ಲಷ್ಕರ್ ಮೊಹಲ್ಲಾದಲ್ಲಿ ಡಬಲ್ ಮರ್ಡರ್ ಕೇಸ್; ಶಿವಮೊಗ್ಗ ಪೊಲೀಸರ ನಡೆ ಬಗ್ಗೆ ಆರಗ ಜ್ಞಾನೇಂದ್ರ ಕಿಡಿ

By Ravi JanekalFirst Published May 9, 2024, 4:29 PM IST
Highlights

ಶಿವಮೊಗ್ಗದಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ಸತ್ತು ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿ ಹೋಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ (ಮೇ.9): ಶಿವಮೊಗ್ಗದಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ಸತ್ತು ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿ ಹೋಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ದುಷ್ಟಶಕ್ತಿಗಳು ಹೆಚ್ಚಾಗಿವೆ. ಈ ಬೆಳವಣಿಗೆ ಎಲ್ಲರನ್ನೂ ಭಯಭೀತರನ್ನಾಗಿಸಿದೆ. ಕಾಂಗ್ರೆಸ್ ನವರ ತುಷ್ಟೀಕರಣ ನೀತಿಯಿಂದ ಸಾಮಾನ್ಯ ಜನರಷ್ಟೇ ಅಲ್ಲ, ದುಷ್ಟರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲು ಸಹ ಪೊಲೀಸರೇ ಹಿಂಜರಿಯುವಷ್ಟು ಮಾನಸಿಕತೆ ಹಾಳಾಗಿದೆ. ಶಿವಮೊಗ್ಗದ ರಾಗಿಗುಡ್ಡದ ಘಟನೆಯಿಂದಿಡಿದು, ಇಲ್ಲಿಯವರೆಗೆ ಶಿವಮೊಗ್ಗ ಪೊಲೀಸರು ರೌಡಿಗಳನ್ನು ವಿದ್ರೋಹಿಗಳನ್ನು ನಿಭಾಯಿಸಿದ ರೀತಿ ಕೆಟ್ಟ ಸಂದೇಶ ನೀಡಿದೆ. ಹಳ್ಳಿಗಳಿಂದ ನಗರಕ್ಕೆ ಬರಲು ಮಹಿಳೆಯರು ಭಯಭೀತರಾಗಿದ್ದಾರೆ. ದೌರ್ಜನ್ಯ, ಕಿರುಕುಳ ಎಂದು ಮಹಿಳೆಯರು ಪೊಲೀಸ್ ಠಾಣೆಗೆ ಹೋದರೂ ಎಫ್‌ಐಆರ್ ದಾಖಲಾಗುವುದಿಲ್ಲ. ಅಷ್ಟರಮಟ್ಟಿಗೆ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಟೀಕಿಸಿದರು.

ಶಿವಮೊಗ್ಗ ರೌಡಿಶೀಟರ್‌ಗಳ ಹತ್ಯೆಗೆ ಸಿಕ್ತು ಬಿಗ್ ಟ್ವಿಸ್ಟ್; ಕೊಲೆ ಮಾಡಲು ಬಂದವರೇ ಬೀದಿ ಹೆಣವಾದರು!

ಕಳೆದ ವರ್ಷ ಹರ್ಷ ಕೊಲೆಯ ನಂತರ ಶಿವಮೊಗ್ಗ ನಗರದಲ್ಲಿ ಹತ್ತಾರು ವರ್ಷಗಳಿಂದ ಬೀಡು ಬಿಟ್ಟಿದ್ದ ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬರತ್ತಿದ್ದಂತೆ ಮತ್ತೆ ಸಿಬ್ಬಂದಿ ಅಧಿಕಾರಿಗಳು ಇಲ್ಲಿಗೇ ವಾಪಸ್ ಬಂದಿದ್ದಾರೆ. ಇನ್ನು ದುಷ್ಕರ್ಮಿಗಳಿಗೂ ನಮ್ಮದೇ ಸರ್ಕಾರ ಯಾರೂ ಯಾವ ಪೊಲೀಸರೂ ಏನು ಮಾಡಲಾಗುವುದಿಲ್ಲ ಎಂಬ ವಾತಾವರಣ ಗ್ಯಾಂಗ್‌ಸ್ಟಾರ್ಸ್‌ಗಳಲ್ಲಿದೆ. ಹಾಡಹಗಲೇ ಲಾಂಗು ಮಚ್ಚು ಹಿಡಿದು ರೌಡಿಗಳು ಓಡಾಡುತ್ತಿರುವ ವಿಷಯ ಪೊಲೀಸರಿಗೆ ಗೊತ್ತಿದ್ದೂ ಮರ್ಡರ್ ಪ್ರಕರಣವನ್ನು ತಡೆಗಟ್ಟಬಹುದಿತ್ತು, ತಡೆಲಾಗಿಲ್ಲ. ರೌಡಿಗಳು ಕೊಟ್ಟ ಗಿಫ್ಟ್‌ಗಳನ್ನ ಪಡೆಯುವ ವಿಚಿತ್ರ ಸನ್ನಿವೇಶ ಇಲ್ಲಿದೆ ಎಂದು ಪೊಲೀಸ್ ಇಲಾಖೆಯ ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು

