ಹಳ್ಳಿ ಬಿಟ್ಟು ಹೋಗಲೊಪ್ಪದ ಕೋವಿಡ್‌..!

By Kannadaprabha NewsFirst Published Jul 16, 2021, 7:22 AM IST
Highlights

* ಹಳ್ಳಿಗಳಲ್ಲಿ ಇಳಿಯದ ಸೋಂಕಿನ ಪ್ರಮಾಣ
* ಅತಿ ಹೆಚ್ಚು ಕೇಸಿರುವ ಪಟ್ಟಿಯಲ್ಲಿ 26 ಪಟ್ಟಣ, 43 ಹಳ್ಳಿ
* ಸೋಂಕು ಮತ್ತೆ ಹೆಚ್ಚಾಗುವ ಸಂಭವ ಜಾಸ್ತಿ 
 

ಬೆಂಗಳೂರು(ಜು.16): ಜನ ಸಾಂದ್ರತೆ ಹೆಚ್ಚಿರುವ ನಗರ ಪ್ರದೇಶದಲ್ಲಿ ಕೋವಿಡ್‌-19 ಏರಿದ್ದಷ್ಟೇ ವೇಗವಾಗಿ ಇಳಿಕೆ ಆಗಿದ್ದರೂ ಹಳ್ಳಿಗಳಿಗೆ ತಡವಾಗಿ ಹಬ್ಬಿ ನೆಲೆಯೂರಿರುವ ಸೋಂಕು ಅಲ್ಲಿಂದ ಕಾಲ್ಕಿಳಲೂ ಕೂಡ ತಡ ಮಾಡುತ್ತಿದೆ.

ರಾಜ್ಯದ 21 ಜಿಲ್ಲೆಗಳಲ್ಲಿ ನಗರ ಪ್ರದೇಶಕ್ಕಿಂತ ಹಳ್ಳಿಗಳಲ್ಲೇ ಹೆಚ್ಚು ಮಂದಿ ಸೋಂಕಿತರಿದ್ದಾರೆ. ಬಹುತೇಕ ಕಳೆದ ಒಂದು ತಿಂಗಳಿನಿಂದ ಈ ಪ್ರವೃತ್ತಿ ಇದ್ದರೂ ಇದೀಗ ಅನ್‌ ಲಾಕ್‌ ಆಗಿರುವುದರಿಂದ ಹಳ್ಳಿ-ನಗರಗಳ ನಡುವಿನ ಓಡಾಟ ವೇಗ ಪಡೆದಿರುವ ಹಿನ್ನೆಲೆಯಲ್ಲಿ ಸೋಂಕು ಮತ್ತೆ ಹೆಚ್ಚಾಗುವ ಸಂಭವ ಜಾಸ್ತಿಯಾಗಿದೆ.

ಮೊದಲ ಅಲೆಯ ಸಂದರ್ಭದಲ್ಲಿ ನಗರ ಪ್ರದೇಶದಲ್ಲೇ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ಆದರೆ ಎರಡನೇ ಅಲೆಯ ಉತ್ತರಾರ್ಧದಲ್ಲಿ ಹಳ್ಳಿಗಳಿಗೆ ಲಗ್ಗೆಯಿಟ್ಟಕೊರೋನಾ ಮಾರಿ ಅಲ್ಲಿಯೇ ಬೀಡು ಬಿಟ್ಟಿದೆ. ರಾಜ್ಯದಲ್ಲಿ ಹೆಚ್ಚು ಕೋವಿಡ್‌ ಸೋಂಕಿತರಿರುವ 26 ಪಟ್ಟಣಗಳಿದ್ದರೆ ಹಳ್ಳಿಗಳ ಸಂಖ್ಯೆ 43 ಇದೆ.

ಮಂಗಳವಾರದ ಮಾಹಿತಿಯ ಪ್ರಕಾರ ಬೆಂಗಳೂರು ನಗರ ಹೊರತು ಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಟ್ಟು 23,928 ಮಂದಿಯಲ್ಲಿ ಕೋವಿಡ್‌ ಸೋಂಕಿತ್ತು. ಈ ಪೈಕಿ 14,720 ಪ್ರಕರಣ (ಶೇ.62) ಹಳ್ಳಿಗಳಿಂದ ವರದಿಯಾಗಿದೆ. ಉಳಿದ 9,208 ಪ್ರಕರಣ(ಶೇ.38) ನಗರ ಭಾಗದಲ್ಲಿ ದಾಖಲಾಗಿದೆ.

ಕೊರೋನಾ ವಿರುದ್ಧ ಹೋರಾಟ: 3ನೇ ಡೋಸ್‌ ಲಸಿಕೆ ಅಗತ್ಯವಿದೆಯೇ? 

