• ಸತತ 25ನೇ ದಿನವೂ ಸೆರೆಯಾಗದ ಚಿರತೆ
• ಹೆಜ್ಜೆ ಗುರುತು ಪತ್ತೆ ಆಧರಿಸಿ ಬೋನು, ಕ್ಯಾಮರಾ ಶಿಫ್ಟ್
• ಚಿರತೆ ಕಾಟಕ್ಕೆ ಬೇಸತ್ತು ತಾತ್ಕಾಲಿಕವಾಗಿ ಖಾಸಗಿ ಶಾಲೆಯೇ ಸ್ಥಳಾಂತರ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಆ.29): ಕುಂದಾನಗರಿ ಬೆಳಗಾವಿಯಲ್ಲಿ 25ನೇ ದಿನವೂ ಚಾಲಾಕಿ ಚಿರತೆ ಸೆರೆ ಸಿಕ್ಕಿಲ್ಲ. ಇತ್ತ ಚಿರತೆ ಸಂರಕ್ಷಣೆ ಮಾಡಿ ಆದರೆ ಕೊಲ್ಲಬೇಡಿ ಅಂತಾ ವಿದ್ಯಾರ್ಥಿಗಳು ಮೌನ ಪ್ರತಿಭಟನೆ ನಡೆಸಿದರೆ ಅತ್ತ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಗಾಲ್ಫ್ ಮೈದಾನಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಶಿಕಾರಿ ನಾಯಿ ತಂದು ಬಿಟ್ಟಿದ್ದು ಆಯ್ತು. ಹಂದಿ ಹಿಡಿಯುವ ಬಲೆ ಕಟ್ಟಿದ್ದು ಆಯ್ತು. ಆಪರೇಷನ್ ಗಜಪಡೆ, ಆಪರೇಷನ್ ಹನಿಟ್ರ್ಯಾಪ್ ಆಯ್ತು. ಅರಣ್ಯ ಇಲಾಖೆಯ ಯಾವುದೇ ಪ್ಲ್ಯಾನ್ ವರ್ಕೌಟ್ ಆಗದ ಹಿನ್ನೆಲೆ ಅರಣ್ಯ ಅಧಿಕಾರಿಗಳು ಸಭೆ ನಡೆಸಿ ಚಿರತೆಯ ಹೆಜ್ಜೆಗುರುತು, ಟ್ರ್ಯಾಪ್ ಕ್ಯಾಮರಾಗಳಲ್ಲಿ ಸೆರೆಯಾದ ಚಿತ್ರ ಆಧರಿಸಿ ಬೋನು, ಟ್ರ್ಯಾಪ್ ಕ್ಯಾಮರಾ ಸ್ಥಳಾಂತರ ಮಾಡಿದ್ದು, ಚಿರತೆಯನ್ನು ಡಿಸ್ಟರ್ಬ್ ಮಾಡದೇ ಸೆರೆ ಹಿಡಿಯುವ ತಂತ್ರಕ್ಕೆ ಮುಂದಾಗಿದ್ದಾರೆ.
ಪತ್ತೆಯಾಗದ ಚಾಲಾಕಿ ಚಿರತೆ ಬಗ್ಗೆ ಟ್ರೋಲ್: ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಸಮೇತ ಬೆಳಗಾವಿ ರಾಜಕಾರಣಕ್ಕೂ ಎಂಟ್ರಿ!
ಕುಂದಾನಗರಿ ಬೆಳಗಾವಿಯಲ್ಲಿ ಚಾಲಾಕಿ ಚಿರತೆಯ ಕಣ್ಣಾ ಮುಚ್ಚಾಲೆ ಮುಂದುವರೆದಿದೆ. ಕಳೆದ 25 ದಿನಗಳಿಂದ ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಆಪರೇಷನ್ ಚಿರತೆ ನಡೆಸಲಾಗುತ್ತಿದ್ದು, ಇಂದು ಸಹ 100ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಮತ್ತು ಎರಡು ಆನೆಗಳು ಕೋಂಬಿಂಗ್ ಕಾರ್ಯಾಚರಣೆ ನಡೆಸಿದ್ರು. ಆದ್ರೆ ಚಿರತೆ ಹೆಜ್ಜೆ ಗುರುತು ಪತ್ತೆಯಾಯಿತು ಹೊರತು ಚಿರತೆ ಮಾತ್ರ ಸೆರೆಯಾಗಿಲ್ಲ. ಇನ್ನೂ ಚಿರತೆ ಚಲನವಲನ, ಹೆಜ್ಜೆ ಗುರುತು ಜಾಡು ಹಿಡಿದು ಆಪರೇಷನ್ ಪ್ಲ್ಯಾನ್ ಬದಲಾಯಿಸಲಾಗಿದೆ. ಈವರೆಗೂ ಅಳವಡಿಸಿದ್ದ 8 ಚಿಕ್ಕ ಬೋನು, 1 ದೊಡ್ಡ ಬೋನುಗಳ ಸ್ಥಳವನ್ನ ಬದಲಾವಣೆ ಮಾಡಲಾಗಿದೆ.
