ನಟ ಪ್ರಕಾಶ್ ರೈ ಅವರ ಕುಂಭಮೇಳದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪ್ರಶಾಂತ್ ಸಂಬರ್ಗಿ ವಿರುದ್ಧ ಮೈಸೂರಿನಲ್ಲಿ FIR ದಾಖಲಾಗಿದೆ. ಚಿತ್ರವು AI ತಂತ್ರಜ್ಞಾನದಿಂದ ರಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಂಬರ್ಗಿ ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
ಬೆಂಗಳೂರು (ಫೆ.1): ನಟ ಪ್ರಕಾಶ್ ರೈ ವಿರುದ್ಧ ಕೃತಕ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಅಪಪ್ರಚಾರ ನಡೆಸಿದ ಆರೋಪದ ಮೇಲೆ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಶಾಂತ ಸಂಬರ್ಗಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ಪ್ರಕಾಶ್ ರೈಯ ಫೋಟೋ ಎಐ ತಂತ್ರಜ್ಞಾನ ಬಳಸಿ ತಯಾರಿಸಿ ವೈರಲ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಶಾಂತ ಸಂಬರ್ಗಿಯು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಪ್ರಕಾಶ್ ರೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಶಾಂತ್ ಸಂಬರ್ಗಿ ಅವರು, 'ಪ್ರಕಾಶ್ ರಾಜ್ ಕುಂಭಮೇಳಕ್ಕೆ ಹೋಗಿಲ್ಲ ಅನ್ನೋದೇ ಸಂತೋಷ. ನನಗೆ ಆ ಫೋಟೋ ವಾಟ್ಸಪ್‌ನಲ್ಲಿ ಬಂದಿತ್ತು. ಐದು ದಿನಗಳ ಬಳಿಕ 'ಪ್ರಕಾಶ್ ರಾಜ್ ಕುಂಭಮೇಳಕ್ಕೆ ಹೋಗಿದ್ದರಲ್ಲ?' ಅಂತಾ ಹಾಕಿದ್ದೆ. ಅವರ ಪಾಪ ಪರಿಹಾರ ಆಯ್ತು ಅಂತ ಅಲ್ಲಗೆಳೆಯಲು ಹಾಕಿರಲಿಲ್ಲ' ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕುಂಭಮೇಳದಲ್ಲಿ ತೀರ್ಥಸ್ನಾನ ಮಾಡಿದ ಪ್ರಕಾಶ್ ರಾಜ್, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು AI ಇಮೇಜ್!
ಅವರ ಹಳೆ ಸಂದರ್ಶನಗಳಲ್ಲಿ ನನ್ನ ಹೆಂಡತಿಯ ಜೊತೆ ಕುಕ್ಕೆಗೆ ಹೋಗಿದ್ದೆ ಎಂದಿದ್ರು. ಅವರು ಮೊದಲ ಹೆಂಡತಿನೋ ಎರಡನೇ ಅಥವಾ ಮೂರನೇ ಹೆಂಡತಿನೋ ನನಗೆ ಗೊತ್ತಿಲ್ಲ. ಆದರೆ ಕುಂಭಮೇಳ ಫೋಟೋ ಬಂದಾಗ ಪ್ರಕಾಶ್ ರಾಜ್ ಪರಿವರ್ತನೆ ಆಗಿದ್ದಾರೆ, ಮೋದಿಯನ್ನು ಬೈಯುವುದು ಕಡಿಮೆಯಾಗಿದೆ. ದೇಶವನ್ನ ವಿಭಜನೆ ಮಾಡುವ ವಿಚಾರದಿಂದ ದೂರವಿದ್ದಾರೆ. ಎಡಪಂಥೀಯ ಐಡಿಯಾಲಜಿಯಿಂದ ದೂರವಿದ್ದಾರೆ ಅನ್ನೋ ಮನಸ್ಥಿತಿಯಲ್ಲಿ ಪೋಟೋ ಹಾಕಿದ್ದೇನೆ. ಫೋಟೋದ ಬ್ಯಾಕ್‌ಗ್ರೌಂಡ್ ಚೆಕ್ ಮಾಡದೇ ಫೋಟೋ ಹಾಕಿರೋದು ನಿಜ. ಆದರೆ ಈ ಫೋಟೋವನ್ನ ಸಾಕಷ್ಟು ಜನರು ಟ್ವಿಟರ್, ಫೇಸ್ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೇವಲ ನನ್ನನ್ನು ಗುರಿ ಮಾಡಿ ದೂರು ದಾಖಲು ಮಾಡಿದ್ದಾರೆ. ಇದ್ರಿಂದ ಒಂದು ಷಡ್ಯಂತ್ರ ಇದೆ ಅನ್ನೋದು ಗೊತ್ತಾಗುತ್ತದೆ ಎಂದರು.