ಕೋಟೆ ಪೊಲೀಸ್ ಠಾಣೆಗೆ ಗಡಸು ಇರುವ ಅಧಿಕಾರಿಯನ್ನು ಹಾಕಬೇಕಿತ್ತು. ಯಾರಾದರೂ ದೂರು ಕೊಟ್ಟರೆ ಅದನ್ನ ಕ್ರಾಸ್ ಚೆಕ್ ಮಾಡುವ ಕೆಲಸ ಪೊಲೀಸರಿಂದ ಆಗುತ್ತಿಲ್ಲ. ಪೊಲೀಸ್ ಇಲಾಖೆಯ ಟೀಂ ಲೀಡರೇ ಸರಿಯಾಗಿಲ್ಲ.

ನಮ್ಮ ತಾಲೂಕಿನಲ್ಲಿ ಕಾರು ತಗುಲಿದೆ ಎಂದು ಕೆಲವರು ಅಡ್ಡಗಟ್ಟಿ ಗಲಾಟೆ ಮಾಡಿದ್ರು. ಗಲಾಟೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು ದಾಂಧಲೆ ಮಾಡುವವರಿಗೆ ಇವರ ಸಹಕಾರ ಇದೆ. ದುಷ್ಕೃತ್ಯಗಳನ್ನು ನಿಭಾಯಿಸುವಲ್ಲಿ ಪೊಲೀಸ್ ಇಲಾಖೆ ಎಸ್‌ಪಿ ಅವರು ನಡೆದುಕೊಳ್ಳುತ್ತಿರುವ ರೀತಿ ಕೆಟ್ಟ ಸಂದೇಶ ನೀಡಿದೆ. ಜನರಿಗೆ ಆತ್ಮವಿಶ್ವಾಸ ನಿರ್ಮಾಣ ಮಾಡುವ ಕೆಲಸ ಪೊಲೀಸ್ ಇಲಾಖೆಯಿಂದ ಆಗುತ್ತಿಲ್ಲ. ಕೆಟ್ಟ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಇಲ್ಲಿಂದ ಎತ್ತಂಗಡಿ ಮಾಡಬೇಕು ಎಂದು ಆಗ್ರಹಿಸಿದರು. 

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ, ಸಾಗಾಟ ಹೆಗ್ಗಿಲ್ಲದೆ ನಡೆಯುತ್ತಿದೆ ಇದನ್ನು ಪೊಲೀಸ್ ಇಲಾಖೆ ಕಂಟ್ರೋಲ್ ಮಾಡುತ್ತಿಲ್ಲ. ನಮ್ಮ ಅಧಿಕಾರವಧಿಯಲ್ಲಿ ನಿಯಂತ್ರಣದಲ್ಲಿ ಇಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ರೌಡಿಗಳು ನಮ್ಮ ಸರ್ಕಾರ ಬಂದಿದೆ ಏನು ಮಾಡಿದರೂ ನಡೆಯುತ್ತಿದೆ ಎಂಬ ಭಾವನೆಯಲ್ಲಿದ್ದಾರೆ. ಹಾಗಾಗಿ ಪೊಲೀಸರು ಕೂಡ ತಡೆಯುವ ಧೈರ್ಯ ತೋರಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ಹಾಗಾಂತ ನಾವು ಸುಮ್ಮನೆ ಕೂಡುವುದಿಲ್ಲ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಚ್ಚರಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ಒಪ್ಪಿಸಿ: ಆರಗ ಜ್ಞಾನೇಂದ್ರ ಒತ್ತಾಯ 

ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಹ ಎಸ್‌ಐಟಿ ಸರಿಯಾಗಿ ತನಿಖೆ ಮಾಡುತ್ತಿಲ್ಲ. ಹೆಣ್ಣು ಮಕ್ಕಳ ಮಾನ ಉಳಿಸುವ ಕೆಲಸ ಆಗಿಲ್ಲ. ಪೆನ್ ಡ್ರೈವ್ಗಳನ್ನು ಕಾಂಗ್ರೆಸ್ಸಿಗರು ಜೆಬಿನಲ್ಲಿ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ಇಂತಹ ಘಟನೆಗಳನ್ನೂ ರಾಜಕಾರಣಕ್ಕೆ ಬಳಸುತ್ತಿರುವುದು ನೀಚತನದ ಪರಮಾವಧಿ. ಇದಕ್ಕೆ ಅಂತರಾಷ್ಟ್ರೀಯ ಲಿಂಕ್ ಇರುವ ಹಿನ್ನೆಲೆ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು. ಪೆನ್ ಡ್ರೈವ್ಗಳನ್ನು ಹೊರದೇಶದಲ್ಲಿ ಹಂಚಿಕೆ ಮಾಡಿದ ವಿಷಯ ಇದೆ. ಎಸ್ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಹಾಗಾಗಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

click me!