ಬೋನುಗಳಲ್ಲಿ ಹೆಣ್ಣು ಚಿರತೆ ಮೂತ್ರ ಸಿಂಪಡಣೆ ಮಾಡಿ, ಬೋನುಗಳಲ್ಲಿ ನಾಯಿಗಳನ್ನು ಸಹ ಇರಿಸಲಾಗಿದೆ. ಸಿಸಿಎಫ್ ಮಂಜುನಾಥ ಚೌಹಾನ್, ಡಿಎಫ್‌ಒ ಆ್ಯಂಥೋನಿ ಮರಿಯಪ್ಪ, ಎಸಿಎಫ್ ಮಲ್ಲಿನಾಥ ಕುಸನಾಳ ನೇತೃತ್ವದ ತಂಡ ಹಗಲು ರಾತ್ರಿಯನ್ನದೇ ಶೋಧ ಕಾರ್ಯಾಚರಣೆ ಮಾಡ್ತಿದೆ. ಆದ್ರೆ ಚಾಲಾಕಿ ಚಿರತೆ ಮಾತ್ರ ಅರಣ್ಯ ಇಲಾಖೆಯ ಯಾವುದೇ ಆಪರೇಷನ್‌ಗೂ ಸೆರೆಯಾಗುತ್ತಿಲ್ಲ. ಈ ಮಧ್ಯೆ ಬೆಳಗಾವಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಡಿ. ಯಾವುದೇ ಕಾರಣಕ್ಕೂ ಅದನ್ನ ಕೊಲ್ಲಬೇಡಿ ಅಂತಾ ಭಿತ್ತಿಪತ್ರ ಹಿಡಿದು ಮೌನ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಿಗೆ ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ್ ಸಾಥ್ ನೀಡಿದರು.
10 ಸಾವಿರ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ: ಇನ್ನು ಚಿರತೆ ಕಾರ್ಯಾಚರಣೆ ವಿಳಂಬ ಆಗುತ್ತಿರುವುದು ಸುಮಾರು 10 ಸಾವಿರ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಗಾಲ್ಫ್ ಮೈದಾನದ ಸುತ್ತಲಿನ 1 ಕಿಲೋಮೀಟರ್ ಪ್ರದೇಶದಲ್ಲಿನ 21 ಶಾಲೆಗಳ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ರಜೆ ಮುಂದುವರಿಸಲಾಗಿದೆ. ಇನ್ನು ಚಿರತೆ ಸೆರೆಯಾಗದ ಹಿನ್ನೆಲೆ ಬೆಳಗಾವಿಯ ಕುವೆಂಪು ನಗರದ ಕೆಎಲ್‌ಇ ಇಂಟರ್‌ನ್ಯಾಷನಲ್ ಸ್ಕೂಲ್‌ನ್ನು ತಾತ್ಕಾಲಿಕವಾಗಿ ಕೆಎಲ್‌ಇ ದಂತ ಮಹಾವಿದ್ಯಾಲಯಕ್ಕೆ ಸ್ಥಳಾಂತರಿಸಿ ಪಾಠ ಮಾಡಲಾಗುತ್ತಿದೆ.
ಇನ್ನು ಇಂದು ಮಧ್ಯಾಹ್ನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಗಾಲ್ಫ್ ಮೈದಾನಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಅರಣ್ಯ ಅಧಿಕಾರಿಗಳ ಜೊತೆಗೆ ಚಿರತೆ ಶೋಧಕಾರ್ಯ ಪರಿಶೀಲನೆ ನಡೆಸಿದರು. ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಚಿರತೆ ಹಗಲಿನಲ್ಲಿ ಅವಿತುಕೊಳ್ಳುತ್ತದೆ, ರಾತ್ರಿ ಓಡಾಡುತ್ತಿದೆ. ಅಧಿಕಾರಿಗಳ ಸಮನ್ವಯತೆಗೆ ಸಮಿತಿ ನೇಮಿಸಲು ಡಿಸಿ ಅವರ ಗಮನಕ್ಕೆ ತರುವುದಾಗಿಯೂ ಸಹ ಹೇಳಿದರು.
ಬೆಳಗಾವಿ ಚಿರತೆ ಸೆರೆಗೆ 200 ಜನ!: ಕಾರ್ಯಾಚರಣೆಗೆ 2 ಆನೆ ಕೂಡ ಬಳಕೆ
ಒಟ್ಟಿನಲ್ಲಿ 25ನೇ ದಿನವೂ ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಚಿರತೆ ಕಣ್ಣಾಮುಚ್ಚಾಲೆ ಮುಂದುವರೆದಿದೆ. ಅತ್ತ ನಾಳೆಯೂ 21 ಶಾಲೆಗಳಿಗೆ ರಜೆ ಮುಂದುವರಿಯಲಿದೆ. ಆಪರೇಷನ್ ಚಿರತೆಗೆ ನೆಟ್ಟಿಗರ ಟ್ರೋಲ್ ಅಷ್ಟೇ ಅಲ್ಲದೇ ರಾಜಕೀಯ ಕಿತ್ತಾಟಕ್ಕೂ ಆಹಾರವಾಗಿದ್ದಂತೂ ಸುಳ್ಳಲ್ಲ.