ದರ್ಶನ್ ಅವರು ಬಂಧನಕ್ಕೊಳಗಾದ ಸಮಯದಲ್ಲಿ ನಾನು ಪ್ರಕರಣದ ಬಗ್ಗೆ ಮಾತನಾಡಿದಾಗ ನನ್ನ ಬಗ್ಗೆ ಯಾರೋ ಕಾಮೆಂಟ್ ಮಾಡಿದ್ದರು. ನಾನು ಹೋಗಿ ದೂರು ಕೊಟ್ಟೆ, ಪೊಲೀಸರು ಏನು ಮಾಡಬೇಕೋ ಅದನ್ನು ಮಾಡಿದರು. ಒಂದು ಹಾಳೆ ಮತ್ತು ಪೆನ್‌ನಲ್ಲಿ ಆಗುವ ಕೆಲಸವಿದು. ಆದರೆ, ಕಾಮೆಂಟ್ ಮಾಡಿದ ಅನ್ನೋ ಕಾರಣಕ್ಕೆ ಹೀಗೆ ಸಾಯಿಸೋದರಿಂದ ಎಷ್ಟು ಕುಟುಂಬಗಳು ಇಂದು ಅನಾಥವಾಗಿವೆ?' ಎಂದು ಪ್ರಶ್ನಿಸಿದ ಉಮಾಪತಿ ಶ್ರೀನಿವಾಸ್
ಬೆಂಗಳೂರು(ಸೆ.06): 'ರೇಣುಕಾಸ್ವಾಮಿ ಅಶ್ಲೀಲವಾಗಿ ಕಾಮೆಂಟ್ ಹಾಗೂ ಮೆಸೇಜ್ ಮಾಡಿದ್ದು ತಪ್ಪೇ. ಆದರೆ, ಆ ತಪ್ಪಿಗೆ 2 ರುಪಾಯಿ ಹಾಳೆ ತೆಗೆದುಕೊಂಡು ಒಂದು ಕಂಪ್ಲೇಂಟ್ ಬರೆದುಕೊಟ್ಟಿದ್ದರೆ ಬುದ್ದಿ ಕಲಿಸೋರು ಕಲಿಸುತ್ತಿದ್ದರು. ಹಾಗೆ ಮಾಡದೆ ಎಷ್ಟು ಜೀವಗಳಿಗೆ ತೊಂದರೆ ಮಾಡಿಕೊಂಡಿದ್ದಾರೆ ನೋಡಿ ಈಗ' ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಮತ್ತು ಅವರ ತಂಡದ ವಿರುd ಸಲ್ಲಿಸಿರುವ ಚಾರ್ಜ್‌ಶೀಟ್ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಮಾಪತಿ ಶ್ರೀನಿವಾಸ್ ಗೌಡ, 'ಸತ್ತ ರೇಣುಕಾಸ್ವಾಮಿ, ಈ ಪ್ರಕರಣದಲ್ಲಿ ಆರೋಪಿಯಾಗಿ ಬಂಧನಕ್ಕೊಳಗಾಗಿರುವ ರಾಘವೇಂದ್ರನ ತಾಯಿ ಹಾಗೂ ಅನುಕುಮಾರ್ ತಂದೆ ತೀರಿಕೊಂಡರು. ಹೋದ ಜೀವಗಳು ಏನೇ ಮಾಡಿದರೂ ವಾಪಸ್ಸು ಬರಲ್ಲ. ಆದರೆ, ರೇಣುಕಾಸ್ವಾಮಿ ಮಾಡಿದ ತಪ್ಪಿಗೆ 2 ಹಾಳೆ ಮೇಲೆ ಕಂಪ್ಲೇಂಟ್ ಬರೆದು ಕೊಟ್ಟಿದ್ದರೆ ಪೊಲೀಸರು ಮುಂದಿನ ಕೆಲಸ ಮಾಡುತ್ತಿದ್ದರು. ಆದರೆ, ಈಗ ನೋಡಿ ಮೂರು ಜೀವಗಳು ಹೋಗಿವೆ. ಯಾರಿಗೆ ಅನ್ಯಾಯ ಆಗಿದೆಯೋ ಅಂಥವರನ್ನು ತಾಯಿ ಚಾಮುಂಡೇಶ್ವರಿ ಕಾಪಾಡಲಿ. ತಪ್ಪು ಮಾಡಿದವರಿಗೆ ಅದೇ ಚಾಮುಂಡೇಶ್ವರಿ ತಾಯಿ ಶಿಕ್ಷೆ ಕೊಡಲಿ' ಎಂದರು.