ಹಾಸನ ಜಿಲ್ಲೆಯ ಹಳ್ಳಿಗಳಲ್ಲಿ 2,052 ಮಂದಿ ಮತ್ತು ನಗರದಲ್ಲಿ 727 ಮಂದಿಯಲ್ಲಿ ಸೋಂಕಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ 1,876 ಮತ್ತು ನಗರದಲ್ಲಿ 1,150 ಮಂದಿಯಲ್ಲಿ ಮತ್ತು ಕೊಡಗಿನಲ್ಲಿ ಹಳ್ಳಿಯಲ್ಲಿ 1,213 ಮತ್ತು ನಗರದಲ್ಲಿ 154 ಮಂದಿಯಲ್ಲಿ ಸೋಂಕು ಇದೆ. ಉಳಿದಂತೆ ತುಮಕೂರು, ಉಡುಪಿ, ಕೋಲಾರ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ, ರಾಮನಗರ, ರಾಯಚೂರು, ಮಂಡ್ಯ, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್‌ ಜಿಲ್ಲೆಯ ಹಳ್ಳಿಗಳಲ್ಲೇ ಹೆಚ್ಚು ಸೋಂಕಿತರಿದ್ದಾರೆ.

ಮೈಸೂರು, ಧಾರವಾಡ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಧಾರವಾಡ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲೇ ಹೆಚ್ಚು ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿ ಸುಮಾರು 12 ಸಾವಿರ ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರದಲ್ಲಿ ಮೊದಲ ಅಲೆಯಲ್ಲಿ ಬಹುತೇಕ ಪ್ರತಿದಿನ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗುತ್ತಿತ್ತು. ಆದರೆ ಎರಡನೇ ಅಲೆಯಲ್ಲಿ ಮೇ ಮಧ್ಯಭಾಗದವರೆಗೆ ಇದೇ ಪ್ರವೃತ್ತಿ ಮುಂದುವರಿದಿತ್ತು. ಆದರೆ ಆ ಬಳಿಕ ರಾಜ್ಯದ ದೈನಂದಿನ ಪ್ರಕರಣದಲ್ಲಿ ಶೇ.25ಕ್ಕಿಂತ ಕಡಿಮೆ ಪ್ರಕರಣಗಳು ಬರುತ್ತಿವೆ. ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕು ನಗರ ಕೇಂದ್ರಿತವಾಗಿ ಪ್ರಾರಂಭಗೊಂಡಿದ್ದರೂ ಆ ಬಳಿಕ ಹಳ್ಳಿ, ಪಟ್ಟಣಗಳನ್ನು ಆವರಿಸಿರುವುದು ಇದರಿಂದ ಖಚಿತವಾಗುತ್ತಿದೆ.

ಅನ್‌ಲಾಕ್‌ ಆಗಿರುವ ಹಿನ್ನೆಲೆಯಲ್ಲಿ ನಗರ ಮತ್ತು ಹಳ್ಳಿಗಳ ನಡುವಿನ ಜನರ ಓಡಾಟ ಹೆಚ್ಚಿದೆ. ಹಾಗೆಯೇ ಮುಂಗಾರು ಚುರುಕು ಪಡೆದಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದೆ. ಹಳ್ಳಿಗಳ ಜನ ಪೇಟೆ ಪಟ್ಟಣಗಳಿಗೆ ತೆರಳಲು ಸಾರ್ವಜನಿಕ ಸಾರಿಗೆಗಳನ್ನು ಬಳಸುವುದು, ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗವಹಿಸುವುದು, ಗುಂಪು ಗುಂಪಾಗಿ ಮಾತನಾಡುವುದು ಹೆಚ್ಚು. ಇದರಿಂದ ಕೋವಿಡ್‌ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಹಳ್ಳಿಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್‌ ಧಾರಣೆಯ ಬಗ್ಗೆ ಅರಿವು ಮೂಡಿಸುವ ಪ್ರಕ್ರಿಯೆಯನ್ನು ಹೆಚ್ಚಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕಾರಣ ಏನು?

ಅನ್‌ಲಾಕ್‌ ಆಗಿರುವ ಹಿನ್ನೆಲೆಯಲ್ಲಿ ನಗರ ಮತ್ತು ಹಳ್ಳಿಗಳ ನಡುವಿನ ಜನರ ಓಡಾಟ ಹೆಚ್ಚಿದೆ. ಮುಂಗಾರು ಚುರುಕಾದ ಹಿನ್ನೆಲೆ ಕೃಷಿ ಚಟುವಟಿಕೆಗಳು ಗರಿಗೆದರಿದೆ. ಹಳ್ಳಿಗಳ ಜನ ಪಟ್ಟಣಗಳಿಗೆ ತೆರಳಲು ಸಾರ್ವಜನಿಕ ಸಾರಿಗೆ ಬಳಸುವುದು. ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗವಹಿಸುವುದು, ಗುಂಪು ಗುಂಪಾಗಿ ಮಾತನಾಡುವುದು ಹೆಚ್ಚು. ಇದು ಸೋಂಕು ಇಳಿಯದೇ ಇರಲು ಕಾರಣ ಎನ್ನಲಾಗುತ್ತಿದೆ.
 

click me!