ಕಾವೇರಿ: ಆರಂಭದಿಂದಲೇ ರಾಜ್ಯ ಸರ್ಕಾರದಿಂದ ತಪ್ಪು ಹೆಜ್ಜೆ ಇಟ್ಟಿರುವುದು ಇಷ್ಟೆಲ್ಲ ಸಮಸ್ಯೆಗೆ ಕಾರಣ -ಜೋಶಿ

By Kannadaprabha News  |  First Published Sep 23, 2023, 1:14 PM IST

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರವು ಆರಂಭದಲ್ಲಿಯೇ ತಪ್ಪು ಹೆಜ್ಜೆ ಇಟ್ಟಿರುವುದೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.


ಹುಬ್ಬಳ್ಳಿ (ಸೆ.23) :  ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರವು ಆರಂಭದಲ್ಲಿಯೇ ತಪ್ಪು ಹೆಜ್ಜೆ ಇಟ್ಟಿರುವುದೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವ ಪ್ರಶ್ನೆಯೇ ಬರುವುದಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ 2500 ಕ್ಯುಸೆಕ್‌ ನೀರು ಬಿಡುವುದಾಗಿ ಹೇಳುವ ಅವಶ್ಯಕತೆ ಇರಲಿಲ್ಲ. ಇನ್ನಾದರೂ ರಾಜ್ಯದ ಮುಖ್ಯಮಂತ್ರಿ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳಿಬ್ಬರೂ ಒಂದೆಡೆ ಕುಳಿತು ಚರ್ಚೆ ಮಾಡಿ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕಿದೆ. ರಾಜ್ಯದ ಎಲ್ಲ ಸಂಸದರು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದು, ಇಲ್ಲಿನ ನೀರಿನ ಸಮಸ್ಯೆ ಕುರಿತು ಕೇಂದ್ರ ಜಲಶಕ್ತಿ ಸಚಿವರಿಗೆ ಮನವರಿಕೆ ಮಾಡಿದ್ದೇವೆ ಎಂದರು.

Latest Videos

undefined

ಸೋನಿಯಾ ಗಾಂಧಿ ತೃಪ್ತಿಪಡಿಸಲು ತಮಿಳನಾಡಿಗೆ ಕಾವೇರಿ ನೀರು: ರಾಜ್ಯ ಸರ್ಕಾರದ ವಿರುದ್ಧ ಆರ್‌ ಅಶೋಕ್ ಆಕ್ರೋಶ

ಸಧ್ಯದ ನೀರಿನ ಪರಿಸ್ಥಿತಿಯ ಕುರಿತು ಸಮಗ್ರ ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡ ಕಳಿಸಿ ಕೊಡುವಂತೆ ಕೇಳಿದ್ದಾರೆ. ಅದನ್ನು ಕೇಂದ್ರ ಜಲಶಕ್ತಿ ಸಚಿವರಿಗೆ ಮನವರಿಕೆ ಮಾಡಿದ್ದೇವೆ. ಮತ್ತೊಮ್ಮೆ ಸಧ್ಯದ ನೀರಿನ ಸಂಗ್ರಹದ ಅಧ್ಯಯನ ಮಾಡಲು ಹೇಳಿದ್ದೇವೆ. ಅದಕ್ಕೆ ಕೇಂದ್ರ ಸಚಿವರು ಸಹ ಒಪ್ಪಿಗೆ ನೀಡಿದ್ದಾರೆ. ಕಾವೇರಿ ಸೇರಿದಂತೆ ಯಾವುದೇ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಬಾರದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಸರ್ವ ರೀತಿಯ ಸಹಕಾರ ನೀಡಿದ್ದೇವೆ ಎಂದರು.

ಕಾವೇರಿ ವಿಚಾರದಲ್ಲಿ ಜೋಶಿ ರಾಜೀನಾಮೆ ನೀಡಲಿ ಎಂಬ ಮಹದೇವಪ್ಪ ಹೇಳಿಕೆಗೆ ಉತ್ತರಿಸಿ, ಎಚ್‌.ಸಿ. ಮಹದೇವಪ್ಪ ಅವರು ಹಿಂದೊಂದು, ಮುಂದೊಂದು ಮಾತನಾಡುತ್ತಾರೆ. ನಾವೇನು ಸಹಕಾರ ಕೊಟ್ಟಿದ್ದೇವೆ ಎನ್ನುವುದನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಕೇಳಲಿ. ತಮ್ಮ ಘಟಬಂಧನ್ ಉಳಿಸಿಕೊಳ್ಳಲು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದೆ. ಡಿಎಂಕೆ ಸರ್ಕಾರ ಜೊತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಒಳ್ಳೆಯ ನಂಟಿದೆ. ಐಎನ್‌ಡಿಐಎ ಒಕ್ಕೂಟಕ್ಕಾಗಿ ಪರಸ್ಪರ ಆಲಂಗಿಸಿಕೊಂಡಿದ್ದರು. ಅವರಿಬ್ಬರೂ ಪರಸ್ಪರ ಕುಳಿತು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬಹುದು. ಆದರೆ, ಅದನ್ನು ಇಬ್ಬರು ಮಾಡುತ್ತಿಲ್ಲ ಎಂದರು.

