Vijayapura: ಸಿದ್ದೇಶ್ವರ ಶ್ರೀಗಳ ಆರೋಗ್ಯ ಮತ್ತಷ್ಟು ಕ್ಷೀಣ: ಭಕ್ತರಿಂದ ಬೇಗ ಹುಷಾರಾಗಿ ಶ್ರೀಗಳೇ ಅಭಿಯಾನ ಆರಂಭ

By Sathish Kumar KHFirst Published Jan 2, 2023, 6:33 PM IST
Highlights

ದೇಶದ ಎರಡನೇ ವಿವೇಕಾನಂದ ಎಂದೇ ಪ್ರಸಿದ್ಧಿಯಾಗಿರುವ ವಿಜಯಪುರ ಜ್ಞಾನಯೋಗಾಶ್ರಮ ಮಠದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಮತ್ತಷ್ಟು ಕ್ಷೀಣಿಸುತ್ತಿದೆ. ಮತ್ತೊಂದೆಡೆ ನಾಡಿನ ಭಕ್ತಗಣದಲ್ಲಿ 'ಬೇಗ ಹುಷಾರಾಗಿ ಶ್ರೀಗಳೇ' ಎಂಬ ಅಭಿಯಾನ ಆರಂಭವಾಗಿದೆ.

ವಿಜಯಪುರ (ಜ.02): ನಾಡಿನ ನಡೆದಾಡುವ ದೇವರು, ಎರಡನೇ ವಿವೇಕಾನಂದ ಎಂದೇ ಪ್ರಸಿದ್ಧಿಯಾಗಿರುವ ವಿಜಯಪುರ ಜ್ಞಾನಯೋಗಾಶ್ರಮ ಮಠದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಮತ್ತಷ್ಟು ಕ್ಷೀಣಿಸುತ್ತಿದೆ. ಉಸಿರಾಟ ತೊಂದರೆ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರಾದ ಡಾ.ಎಸ್.ಬಿ. ಪಾಟೀಲ್‌ ತಿಳಿಸಿದ್ದಾರೆ. ಆದರೆ, ನಾಡಿನ ಭಕ್ತಗಣದಲ್ಲಿ 'ಬೇಗ ಹುಷಾರಾಗಿ ಶ್ರೀಗಳೇ' ಎಂಬ ಅಭಿಯಾನ ಆರಂಭವಾಗಿದೆ.

ಶ್ರೀಗಳ ಆರೋಗ್ಯದ ಮಾಹಿತಿ ಬಿಡುಗೆ ಮಾಡಿ ಮಾತನಾಡಿದ ವೈದ್ಯರು, ಸಿದ್ದೇಶ್ವರ ಸ್ವಾಮಿಜಿ ಆರೋಗ್ಯ ಮತ್ತಷ್ಟು ಕ್ಷೀಣಿಸುತ್ತಿದೆ. ಇಂದು ಬೆಳಿಗ್ಗೆಯಿಂದ ಕಿಂಚಿತ್ತೂ ಆಹಾರ ಸೇವಿಸದ ಶ್ರೀಗಳಿಗೆ ಇದೀಗ ಉಸಿರಾಟದ ತೊಂದರೆ ತೀವ್ರವಾಗುತ್ತಿದೆ. ಏಕಾ ಏಕಿ ಬಿಪಿ, ಸ್ಯಾಚುರೇಷನ್ ನಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ಸಿದ್ದೇಶ್ವರ ಶ್ರೀಗಳಿಗೆ ಉಸಿರಾಟದ ತೊಂದರೆ ಮತ್ತಷ್ಟು ಜಾಸ್ತಿ ಆಗ್ತಿದೆ. ಸದ್ಯ ಆಕ್ಸಿಜನ್ ನೀಡಲಾಗುತ್ತಿದೆ. ಸಲಾಯಿನ್, ಆಕ್ಸಿಜನ್ ಕಂಟಿನ್ಯೂ ಮಾಡುತ್ತಿದ್ದೇವೆ. ಭಕ್ತರು ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಭಕ್ತರು ಅವರ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಲಿ ಎಂದು ಹೇಳಿದರು.

ಶ್ರೀಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನಾವು ನಮ್ಮ ಶಕ್ತಿ ಮೀರಿ ಬಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆಗೆ ಸನ್ನದ್ದರಾಗಿದ್ದೇವೆ. ಶ್ರೀಗಳು ಆಸ್ಪತ್ರೆಗೆ ದಾಖಲಾಗಲು ಒಲ್ಲೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಆಸ್ಪತ್ರೆಯ ಎಲ್ಲಾ ವ್ಯವಸ್ಥೆಗಳನ್ನು ಇಲ್ಲಿಯೇ ಕಲ್ಪಿಸಿದ್ದೇವೆ. ಇಂದು ಬೆಳಿಗ್ಗೆಯಿಂದ ಕಿಂಚಿತ್ರೂ ಆಹಾರ ಸೇವಿಸಿಲ್ಲ ಎಂದು ವೈದ್ಯರು ಹೇಳಿದರು. 