ಪ್ರಕಾಶ್ ರಾಜ್ ಅವರನ್ನ 25 ವರ್ಷದಿಂದ ನಾನು ನೋಡುತ್ತಿದ್ದೇನೆ. ಅವರೇನು ನನಗೆ ಹೊಸಬರಲ್ಲ. 2018 ರಲ್ಲಿ ಶೃತಿ ಹರಿಹರನ್ Metoo ವಿಚಾರವಾಗಿ ದೂರು ನೀಡಿದ್ರು. ಆಗ ಆಕೆ ಪರ ಪ್ರಕಾಶ್ ರಾಜ್ ನಿಂತಿದ್ರು. ಆಗಿನಿಂದ ಪ್ರಕಾಶ್ ರಾಜ್ ನಮ್ಮನ್ನ ಗುರಿಯಾಗಿ ಇಟ್ಟುಕೊಂಡಿದ್ರು. ಅವರ ರಾಜಕೀಯ ವಿಶ್ಲೇಷಣೆಗಳನ್ನ ಸಾಮಾಜಿಕ ಜಾಲತಾಣದಲ್ಲಿ ವಾಪಸ್ಸು ಕೊಡುತ್ತಿದ್ವೀ. ಈಗ ನನ್ನ ಒಂದು ಪೋಸ್ಟ್ ನ್ನು ಇಟ್ಟುಕೊಂಡು ದೂರು ದಾಖಲಿಸಿದ್ದಾರೆ. ಲಕ್ಷಾಂತರ ಜನ ಅದೇ ಪೋಟೋ ವನ್ನ ಹಾಕಿದ್ದಾರೆ. ಕಾನೂನು ರೀತಿಯಲ್ಲಿ ಏನು ಉತ್ತರ ಕೊಡಬೇಕು ಕೊಡುತ್ತೇನೆ. ಆ ಪೋಟೋ ಎಲ್ಲಿಂದ ಬಂತು ಹೇಗೆ ಬಂತು, ನನಗಿಂತ ಮುಂಚೆ ಎಷ್ಟು ಜನ ಹಾಕಿದ್ರು, ಯಾವ ಕಾರಣದಿಂದ ನಾನು ಹಾಕಿದೇ ಎಂಬುದರ ಬಗ್ಗೆ ಉತ್ತರ ಕೊಡುತ್ತೇನೆ ಎಂದರು.
