ಈಗಾಗಲೇ ಎರಡು ಬಾರಿ ಅಂತಾರಾಷ್ಟ್ರೀಯ ಮಟ್ಟದ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಕನ್ನಡದ ಸಂಗೀತಗಾರ ರಿಕ್ಕಿ ಕೇಜ್ ಇದೀಗ ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.
ಬೆಂಗಳೂರು (ನ.17): ಈಗಾಗಲೇ ಎರಡು ಬಾರಿ ಅಂತಾರಾಷ್ಟ್ರೀಯ ಮಟ್ಟದ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಕನ್ನಡದ ಸಂಗೀತಗಾರ ರಿಕ್ಕಿ ಕೇಜ್ ಇದೀಗ ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. 65ನೇ ವಾರ್ಷಿಕ ಗ್ರಾಮಿ ಅವಾರ್ಡ್‌ನಲ್ಲಿ ರಿಕಿ ಕೇಜ್ ಅವರ ‘ಡಿವೈನ್ ಟೈಡ್ಸ್’ ಅನ್ನೋ ಆಲ್ಬಂ ‘ತಲ್ಲೀನಗೊಳಿಸುವ ಆಡಿಯೋ ಆಲ್ಬಂ’ ವಿಭಾಗದಲ್ಲಿ ಸ್ಪರ್ಧೆಗೆ ಬಂದಿದೆ. ಗ್ರ್ಯಾಮಿ ಪ್ರಶಸ್ತಿ ಸಮಿತಿಯ ಮುಖ್ಯಸ್ಥ ಹಾರ್ವೆ ಮಾಸನ್ ಜ್ಯೂನಿಯರ್ ಈ ವಿಚಾರ ತಿಳಿಸಿದ್ದಾರೆ.
2015ರಲ್ಲಿ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ವಿಚಾರಗಳಿಂದ ಪ್ರಭಾವಿತವಾಗಿ ನಿರ್ಮಿಸಲಾಗಿದ್ದ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂಗೆ ‘ನ್ಯೂ ಏಜ್’ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಬಂದಿತ್ತು. ಆ ಸಂದರ್ಭದಲ್ಲಿ ಗ್ರ್ಯಾಮಿ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಭಾರತೀಯ ಸಂಗೀತಗಾರ ಅನ್ನುವ ಹೆಗ್ಗಳಿಕೆಗೆ ರಿಕ್ಕಿ ಕೇಜ್ ಪಾತ್ರವಾಗಿದ್ದರು. ಎರಡನೇ ಗ್ರ್ಯಾಮಿ ಅವಾರ್ಡ್ ಈ ವರ್ಷ ಬಂದಿತ್ತು. ‘ಡಿವೈನ್ ಟೈಡ್ಸ್’ ಆಲ್ಬಂಗಾಗಿ ಬಂದ ಪ್ರಶಸ್ತಿಯನ್ನು ಅವರು ಸ್ಟುವರ್ಚ್ ಕೋಪ್ ಲೆಂಡ್ ಅವರೊಂದಿಗೆ ಹಂಚಿಕೊಂಡಿದ್ದರು.
ಏಷ್ಯಾನೆಟ್ ತಂಡದೊಂದಿಗೆ ಗ್ರ್ಯಾಮಿ ವಿಜೇತ: ಸಂಗೀತವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದ ರಿಕ್ಕಿ ಕೇಜ್
ಇದೀಗ 65ನೇ ಗ್ರ್ಯಾಮಿ ಪ್ರಶಸ್ತಿಗೂ ರಿಕಿ ಕೇಜ್ ಅವರ ಆಲ್ಬಂ ನಾಮ ನಿರ್ದೇಶನಗೊಂಡಿದೆ. ಈ ವರ್ಷ ‘ಬೆಸ್ಟ್ ನ್ಯೂ ಏಜ್’ ವಿಭಾಗದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗಳಿಸಿದ್ದ ‘ಡಿವೈನ್ ಟೈಡ್ಸ್’ ಆಲ್ಬಂ ಮತ್ತೊಂದು ವಿಭಾಗದ ಸ್ಪರ್ಧೆಗೆ ನಾಮ ನಿರ್ದೇಶನಗೊಂಡಿದೆ. 2023ರ ಫೆ.5ಕ್ಕೆ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ 65ನೇ ಗ್ರ್ಯಾಮಿ ಅವಾರ್ಡ್ ಸಮಾರಂಭ ನಡೆಯಲಿದೆ. ಅಲ್ಲಿ ವಿಜೇತರ ಹೆಸರು ಘೋಷಣೆ ಆಗಲಿದೆ.
