ಬೆಂಗಳೂರು: ಕೊರೋನಾ ನಡುವೆ ವರಮಹಾಲಕ್ಷ್ಮಿ ಹಬ್ಬ ಸಡಗರ

By Kannadaprabha NewsFirst Published Jul 31, 2020, 7:41 AM IST
Highlights

ಬಹುತೇಕರು ಪ್ರತಿವರ್ಷದಂತೆ ವಿಜೃಂಭಣೆಯಿಂದ ಹಬ್ಬ ಆಚರಣೆಗೆ ಸಿದ್ಧತೆ|ಕೆಲವರು ಸರಳವಾಗಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಬ್ಬ ಆಚರಣೆ| ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬದಲ್ಲಿ ನೆರೆಹೊರೆಯವರನ್ನು ಕರೆದು ಅರಿಶಿನ ಕುಂಕುಮ, ಬಾಗಿನ ನೀಡಲಾಗುತ್ತಿತ್ತು. ರೋಗ ಹರಡುವ ಸಾಧ್ಯತೆ ಇರುವುದರಿಂದ ಅತ್ಯಂತ ಸರಳ ಆಚರಣೆಗೆ ತಯಾರಿ|

ಬೆಂಗಳೂರು(ಜು.31): ಕೊರೋನಾ ಸೋಂಕಿನ ಭೀತಿ ನಡುವೆಯೇ ವರಮಹಾಲಕ್ಷ್ಮಿ ಹಬ್ಬ ಆಚರಿಸಲು ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬೀಳುತ್ತಿದ್ದ ದೃಶ್ಯ ಗುರುವಾರ ನಗರದ ಮಾರುಕಟ್ಟೆಗಳಲ್ಲಿ ಕಂಡುಬಂದಿತು.
ಕೊರೋನಾ ಸಂಕಷ್ಟದ ನಡುವೆಯೂ ವರ ಮಹಾಲಕ್ಷ್ಮಿ ಹಬ್ಬಕ್ಕೆ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿತ್ತು. ಹಲವು ದಿನಗಳಿಂದ ವ್ಯಾಪಾರವಿಲ್ಲದೆ ಕಂಗೆಟ್ಟಿದ್ದ ರೈತರು, ವ್ಯಾಪಾರಿಗಳಿಗೆ ವರಮಹಾಲಕ್ಷ್ಮಿ ಹಬ್ಬ ತುಸು ನೆಮ್ಮದಿ ನೀಡಿದಂತಿತ್ತು.

ರೋಗ ಹರಡುವುದನ್ನು ಲೆಕ್ಕಿಸದೆ ಹಬ್ಬದ ಸಂಭ್ರಮದಲ್ಲಿ ಹಣ್ಣು, ಹೂವು, ತರಕಾರಿ, ಪೂಜಾ ಸಾಮಾಗ್ರಿಗಳ ಖರೀದಿಯಲ್ಲಿ ಜನರು ಸಂಪೂರ್ಣ ಮಗ್ನರಾಗಿದ್ದರು. ನಗರದ ಮೈಸೂರು ರಸ್ತೆಯ ಫ್ಲೈ ಓವರ್‌ ಕೆಳಭಾಗದ ಮಾರ್ಕೆಟ್‌, ಗಾಂಧಿ ಬಜಾರ್‌, ಮಲ್ಲೇಶ್ವರಂ, ಜಯನಗರ, ಮಹಾಲಕ್ಷ್ಮಿ ಲೇಔಟ್‌, ಲಾಲ್‌ಬಾಗ್‌ ಗಣೇಶ ದೇವಾಲಯ ಬಳಿಯ ಮಿನಿ ಹೂವಿನ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳು ಜನರಿಂದ ತುಂಬಿದ್ದವು.

ಮನೆಯಲ್ಲಿ ಹೀಗೆ ಮಾಡಿದ್ರೆ ದರಿದ್ರ ಲಕ್ಷ್ಮಿ ವಕ್ಕರಿಸುವುದು ಖಂಡಿತ!

ಬಹುತೇಕರು ಪ್ರತಿವರ್ಷದಂತೆ ವಿಜೃಂಭಣೆಯಿಂದ ಹಬ್ಬ ಆಚರಣೆಗೆ ಸಿದ್ಧತೆ ನಡೆಸಿದ್ದರೆ, ಕೆಲವರು ಸರಳವಾಗಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬದಲ್ಲಿ ನೆರೆಹೊರೆಯವರನ್ನು ಕರೆದು ಅರಿಶಿನ ಕುಂಕುಮ, ಬಾಗಿನ ನೀಡಲಾಗುತ್ತಿತ್ತು. ರೋಗ ಹರಡುವ ಸಾಧ್ಯತೆ ಇರುವುದರಿಂದ ಅತ್ಯಂತ ಸರಳ ಆಚರಣೆಗೆ ತಯಾರಿ ನಡೆಸಿದ್ದಾರೆ. ರೋಗ ಹರಡುತ್ತದೆ ಎಂದು ಹಿಂದಿನ ಸಂಪ್ರದಾಯವನ್ನು ಮುರಿಯಲು ಸಾಧ್ಯವಿಲ್ಲ. ನಮ್ಮ ಧರ್ಮ ಹಾಗೂ ಸಂಪ್ರದಾಯ ಪಾಲನೆಯಿಂದ ಎಲ್ಲರ ಸಂಕಷ್ಟದೂರಾಗುವುದು ಎಂದು ಗ್ರಾಹಕರಾದ ಗಣೇಶಯ್ಯ ಹೇಳಿದರು.