'ದರ್ಶನ್ ಅವರು ಬಂಧನಕ್ಕೊಳಗಾದ ಸಮಯದಲ್ಲಿ ನಾನು ಪ್ರಕರಣದ ಬಗ್ಗೆ ಮಾತನಾಡಿದಾಗ ನನ್ನ ಬಗ್ಗೆ ಯಾರೋ ಕಾಮೆಂಟ್ ಮಾಡಿದ್ದರು. ನಾನು ಹೋಗಿ ದೂರು ಕೊಟ್ಟೆ, ಪೊಲೀಸರು ಏನು ಮಾಡಬೇಕೋ ಅದನ್ನು ಮಾಡಿದರು. ಒಂದು ಹಾಳೆ ಮತ್ತು ಪೆನ್‌ನಲ್ಲಿ ಆಗುವ ಕೆಲಸವಿದು. ಆದರೆ, ಕಾಮೆಂಟ್ ಮಾಡಿದ ಅನ್ನೋ ಕಾರಣಕ್ಕೆ ಹೀಗೆ ಸಾಯಿಸೋದರಿಂದ ಎಷ್ಟು ಕುಟುಂಬಗಳು ಇಂದು ಅನಾಥವಾಗಿವೆ?' ಎಂದು ಉಮಾಪತಿ ಶ್ರೀನಿವಾಸ್ ಪ್ರಶ್ನಿಸಿದರು.
'ದರ್ಶನ್ ಅವರು ನನಗೆ ಶತ್ರು ಅಲ್ಲ. ನನ್ನ ಬ್ಯಾನರ್‌ಗೆ ಸಿನಿಮಾ ಮಾಡಿದ್ದಾರೆ. ಹೆಸರು ತಂದು ಕೊಟ್ಟಿದ್ದಾರೆ. ಕಾರಣಾಂತರಗಳಿಂದ ನನ್ನ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಬಂತು. ತಪ್ಪು ಅಂತ ಗೊತ್ತಾದಾಗ ನಾನು ಆ ಬಗ್ಗೆ ಧ್ವನಿ ಎತ್ತಿದ್ದೇನೆ. ಈಗ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ತೀರ್ಪು ಬರುವುದಕ್ಕೂ ಮುನ್ನವೇ ನಾನು ಆ ಬಗ್ಗೆ ಮಾತನಾಡಿ ಅಂದರಿಂದ ಗಳಿಸುವುದು ಏನೂ ಇಲ್ಲ. ನನಗೆ ತೊಂದರೆ ಬಂದಾಗಲೂ ಮತ್ತೊಬ್ಬರ ಹೆಗಲ ಮೇಲೆ ಗನ್ ಇಡುವ ಬದಲು ನೇರವಾಗಿ ಮಾತನಾಡಿ ಎದುರಿಸಿದ್ದೇನೆ. ಸಮಸ್ಯೆ ಬಂದಾಗ ಎದೆ ತೋರಿಸಿ ಎದುರಿಸುತ್ತೇನೆಯೇ ಹೊರತು, ಬೆನ್ನು ತೋರಿಸಿ ಹೆದರಿಸಲ್ಲ. ಈಗ ದರ್ಶನ್ ಅವರ ಪ್ರಕರಣದ ಕುರಿತು ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಸತ್ಯಾಸತ್ಯತೆ ಆಚೆ ಬರುತ್ತದೆ. ಕಾನೂನು, ನ್ಯಾಯಾಲಯದಲ್ಲಿ ಅದು ತೀರ್ಮಾನ ಆಗಲಿ' ಎಂದು ಹೇಳಿದರು.