ಸ್ಮಗ್ಲಿಂಗ್‌ನಲ್ಲಿ ಪ್ರಮುಖ ರಾಜಕಾರಣಿ ಪಾತ್ರವಹಿಸಲ್ಲ: ಜಿ.ಬಿ.ಈಶ್ವರಪ್ಪ

Published : Mar 13, 2025, 11:35 AM ISTUpdated : Mar 13, 2025, 11:38 AM IST
ಸ್ಮಗ್ಲಿಂಗ್‌ನಲ್ಲಿ ಪ್ರಮುಖ ರಾಜಕಾರಣಿ ಪಾತ್ರವಹಿಸಲ್ಲ: ಜಿ.ಬಿ.ಈಶ್ವರಪ್ಪ

ಸಾರಾಂಶ

ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳ ಕಾರ್ಯನಿರ್ವಹಣೆ, ಪಹರೆ ವ್ಯವಸ್ಥೆ ಕುರಿತು ಕೇಂದ್ರ ಕಸ್ಟಮ್ಸ್ ಇಲಾಖೆಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜಿ.ಬಿ.ಈಶ್ವರಪ್ಪ ಅವರು ‘ಕನ್ನಡಪ್ರಭ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಮಾ.13): ನಟಿ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲ ಮಗಳು ರನ್ಯಾರಾವ್ ಅವರ ಚಿನ್ನ ಕಳ್ಳ ಸಾಗಣೆ ಕೃತ್ಯ ರಾಜ್ಯದಲ್ಲಿ ತೀವ್ರ ಸದ್ದು ಮಾಡುತ್ತಿದೆ. ಈ ಕಳ್ಳಸಾಗಣೆ ಕೃತ್ಯಕ್ಕೆ ರಾಜಕೀಯ ನಂಟು ಅಂಟಿಕೊಂಡ ನಂತರ ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ವಿಪರೀತ ಕುತೂಹಲ ಕೆರಳಿಸಿದೆ. ಇದೇ ವೇಳೆ ಕೆಂಪೇಗೌಡ ವಿಮಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭೇದ್ಯ ಭದ್ರತಾ ಕೋಟೆ ನುಸುಳಿ ರನ್ಯಾ ಅವರು ಕೆ.ಜಿ.ಗಟ್ಟಲೆ ಚಿನ್ನ ತಂದಿದ್ದು ಹೇಗೆಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳ ಕಾರ್ಯನಿರ್ವಹಣೆ, ಪಹರೆ ವ್ಯವಸ್ಥೆ ಕುರಿತು ಕೇಂದ್ರ ಕಸ್ಟಮ್ಸ್ ಇಲಾಖೆಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜಿ.ಬಿ.ಈಶ್ವರಪ್ಪ ಅವರು ‘ಕನ್ನಡಪ್ರಭ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

-ನಟಿ ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ದೊಡ್ಡಮಟ್ಟದ ಚರ್ಚೆ ಹುಟ್ಟು ಹಾಕಿದೆಯಲ್ವಾ?
ಈ ಪ್ರಕರಣ ಹೊಸದೇನೂ ಅಲ್ಲ. ಹಿಂದಿನಿಂದಲೂ ವಿದೇಶದಿಂದ ಚಿನ್ನ ಕಳ್ಳ ಸಾಗಣೆ ಕೃತ್ಯಗಳು ನಡೆಯುತ್ತಲೇ ಇವೆ. ಕೆಲ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಿದೆ. ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಐದಾರು ಕೆ.ಜಿ.ವರೆಗೆ ಕೆಲವರು ಚಿನ್ನ ತಂದಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಪತ್ತೆಯಾಗಿದೆ ಅಷ್ಟೇ. ಹಿಂದೆ 80-90ರ ದಶಕದಲ್ಲಿ ಮಂಗಳೂರಿನ ಗಂಗೊಳ್ಳಿ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಆಗ ಸಹ ದೊಡ್ಡ ಪ್ರಮಾಣದ ಚಿನ್ನ ಪತ್ತೆಯಾಗಿತ್ತು.

