ಸಚಿವ ಸಂಪುಟ ಸಭೆ ಮುಕ್ತಾಯ, ಬೆಂಗಳೂರು ರಸ್ತೆ ಅಭಿವೃದ್ಧಿಗೆ 1241 ಕೋಟಿ ರೂ. ಸೇರಿ ಹಲವು ಯೋಜನೆಗಳಿಗೆ ಅನುಮೋದನೆ

Published : Oct 30, 2025, 04:55 PM IST
Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಅರಣ್ಯ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಮಹತ್ವದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.  

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಅರಣ್ಯ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಮಹತ್ವದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ವಿವಿಧ ಇಲಾಖೆಗಳ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಮತ್ತೊಂದು ಬೃಹತ್ ಹೆಜ್ಜೆ ಇಡಲಾಗಿದೆ. ಈ ವಿಚಾರವನ್ನು ಸಚಿವ ಹೆಚ್ ಕೆ ಪಾಟೀಲ್ ವಿವರಿಸಿದ್ದಾರೆ.

ಅರಣ್ಯ ಮತ್ತು ಪರಿಸರ ಇಲಾಖೆ – ಕೆ-ಶೋರ್ ಯೋಜನೆಗೆ ಅನುಮೋದನೆ

ಅರಣ್ಯ ಮತ್ತು ಪರಿಸರ ಇಲಾಖೆ ಪ್ರಸ್ತಾಪಿಸಿದ ಕೆ-ಶೋರ್ ಯೋಜನೆಗೆ ಸಂಬಂಧಿಸಿದಂತೆ ತಾಂತ್ರಿಕವಾಗಿ ₹20.47 ಕೋಟಿಯ ಮೊತ್ತದಲ್ಲಿ ಕಾರ್ಯಕ್ರಮ ರೂಪಿಸಲು ಸಂಪುಟದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಯೋಜನೆಯಡಿ ಪರಿಸರ ಸಂರಕ್ಷಣೆಯ ಜೊತೆಗೆ ಅರಣ್ಯ ಸಂಪನ್ಮೂಲಗಳ ಸುಸ್ಥಿರ ಬಳಕೆಗೂ ಒತ್ತು ನೀಡಲಾಗುತ್ತದೆ.

ಶಿಕ್ಷಣ ಇಲಾಖೆ – ಸರ್ಕಾರಿ ಶಾಲೆಗಳಿಗೆ 2200 ಹೊಸ ಕೊಠಡಿಗಳು

ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಒಟ್ಟು 2200 ತರಗತಿ ಕೊಠಡಿಗಳ ನಿರ್ಮಾಣಕ್ಕೆ ₹360 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅನುಮೋದನೆ ನೀಡಲಾಗಿದೆ. ಈ ಕ್ರಮದಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಪಠಣ ವಾತಾವರಣ ದೊರೆಯಲಿದೆ.

ನಾಲ್ಕು ಬಂದರುಗಳ ಅಭಿವೃದ್ಧಿಗೆ ಅನುಮೋದನೆ

ರಾಜ್ಯದ ಕರಾವಳಿಯಲ್ಲಿರುವ ನಾಲ್ಕು ಪ್ರಮುಖ ಬಂದರುಗಳ ಅಭಿವೃದ್ಧಿಗೆ ₹40 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಲಾಗಿದೆ. ಬಂದರು ಮೂಲಸೌಕರ್ಯ ಬಲಪಡಿಸುವ ಮೂಲಕ ವ್ಯಾಪಾರ, ಮೀನುಗಾರಿಕೆ ಮತ್ತು ಸಾರಿಗೆ ಕ್ಷೇತ್ರಗಳಿಗೆ ಉತ್ತೇಜನ ದೊರೆಯಲಿದೆ.

ಮಂಡ್ಯದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅನುಮೋದನೆ

ನಗರಾಭಿವೃದ್ಧಿ ಪ್ರಾಧಿಕಾರದ ವಿವೇಕಾನಂದ ಬಡಾವಣೆ, ನಾಗರಿಕ ಸೌಲಭ್ಯ ನಿವೇಶನ ಸಂಖ್ಯೆ-1/B (1457.8 ಚ.ಮೀ.) ವಿಸ್ತೀರ್ಣದ ಜಾಗವನ್ನು ಮಂಡ್ಯ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಲು ಸಂಪುಟ ಅನುಮೋದನೆ ನೀಡಿದೆ.

