
ಮೈಸೂರು (ಡಿ.17): ಸಂಸತ್ ಮೇಲೆ ಹೊಗೆ ಬಾಬ್ ದಾಳಿ ನಡೆಸಿದ ಇಬ್ಬರಿಗೆ ಸಂಸತ್ ಪ್ರವೇಶದ ಪಾಸು ನೀಡಿದ್ದ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದೆಹಲಿ ಪೊಲೀಸರ ವಿಶೇಷ ಘಟಕ ಪಡೆಯುವ ಸಾಧ್ಯತೆ ಇದೆ.
ಪ್ರತಾಪ್ ಸಿಂಹ ಅವರು ಲಖನೌನ ಸಾಗರ್ ಶರ್ಮಾ ಮತ್ತು ಮೈಸೂರಿನ ಡಿ.ಮನೋರಂಜನ್ ಅವರಿಗೆ ಡಿ.13ರಂದು ಲೋಕಸಭೆ ಕಲಾಪ ವೀಕ್ಷಣೆಯ ಪಾಸು ನೀಡಿದ್ದರು. ಈ ಇಬ್ಬರೂ ಸಂಸತ್ ಕಲಾಪದ ವೇಳೆ ಹೊಗೆ ಬಾಂಬ್ ಸಿಡಿಸಿ ಗದ್ದಲ ಎಬ್ಬಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಹೇಳಿಕೆ ಪಡೆಯಲು ವಿಶೇಷ ಸೆಲ್ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
‘ಹೊಗೆಬಾಂಬ್’ ಹಿಂದೆ ಬೇರೆ ಮಾಸ್ಟರ್‌ಮೈಂಡ್? ಸಂಸತ್ ದಾಳಿಗೆ ಪ್ಲ್ಯಾನ್ ಬಿ ಸಹ ಯೋಜಿಸಿದ್ದ ದಾಳಿಕೋರರು!
ಪಾಸ್ ಗಾಗಿ ಮನೋರಂಜನ್ ಕಳೆದ ಮೂರು ತಿಂಗಳಿನಿಂದ ಪ್ರತಾಪ್ ಸಿಂಹ ಅವರ ಕಚೇರಿಗೆ ಭೇಟಿ ನೀಡಿ ಹಲವು ಬಾರಿ ಮನವಿ ಮಾಡಿದ್ದ. ಮೈಸೂರಿನ ನಿವಾಸಿ ಎಂದು ಹೇಳಿ ಪಾಸ್ ಪಡೆದುಕೊಂಡಿದ್ದ. ಸಾಮಾನ್ಯವಾಗಿ ಮೈಸೂರಿನವರು ಎಂದರೆ ಪ್ರತಾಪ್ ಸಿಂಹ ಅವರ ಮನವಿಗೆ ಸ್ಪಂದಿಸುವುದು ಹೆಚ್ಚು ಎಂದು ಮೂಲಗಳು ಮಾಹಿತಿ ನೀಡಿವೆ.
ಈ ನಡುವೆ ಪ್ರತಾಪ್ ಸಿಂಹ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸಂಸತ್ತಿನ ಒಳಗೆ ಹಾಗೂ ಹೊರಗೆ ಪ್ರತಿಭಟನನೆಗಳನ್ನು ನಡೆಸುತ್ತಿದ್ದರೂ, ಪ್ರತಾಪ್ ಸಿಂಹ ಅವರು ಇದೂವರೆಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಆದರೆ, ಘಟನೆ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದರು.
ಘಟನೆ ಬಳಿಕ ಸಂಸತ್ತಿನ ಭದ್ರತೆಯನ್ನು ಪರಿಶೀಲಿಸಲು ಮತ್ತು ಅಂತಹ ಘಟನೆಗಳು ಮರುಕಳಿಸದಂತೆ ಖಚಿತಪಡಿಸಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲು 'ಉನ್ನತ ಸಮಿತಿ'ಯನ್ನು ರಚಿಸಿದ್ದೇನೆ ಎಂದು ಬಿರ್ಲಾ ಶನಿವಾರ ಎಲ್ಲಾ ಸಂಸದರಿಗೆ ಪತ್ರ ಬರೆದಿದ್ದಾರೆ.
ಏತನ್ಮಧ್ಯೆ, ಪ್ರಕರಣದ ಆರನೇ ಆರೋಪಿ ಮಹೇಶ್ ಕುಮಾವತ್ ಅವರನ್ನು ಶನಿವಾರ ಬಂಧಿಸಲಾಗಿದ್ದು, ನಂತರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆರೋಪಿಯನ್ನು ಏಳು ದಿನಗಳ ಕಾಲಪೊಲೀಸ್ ಕಸ್ಟಡಿಗೆ ನೀಡಿದೆ.
ಘಟನೆಯ ದಿನದಂದು ಮಹೇಶ್ ಮಾಸ್ಟರ್ ಮೈಂಡ್ ಲಲಿತ್ ಝಾ ಮತ್ತು ಕೈಲಾಶ್ ಎಂಬ ಆರೋಪಿಗಳೊಂದಿಗೆ ಸಂಸತ್ತಿನ ಹೊರಗಿದ್ದ. ಘಟನೆಯ ನಂತರ, ಮಹೇಶ್ ಮತ್ತು ಲಲಿತ್ ಝಾ ಇಬ್ಬರೂ ರಾಜಸ್ಥಾನಕ್ಕೆ ಪಲಾಯನ ಮಾಡಿದ್ದರು. ನಂತರ ಮಹೇಶ್ ಹೆಸರಿನಲ್ಲಿ ಹೋಟೆಲ್ ರೂಮ್ ಬುಕ್ ಮಾಡಿಕೊಂಡು ಅಲ್ಲಿಯೇ ತಂಗಿದ್ದರು. ಬಳಿಕ ರಾಜಸ್ಥಾನದಲ್ಲಿ ಮೊಬೈಲ್ ಫೋನ್ ನಾಶಪಡಿಸಲು ಮಹೇಶ್ ಝಾಗೆ ಮಹೇಶ್ ಸಹಾಯ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.
ಸಂಸತ್ತಲ್ಲಿ ಈವರೆಗೆ 40 ಬಾರಿ ಭದ್ರತಾ ಲೋಪ: ರಾಜಕೀಯ ಬೇಡ; ಅಮಿತ್ ಶಾ ಮೊದಲ ಪ್ರತಿಕ್ರಿಯೆ
ಇದರ ಬೆನ್ನಲ್ಲೇ ಮಹೇಶ್ ವಿರುದ್ಧ ಕ್ರಿಮಿನಲ್ ಸಂಚು ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಮಧ್ಯೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಸೆಲ್ ಪೂರ್ವಾನುಮತಿ ಇಲ್ಲದೆ ನಗರವನ್ನು ತೊರೆಯದಂತೆ ಮನೋರಂಜನ್ ಕುಟುಂಬ ಸದಸ್ಯರಿಗೆ ನಿರ್ದೇಶನ ನೀಡಿದೆ.
ಈ ನಡುವೆ ಘಟನೆ ವೇಳೆ ಆರೋಪಿಗಳು ಬಳಸಿದ್ದ ಶೂ ಹಾಗೂ ಬಣ್ಣದ ಹೊಗೆ ಡಬ್ಬಿಗಳ ಪತ್ತೆ ಮಾಡಲು ದೆಹಲಿ ಪೊಲೀಸರು ಲಖನೌ ಹಾಗೂ ಲಾತೂರ್ ಗೆ ಭೇಟಿ ನೀಡಿದೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