ರನ್ಯಾ ರಾವ್ ಜಾಮೀನು ತೀರ್ಪು ಬಾಕಿ: ಬಂಧನಕ್ಕೆ ಅರೆಸ್ಟ್‌ ಮೆಮೋದಲ್ಲಿ ತನಿಖಾಧಿಕಾರಿ ಸೂಕ್ತ ಕಾರಣ ನೀಡಿಲ್ಲ

-ಅತ್ಯಂತ ಬಿಗಿಭದ್ರತೆ ಹೊಂದಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಚಿನ್ನ ಸಾಗಣೆ ಸುಲಭವೇ?
ಯಾವುದೇ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಭದ್ರತೆ ಇರುತ್ತದೆ. ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌), ಕಸ್ಟಮ್ಸ್‌ ಹಾಗೂ ಡಿಆರ್‌ಐ ಕಣ್ಗಾವಲು ಜೋರಿದೆ. ಹೀಗಿದ್ದರೂ ಕೆಲ ಬಾರಿ ಲೋಪಗಳು ನಡೆಯುತ್ತವೆ. ಈಗಲೂ ಅದೇ ಆಗಿರಬಹುದು. ಮೊದಲು ಬೆಂಗಳೂರು ಏರ್‌ ಪೋರ್ಟ್‌ ಅನ್ನು ಕಸ್ಟಮ್ಸ್‌ ಅಧಿಕಾರಿಗಳು ಸ್ಟರ್ಲಿಂಗ್ ಪೋರ್ಟ್‌ (sterling port) ಅಂತ ಕರೆಯುತ್ತಿದ್ದರು. ಯಾಕೆಂದರೆ ಈ ವಿಮಾನ ನಿಲ್ದಾಣ ಅಕ್ರಮ ಚಟುವಟಿಕೆಗಳಿಂದ ಮುಕ್ತವಾಗಿತ್ತು.

-ಅಕ್ರಮ ಚಟುವಟಿಕೆ ಮುಕ್ತವಾಗಿದ್ದ ಈ ವಿಮಾನ ನಿಲ್ದಾಣ ಮಲಿನವಾಗಿದ್ದು ಹೇಗೆ? ಇದಕ್ಕೆ ಕಾರಣ ಯಾರು?
ವಿಮಾನ ನಿಲ್ದಾಣದ ಮಲಿನಗೊಳ್ಳಲು ಇಂಥದ್ದೇ ವರ್ಷ ಅಥವಾ ಇವರಿಂದಲೇ ಆಯಿತು ಅಂತ ಹೇಳಲು ಸಾಧ್ಯವಿಲ್ಲ. ಇತ್ತೀಚಿನ ದಿನಮಾನ ಅಂತ ಹೇಳಬಹುದು. ದೇಶದಲ್ಲಿ ಮುಂಬೈ ಹಾಗೂ ದೆಹಲಿ ಬಿಟ್ಟರೆ ಅತಿಹೆಚ್ಚು ಪ್ರಯಾಣಿಕರು ಹಾಗೂ ವಿಮಾನ ಸಂಚಾರವಿರುವ ವಿಮಾನ ನಿಲ್ದಾಣ ಬೆಂಗಳೂರು ಆಗಿದೆ. ಇದು ಕೂಡ ಅಕ್ರಮ ಕೃತ್ಯಗಳಿಗೆ ಕಾರಣವಾಗಿರಬಹುದು.

-ಕಳ್ಳ ಸಾಗಣೆಗೆ ವಿಮಾನ ನಿಲ್ದಾಣದ ಅಧಿಕಾರಿಗಳ ಸಹಕಾರವಿದೆ ಎಂಬ ಮಾತಿದೆ?
ಯಾವ ವಿಮಾನ ನಿಲ್ದಾಣ ಕಳ್ಳಸಾಗಣೆ ಕೃತ್ಯಕ್ಕೆ ಅನುಕೂಲ ಎಂದು ಮೊದಲೇ ಸ್ಮಗ್ಲರ್ಸ್‌ ತಿಳಿದುಕೊಳ್ಳುತ್ತಾರೆ. ಮೊದಲಿನಿಂದಲೂ ಕೆಲ ವಿಮಾನ ನಿಲ್ದಾಣ ಡ್ರಗ್ಸ್ ಹಾಗೂ ಚಿನ್ನ ಕಳ್ಳ ಸಾಗಣೆಗೆ ಅನುಕೂಲಕರವಾಗಿದೆ. ಅವು ಯಾವುವು ಎಂದು ಹೇಳಲು ಹೋಗುವುದಿಲ್ಲ. ವಿಮಾನ ನಿಲ್ದಾಣದ ಅಧಿಕಾರಿಗಳಲ್ಲಿ ಒಳ್ಳೆಯವರು ಮತ್ತು ಕೆಟ್ಟವರೂ ಇರುತ್ತಾರೆ.

