ಗುರುವಾರ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಗಡಿಪಾರಿಗೆ ಒತ್ತಾಯಿಸಿ ಇಲ್ಲಿನ ಪೊಲೀಸ್ ಆಯುಕ್ತರಿಗೆ ಶುಕ್ರವಾರ ಮುಸ್ಲಿಂ ಮುಖಂಡರು ದೂರು ಸಲ್ಲಿಸಿದರು.
ಹುಬ್ಬಳ್ಳಿ (ಸೆ.23): ಗುರುವಾರ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಗಡಿಪಾರಿಗೆ ಒತ್ತಾಯಿಸಿ ಇಲ್ಲಿನ ಪೊಲೀಸ್ ಆಯುಕ್ತರಿಗೆ ಶುಕ್ರವಾರ ಮುಸ್ಲಿಂ ಮುಖಂಡರು ದೂರು ಸಲ್ಲಿಸಿದರು.
ಈ ವೇಳೆ ಮುಸ್ಲಿಂ ಮುಖಂಡ ಅಷ್ಫಾಕ್ ಕುಮಟಾಕರ ಮಾತನಾಡಿ, ಗುರುವಾರ ಈದ್ಗಾ ಮೈದಾನದಲ್ಲಿ ಇರಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನಾ ಪೂರ್ವದಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್(Pramod muthalik) ಮಸೀದಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ ಎಂಬ ಹೇಳಿಕೆ ನೀಡುವ ಮೂಲಕ ನಗರದಲ್ಲಿ ಕೋಮು ಗಲಭೆಗೆ ಪ್ರಚೋಧನೆ ನೀಡಿ ಶಾಂತಿ ಕದಡುವ ಯತ್ನ ಮಾಡಿದ್ದಾರೆ. ಈ ರೀತಿಯಾಗಿ ಹೇಳಿಕೆ ನೀಡುವುದರಿಂದ ಅನ್ಯ ಸಮಾಜದವರ ಭಾವನೆಗಳಿಗೆ ಧಕ್ಕೆ ಆಗಲಿದೆ ಎಂಬ ಅರಿವು ಇವರಿಗಿಲ್ಲ. ಇಂಥವರ ಮೇಲೆ ಪೊಲೀಸ್ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯಿಂದ ಗಡಿಪಾರು ಮಾಡಿ ನಗರದಲ್ಲಿ ಶಾಂತಿ ನೆಲೆಸಲು ಅನುವು ಮಾಡುವಂತೆ ಒತ್ತಾಯಿಸಿದರು.
undefined
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರಚೋದನಾತ್ಮಕ ಹೇಳಿಕೆ; ಪ್ರಮೋದ್ ಮುತಾಲಿಕ್ ವಿರುದ್ಧ ಎಫ್‌ಐಆರ್!
ಈ ವೇಳೆ ಪತೇಶಾ ಯರಗಟ್ಟಿ, ಶಪಕತ್ ಅಲಿ ಬಡಿಗೇರ, ಸಾಧಿಕ ಮುಟ್ಟೆಬಾವಿ. ಮುಸ್ತಾಕ, ಬಾಬಾಜಾನ ಖಾಜಿ, ರಫೀಕ ಕಿತ್ತೂರ, ಅಬ್ಬಾಸ್ ಯರಗಟ್ಟಿ ಸೇರಿದಂತೆ ಹಲವರಿದ್ದರು.
ಡಿಸಿ ಜತೆ ಚರ್ಚಿಸಿ ಕ್ರಮ:
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್, ಪ್ರಮೋದ ಮುತಾಲಿಕ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿರುವ ಕುರಿತು ಗುರುವಾರವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಶುಕ್ರವಾರ ಮುಸ್ಲಿಂ ಮುಖಂಡರು ದೂರು ಸಲ್ಲಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕರ್ನಾಟಕದಿಂದಲೇ ಗಡಿಪಾರು ಮಾಡುವಂತೆ ಶಾಸಕ ಆಗ್ರಹ:
ಮುಂದಿನ ದಿನಗಳಲ್ಲಿ ಮಸೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರನ್ನು ಕರ್ನಾಟಕದಿಂದಲೇ ಗಡಿಪಾರು ಮಾಡಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ಕೋಮು ಸೌಹಾರ್ದ ಕದಡುವ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.