ಚೈತ್ರಾ ಮೇಲೆ ಕಠಿಣ ಕ್ರಮವಾಗಲಿ:

ಯಾರ್‍ಯಾರೋ ದೊಡ್ಡವರ ಹೆಸರು ಹೇಳಿ ಟೋಪಿ ಹಾಕಿರುತ್ತಾರೆ. ಇದನ್ನು ಒಂದು ಪಕ್ಷಕ್ಕೆ ಜೋಡಿಸುವುದು ಸರಿಯಲ್ಲ. ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಯೋರ್ವನನ್ನು ವಂಚಿಸಿರುವ ಚೈತ್ರಾ ಕುಂದಾಪುರಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಪಕ್ಷದ ಸ್ಟಾರ್‌ ಪ್ರಚಾರಕಿಯೂ ಅಲ್ಲ. ಈ ರೀತಿ ಸುಳ್ಳು ಹೇಳಿ ಮೋಸ ಮಾಡುವವರ ಮೇಲೆ ಕಾನೂನು ರೀತಿಯಲ್ಲಿ ಗರಿಷ್ಠ ಶಿಕ್ಷೆಗೆ ಒಳಪಡಿಸಲಿ. ಈ ಕುರಿತು ಕಾಂಗ್ರೆಸ್‌ ತುಂಬಾ ಮಾತನಾಡುತ್ತಿದೆ. ಕಾಂಗ್ರೆಸ್ ಪಕ್ಷ ಕಳೆದ ಹಲವು ವರ್ಷಗಳ ಹಿಂದೆ ಮಾರ್ಗರೇಟ್ ಆಳ್ವ ಅವರು ಟಿಕೆಟ್ ಮಾರಿದ್ದಾರೆ ಅಂತ ಹೇಳಿದ್ದರು. ಮೊದಲು ತಮ್ಮ ಪಕ್ಷದ ನಡುವಳಿಕೆ ನೋಡಿಕೊಳ್ಳಲಿ. ನಂತರ ಬೇರೆ ಪಕ್ಷದವರ ಬಗ್ಗೆ ಮಾತನಾಡಲಿ. ಚೈತ್ರಾ ಬಗ್ಗೆ ಸಂಪೂರ್ಣ ತನಿಖೆಯಾಗಿ ಶಿಕ್ಷೆಯಾಗಲಿ. ಯಾರೋ ಹೇಳುತ್ತಾರೆ ಎಂದು ಕೋಟ್ಯಂತರ ರುಪಾಯಿ ಹಣ ನೀಡಲು ಉದ್ಯಮಿಗೆ ಬುದ್ದಿ ಬೇಡ್ವಾ? ಅಷ್ಟೊಂದು ಪ್ರಮಾಣದ ದುಡ್ಡು ಅವರ ಬಳಿ ಬಂದಿದ್ದಾದರೂ ಹೇಗೆ? ಎಂಬುದನ್ನು ವಿಶೇಷ ತಂಡ ತನಿಖೆ ಮಾಡಲಿ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿ ಎಂದರು.

ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಅಡವಿಟ್ಟು ಸೋತ ಕರ್ನಾಟಕ! ವಕೀಲರ ವಾದ ಇಲ್ಲಿದೆ ನೋಡಿ...

ರಾಹುಲ್‌ಗೆ ಅರ್ಥವಾಗಿಲ್ಲ:

ಮಹಿಳಾ ಮೀಸಲಾತಿ ಬಿಲ್ ಕುರಿತು ರಾಹುಲ್ ಗಾಂಧಿಗೆ ಅರ್ಥವಾಗಿಲ್ಲ. ಹಾಗಾಗಿ, ಸ್ಪಷ್ಟತೆ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಅವರು ಏನನ್ನೂ ಓದುವುದಿಲ್ಲ. ಯಾರಾದರೂ ರಾಜಕೀಯ ಹೇಳಿಕೆ ನೀಡಬೇಕು ಅಂದರೆ ಸಾಕು ಈ ರೀತಿಯಾದ ಹೇಳಿಕೆ ನೀಡುತ್ತಾರೆ. ಟ್ವಿಟರ್ ನೋಡಿ ರಾಹುಲ್ ಗಾಂಧಿ ಮಾತನಾಡುತ್ತಾರೆ. ಇದು ದೌರ್ಭಾಗ್ಯದ ಸಂಗತಿ. ಮಹಿಳಾ ಮೀಸಲಾತಿ ಮಸೂದೆಯಲ್ಲಿ ಸ್ಪಷ್ಟತೆಯಿದೆ. ಮುಂದಿನ ದಿನಗಳಲ್ಲಿ ಇದು ವಾಸ್ತವ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ವಿದೇಶಿ ನಿಯೋಗವೂ ಈ ಮಸೂದೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂತಹ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾಡಲು ಸಾಧ್ಯ ಎಂದು ವಿದೇಶಿ ನಿಯೋಗವೇ ಹೇಳಿದೆ, ಕಾನೂನು ತಜ್ಞರು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದರು.

click me!