ಹೊಸಕೋಟೆಯಲ್ಲಿ ರಾಷ್ಟ್ರ ರಕ್ಷಣಾ ಪಡೆಯಿಂದ ಅಕ್ರಮ ಕಸಾಯಿಖಾನೆ ಮೇಲೆ ದಾಳಿ. ಹಲವು ಜಾನುವಾರುಗಳನ್ನು ರಕ್ಷಿಸಲಾಗಿದೆ. ಪ್ರಕರಣ ದಾಖಲು.
ಹೊಸಕೋಟೆ (ಫೆ.1): ನಗರದ ಎಆರ್ ಬಡಾವಣೆಯಲ್ಲಿ ಶುಕ್ರವಾರ ಮಧ್ಯರಾತ್ರಿ ಖಚಿತ ಮಾಹಿತಿ ಮೇರೆಗೆ ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಸಹಚರರ ತಂಡ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ಮಾಡುವುದರ ಮೂಲಕ ಧನಗಳನ್ನು ರಕ್ಷಣೆ ಮಾಡಿದ್ದಾರೆ.
ಅಕ್ರಮವಾಗಿ ದನಗಳನ್ನು ವಧೆ ಮಾಡುತ್ತಿದ್ದ ಕಸಾಯಿಖಾನೆ ಮೇಲೆ ದಾಳಿ ಮಾಡುವುದರ ಮೂಲಕ 5 ಜೀವಂತ ವಯಸ್ಸಾದ ಎತ್ತುಗಳು, 1 ಗಂಡು ಕರು, ಹಾಗೂ ಒಂದು ಗೊಡ್ಡು ಹಸುವನ್ನು ರಕ್ಷಣೆ ಮಾಡಿ ಹೊಸಕೋಟೆ ನಗರದ ಜೀವದಯಾ ಗೋಶಾಲೆಗೆ ಬಿಟ್ಟಿದ್ದಾರೆ. ಐದು ಹಸುಗಳನ್ನು ವಧೆ ಮಾಡಿ ನೇತು ಹಾಕಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡುವುದರ ಮೂಲಕ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇನ್ನು ದಾಳಿ ಮಾಡಿದ ಕಸಾಯಿಖಾನೆ ನಯಾಜ್ ಪಾಷಗೆ ಸೇರಿದ್ದು, ದಾಳಿ ಮಾಡಿದ ಸಂದರ್ಭದಲ್ಲಿ ನಯಾಜ್ ಪಾಷ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಕುರಿತಾಗಿ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಾವು ಭಾರತದಲ್ಲಿದ್ದೇವಾ, ಪಾಕಿಸ್ತಾನದಲ್ಲಿದ್ದೇವಾ? ಮತ್ತೆ ರಣರಂಗವಾಯ್ತು ಕೆರೆಗೋಡು ಹನಮಧ್ವಜ ಸಂಘರ್ಷ!
ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಮಾತನಾಡಿ, ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಪೊಲೀಸ್ ಸಿಬ್ಬಂದಿ ತಾಯಿಯ ಎದೆಹಾಲಿನ ನಂತರ ಗೋವಿನ ಹಾಲನ್ನೆ ಕುಡಿದು ಬೆಳೆದಿದ್ದು, ಇಂದಿಗೂ ಗೋವಿನ ಹಾಲನ್ನು ಕುಡಿಯುತ್ತಿದ್ದೇವೆ. ಆದ್ದರಿಂದ ತಾಯಿ ಸಮಾನವಾದ ಗೋವನ್ನು ಕಡಿಯುವ ಕಟುಕರನ್ನು ಬಂಧಿಸಿ ಕಾನೂನು ಶಿಕ್ಷೆ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
ದೂರು ನೀಡದ ಕೆರೆಹಳ್ಳಿ: ಇನ್ನು ಪುನೀತ್ ಕೆರೆಹಳ್ಳಿ ಸೇರಿದಂತೆ ಸಹಚರರ ತಂಡ ದಾಳಿ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ದೂರು ದಾಖಲು ಮಾಡಿಲ್ಲ. ಬದಲಾಗಿ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಗುಪ್ತ ಮಾಹಿತಿದಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಪೇದೆ ವಿ.ಎನ್.ಗೋಪಾಲಕೃಷ್ಣ ನೀಡಿದ ದೂರನ್ನು ಆಧರಿಸಿ ಎಫ್‌ಐಆರ್ ಮಾಡಲಾಗಿದೆ.