ಪ್ರವಾಹ ಹಾನಿ, ಭಾರತ ಸರ್ಕಾರಕ್ಕೆ ಸಹಾಯ ಕೋರಿ ಮನವಿ

ನೈಋತ್ಯ ಮುಂಗಾರು ಅವಧಿಯಲ್ಲಿ ಸಂಭವಿಸಿದ ಭಾರೀ ನದಿ ಪ್ರವಾಹದಿಂದ ರಾಜ್ಯದ ಹಲವು ಭಾಗಗಳಲ್ಲಿ ಆಸ್ತಿ ಹಾಗೂ ಮೂಲಸೌಕರ್ಯ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ₹1545.23 ಕೋಟಿ ರೂ. ಸಹಾಯಕ್ಕಾಗಿ ಭಾರತ ಸರ್ಕಾರಕ್ಕೆ ಚೇತರಿಕೆ ಮತ್ತು ಪುನರ್‌ನಿರ್ಮಾಣ (Recovery and Reconstruction) ನಿಧಿಯಿಂದ ನೆರವು ನೀಡುವಂತೆ ಮನವಿ ಸಲ್ಲಿಸಲು ಸಂಪುಟ ಅನುಮೋದನೆ ನೀಡಿದೆ.

ಪೊಲೀಸ್ ಇಲಾಖೆ ಹೊಸ ನೇಮಕಾತಿ ನಿಯಮಗಳು

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಮತ್ತು ಭಾರತೀಯ ರಿಸರ್ವ್ ಬಟಾಲಿಯನ್ (IRB) ಘಟಕಗಳಿಗೆ ಪ್ರತ್ಯೇಕ ವೃಂದ ಹಾಗೂ ನೇಮಕಾತಿ ನಿಯಮಗಳನ್ನು ರಚಿಸಲು ಸಂಪುಟ ಅನುಮೋದನೆ ನೀಡಿದೆ. ಇದೇ ಸಂದರ್ಭದಲ್ಲಿ ಪಿಯುಸಿ ವಿದ್ಯಾರ್ಹತೆ ಆಧಾರದ ಮೇಲೆ ನೇಮಕಾತಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿ ಯೋಜನೆ

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ₹1055 ಕೋಟಿ ರೂ. ಮೊತ್ತದ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಕೇರ್ ಘಟಕ

ಕಾರವಾರ ವೈದ್ಯಕೀಯ ಕಾಲೇಜು ಆವರಣದಲ್ಲಿ ಕ್ಯಾನ್ಸರ್ ಕೇರ್ ಘಟಕ ಸ್ಥಾಪನೆಗೆ ಸಂಪುಟ ಹಸಿರು ನಿಶಾನೆ ತೋರಿಸಿದೆ. ಅಗತ್ಯ ಉಪಕರಣಗಳ ಖರೀದಿ ಮತ್ತು ಕಟ್ಟಡ ನಿರ್ಮಾಣ ಸೇರಿದಂತೆ ₹31.63 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು.

ಬೆಂಗಳೂರು ರಸ್ತೆ ಅಭಿವೃದ್ಧಿಗೆ 1241 ಕೋಟಿ ರೂ. ಅನುಮೋದನೆ

ಜಿಬಿಎ ವ್ಯಾಪ್ತಿಯಲ್ಲಿನ ಐದು ಬೆಂಗಳೂರು ನಗರ ಪಾಲಿಕೆಗಳ ಪ್ರಮುಖ ಹಾಗೂ ಉಪಮಾರ್ಗಗಳ ಡಾಂಬರೀಕರಣ ಕಾರ್ಯಕ್ಕೆ ₹1241 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ ವಿಶೇಷ ಮೂಲಭೂತ ಸೌಕರ್ಯ ಬಂಡವಾಳ ಬೆಂಬಲ ಯೋಜನೆಯ ಅನುದಾನವನ್ನು ಬಳಸಲಾಗುವುದು.

ರಾಜಕೀಯ ಪ್ರತಿಕ್ರಿಯೆ – ಸ್ಪೀಕರ್ ವಿರುದ್ಧದ ಆರೋಪ ನಿರಾಧಾರ

ಸಭೆಯ ಬಳಿಕ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, “ಸ್ಪೀಕರ್ ಖಾದರ್ ಅವರ ಕಾರ್ಯವೈಖರಿ ಕುರಿತು ಬಿಜೆಪಿ ಮಾಡಿರುವ ಆರೋಪಗಳಲ್ಲಿ ಯಾವ ನಿಜವೂ ಇಲ್ಲ. ಅವರ ಕೆಲಸಕ್ಕೆ ಸರ್ಕಾರದ ಒಳಗೆಯೇ ಮೆಚ್ಚುಗೆ ವ್ಯಕ್ತವಾಗಿದೆ. ಖಾದರ್ ಈಗಾಗಲೇ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ” ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