ಹುಬ್ಬಳ್ಳಿ ಒಂದು ವಾಣಿಜ್ಯನಗರ. ಇಲ್ಲಿ ಸರ್ವ ಧರ್ಮೀಯರು ಶಾಂತಿ ಸೌಹಾರ್ದದಿಂದ ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದಾರೆ. ಆದರೆ, ಮುತಾಲಿಕ್ ಅಂತಹ ಸಮಾಜ ಘಾತಕ ಶಕ್ತಿಗಳಿಂದ ಸೌಹಾರ್ದತೆ ಒಡೆಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಹೇಳಿಕೆ ಮುಸ್ಲಿಂ ಬಾಂಧವರಿಗೆ ಅಷ್ಟೇ ಅಲ್ಲದೆ ಎಲ್ಲ ಧರ್ಮದ, ಸಮಾಜದ ಜನರಿಗೂ ಕೂಡ ಸಿಟ್ಟು ಬರುವಂತದ್ದಾಗಿದೆ. ಇಂತಹ ಅಪ್ರಭುದ್ಧ ಹೇಳಿಕೆಯಿಂದ ಜನರ ಮನಸ್ಸಲ್ಲಿ ಜಾತಿಯ ವಿಷಬೀಜ ಬಿತ್ತಲಾಗುತ್ತಿದೆ. ಸರ್ಕಾರ ಕೂಡಲೇ ಮುತಾಲಿಕ್ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕು. ಅವರನ್ನು ಯಾವ ರೀತಿ ಗೋವಾ ರಾಜ್ಯ ಪ್ರವೇಶಕ್ಕೆ ಅಲ್ಲಿಯ ಸಕಾ೯ರ ನಿರ್ಬಂಧ ಹೇರಿದೆಯೋ ಅದೇ ರೀತಿ ಕರ್ನಾಟಕದಿಂದಲೂ ಇವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಗುಲಾಮಗಿರಿ ಹೆಸರು ಇಟ್ಟುಕೊಳ್ಳುವುದು ಅವಮಾನ, ‘ರಿಪಬ್ಲಿಕ್ ಆಫ್ ಭಾರತ’ ಹೆಸರು ಸ್ವಾಗತಾರ್ಹ: ಮುತಾಲಿಕ್
ಮುತಾಲಿಕ್ ಗಡಿಪಾರಿಗೆ ಒತ್ತಾಯಿಸಿ ದೂರು ನೀಡಿರುವುದು ಸರಿಯಲ್ಲ: ಜೋಶಿ
ಹುಬ್ಬಳ್ಳಿ: ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಗಡಿಪಾರಿಗೆ ಒತ್ತಾಯಿಸಿ ದೂರು ಸಲ್ಲಿಸಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಮೋದ್ ಮುತಾಲಿಕ್ ವಿರುದ್ಧದ ಪ್ರಕರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮುತಾಲಿಕ್ ಏನು ಭಾಷಣ ಮಾಡಿದ್ದಾರೆ ಎಂಬುದು ನನಗೆ ಮಾಹಿತಿ ಇಲ್ಲ. ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂಬುದೂ ಗೊತ್ತಿಲ್ಲ. ಆದರೆ, ಒಮ್ಮೆಲೇ ಮುತಾಲಿಕ್ ಗಡಿಪಾರು ಮಾಡಬೇಕೆಂಬುದು ಸರಿಯಲ್ಲ. ಮುತಾಲಿಕ್ ಗಿಂತ ಪ್ರಚೋದನಕಾರಿಯಾಗಿ ಬೇರೆ ಬೇರೆ ಸಮುದಾಯದವರು ಮಾತನಾಡಿದ್ದಾರೆ. ಅಂಥವರ ಮೇಲೆ ಕೈಗೊಳ್ಳಲಾಗದ ಕ್ರಮ ಮುತಾಲಿಕ್ ವಿರುದ್ಧ ಏಕೆ? ಅವರ ವಿರುದ್ಧದ ಪ್ರಕರಣವನ್ನು ನಾವು ಒಪ್ಪುವುದಿಲ್ಲ ಎಂದರು.
