ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ನೀಡದಿದ್ದರೆ ಹೈಕೋರ್ಟ್ ಮೊರೆ ಹೋಗುವುದಾಗಿ ಚುನಾವಣಾ ಆಯೋಗದ ಆಯುಕ್ತರು ತಿಳಿಸಿದ್ದಾರೆ. ಹಳೆಯ ಮೀಸಲಾತಿ ಪಟ್ಟಿಯಂತೆ 2025ರಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ.
ಮೈಸೂರು (ಮಾ.24): ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಕೊಡದಿದ್ದರೆ, ಹೈಕೋರ್ಟ್‌ಗೆ ಹೋಗಿ ಹಳೆಯ ಮೀಸಲಾತಿ ಪಟ್ಟಿ ಅನುಸಾರವೇ 2025ರಲ್ಲಿ ಮೈಸೂರು, ಶಿವಮೊಗ್ಗ, ದಾವಣಗೆರೆ, ತುಮಕೂರು, ಮಂಗಳೂರು ಸೇರಿ 5 ಮಹಾನಗರ ಪಾಲಿಕೆಗಳ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್ ಸಂಗ್ರೇಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಲವು ವರ್ಷಗಳಿಂದ ಕೆಲವು ಮಹಾನಗರ ಪಾಲಿಕೆಗಳ ಚುನಾವಣೆ ನಡೆದಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿಯನ್ನು ನೀಡದಿರುವುದೇ ಮುಖ್ಯ ಕಾರಣವಾಗಿದೆ. ಈ ವರ್ಷವಾದರೂ ಸರ್ಕಾರದಿಂದ ಮೀಸಲಾತಿ ಪಟ್ಟಿ ಕೊಡಲಿದೆ ಎಂಬ ನಂಬಿಕೆಯಲ್ಲಿದ್ದೇವೆ. ಈಗಾಗಲೇ ಚುನಾವಣೆ ನಡೆಸುವುದಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಇದೀಗ ಮೀಸಲಾತಿ ಪಟ್ಟಿಯನ್ನು ಸರ್ಕಾರ ಕೊಟ್ಟರೆ ಚುನಾವಣೆ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮುತಾಲಿಕ್‌ಗಿದ್ದ ಗೋವಾ ಪ್ರವೇಶ ನಿಷೇಧ 10 ವರ್ಷಗಳ ನಂತರ ತೆರವು
ಸರ್ಕಾರ ಮೀಸಲಾತಿ ಪಟ್ಟಿ ಕೊಟ್ಟರೆ ಸರಿ. ಕೊಡದೆ ಇದ್ದರೆ ಹೈಕೋರ್ಟ್ ಮೊರೆ ಹೋಗಿ ಹಳೇ ಮೀಸಲಾತಿಯಂತೆ ಚುನಾವಣೆ ಮಾಡುತ್ತೇವೆ. ಆದಷ್ಟು ಬೇಗ ಮಹಾನಗರ ಪಾಲಿಕೆಗಳ ಮೀಸಲಾತಿ ಕೊಡುವಂತೆ ಸರಕಾರಕ್ಕೆ ಪತ್ರ ಕೂಡ ಬರೆದಿದ್ದೇವೆ. 5 ಮಹಾನಗರ ಪಾಲಿಕೆಯಲ್ಲೂ ಮತದಾರರ ಪಟ್ಟಿ ಸಿದ್ದವಾಗಿದೆ. ಈ ವರ್ಷದಲ್ಲಿ ಮಹಾ ನಗರ ಪಾಲಿಕೆ ಚುನಾವಣೆ ಮಾಡಲು ಚುನಾವಣಾ ಆಯೋಗ ಸಿದ್ಧವಾಗಿದೆ ಎಂದು ಹೇಳಿದರು.