ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ ಸಂಧಾನ ವಿಫಲ, ನ. 7 ಕ್ಕೆ ವಿಚಾರಣೆ ಮೂದೂಡಿದ ಕಲಬುರಗಿ ಹೈಕೋರ್ಟ್

Published : Oct 30, 2025, 08:42 PM IST
RSS route march

ಸಾರಾಂಶ

ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ಕೋರಿದ ಅರ್ಜಿ ವಿಚಾರಣೆ ಕಲಬುರಗಿ ಹೈಕೋರ್ಟ್‌ನಲ್ಲಿ ನಡೆದಿದೆ. ಶಾಂತಿ ಸಭೆ ವಿಫಲವಾದ ಹಿನ್ನೆಲೆಯಲ್ಲಿ, ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ.  

ಬೆಂಗಳೂರು/ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ನಡೆಯಲಿರುವ ಆರ್‌ಎಸ್‌ಎಸ್ (RSS) ಪಥಸಂಚಲನ ವಿಚಾರ ಇದೀಗ ರಾಜ್ಯ ರಾಜಕೀಯ ಮತ್ತು ಕಾನೂನು ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಪಥಸಂಚಲನಕ್ಕೆ ಅನುಮತಿ ಕೇಳಿದ ಆರ್‌ಎಸ್‌ಎಸ್ ಹಾಗೂ ವಿರೋಧ ವ್ಯಕ್ತಪಡಿಸಿದ ಇತರೆ ಸಂಘಟನೆಗಳ ಪೈಪೋಟಿಯಿಂದ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದರ ನಡುವೆ ಕಲಬುರಗಿ ಹೈ ಕೋರ್ಟ್ ನಲ್ಲಿ ವಿಚಾರಣೆ ಮತ್ತೆ ಮುಂದೂಡಿಯಾಗಿದೆ. ನವೆಂಬರ್ 7 ಕ್ಕೆ ಅರ್ಜಿ ವಿಚಾರಣೆ ಮುಂದೂಡಿ ಕಲಬುರಗಿ ಹೈಕೋರ್ಟ್ ಏಕಸದಸ್ಯ ಪೀಠ ನ್ಯಾಯಧೀಶರಾದ ಎಮ್‌ಜಿಎಸ್ ಕಮಲ್ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ಶಶಿಕಿರಣ ಶೆಟ್ಟಿ ವಾದ ಮಂಡಿಸಿದರೆ. ಆರ್‌ಎಸ್‌ಎಸ್ ಪರ ಸತ್ಯನಾರಾಯಣ ಆಚಾರ್ಯ ಮತ್ತು ಅರುಣ ಶ್ಯಾಮ್ ವಾದ ಮಂಡಿಸಿದರು.

ಸಂಧಾನ ವಿಫಲ

ಚಿತ್ತಾಪುರದಲ್ಲಿ ನವೆಂಬರ್ 2 ರಂದು ಪಥಸಂಚಲನ ನಡೆಸಲು ಆರ್‌ಎಸ್‌ಎಸ್ ಅರ್ಜಿ ಸಲ್ಲಿಸಿತ್ತು. ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು. ಆದರೆ ಕೋರ್ಟ್ ನಿರ್ದೇಶನದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅಧಿಕಾರಿಗಳ ಮತ್ತು ಸಂಘಟನೆಗಳ ಪ್ರತಿನಿಧಿಗಳ ನಡುವೆ ವಾಗ್ವಾದ ಉಂಟಾದ ಕಾರಣ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ. ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಹೈಕೋರ್ಟ್‌ನಲ್ಲಿ ವಿಚಾರಣೆ

ಪಥಸಂಚಲನಕ್ಕೆ ಅನುಮತಿ ಕೋರಿ ಆರ್‌ಎಸ್‌ಎಸ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು. ಈ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರು ಪ್ರಕರಣದ ಸಂವೇದನಶೀಲತೆಯನ್ನು ಗಮನಿಸಿ ಶಾಂತಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುವಂತೆ ಸೂಚಿಸಿದರು. ಹೀಗಾಗಿ ನವೆಂಬರ್ 5 ರಂದು ಬೆಂಗಳೂರಿನ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸುವಂತೆ ಕೋರ್ಟ್ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 7 ರಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ

ಚಿತ್ತಾಪುರ ಪ್ರಕರಣ ಮಾದರಿ ಆಗಲಿ: ಕೋರ್ಟ್

ನ್ಯಾಯಮೂರ್ತಿ ಕಮಲ್ ಅವರು ತಮ್ಮ ಆದೇಶದಲ್ಲಿ, “ಚಿತ್ತಾಪುರ ಪಥಸಂಚಲನ ವಿಷಯವು ಅತ್ಯಂತ ಸೂಕ್ಷ್ಮ ಹಾಗೂ ಸಾರ್ವಜನಿಕ ಶಾಂತಿಗೆ ಸಂಬಂಧಪಟ್ಟದ್ದು. ಈ ಪ್ರಕರಣವನ್ನು ಎಲ್ಲರಿಗೂ ಮಾದರಿಯಾಗುವಂತೆ ಪರಿಹರಿಸಬೇಕು” ಎಂದು ಹೇಳಿದರು.