-ಹೆಚ್ಚಿನ ಪ್ರಮಾಣದ ಚಿನ್ನ ಸಾಗಿಸುವಾಗ ತಪಾಸಣೆ ಮಾಡುವುದಿಲ್ಲವೇ?
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ಕಟ್ಟುನಿಟ್ಟಾಗಿರುತ್ತದೆ. ನಟಿ ರನ್ಯಾ ರಾವ್‌ ಪ್ರಕರಣದಲ್ಲಿ ಭದ್ರತಾ ಲೋಪ ಹೇಗಾಗಿದೆ ಎಂಬುದು ಗೊತ್ತಿಲ್ಲ. ಪ್ರೋಟೊಕಾಲ್‌ ಇದ್ದರೂ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವಾಗ ಸಿಐಎಸ್‌ಎಫ್ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿಯೇ ಕಳುಹಿಸುತ್ತಾರೆ. ವಿದೇಶದಿಂದ ಬೆಂಗಳೂರಿಗೆ ಮರಳುವಾಗ ನಟಿ ರನ್ಯಾ ಅ‍ವರಿಗೆ ಕೆಲವರು ಅನುಕೂಲ ಮಾಡಿರಬಹುದು. ಅದು ಭದ್ರತಾ ಲೋಪವೇ ಅಥವಾ ಪೊಲೀಸರ ಹೆಸರು ದರ್ಬಳಕೆಯಾಗಿದೆಯೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.

-ವಿದೇಶದ ವಿಮಾನ ನಿಲ್ದಾಣಗಳಲ್ಲಿಯೂ ತಪಾಸಣೆ ಮಾಡಬೇಕಲ್ಲವೇ?
ದುಬೈ ಮುಕ್ತ ಮಾರುಕಟ್ಟೆ ಹೊಂದಿದೆ. ಆ ದೇಶದಲ್ಲಿ ಗ್ರಾಹಕನ ಹಿತಾಸಕ್ತಿ ಮುಖ್ಯವಾಗುತ್ತದೆ. ತಮ್ಮಲ್ಲಿ ಖರೀದಿಸಿದ ಚಿನ್ನ ಸಾಗಣೆಗೆ ದುಬೈನಲ್ಲಿ ನಿರ್ಬಂಧ ಹೇರುವುದಿಲ್ಲ. ಆದರೆ ಅಮೆರಿಕ, ಫ್ರಾನ್ಸ್‌, ಬ್ರಿಟನ್ ಹಾಗೂ ಜರ್ಮನಿ ದೇಶಗಳ ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಗಳಿಂದ ಬಿಗಿಯಾದ ತಪಾಸಣೆ ನಡೆಯುತ್ತದೆ. ಅಲ್ಲಿಂದ ಬರುವ ಪ್ರಯಾಣಿಕರ ಮೇಲೆ ಗುಮಾನಿಪಡುವ ಅಗತ್ಯವಿಲ್ಲ. ಹಾಗಾಗಿಯೇ ನಮ್ಮ ವಿಮಾನ ನಿಲ್ದಾಣಗಳಲ್ಲಿ ದುಬೈ ಪ್ರಯಾಣಿಕರ ಮೇಲೆ ನಿಗಾ ಹೆಚ್ಚಿದೆ.