ಇಪ್ಪತ್ತು ದಿನದಿಂದ ಕಾಡುತ್ತಿರುವ ಅನಾರೋಗ್ಯ: ಕಳೆದೊಂದು ತಿಂಗಳಿಂದ ಸ್ವಾಮೀಜಿ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಡಿ.10ರಂದು ಸ್ವಾಮೀಜಿಗೆ ಅನಾರೋಗ್ಯ ಉಂಟಾಗಿದ್ದರಿಂದ ಭಕ್ತರ ದಂಡು ಮಠದತ್ತ ಹರಿದುಬರುತ್ತಿತ್ತು. ಆದರೆ, ಈ ವೇಳೆ ಕೇವಲ ನೆಗಡಿ ಮತ್ತು ಜ್ವರ ಮಾತ್ರ ಬಂದಿದ್ದು, ಗಂಭೀರ ಅನಾರೋಗ್ಯ ಇಲ್ಲ ಎಂದು ಮಠದ ಸಿಬ್ಬಂದಿ ತಿಳಿಸಿದ್ದರು. ಇದಾದ ನಂತರ ಸಂಜೆ ವೇಳೆಗೆ ಮಠದ ಭಕ್ತರು, ಆತ್ಮೀಯರು ಹಾಗೂ ಕೆಲವು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ್ದರು. ಆದರೆ, ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿದರೂ ಇದಕ್ಕೆ ಸ್ವಾಮೀಜಿ ಒಪ್ಪಿರಲಿಲ್ಲ. ಕಳೆದೊಂದು ವಾರದಿಂದ ತೀವ್ರ ಅನಾರೋಗ್ಯ ಉಂಟಾಗಿದ್ದು, ವೈದ್ಯರ ತಂಡದಿಂದ ಚಿಕಿತ್ಸೆ ನಡೆಯುತ್ತಿದೆ. 

Siddeshwara Swamiji: ಕಣ್ತುಂಬಿ ಬಂದ ಭಾವುಕ ಭಕ್ತಿ: ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಹಾತೊರೆದ ಅಜ್ಜಿ

