾ ಗೋವಿಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್, ಕಲಾವಿದರಾದ ದುನಿಯಾ ವಿಜಯ್, ಅಜಯ್ ರಾವ್, ವಿಜಯ್ ರಾಘವೇಂದ್ರ, ವಿನೋದ್ ಪ್ರಭಾಕರ್, ರಂಗಾಯಣ ರಘು, ರವಿಶಂಕರ್, ಸಾಧು ಕೋಕಿಲ, ಪ್ರಜ್ವಲ್ ದೇವರಾಜ್, ನಟಿಯರಾದ ಮಾಲಾಶ್ರೀ, ಶ್ರುತಿ, ಪ್ರೇಮ, ಸಪ್ತಮಿ ಗೌಡ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.