* ಕೊಡಗಿನಲ್ಲಿ ಡಿಸಿ ಕಚೇರಿ ಬಳಿ ಗುಡ್ಡ ಕುಸಿತ, ಆತಂಕ
* ಕಳಸಾ-ಕುದುರೆಮುಖ ರಸ್ತೆ ಸೇತುವೆ ಮುಳುಗೋ ಆತಂಕ
* ಗೋಕರ್ಣ ಆತ್ಮಲಿಂಗಕ್ಕೆ ಜಲದಿಗ್ಬಂಧನ, 2 ಗಂಟೆ ಪೂಜೆ ಸ್ಥಗಿತ
ಬೆಂಗಳೂರು(ಜು.16): ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಗುರುವಾರವೂ ಭರ್ಜರಿ ಮಳೆಯಾಗಿದೆ. ದಕ್ಷಿಣ ಕನ್ನಡ, ಹಾಸನ ಮತ್ತು ಕೊಡಗಿನಲ್ಲಿ ಅಲ್ಲಲ್ಲಿ ಭೂಕುಸಿತದ ಒಂದೆರಡು ಘಟನೆಗಳು ಸಂಭವಿಸಿದ್ದು, ಚಿಕ್ಕಮಗಳೂರಲ್ಲಿ ರಸ್ತೆ ಬಿರುಕು ಬಿಟ್ಟು ಆತಂಕ ಸೃಷ್ಟಿಯಾಗಿದೆ. ಗೋಕರ್ಣದ ಆತ್ಮಲಿಂಗಕ್ಕೆ ನೀರು ನುಗ್ಗಿ 2 ಗಂಟೆಕಾಲ ಪೂಜೆ ಸ್ಥಗಿತಗೊಳಿಸಬೇಕಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಡೀ ದಿನ ಸುರಿದ ಧಾರಾಕಾರ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಉಡುಪಿಯಲ್ಲೂ ಉತ್ತಮ ಮಳೆಯಾಗಿದ್ದು, ಶುಕ್ರವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಕುಂದಾಪುರ ತಾಲೂಕಿನ ಬಸ್ರೂರಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಕೊಡಗಿನಲ್ಲಿ ಭಾರೀ ಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ಮಡಿಕೇರಿ ಜಿಲ್ಲಾಡಳಿತ ಕಚೇರಿ ಬಳಿ ಉಂಟಾಗಿದೆ. ಮೇಲ್ಭಾಗದಿಂದ ಮಣ್ಣು ಕೊಚ್ಚಿಹೋಗುತ್ತಿದ್ದು, ಮಣ್ಣು ಕುಸಿತ ಮುಂದುವರಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಅಪಾಯ ಎದುರಾಗುವ ಸಾಧ್ಯತೆಯಿದೆ. ಮಂಗಳೂರು-ಮಡಿಕೇರಿ ಹೆದ್ದಾರಿ ಕೂಡ ಬಂದ್ ಆಗುವ ಸಾಧ್ಯತೆ ಎದುರಾಗಿದೆ. ಹಲವೆಡೆ ಮರ ಬಿದ್ದು ರಸ್ತೆ ಸಂಚಾರ ಹಾಗೂ ವಿದ್ಯುತ್ ವ್ಯತ್ಯಯವಾಗಿದೆ. ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಯ ಬಿಡಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ: ಜು.18ವರೆಗೆ ಭಾರೀ ಮಳೆ ಸಾಧ್ಯತೆ
ರಸ್ತೆ ಬಿರುಕು:
ಚಿಕ್ಕಮಗಳೂರಲ್ಲಿ ತುಂಗಾ ಸೇರಿದಂತೆ ಹಲವು ನದಿಗಳಲ್ಲಿ ನೀರಿನಮಟ್ಟ ಏರಿಕೆಯಾಗಿದೆ. ಹೊನ್ನಾಳ ಚೆಕ್‌ಪೋಸ್ಟ್ ಬಳಿ ಚಿಕ್ಕಮಗಳೂರು-ಮುತ್ತೋಡು ಸಂಪರ್ಕ ರಸ್ತೆ ಕುಸಿತು ಸಂಚಾರ ಅಸ್ತವ್ಯಸ್ತಗೊಂಡಿದೆ. ತುಂಗಾ ನದಿ ಉಕ್ಕಿಹರಿಯುತ್ತಿರುವ ಕಾರಣ ಕಳಸಾ-ಹೊಸನಾಡು ರಸ್ತೆ ಸೇತುವೆ ಮುಳುಗಡೆಯಾಗುವ ಆತಂಕ ಎದುರಾಗಿದೆ.