-ಅಂದರೆ ನಟಿ ರನ್ಯಾ ರಾವ್‌ ಅವರ ಮೇಲೂ ಕಸ್ಟಮ್ಸ್‌, ಡಿಆರ್‌ಐ ಅಧಿಕಾರಿಗಳು ಕಣ್ಣಿಟ್ಟಿದ್ದರೆ?
ಯಾರೇ ಆದರೂ ಪದೇ ಪದೆ ದುಬೈಗೆ ಹೋಗುತ್ತಾರೆಂದರೆ ಸಹಜವಾಗಿ ಅನುಮಾನ ಬರುತ್ತದೆ. ದುಬೈಗೆ ಹೋದಂತೆ ಯಾರೂ ತಿಂಗಳಿಗೆ ಐದಾರು ಬಾರಿ ಅಮೆರಿಕ, ಫ್ರಾನ್ಸ್ ದೇಶಗಳಿಗೆ ಹೋಗುವುದಿಲ್ಲ. ರನ್ಯಾ ಅವರು ನಿರಂತರ ದುಬೈ ಪಯಣದ ಬಗ್ಗೆ ತಿಳಿದಾಗಲೇ ಅಧಿಕಾರಿಗಳು ಅಲರ್ಟ್ ಆಗಿರುತ್ತಾರೆ.

-ಪ್ರಯಾಣಿಕರ ಮೇಲಿನ ವಿಚಕ್ಷಣೆ ಹೇಗಿರುತ್ತದೆ?
ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲಿ ಪ್ರತಿಯೊಬ್ಬ ಪ್ರಯಾಣಿಕರ ವಿದೇಶ ಭೇಟಿ ಬಗ್ಗೆ ಮಾಹಿತಿ ಇರುತ್ತದೆ. ಅಷ್ಟೇ ಅಲ್ಲ, ಅವರ ಪಾಸ್ ಪೋರ್ಟ್ ಪರಿಶೀಲಿಸಿದರೆ ಸಾಕು ಮಾಹಿತಿ ಸಿಗುತ್ತದೆ. ಆದರೆ ನಿರಂತರ ದುಬೈಗೆ ಹೋಗುವ ಪ್ರಯಾಣಿಕರ ಬಗ್ಗೆ ಡಿಆರ್‌ಐ ಪ್ರತ್ಯೇಕ ‘ಪ್ರೊಫೈಲ್’ ಸಿದ್ಧಪಡಿಸುತ್ತದೆ. ನಾನು ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದರೂ ದೇಶದ ಹಿತದೃಷ್ಟಿಯಿಂದ ಈ ಫ್ರೊಫೈಲ್‌ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗಪಡಿಸುವುದಿಲ್ಲ.

-ಕೇಂದ್ರ ಸರ್ಕಾರದ ಅಧೀನದಲ್ಲಿರುವ ಡಿಆರ್‌ಐ, ಕಸ್ಟಮ್ಸ್ ಮೇಲೆ ರಾಜ್ಯದ ರಾಜಕಾರಣಿಗಳ ಪ್ರಭಾವ ಇರುತ್ತದೆಯೇ?
ಡಿಆರ್‌ಐ, ಕಸ್ಟಮ್ಸ್ ಹಾಗೂ ಎನ್‌ಸಿಬಿ ಹೀಗೆ ಕೇಂದ್ರ ಕಾರ್ಯಾಂಗದ ಮೇಲೆ ಖುದ್ದು ಕೇಂದ್ರ ಸಚಿವರೇ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ. ಇನ್ನು ರಾಜ್ಯದ ರಾಜಕಾರಣಿಗಳಿಗೆ ಅವರ ಸಂಪರ್ಕ ಸಹ ಇರುವುದಿಲ್ಲ. ಒಂದು ವೇಳೆ ಪ್ರಭಾವ ಬೀರಿದರೂ ಅದನ್ನು ಹಿರಿಯ ಅಧಿಕಾರಿಗಳೇ ನಿಭಾಯಿಸುತ್ತಾರೆ ವಿನಃ ಕೆಳಹಂತದ ಅಧಿಕಾರಿಗಳಿಗೆ ತಾಕುವುದಿಲ್ಲ.

