Chanakya University: ಚಾಣಕ್ಯ ವಿವಿಯಲ್ಲಿ ಉನ್ನತ ಶಿಕ್ಷಣದ ಹೊಸ ಪ್ರಯೋಗ

By Govindaraj S  |  First Published Nov 17, 2022, 5:03 AM IST

ರಾಜ್ಯದಲ್ಲಿ ಈಗಾಗಲೇ ಇರುವ ಸುಮಾರು 24 ಸರ್ಕಾರಿ, 19ಕ್ಕೂ ಹೆಚ್ಚು ಖಾಸಗಿ ಹಾಗೂ ಡೀಮ್ಡ್‌ ವಿಶ್ವವಿದ್ಯಾಲಯಗಳ ನಡುವೆ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ , ತಕ್ಷಶಿಲಾ ಪ್ರಾಧ್ಯಾಪಕರಾಗಿದ್ದ ‘ಚಾಣಕ್ಯ’ ಹೆಸರಲ್ಲಿ ಮತ್ತೊಂದು ಖಾಸಗಿ ವಿಶ್ವವಿದ್ಯಾಲಯ ತಲೆಎತ್ತಿದೆ.


ಲಿಂಗರಾಜು ಕೋರಾ

ಬೆಂಗಳೂರು (ನ.17): ರಾಜ್ಯದಲ್ಲಿ ಈಗಾಗಲೇ ಇರುವ ಸುಮಾರು 24 ಸರ್ಕಾರಿ, 19ಕ್ಕೂ ಹೆಚ್ಚು ಖಾಸಗಿ ಹಾಗೂ ಡೀಮ್ಡ್‌ ವಿಶ್ವವಿದ್ಯಾಲಯಗಳ ನಡುವೆ ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ , ತಕ್ಷಶಿಲಾ ಪ್ರಾಧ್ಯಾಪಕರಾಗಿದ್ದ ‘ಚಾಣಕ್ಯ’ ಹೆಸರಲ್ಲಿ ಮತ್ತೊಂದು ಖಾಸಗಿ ವಿಶ್ವವಿದ್ಯಾಲಯ ತಲೆಎತ್ತಿದೆ. ಬೆಂಗಳೂರಿನ ಹೊರವಲಯದ ದೇವನಹಳ್ಳಿ ಬಳಿಯ ಹರಳೂರು ಗ್ರಾಮ ವ್ಯಾಪ್ತಿಯ 166 ಎಕರೆ ಕ್ಯಾಂಪಸ್‌ನಲ್ಲಿ ಪ್ರಸಕ್ತ ಸಾಲಿನಿಂದಲೇ ಆರಂಭವಾಗಿರುವ ‘ಚಾಣಕ್ಯ ವಿಶ್ವವಿದ್ಯಾಲಯ’ ನ.18ರ ಶುಕ್ರವಾರ ಅಧಿಕೃತವಾಗಿ ಉದ್ಘಾಟನೆಯಾಗಲಿದೆ.

Tap to resize

Latest Videos

undefined

ಅನೇಕ ವರ್ಷಗಳಲ್ಲಿ ಪ್ರಾಧ್ಯಾಪಕರಾಗಿ, ಜ್ಞಾನ ಆಯೋಗದ ಸದಸ್ಯರಾಗಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ಕರಡು ರಚನಾ ಸಮಿತಿ ಸದಸ್ಯರಾಗಿ ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿರುವ ಹಾಲಿ ಯುಜಿಸಿ ಸದಸ್ಯರೂ ಆಗಿರುವ ಪ್ರೊ.ಎಂ.ಕೆ.ಶ್ರೀಧರ್‌ ಅವರು ಈ ಹೊಸ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದಾರೆ. ಚಾಣಕ್ಯ ವಿವಿಯ ಹುಟ್ಟು, ಉದ್ದೇಶ, ವಿಶಿಷ್ಟ್ಯ ಹಾಗೂ ಸವಾಲುಗಳ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತಗ್ಗಿದ ಮಳೆ: ರಾಜ್ಯದಲ್ಲೀಗ ಮೈ ಕೊರೆಯುವಷ್ಟು ಚಳಿ!