ಆತ್ಮಲಿಂಗಕ್ಕೆ ದಿಗ್ಬಂಧನ:
ಉತ್ತರ ಕನ್ನಡದಲ್ಲಿ ಕದ್ರಾ, ಅಘನಾಶಿನಿ ಸೇರಿದಂತೆ ಹಲವು ನದಿಗಳು ತುಂಬಿ ಹರಿಯುತ್ತಿದ್ದು, ತೀರ ಪ್ರದೇಶದಲ್ಲಿ ಆತಂಕ ವ್ಯಕ್ತವಾಗಿದೆ. ಗೋಕರ್ಣದಲ್ಲಿ ಮಹಾಬಲೇಶ್ವರ ದೇವಾಲಯದಲ್ಲಿನ ಆತ್ಮಲಿಂಗವೂ ಸುಮಾರು 2 ಗಂಟೆ ಕಾಲ ನೀರಿನಲ್ಲಿ ಮುಳುಗಿತ್ತು. ಸೋಮಸೂತ್ರದಿಂದ ನೀರು ನುಗ್ಗಿದ ಪರಿಣಾಮವಾಗಿ ಆತ್ಮಲಿಂಗ ನೀರಿನಲ್ಲಿ ಮುಳುಗಿ ದರ್ಶನ, ಪೂಜೆಗೂ ವ್ಯತ್ಯಯ ಉಂಟಾಯಿತು. ಹಾಸನದಲ್ಲಿ ನಿರಂತರ ಮಳೆಗೆ ಸಕಲೇಶಪುರ ಪಟ್ಟಣದ ಹೌಸಿಂಗ್ ಬೋರ್ಡ್, ಪ್ರೇಮ ನಗರಗಳಲ್ಲಿ ಬರೆ ಕುಸಿದಿದ್ದು, ಬೈಕೊಂದಕ್ಕೆ ಹಾನಿಯಾಗಿದೆ. ಬೆಳಗಾವಿ, ಮೈಸೂರಲ್ಲೂ ಉತ್ತಮ ಮಳೆಯಾಗಿದ್ದು, ಬಳ್ಳಾರಿ, ಕೊಪ್ಪಳ, ಗದಗ, ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ತುಂತುರು ಮಳೆ ಮುಂದುವರಿದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿರುಕು ಬಿಟ್ಟಿರುವ ರಸ್ತೆ.
ಬಿರುಗಾಳಿಯ ರಭಸಕ್ಕೆ ಹಲವೆಡೆ ಮರಗಳು ಉರುಳಿ ಬಿದ್ದಿದ್ದು, 5 ಮನೆಗಳಿಗೆ ಹಾನಿಯಾಗಿದೆ. ಮಂಗಳೂರು ನಗರದಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, ಹಲವು ಅಂಗಡಿಗಳಿಗೆ ನೀರು ನುಗ್ಗಿ ಪರದಾಡುವಂತಾಗಿದೆ. ಜು.20ರವರೆಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತಗ್ಗುಪ್ರದೇಶದ ಜನರ ಸ್ಥಳಾಂತರಕ್ಕೆ ಅಗತ್ಯ ಸಿದ್ಧತೆ ನಡೆಸಲಾಗಿದೆ. ಮಂಗಳೂರು ನಗರದಲ್ಲಿ ಹಲವು ಅಂಗಡಿಗಳಿಗೆ ನೀರು ನುಗ್ಗಿ ವ್ಯಾಪಾರಿಗಳು ಪರದಾಡುವಂತಾಗಿದೆ.