ಕಾಂಗ್ರೆಸ್ ಐಟಿ ಸೆಲ್ ಕುತಂತ್ರ:
ಕಾಂಗ್ರೆಸ್ಸಿನ ಐಟಿ ಸೆಲ್ ಈ ವಿಚಾರದಲ್ಲಿ ನಮ್ಮನ್ನು ಸಿಕ್ಕಿ ಹಾಕಿಸುವ ಷಡ್ಯಂತ್ರ ನಡೆಸಿದ್ದಾರೆ. 50-60 ಕೇಸ್ ಆದ ನಂತ್ರ ನಾವು ಬುದ್ದಿವಂತರಾಗಿದ್ದೇವೆ. ಯಾರ ಹೆಸರನ್ನು ತೆಗೆದುಕೊಳ್ಳದೇ ಪೋಸ್ಟ್ ಮಾಡುವ ಶಕ್ತಿಯನ್ನ ಕಲಿತಿದ್ದೇವೆ. ರಾಜ್ಯದ ಪೊಲೀಸರನ್ನ ಕೈಬೊಂಬೆಯಾಗಿಟ್ಟುಕೊಂಡು ಮೈಸೂರಲ್ಲಿ ಕ್ಷುಲ್ಲಕ ಕಾರಣದಿಂದ ಕೇಸ್ ಹಾಕಿದ್ದಾರೆ. ಅದನ್ನು ಲೀಗಲ್ ಆಗಿ ಪೇಸ್ ಮಾಡುವ ಶಕ್ತಿ ನನ್ನಲ್ಲಿದೆ. ನನ್ನ ಸಾಮಾಜಿಕ ಜಾಲತಾಣದಲ್ಲಿರುವ 50 ಸಾವಿರ ಜನಕ್ಕೆ ಪ್ರಕಾಶ್ ರಾಜ್ ಅವರು ಕುಂಭಮೇಳಕ್ಕೆ ಹೋಗಿದ್ದಾರೆ ಅನ್ನೋ ಸಂತಸ ಸುದ್ದಿಯನ್ನ ಹೇಳಿದ್ದೆ. ಕುಂಭಮೇಳಕ್ಕೆ ನಾನು ಹೋಗಿಲ್ಲ ಅದರ ಮೇಲೆ ನಂಬಿಕೆ ಇಲ್ಲ ಅಂತ ಹೇಳಬಹುದಿತ್ತು. ಆದ್ರೆ ಇದೊಂದು ಸುಳ್ಳು ಸಿದ್ದಿ ಎಐ ಜನರೇಟೆಂಡ್ ಅಂತ ಹೇಳಿ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡಿದ್ದಾರೆ. ಒಂದು ಚಿಕ್ಕ ವಿಚಾರವನ್ನ ದೊಡ್ಡದು ಮಾಡಿ ರಾಜಕೀಯ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲಿಯೂ ಕೆಲಸ ಇಲ್ಲದೇ ಇದ್ದಾಗ ಪ್ರಶಾಂತ್ ಸಂಬರ್ಗಿ ಹೆಸರಲ್ಲಿ ಪ್ರಚಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ನಮ್ಮ ಮೇಲೆ ಈ ಹಿಂದೆ ಯಾವುದೇ ಕೇಸ್ ಅವರು ದಾಖಲು ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನನ್ನ ಮೇಲೆ ಕೇಸ್ ಹಾಕಿದ್ದಾರೆ ಎಂದು ಪ್ರಕಾಶ್ ರಾಜ್ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ಮಕ್ಕಳ ಉಸಿರುಗಡ್ತಾ ಇದೆ, ಮಾತನಾಡ್ತಾ ಇಲ್ಲ, 10 ವರ್ಷದಲ್ಲಿ ಏನಾಗತ್ತೆ? ಪ್ರಕಾಶ್ ರಾಜ್ ನೋವಿನ ನುಡಿ...
ಪೊಲೀಸ್ ನೋಟೀಸ್ ಇನ್ನು ನನಗೆ ಬಂದಿಲ್ಲ. ನಾನು ಬೆಂಗಳೂರಿನ ನಿವಾಸಿ ಅವರು ಮೈಸೂರಿನಲ್ಲಿ ಕೇಸ್ ದಾಖಲಿಸಿದ್ದಾರೆ. ಕಾನೂನು ಸಲಹೆಗಳನ್ನ ಪಡೆದು ಹೋರಾಟ ಮಾಡುತ್ತೇನೆ. ನಾವೇನು ಅವರ ಬೆತ್ತಲೆ ಪೋಟೋ ಹಾಕಿಲ್ಲ. ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಒಳ್ಳೆ ರೀತಿಯಾಗಿ ಸಂತಸ ವ್ಯಕ್ತಪಡಿಸಿದ್ದೇವೆ ಅಷ್ಟೇ. ಇದೊಂದು ಕ್ಷುಲ್ಲಕ ವಿಚಾರ ಎಂದು ಪ್ರಶಾಂತ್ ಸಂಬರ್ಗಿ ಕಾನೂನು ಹೋರಾಟ ಮಾಡುತ್ತೇನೆ ಎಂದರು.