* ಚಾಣಕ್ಯ ವಿಶ್ವವಿದ್ಯಾಲಯದ ಹೊಳವು ಹುಟ್ಟಿದ್ದು ಹೇಗೆ?
ನಾನು ಸೇರಿದಂತೆ ಶಿಕ್ಷಣ ಕ್ಷೇತ್ರದ ಒಂದಷ್ಟುಪರಿಣಿತರು, ತಜ್ಞರು 2006ರಿಂದ ಸೆಂಟರ್‌ ಫಾರ್‌ ಎಜುಕೇಷನಲ್‌ ಅಂಡ್‌ ಸೋಷಿಯಲ್‌ ಸ್ಟಡೀಸ್‌ (ಸೆಸ್‌) ಅಡಿಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆ ನಡೆಸುತ್ತಾ ಬಂದಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಮೂಲಕ ನಮ್ಮ ಸರ್ಕಾರಗಳು ಉನ್ನತ ಶಿಕ್ಷಣದ ಹೊಸ ಪ್ರಯೋಗಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ನಾವ್ಯಾಕೆ ಒಂದು ಪ್ರಯತ್ನ ಮಾಡಬಾರದೆಂದು ಯೋಚಿಸಿದಾಗ ಹುಟ್ಟಿದ್ದು ಚಾಣಿಕ್ಯ ವಿಶ್ವವಿದ್ಯಾಲಯ.

* ಚಾಣಕ್ಯ ವಿವಿಯ ಸ್ಥಾಪನೆಯ ಉದ್ದೇಶ?
ಭಾರತ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಜ್ಞಾನ ಸಂಪತ್ತು, ಪರಂಪರೆ ಇದೆ. ಇದನ್ನು ಬುನಾದಿಯಾಗಿ ಬಳಸಿಕೊಂಡು ಇವತ್ತಿನ ಜನಗತ್ತಿನ ಸವಾಲುಗಳು, ಮನುಷ್ಯನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ವಿಶೇಷ ಪ್ರಯತ್ನಕ್ಕೆ ಮುಂದಾಗುವುದು ನಮ್ಮ ಉದ್ದೇಶ. ಈ ವಿಶ್ವವಿದ್ಯಾಲಯ ಯಾವುದೇ ಒಂದು ಕುಟುಂಬದ ಭಾಗವಲ್ಲ. ಇದೊಂದು ಬೇರೆ ಬೇರೆ ಸದಸ್ಯರಿರುವ ಸಾರ್ವಜನಿಕ ಸೊಸೈಟಿಯಿಂದ ಸ್ಥಾಪಿತವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುವ ಒಳ್ಳೆಯ ಪ್ರಯತ್ನ ನಮ್ಮದು. ಇವತ್ತಿನ ಜಗತ್ತಿಗೆ ಬೇಕಾದಂತಹ ಕೋರ್ಸು, ಸಂಶೋಧನೆ, ಕೌಶಲ್ಯ, ತರಬೇತಿ ಜತೆಗೆ ನಮ್ಮ ವಿವಿಯಲ್ಲಿ ಓದುವ ಪ್ರತಿ ವಿದ್ಯಾರ್ಥಿಯಲ್ಲಿ ರಾಷ್ಟ್ರಪ್ರೇಮ, ಸೇವಾ ಮನೋಭಾವ, ಸಮಾಜಸೇವೆಯಂತಹ ಮೌಲ್ಯಗಳನ್ನು ಬೆಳೆಸುವುದು ನಮ್ಮ ಧ್ಯೇಯವಾಗಿದೆ. ಸರ್ಕಾರ ನಮ್ಮ ಅರ್ಜಿ ಪರಿಗಣಿಸಿ ರಿಯಾಯಿತಿ ದರದಲ್ಲಿ ಜಮೀನು ನೀಡಿ, ಮಾಚ್‌ರ್‍ 5ರಿಂದಲೇ ಚಾಣಕ್ಯ ವಿವಿಗೆ ಅಧಿಕೃತ ಮಾನ್ಯತೆ ನೀಡಿತು. ಪ್ರೊ.ಯಶವಂತ ಡೋಂಗ್ರೆ ನಮ್ಮ ವಿವಿಯ ಮೊದಲ ಕುಲಪತಿ.