-ಸಚಿವರ ಮಾತುಗಳನ್ನು ಅಧಿಕಾರಿಗಳು ಕೇಳುವುದಿಲ್ಲವೇ?
ಕೆಲ ಬಾರಿ ತಮ್ಮವರ ಪರವಾಗಿ ಸಚಿವರು ಕರೆ ಮಾಡುವುದುಂಟು. ನಾನು ಸೇವೆಯಲ್ಲಿದ್ದಾಗ ಕೇಂದ್ರ ಸಚಿವರೊಬ್ಬರು ಕರೆ ಮಾಡಿದ್ದರು. ಆದರೆ ಆ ವಿಷಯವನ್ನು ಹಿರಿಯ ಅಧಿಕಾರಿಗಳು ಬಗೆಹರಿಸಿದರು. ವಿದೇಶದಿಂದ ತಿಳಿಯದೆ ಬರುವ ಸರಕುಗಳು ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಾಗ ಕೆಲವರು ಕರೆ ಮಾಡುತ್ತಾರೆ. ಹೀಗೆ ಕರೆ ಮಾಡಿದವರೂ ನಾವು ಹೇಳಿದಂತೆ ಕೇಳಿ ಅಂಥ ಹೇಳುವುದಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಿ ಅಂತ ಹೇಳುತ್ತಾರೆ ಅಷ್ಟೇ.

-ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಅದಕ್ಕೆ ಮಿತಿ ಇದೆಯೇ?
ವಿದೇಶದಿಂದ ಚಿನ್ನ ತರುವ ಪ್ರಯಾಣಿಕರನ್ನು ‘ಜಂಟಲ್‌ ಮ್ಯಾನ್ ಪ್ಯಾಸೆಂಜರ್’ ಅಂತ ಕರೆಯುತ್ತೇವೆ. ಪುರುಷರು 10 ಗ್ರಾಂ. ಹಾಗೂ ಮಹಿಳೆಯರು 30 ಗ್ರಾಂ. ಚಿನ್ನ ತರಲು ಅವಕಾಶವಿದೆ. ಅಲ್ಲದೆ, ವಿದೇಶದಿಂದ 10 ಕೆ.ಜಿ.ಯಷ್ಟು ಚಿನ್ನ ಖರೀದಿಸಿ ತರಲು ಸಹ ಭಾರತೀಯರಿಗೆ ಕಾನೂನಿನಲ್ಲಿ ಅನುಮತಿ ಇದೆ. ಆದರೆ ಅದಕ್ಕೆ ಕೆಲ ಷರತ್ತುಗಳಿವೆ.

-ಹಾಗಿದ್ದಾಗ 10 ಕೆ.ಜಿ.ಯಷ್ಟು ಚಿನ್ನ ಹೇಗೆ ತರಬಹುದು?
ಪ್ರಯಾಣಿಕ ವಿದೇಶದಲ್ಲಿ ಕನಿಷ್ಟ ಎರಡು ವರ್ಷಗಳು ಕೆಲಸ ಮಾಡಿ ಆ ದುಡಿಮೆಯಿಂದ ಸಂಪಾದಿಸಿದ ಹಣದಲ್ಲಿ ಚಿನ್ನ ಖರೀದಿಸಿರಬೇಕು. ಈ ಚಿನ್ನ ಖರೀದಿ ವ್ಯವಹಾರ ಪಕ್ಕಾ ವಿದೇಶ ವಿನಿಮಯಿಂದಲೇ ಆಗಿರಬೇಕು. ಹಾಗೆಯೇ ಕಸ್ಟಮ್ಸ್ ಘೋಷಣೆ ಮಾಡಿಕೊಳ್ಳಬೇಕು ಮತ್ತು ಅದಕ್ಕೆ ವಿಧಿಸುವ ತೆರಿಗೆ ಪಾವತಿಸಬೇಕು. ಈ ನಿಯಮಗಳನ್ನು ಪಾಲಿಸಿದರೆ ಮಾತ್ರ 10 ಕೆ.ಜಿ. ಚಿನ್ನ ತರಬಹುದು.

-ರೌಡಿಗಳಂತೆ ಕಳ್ಳ ಸಾಗಣೆ ಕೃತ್ಯದಲ್ಲೂ ಸಿಂಡಿಕೇಟ್‌ಗಳಿವೆಯೇ?
ಹೌದು ಕಳ್ಳರ ಕೂಟಗಳಿವೆ. ಕೆಲ ಬಾರಿ ಈ ಕೂಟಗಳ ಅಂತರಿಕ ಕಲಹದಿಂದಲೇ ಕಸ್ಟಮ್ಸ್ ಹಾಗೂ ಡಿಆರ್‌ಐಗೆ ಕಳ್ಳ ಸಾಗಣೆಯ ಅತ್ಯಮೂಲ್ಯ ಮಾಹಿತಿ ಸಿಗುತ್ತವೆ. ಇದರಿಂದ ಒಳ್ಳೆಯ ಕಾರ್ಯಾಚರಣೆ ಸಹ ನಡೆದಿವೆ.