ಅವರು ಅಡ್ವೋಕೇಟ್ ಜನರಲ್‌ ಅವರಿಗೆ ಸೂಚನೆ ನೀಡಿದ್ದು, “ಮುಂದಿನ ದಿನಗಳಲ್ಲಿ ಇಂತಹ ಸನ್ನಿವೇಶಗಳು ಎದುರಾಗದಂತೆ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದ ಪರಿಹಾರವೇ ಮುಂದಿನ ಪ್ರಕರಣಗಳಿಗೆ ಮಾದರಿಯಾಗಬೇಕು” ಎಂದರು.

ನವೆಂಬರ್ 2 ಪಥಸಂಚಲನಕ್ಕೆ ನಿರಾಸೆ

ಆರ್‌ಎಸ್‌ಎಸ್ ಮೂಲಗಳು ನವೆಂಬರ್ 2 ರಂದು ಪಥಸಂಚಲನ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ, ವಿಚಾರಣೆ ಮುಂದೂಡಿಕೆ ಹಾಗೂ ಶಾಂತಿ ಸಭೆ ಬೆಂಗಳೂರಿಗೆ ಸ್ಥಳಾಂತರಗೊಂಡ ಹಿನ್ನೆಲೆ ಅವರ ಯೋಜನೆಗೆ ತಾತ್ಕಾಲಿಕ ಅಡ್ಡಿಯಾಗಿದೆ. ಹೀಗಾಗಿ ಪಥಸಂಚಲನ ನಡೆಯುವ ಸಾಧ್ಯತೆ ಈಗ ಕಡಿಮೆಯಾಗಿದೆ. ಚಿತ್ತಾಪುರದಲ್ಲಿ ನಡೆಯುತ್ತಿರುವ ಈ ಪ್ರಕರಣವು ಕೇವಲ ಸ್ಥಳೀಯ ವಿಷಯವಲ್ಲ, ಬದಲಾಗಿ ರಾಜ್ಯಾದ್ಯಂತ ಶಾಂತಿ, ಕಾನೂನು-ಸುವ್ಯವಸ್ಥೆ ಮತ್ತು ಧಾರ್ಮಿಕ ಸಹಬಾಳ್ವೆಯ ನಿಟ್ಟಿನಲ್ಲಿ ಮಹತ್ವದ ವಿಚಾರವಾಗಿ ಪರಿಣಮಿಸಿದೆ.

ಪ್ರಮುಖ ಅಂಶಗಳು

  • ಹೈಕೋರ್ಟ್‌ನ ಅಡ್ವೋಕೇಟ್‌ ಜನರಲ್‌ ಅವರ ಕಚೇರಿಯಲ್ಲಿ ನ. 5 ಕ್ಕೆ ಜಿಲ್ಲಾಡಳಿತ ಹಾಗೂ ಇತರೆ ಅಧಿಕಾರಿಗಳ ಸಭೆ ನಡೆಸುವಂತೆ ಆದೇಶ
  • ನಂತರ ನ. 7 ಕ್ಕೆ ಸದರಿ ವಿಷಯದ ವಿಚಾರಣೆಯನ್ನು ಮ. 2. 30 ಕ್ಕೆ ಕೈಗೆತ್ತಿಕೊಳ್ಳೋದಾಗಿ ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಆದೇಶ
  • ಚಿತ್ತಾಪುರ ಆರೆಸ್ಸೆಸ್‌ ಪಥ ಸಂಚಲನ - ಅದರ ಸುತ್ತಮುತ್ತಲಿನ ಬೆಲ‍ಣಿಗೆಗಳು ವಿಷಯ ತುಂಬ ಗಂಭೀರ ಹಾಗೂ ಸೂಕ್ಷ್ಮವಾಗಿವೆ
  • ಈ ಪ್ರಕರಣ ಎಲ್ಲರಿಗೂ ಮಾದರಿ ಎನ್ನುವಂತೆ ಅದ್ಹೇಗೆ ಪರಿಹಾರ ಮಾಡೋಣ ಅನ್ನೋದನ್ನ ನೋಡಿ- ಅಡ್ವೋಕೇಟ್ ಜನರಲ್‌ಗೆ ನ್ಯಾಯಮೂರ್ತಿ ಸೂಚನೆ
  • ಮುಂದೆ ಇಂತಹ ಪ್ರಕರಣ ಉದ್ಭವವಾದಲ್ಲಿ ಚಿತ್ತಾಪುರ ಪ್ರಕರಣದ ತೀಪ್ರು ಅಂತಹದ್ದಕ್ಕಲ್ಲ ಮಾದರಿಯಾಗುವಂತಾಗಬೇಕು, ಹಾಗೇ ಈ ಪ್ರಕರಣವನ್ನ ಪರಿಹರಿಸಲು ಯತ್ನಿಸೋಣ ಎಂದ ನ್ಯಾಯಮೂರ್ತಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