ಬೆಂಗಳೂರು ಪೊಲೀಸ್ ಆಯುಕ್ತರ ಸ್ವ-ವಿಶ್, ರಾಜಕಾರಣಿಗಳಿಗೆ ಹನಿ ಟ್ರ್ಯಾಪ್ ಭಯ, ಮತ್ತು ತೊಗರಿ ಬೆಳೆ ನಷ್ಟದಿಂದ ಕಂಗಾಲಾದ ರೈತರ ಪರಿಹಾರದ ಬೇಡಿಕೆ ಕುರಿತ ವರದಿ ಇದು.
ತಮ್ಮ ಹೆಸರಿನಲ್ಲೇ ತಾವೇ ವಿಶ್ ಮಾಡಿಕೊಂಡ ಆಯುಕ್ತ!
ತಮ್ಮ ಹುಟ್ಟುಹಬ್ಬಕ್ಕೆ ತಾವೇ ಗ್ರಿಟಿಂಗ್ಸ್ ಕಳುಹಿಸಿ ಬೆಂಗಳೂರಿನ ಪೊಲೀಸ್ ಆಯುಕ್ತ ದಯಾನಂದ್ ಅವರು ಶುಭಕೋರಿ ಕೊಂಡಿದ್ದಾರೆ!! ಅಷ್ಟೆ ಮಾತ್ರವಲ್ಲ ಜನ್ಮ ದಿನ ಆಚರಣೆಗೆ ರಜೆಯನ್ನು ಅವರಿಗೆ ಅವರೇ ಮಂಜೂರು ಮಾಡಿದ್ದಾರೆ!!
ಈ ತರಹ ಎಲ್ಲಾದರೂ ಉಂಟೆ ಅನ್ನಬೇಡಿ. ಈ ತರಹ ಆಗಿರೋದಂತೂ ಸತ್ಯ. ಈ ಸ್ವಾರಸ್ಯಕರ ಸಂಗತಿ ಮೊನ್ನೆ ಆಯುಕ್ತರ ಜನ್ಮ ದಿನದಂದು ನಡೆಯಿತು.
ವಿಷಯ ಏನಪ್ಪ ಅಂದರೆ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಆದ ನಂತರ ದಯಾನಂದ್ ಅವರು, ಬೆಂಗಳೂರು ನಗರದ ಪೊಲೀಸರಿಗೆ ಅವರ ಜನ್ಮ ದಿನದಂದು ಪೊಲೀಸ್ ಆಯುಕ್ತರ ಸಹಿಯುಳ್ಳ ಗ್ರಿಟಿಂಗ್ಸ್ ಕಳುಹಿಸಿ ಶುಭಕೋರುವ ಪದ್ಧತಿ ಆರಂಭಿಸಿದ್ದಾರೆ. ಹಾಗೆ ಹುಟ್ಟುಹಬ್ಬದ ದಿವಸ ಖುಷಿಯಾಗಿ ಕುಟುಂಬದ ಜೊತೆ ಸಮಯ ಕಳೆಯುವಂತಾಗಲಿ ಎನ್ನುವ ಆಶಯದಿಂದ ಅಧಿಕಾರಿ-ಸಿಬ್ಬಂದಿಗೆ ರಜೆ ಸಹ ನೀಡುವ ವ್ಯವಸ್ಥೆಯನ್ನು ಅವರು ಜಾರಿಗೆ ತಂದಿದ್ದಾರೆ.
ಅಂತೆಯೇ ಪೊಲೀಸರಿಗೆ ಕಳುಹಿಸುವಂತೆ ಮಾ.19ರಂದು ಬುಧವಾರ ಆಯುಕ್ತರ ಬರ್ತ್ ಡೇಗೆ ಅವರದ್ದೇ ಹೆಸರಿನಲ್ಲಿ ಶುಭಕೋರಿದ ಗ್ರೀಟಿಂಗ್ಸ್ ಬಂದಿದೆ. ಈ ಗ್ರೀಟಿಂಗ್ಸ್ ಸ್ವೀಕರಿಸಿದ ದಯಾನಂದ್ ಅವರಿಗೆ ನಗು ಬಂದಿದೆ. ‘ನಾವು ಮಾಡಿದ ನಿಯಮ ನಮಗೆ ವಾಪಸ್ ಬಂದಿದೆ’ ಎಂದರು. ‘ನಿಮಗೆ ರಜೆ ಸಿಕ್ತಾ ಸರ್’ ಅಂದ್ರೇ ‘ಇಲ್ಲ ಆಯುಕ್ತರು ನನಗೆ ರಜೆ ಕೊಡಲಿಲ್ಲ’ವೆಂದು ದಯಾನಂದ್ ನಕ್ಕರು.