-ಕಳ್ಳ ಸಾಗಣೆ ಜಾಲಕ್ಕೆ ರಾಜಕಾರಣಿಗಳ ಕೃಪೆ ಇರುತ್ತದೆಯೇ?
ನನ್ನ 39 ವರ್ಷಗಳ ಸೇವಾನುಭವದಿಂದ ಹೇಳುತ್ತೇನೆ. ಸ್ಮಗ್ಲಿಂಗ್‌ನಲ್ಲಿ ಯಾವ ರಾಜಕಾರಣಿಯೂ ಪಾತ್ರವಹಿಸುವುದಿಲ್ಲ. ಹಾಗೊಂದು ವೇಳೆ ಇದ್ದರೂ ಅದೂ ಫುಡಾರಿ ರಾಜಕಾರಣಿ ಹೊರತು ಪ್ರಮುಖ ನಾಯಕನಿರುವುದಿಲ್ಲ. ಈ ಸ್ಮಗ್ಲಿಂಗ್‌ನಲ್ಲಿ ಸಿಗುವ ಆದಾಯಕ್ಕಿಂತ ಯಾವುದಾದರೂ ಯೋಜನೆಯಿಂದ ನಾಲ್ಕು ಪಟ್ಟು ಹಣ ರಾಜಕೀಯದವರಿಗೆ ಸಿಗುತ್ತದೆ. ಈ ದುರ್ಗಮ ಹಾದಿಯ ಸ್ಮಗ್ಲಿಂಗ್ ಗೆ ಯಾಕೆ ರಾಜಕಾರಣಿಗಳು ಬರುತ್ತಾರೆ. ಕೆಲ ರಾಜಕೀಯದವರ ಸ್ನೇಹ ದುರ್ಬಳಕೆ ಆಗುವುದುಂಟು. ಯಾರು ತಾನೇ ಅಪರಾಧಿಗಳಿಗೆ ಸಹಕರಿಸಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಲು ಹೋಗುತ್ತಾರೆ.

-ನಟಿ ರನ್ಯಾ ಪ್ರಕರಣದಲ್ಲಿ ರಾಜಕೀಯ ನಾಯಕರ ನಂಟು ಬಲವಾಗಿ ಕೇಳಿ ಬಂದಿದೆ?
ಚಿನ್ನ ಕಳ್ಳ ಸಾಗಣೆ ಜಾಲದಲ್ಲಿ ಪ್ರಸಿದ್ಧ ರಾಜಕಾರಣಿಗಳು ಪಾಲ್ಗೊಳ್ಳುವುದಿಲ್ಲ. ಅದನ್ನು ಖಂಡಿತವಾಗಿ ಹೇಳಬಲ್ಲೆ. ರನ್ಯಾ ರಾವ್‌ ಪ್ರಕರಣದಲ್ಲಿ ಇಷ್ಟು ದೊಡ್ಡಮಟ್ಟದ ಚಿನ್ನ ಸಾಗಿಸುವ ವಿಚಾರ ಗೊತ್ತಿದ್ದರೆ ಆ ರಾಜಕಾರಣಿಗಳೇ ತಡೆಯುತ್ತಿದ್ದರು ಎಂದು ನನಗೆ ಅನಿಸುತ್ತದೆ. ಪ್ರೋಟೊಕಾಲ್‌ನಲ್ಲಿ ಏನಾದರೂ ರಾಜಕಾರಣಿಗಳ ಹೆಸರು ಹೇಳಿರಬಹುದು ಅಷ್ಟೇ. ಅಂತಿಮವಾಗಿ ರಾಜಕೀಯ ನಾಯಕರ ನಂಟು ಬಗ್ಗೆ ಡಿಆರ್‌ಐ ಹಾಗೂ ಸಿಬಿಐ ತನಿಖೆಗಳಿಂದ ಸತ್ಯ ಗೊತ್ತಾಗಲಿದೆ.