ಗ್ರ್ಯಾಮಿ ಎಂದರೇನು?: ಅಮೆರಿಕದ ರೆಕಾರ್ಡಿಂಗ್ ಅಕಾಡೆಮಿ ಎಂಬ ಸಂಸ್ಥೆ ಕಳೆದ 62 ವರ್ಷಗಳಿಂದ ಅತ್ಯುತ್ತಮ ಸಂಗೀತ ಸಾಧಕರಿಗೆ ನೀಡುತ್ತಾ ಬಂದಿರುವ ಪ್ರತಿಷ್ಠಿತ ಪ್ರಶಸ್ತಿಯಿದು. ಗ್ರಾಮೋಫೋನ್ ಅವಾರ್ಡ್ಸ್ ಎಂಬುದು ಪೂರ್ಣ ಹೆಸರು. ಸಿನಿಮಾಕ್ಕೆ ಆಸ್ಕರ್ ಅಥವಾ ವಿವಿಧ ಕ್ಷೇತ್ರಗಳ ಸಾಧನೆಗೆ ನೊಬೆಲ್ ಇರುವಂತೆ ಸಂಗೀತಗಾರರಿಗೆ ಗ್ರ್ಯಾಮಿ ಪ್ರಶಸ್ತಿ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಪ್ರಶಸ್ತಿಯು ಗ್ರಾಮೋಫೋನ್ ರೂಪದ ಟ್ರೋಫಿಯನ್ನು ಒಳಗೊಂಡಿರುತ್ತದೆ.
ರಿಕಿ ಕೇಜ್: ಅಮೆರಿಕದ ನಾರ್ತ್ ಕೆರೋಲಿನಾದಲ್ಲಿ ಭಾರತೀಯ ದಂಪತಿಗೆ 1981ರಲ್ಲಿ ಜನಿಸಿದ ರಿಕಿ ಕೇಜ್ ತಮ್ಮ 8ನೇ ವಯಸ್ಸಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಕ್ಸ್‌ಫರ್ಡ್ ಕಾಲೇಜಿನಿಂದ ದಂತ ವೈದ್ಯಕೀಯ ಪದವಿ ಪಡೆದಿರುವ ಇವರು ದಂತವೈದ್ಯರಾಗಿ ಕೆಲಸ ಮಾಡದೆ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು 30ಕ್ಕೂ ಹೆಚ್ಚು ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಜೊತೆಗೂ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 2003ರಿಂದ ‘ರೆವೊಲ್ಯೂಷನ್’ ಹೆಸರಿನ ಸ್ವಂತ ಸ್ಟುಡಿಯೋ ಹೊಂದಿದ್ದಾರೆ. 3000ಕ್ಕೂ ಹೆಚ್ಚು ಜಾಹೀರಾತು ಜಿಂಗಲ್‌ಗಳನ್ನು ರೂಪಿಸಿರುವ ಅವರು, ಕೆಲ ಕನ್ನಡದ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಚಾರ್ಲಿಯನ್ನು ಮೆಚ್ಚಿದ ಪರಭಾಷಾ ಸ್ಟಾರ್ಸ್; ಬೋನಿ ಕಪೂರ್, ರಿಕಿ, ಮಧುರ್ ಭಂಡಾರ್ಕರ್ ಪ್ರತಿಕ್ರಿಯೆ
ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಗೆ ನನ್ನ ಹೆಸರು ನಾಮ ನಿರ್ದೇಶನಗೊಂಡಿರುವ ವಿಷಯ ತಿಳಿದು ಥ್ರಿಲ್ ಆಗಿದ್ದೇನೆ. ನಮ್ಮ ಡಿವೈನ್ ಟೈಡ್ಸ್ ಆಲ್ಬಂ ಬಹಳ ಕ್ರಿಯೇಟಿವ್ ಆಗಿದ್ದು, ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ಈ ಆಲ್ಬಂಗೆ ಸಿಗುತ್ತಿರುವ ಮನ್ನಣೆಗೆ ಆಭಾರಿಯಾಗಿದ್ದೇನೆ.
- ರಿಕ್ಕಿ ಕೇಜ್, ಸಂಗೀತಕಾರ