* ಮೊದಲ ವರ್ಷ ಯಾವೆಲ್ಲಾ ಕೋರ್ಸು ಆರಂಭಿಸಿದ್ದೀರಿ? ಎಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದಾರೆ?
ಸರ್ಕಾರದಿಂದ ಅಧಿಕೃತ ಆದೇಶ ಸಿಕ್ಕ ಕೂಡಲೇ ವಿವಿಯ ಉನ್ನತ ಅಧಿಕಾರದ ಹುದ್ದೆಗಳಿಗೆ ಮೂವರು ಹಿರಿಯ ಪ್ರಾಧ್ಯಾಪಕರನ್ನು ನೇಮಕ ಮಾಡಿದ್ದೇವೆ. 31 ಜನ ಬೋಧಕ ಸಿಬ್ಬಂದಿ ನೇಮಿಸಿದ್ದೇವೆ. ಮೊದಲ ವರ್ಷ 4 ವರ್ಷದ ವಿವಿಧ ಪದವಿ, ಮೂರು ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಆರಂಭಿಸಿದ್ದೇವೆ. 101 ವಿದ್ಯಾರ್ಥಿಗಳು ಪದವಿ ಕೋರ್ಸುಗಳಿಗೆ ದಾಖಲಾಗಿದ್ದಾರೆ. ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಪ್ರಗತಿಯಲ್ಲಿದೆ.

* ಸಾಕಷ್ಟು ಖಾಸಗಿ ವಿವಿಗಳಿರುವಾಗ ಹೊಸ ವಿವಿ ಕಟ್ಟಿಬೆಳೆಸೋದು ಸವಾಲಲ್ಲವೇ?
ಸವಾಲು ನಿಜ. ನಾವು ಒಂದೇ ಬಾರಿ ಎಲ್ಲವನ್ನೂ ಮಾಡಿಬಿಡುತ್ತೇವೆ ಎಂದಲ್ಲ, ಪ್ರಾಮಾಣಿಕ ಪ್ರಯತ್ನ ಆರಂಭಿಸಿದ್ದೇವೆ. ಎಲ್ಲರ ಬೆಂಬಲ ಸಿಗುತ್ತದೆ ಹಂತ ಹಂತವಾಗಿ ಬೆಳೆಯುತ್ತದೆ ಎಂಬ ವಿಶ್ವಾವಿದೆ.

* ಖಾಸಗಿ ವಿವಿಗಳು ಅಂದರೆ ದುಬಾರಿ. ಬಡ ಮಕ್ಕಳಿಗೆ ಚಾಣಕ್ಯ ವಿವಿಯಲ್ಲಿ ಹೇಗೆ ಪ್ರವೇಶ?
ಬಡ ಕುಟುಂಬದ ಪ್ರತಿಭಾವಂತರು, ವಿಶೇಷ ಚೇತನ ಮಕ್ಕಳು, ಆರ್ಥಿಕವಾಗಿ ದುರ್ಬಲ ಮಕ್ಕಳಿಗಾಗಿಯೇ ನಾವು ಪ್ರಥಮ ಬ್ಯಾಚ್‌ನಿಂದಲೇ ಸ್ಕಾಲರ್‌ಶಿಪ್‌ ಆಧಾರಿತ ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದೇವೆ. ಒಟ್ಟು ಪ್ರವೇಶ ಸೀಟುಗಳಲ್ಲಿ ಒಂದಷ್ಟುಪ್ರತಿಶತ ಸೀಟುಗಳನ್ನು ಇಂತಹ ಮಕ್ಕಳಿಗೆ ನೀಡಿ ಉಚಿತ ಶಿಕ್ಷಣ ನೀಡುತ್ತೇವೆ. ತುಂಬಾ ಅಗತ್ಯವಿದ್ದರೆ ವಿದ್ಯಾರ್ಥಿಯ ಹಾಸ್ಟೆಲ್‌ ಶುಲ್ಕವನ್ನೂ ಪಡೆಯುವುದಿಲ್ಲ.