ದೇವರ ಕರೆ ಬಂದಿದೆ ಚಿಕಿತ್ಸೆ ಬೇಡ: ಇನ್ನು ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಅನಾರೋಗ್ಯದಿಂದ ಮಲಗಿದ್ದರೂ, ತಾವು ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಹೀಗಾಗಿ, ಮಠದ ಸಿಬ್ಬಂದಿ ಮತ್ತು ಸರ್ಕಾರದಿಂದ ತಜ್ಞ ವೈದ್ಯರನ್ನು ನಿಯೋಜಿಸಿ ಮಠದಲ್ಲಿಯೇ ಬಂದು ಚಿಕಿತ್ಸೆ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಊಟ ಮಾಡುವುದಕ್ಕೆ ಹಾಗೂ ವೈದ್ಯರು ಸೂಚಿಸುತ್ತಿದ್ದ ಔಷಧಗಳನ್ನು ಸೇವನೆ ಮಾಡಲು ಶ್ರೀಗಳು ಸುತಾರಾಂ ಒಪ್ಪುತ್ತಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ನನಗೆ ದೇವರಿಂದ ಕರೆ ಬಂದಿದೆ. ಹೀಗಾಗಿ ನನಗೆ ಮುಕ್ತಿ ಬೇಕಾಗಿದ್ದು, ಚಿಕಿತ್ಸೆ ನೀಡಬೇಡಿ ಎಂದು ಹೇಳಿದ್ದಾರೆ. ಹೀಗಾಗಿ, ಶ್ರೀಗಳ ಹಾಸಿಗೆ ಸುತ್ತಲೂ ವೈದ್ಯರಿದ್ದರೂ ಚಿಕಿತ್ಸೆ ನೀಡಲಾಗದಂತಹ ಸ್ಥಿತಿ ಇದೆ. ಅನಿವಾರ್ಯವಾಗಿ ಆಕ್ಸಿಜನ್, ಗ್ಲುಕೋಸ್‌ ಮತ್ತು ಇತರೆ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಹೀಗಾಗಿ, ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿಯಲ್ಲಿ ನಿರೀಕ್ಷಿತ ಮಟ್ಟಕ್ಕೆ ಚೇತರಿಕೆ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ವಾರದ ಹಿಂದೆ ಭಕ್ತರಿಗೆ ದರ್ಶನ: ಇನ್ನು ಸಿದ್ದೇಶ್ವರ ಸ್ವಾಮೀಜಿಗೆ ಕಳೆದೊಂದು ವಾರದಿಂದ ಅನಾರೋಗ್ಯ ಕಾಡುತ್ತಿದ್ದಂತೆಯೇ ಭಕ್ತರ ದಂಡು ಸಾವಿರಾರು ಸಂಖ್ಯೆಯಲ್ಲಿ ವಿಜಯಪುರ ಜ್ಞಾನಯೋಗಾಶ್ರಮ ಮಠಕ್ಕೆ ಹರದುಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಸ್ವಾಮೀಜಿಗಳು ಅಧಿಕೃತವಾಗಿ ಮಠದ ಆವರಣಕ್ಕೆ ಬಂದು ದರ್ಶನ ನೀಡಿದ್ದರು. ಆದರೆ, ಭಕ್ತರನ್ನು ಹತ್ತಿರಕ್ಕೆ ಸೇರಿಸದೇ ಮೊದಲನೆ ಮಹಡಿಯಿಂದ ಎಲ್ಲರಿಗೂ ದರ್ಶನ ನೀಡಿದ್ದರು. ಈ ವೇಳೆ ಯಾವುದೇ ಪ್ರವಚನವನ್ನು ನೀಡುವ ಸ್ಥಿತಿಯಾಗಲೀ ಅಥವಾ ಹಾಸಿಗೆ ಬಿಟ್ಟು ಎದ್ದೇಳುವ ಸ್ಥಿತಿ ಇರಲಿಲ್ಲ. ಈಗ ಅವರು ಆರೋಗ್ಯ ಸ್ಥಿತಿ ಹಾಳಾಗುತ್ತಿದ್ದು, ಅವರ ಹಾಸಿಗೆಯಲ್ಲಿ ಇರುವ ರೀತಿಯಲ್ಲಿಯೇ ವೀಡಿಯೋ ಚಿತ್ರೀಕರಣವನ್ನು ಮಾಡಿ, ಅದನ್ನು ಮಠದ ಮುಂದೆ ನೆರೆದಿರುವ ಎಲ್‌ಇಡಿ ಪರದೆಯಲ್ಲಿ ಭಕ್ತರಿಗೆ ದರ್ಶನ ಮಾಡಿಸಲಾಗುತ್ತಿದೆ.

ಸಿದ್ದೇಶ್ವರ ಶ್ರೀಗಳು ಆರೋಗ್ಯವಾಗಿ ಬರುತ್ತಾರೆ: ಸಿಎಂ ಬೊಮ್ಮಾಯಿ

ನಾಡಿನ ಗಣ್ಯಾತಿ ಗಣ್ಯರಿಂದ ದರ್ಶನ: ಯಾವುದೇ ರಾಜಕೀಯ ಪ್ರಭಾವವನ್ನೂ ಬಳಸದ ಸಿದ್ದೇಶ್ವರ ಶ್ರೀಗಳು ಹಿಂದೂ ಧರ್ಮ ರಕ್ಷಣೆ ಕಾರ್ಯ ಮತ್ತು ಶ್ರೀರಾಮಮಂದಿರ ನಿರ್ಮಾಣ ವಿಚಾರ ಸೇರಿ ಇತರೆ ಕಾರ್ಯಗಳನ್ನು ಮೆಚ್ಚಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮೈಸೂರಿನಲ್ಲಿ ಹೊಗಳಿದ್ದರು. ಇತ್ತೀಚೆಗೆ ಅವರ ದೇಹದಲ್ಲಿ ಅನಾರೋಗ್ಯ ಕಾಣಿಸಿಕೊಂಡ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ತೆರಳಿ ಸಿದ್ದೇಶ್ವರ ಶ್ರೀಗಳನ್ನು ಭೇಟಿ ಮಾಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ವಿಡಿಯೋ ಕರೆ ಮಾಡಿ ಮಾತನಾಡಿಸಿದ್ದರು. ನಂತರ, ಸುತ್ತೂರು ಶ್ರೀ, ಆದಿಚುಂಚನಗಿರಿ ಶ್ರೀಗಳು ಸೇರಿ, ಹಲವು ಸಚಿವರು, ರಾಜಕೀಯ ಮುಖಂಡರು ಭೇಟಿ ಮಾಡಿ ದರ್ಶನ ಪಡೆಯುತ್ತಿದ್ದಾರೆ.

click me!