-ವಿಮಾನ ನಿಲ್ದಾಣದಲ್ಲಿ ಪ್ರೋಟೊಕಾಲ್‌ (ಶಿಷ್ಟಾಚಾರ) ದುರ್ಬಳಕೆ ಆಗಿದೆಯಲ್ಲ?
ಐಎಎಸ್‌, ಐಪಿಎಸ್ ಹೀಗೆ ಅಧಿಕಾರಿಗಳಿಗೆ ಪ್ರೊಟೋಕಾಲ್‌ ಇರುವುದಿಲ್ಲ. ಕೆಲ ಬಾರಿ ಹುದ್ದೆ ಗೌರವಕ್ಕೆ ಪ್ರೋಟೊಕಾಲ್ ಸಿಗುತ್ತದೆ. ಆದರೆ ಅಧಿಕಾರಿಗಳ ಮಕ್ಕಳಿಗೆ ಖಡಿತವಾಗಿಯೂ ಪ್ರೋಟೊಕಾಲ್ ಇರುವುದಿಲ್ಲ. ರನ್ಯಾ ಪ್ರಕರಣದಲ್ಲಿ ಡಿಜಿಪಿ ಮಗಳು ಎಂದು ಹೇಳಿ ಪೊಲೀಸರು ಆಕೆಯನ್ನು ಕರೆತಂದಿರಬಹುದು. ಕೆಲ ಬಾರಿ ಹಿರಿಯ ಅಧಿಕಾರಿ ಹೆಸರು ಕೇಳಿದ ಕೂಡಲೇ ಕೆಳಹಂತದ ಸಿಬ್ಬಂದಿ ಮುರ್ತುವರ್ಜಿ ವಹಿಸುತ್ತಾರೆ. ಅದೇ ತಪ್ಪಾಗಿರಬಹುದು. ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಕಸ್ಟಮ್ಸ್‌ ಹಾಗೂ ಡಿಆರ್‌ಐ ಅಧಿಕಾರಿಗಳಿಗೆ ತಪಾಸಣಾ ವಿನಾಯಿತಿ ಇಲ್ಲ ಎಂಬುದು ನೆನಪಿರಲಿ.

ಬೆಳವಣಿಗೆ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ನಗರ ವಿವಿಗೆ ಕಾಯಂ ಬೋಧಕರು, ಸಿಬ್ಬಂದಿಯೇ ಇಲ್ಲ!

-ಕಸ್ಟಮ್ಸ್ ಹಾಗೂ ಡಿಆರ್‌ಐ ಕಾರ್ಯ ವ್ಯಾಪ್ತಿ ಭಿನ್ನವಾಗಿದೆಯೇ?
ಎರಡು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಿದರೂ ಅವುಗಳು ಪೂರಕವಾಗಿರುತ್ತವೆ. ಎರಡೂ ಇಲಾಖೆಗಳಿಗೆ ಎಫ್‌ಐಆರ್‌ ದಾಖಲಿಸಿ ಆರೋಪಿಯನ್ನು ಬಂಧಿಸುವ ಹಾಗೂ ಆರೋಪಪಟ್ಟಿ ಸಲ್ಲಿಸುವ ಅಧಿಕಾರವಿದೆ. ವಿದೇಶದಿಂದ ಕಳ್ಳಹಾದಿಯಲ್ಲಿ ಸುಂಕ ತಪ್ಪಿಸಿ ಬರುವ ಸರಕುಗಳ ಮೇಲೆ ಕಸ್ಟಮ್ಸ್ ಕಣ್ಣಿಟ್ಟಿರುತ್ತದೆ. ಅದೇ ರೀತಿ ಸಾಗಣೆ ಜಾಲದ ಮೇಲೆ ಡಿಆರ್‌ಐ ನಿಗಾವಿರುತ್ತದೆ. ಕಸ್ಟಮ್ಸ್‌ ನಲ್ಲಿ ಸೇವೆ ಸಲ್ಲಿಸಿದವರೇ ಡಿಆರ್‌ಐನಲ್ಲಿ ಕೆಲಸ ಮಾಡುತ್ತಾರೆ. ಕಸ್ಟಮ್ಸ್ ಕೆಲಸ ತಿಳಿಯದೆ ಹೋದರೆ ಡಿಆರ್‌ಐ ಅರ್ಥವಾಗುವುದಿಲ್ಲ. ಅವುಗಳು ಒಂದಕ್ಕೊಂದು ಬೆಸೆದುಕೊಂಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