ತುಷ್ಟೀಕರಣ ಕೈಬಿಡಲಿ:
ಈದ್ಗಾ ಮೈದಾನ(Hubballi eidgah maidan)ದಲ್ಲಿ ಗಣೇಶೋತ್ಸವ(Ganeshotsav) ವಿಚಾರಕ್ಕೆ ಉತ್ತರಿಸಿದ ಜೋಶಿ, ಬಿಜೆಪಿ ನ್ಯಾಯಯುತ ಹೋರಾಟ ಮಾಡಿ ಗಣೇಶೋತ್ಸವ ಮಾಡಿದೆ. ಬಿಜೆಪಿ ಶಾಸಕರು ಪಾಲಿಕೆಯಲ್ಲಿ ಹೋರಾಟಕ್ಕೆ ಇಳಿಯದಿದ್ದರೆ ಅನುಮತಿ ಸಿಗುತ್ತಿರಲಿಲ್ಲ. ಈದ್ಗಾ ಮೈದಾನ ಯಾರದೋ ಆಸ್ತಿಯಲ್ಲ. ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ಕೈಗೊಳ್ಳಲು ಮನವಿ ಸಲ್ಲಿಸುತ್ತಾರೆಯೋ ಅವರೆಲ್ಲರಿಗೂ ಪಾಲಿಕೆ ನೀಡಲಿ. ಯಾರನ್ನೂ ತುಷ್ಟೀಕರಣ ಮಾಡಲು ಈ ನಿರ್ಬಂಧ ಮಾಡುವುದು ಸರಿಯಲ್ಲ. ಈ ವಿಷಯದಲ್ಲಿ ಅಂಜುಮನ್ ಸಂಸ್ಥೆಯವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಅವರು ಏನು ಬೇಕಾದರೂ ಹೋರಾಟ ಮಾಡಲಿ, ಕಾನೂನು ನಮ್ಮ ಪರವಾಗಿದೆ. ಮುಂದೆಯೂ ನಾವು ಇಲ್ಲಿ ಗಣೇಶನನ್ನು ಕೂಡ್ರಿಸುತ್ತೇವೆ ಎಂದರು.
ಸೀಜ್ ಮಾಡಲಿ ನೋಡೋಣ:
ಗಣೇಶ ವಿಸರ್ಜನೆ ವೇಳೆ ಹಲವಾರು ನಿಬಂಧನೆಗಳ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ನಂತರ ಅನಗತ್ಯ ನಿಯಮ ಹೇರುತ್ತಿದೆ. ಡಿಜೆಗೆ ಅವಕಾಶ ನೀಡಲ್ಲ, ಇಂತಿಷ್ಟು ಸಮಯದಲ್ಲಿ ವಿಸರ್ಜನೆ ಮಾಡಬೇಕು ಅಂದರೆ ನಡೆಯುವುದಿಲ್ಲ. ಅಧಿಕಾರಿಗಳು ಈ ರೀತಿ ಮಾಡಿದರೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಡಿಜೆ ಹಚ್ಚಿದವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲಿ, ಡಿಜೆ ಸೀಜ್ ಮಾಡಲಿ ನಾನು ನೋಡುತ್ತೇನೆ ಎಂದು ಎಚ್ಚರಿಸಿದರು.