ಸಾಮಾಜಿಕ ಅಂತರ ಮಾಯ!

ನಗರದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಅರಿವಿದ್ದರೂ ಹಲವರು ಯಾವುದೇ ಮುನ್ನೆಚ್ಚರಿಕೆ ವಹಿಸಿರಲಿಲ್ಲ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್‌ ಧರಿಸುವುದು ಕಡ್ಡಾಯಗೊಳಿಸಿದ್ದರೂ ಅದನ್ನು ಮಾರುಕಟ್ಟೆಗಳಲ್ಲಿ ಗಾಳಿಗೆ ತೂರಲಾಗಿತ್ತು. ಬಹುತೇಕ ಬಡಾವಣೆಗಳು, ಮಾರುಕಟ್ಟೆಗಳಲ್ಲಿ ಜನರು ನಿಭೀರ್ತಿಯಿಂದ ಓಡಾಡುತ್ತಿದ್ದರು. ಮಾರ್ಕೆಟ್‌ ಪ್ರದೇಶದ ಹಲವು ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಕಂಡು ಬಂದಿತ್ತು.

ಹೂವಿನ ದರ ಹೆಚ್ಚಳ!

ಹಬ್ಬದ ಹಿನ್ನೆಲೆ ಹೂವು, ಹಣ್ಣು ದರದಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ತಾವರೆ ಹೂವು 100, ಬಾಳೆಕಂದು 60, ಮಲ್ಲಿಗೆ ಕೆ.ಜಿ. 800, ಕನಕಾಂಬರ ಕೆ.ಜಿ.ಗೆ 2500, ಗುಲಾಬಿ ಕೆ.ಜಿ.ಗೆ 350 ದರ ನಿಗದಿಯಾಗಿತ್ತು. ಇನ್ನು ಮಲ್ಲೇಶ್ವರದಲ್ಲಿ ಹೂವಿನ ದೊಡ್ಡ ಹಾರ 2500, ಸೇವಂತಿ ಮೊಳ 40, ಡೇರಾ ಒಂದಕ್ಕೆ 40, ಸಣ್ಣ ಹೂವಿನ ಹಾರ 700, ಬಾಳೆ ಕಂದು .30-80ಕ್ಕೆ ವ್ಯಾಪಾರಿಗಳು ಮಾರಿದರು. ಇನ್ನು ವಿವಿಧ ಹಣ್ಣು, ತರಕಾರಿಗಳ ಬೆಲೆಯಲ್ಲಿಯೂ ಶೇ.20-30 ರಷ್ಟು ಹೆಚ್ಚಳವಾಗಿದೆ. ಸೇಬು 100-260, ಸೀಬೆ 60, ದಾಳಿಂಬೆ 100-160, ಕಿತ್ತಳೆ 65, ಅನಾನಸ್‌ ಒಂದಕ್ಕೆ 30-40, ಸಪೋಟ ಮತ್ತು ದ್ರಾಕ್ಷಿ 100ಕ್ಕೆ ಖರೀದಿಯಾಯಿತು.

ಹಬ್ಬದಂದು ತುಮಕೂರು ಗೊರೊವನಹಳ್ಳಿ ಮಹಾಲಕ್ಷ್ಮಿ ದೇವಿ ದರ್ಶನಕ್ಕೆ ಅವಕಾಶ

ದೇಗುಲಗಳಲ್ಲಿ ಸರಳ ಪೂಜೆ

ಈ ಬಾರಿ ದೇವಾಲಯಗಳಲ್ಲಿ ಲಕ್ಷ್ಮಿ ಹಬ್ಬದ ದಿನ ವಿಶೇಷ ಸೇವೆಗಳಿರುವುದಿಲ್ಲ. ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಮಹಾಲಕ್ಷ್ಮಿ ಲೇಔಟ್‌ನ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದ ಲಕ್ಷ್ಮಿ ದೇವಾಲಯ, ರಂಗಸ್ವಾಮಿ ಟೆಂಪಲ್‌ ಬೀದಿ, ಶೇಷಾದ್ರಿಪುರಂ, ಕೋರಮಂಗಲ ಮತ್ತಿತರ ಪ್ರದೇಶಗಳಲ್ಲಿರುವ ಮಹಾಲಕ್ಷ್ಮಿ ದೇವಾಲಯಗಳು ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ನೆರವೇರಲಿವೆ.
 

click me!