* ಚಾಣಕ್ಯ ವಿವಿಗೆ ಪ್ರವೇಶಕ್ಕೆ ಮಾನದಂಡಗಳೇನು?
ಹೊಸ ವಿವಿಗಳು ಆರಂಭದಲ್ಲಿ ದಾಖಲಾತಿ ಹೆಚ್ಚಿಸಿಕೊಳ್ಳಲು ಅರ್ಜಿ ಹಾಕಿದವರಿಗೆಲ್ಲಾ ಪ್ರವೇಶ ನೀಡಬಹುದು. ಆದರೆ, ನಮ್ಮ ವಿವಿಯಲ್ಲಿ ದಾಖಲಾತಿ ಕಡಿಮೆಯಾದರೂ ಪರವಾಗಿಲ್ಲ ಅರ್ಜಿ ಹಾಕಿದವರಿಗೆಲ್ಲಾ ಪ್ರವೇಶ ನೀಡುವುದಿಲ್ಲ. ಅರ್ಜಿ ಸಲ್ಲಿಸಿದವರಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದೇವೆ.

ಬ್ರಾಹ್ಮಣರ ವಿರುದ್ಧ ಪಾ. ಮಲ್ಲೇಶ ಹೇಳಿಕೆ: ಕ್ರಮಕ್ಕೆ ಬ್ರಾಹ್ಮಣ ಮಂಡಳಿ ಆಗ್ರಹ

* ಚಾಣಕ್ಯ ವಿವಿಗೆ ಆರೆಸ್ಸೆಸ್‌ ಬ್ರಾಂಡ್‌ ಇದೆಯಲ್ಲ?
ನಮ್ಮ ವಿವಿಗೆ ಎಲ್ಲ ಕಡೆಯಿಂದ ಅಧ್ಯಾಪಕರು, ವಿದ್ಯಾರ್ಥಿಗಳು ಬಂದಿದ್ದಾರೆ. ಯಾರೇ ಅರ್ಜಿ ಸಲ್ಲಿಸಿದರು ಅರ್ಹರನ್ನು ನಾವು ತೆಗೆದುಕೊಳ್ಳುತ್ತೇವೆ. ಅವರು, ಇವರು ಎಂಬ ಯಾವುದೂ ಇಲ್ಲ. ಪ್ರವೇಶ ಪಡೆದ ಎಲ್ಲರಿಗೂ ಒಂದೇ ರೀತಿ ಶಿಕ್ಷಣ, ಸೌಲಭ್ಯಗಳು ದೊರೆಯುತ್ತವೆ. ವಿಶೇಷವಾಗಿ ನಮ್ಮ ವಿವಿಗೆ 20 ಸದಸ್ಯರನ್ನೊಳಗೊಂಡ ಅಂತಾರಾಷ್ಟ್ರೀಯ ಮಟ್ಟದ ಸಲಹಾ ಮಂಡಳಿ ಇದೆ. ವಿವಿಯ ಉದ್ಘಾಟನೆಯ ದಿನವೇ ಸಲಹಾ ಮಂಡಳಿ ಸಭೆಯೂ ನಡೆಯಲಿದೆ. ಅಂತಾರಾಷ್ಟ್ರೀಯ ವಿವಿಗಳ ಪ್ರಾಧ್ಯಾಪಕರು ತಜ್ಞರು, ಬೇರೆ ಬೇರೆ ಕ್ಷೇತ್ರಗಳ ಪರಿಣಿತರು ಮಂಡಳಿಯಲ್ಲಿದ್ದಾರೆ.

click me!