ಇದನ್ನೂ ಓದಿ: 'ಬೆಳಗಾವಿ ಬಂದ್ ಮಾಡೋ ತಾಕತ್ ಇರೋದು ನಮಗಷ್ಟೇ' ಕರ್ನಾಟಕ ಬಂದ್ ನೀರಸ ಪ್ರತಿಕ್ರಿಯೆಬೆನ್ನಲ್ಲೇ ಶಿವಸೇನೆ ಪೋಸ್ಟ್ ವೈರಲ್!
ಸೆಲ್ಫಿ, ಸಿಂಗಲ್ ಪೋಟೋ ನೋ... ನೋ!
‘ಹನಿ’ ಅರ್ಥಾತ್ ಜೇನು ಅಂದರೆ ಯಾರಿಗೆ ಬೇಡ, ಆಯುರ್ವೇದ ಪ್ರಕಾರ ಜೇನುತುಪ್ಪದಲ್ಲಿ ಉತ್ತಮ ಅಂಶಗಳಿವೆ, ಆದರೆ ‘ಹನಿ ಟ್ರ್ಯಾಪ್’ ಎಂದರೆ ಈಗಂತೂ ಎಲ್ಲರೂ ಗಾಬರಿ ಬಿದ್ದು ಓಡುವವರೇ. ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ ಎಂಬಂತೆ ಯಾವ ರೂಪದಲ್ಲಿ ಬಲೆ ಬೀಸುತ್ತದೆ ಎಂಬಂತಹ ಸ್ಥಿತಿ ಸಾರ್ವಜನಿಕ ರಂಗದಲ್ಲಿ ಇರುವವರಿಗೆ ಆಗಿದೆ, ಅದರಲ್ಲೂ ರಾಜಕಾರಣಿಗಳಂತೂ ಕನಸಿನಲ್ಲಿ ಬೆವರುವಂತಹ ಸ್ಥಿತಿ ಎದುರಾಗಿದೆ.
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ರಾಜಕಾರಣಿಗಳಿಗೆ ಈಗ ಹೆಣ್ಣು ಮಕ್ಕಳು ಫೋನ್ ಮಾಡಿದರೆ ಮಾತನಾಡಲು ಯೋಚಿಸುತ್ತಿದ್ದಾರೆ. ಅವರೊಂದಿಗೆ ಸೆಲ್ಫಿ, ಸಿಂಗಲ್ ಫೋಟೋ ತೆಗೆಸಿಕೊಳ್ಳಲು ನೋ ಎನ್ನುತ್ತಿದ್ದಾರೆ. ಸಾಕಷ್ಟು ಯೋಚನೆ ಮಾಡಿ ಗ್ರೂಪ್ ಫೋಟೋಗೆ ಮಾತ್ರ ಪೋಸ್ ಕೊಡಲು ಒಪ್ಪುತ್ತಿದ್ದಾರೆ.
ಹೌದು, ಈ ಮಾತನ್ನು ಬೇರೆ ಯಾರೂ ಹೇಳಿಲ್ಲ.
ಅಧಿವೇಶನದ ವೇಳೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರಿಗೆ ಪತ್ರಕರ್ತರು ‘ಬಿಜೆಪಿಯ ಯಾರಿಗೆಲ್ಲಾ ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಲು ಯತ್ನಿಸಲಾಗಿದೆ?’ ಎಂದು ಕೇಳಿಯೇ ಬಿಟ್ಟರು.
ಅದಕ್ಕೆ ಛಲವಾದಿ ಸಾಹೇಬ್ರು, ‘ನನ್ನ ಮೇಲೆ ಅಂತಹ ಯತ್ನಗಳು ನಡೆದಿಲ್ಲ. ಬೇರೆ ಯಾರೆಲ್ಲಾ ಸಿಲುಕಿದ್ದಾರೆ ಗೊತ್ತಿಲ್ಲ. ಆದರೆ, ಅಂತಹ ಗ್ಯಾಂಗ್‌ಗಳ ಕೈಗೆ ಸಿಕ್ಕರೆ ರಾಜಕಾರಣಿಗಳ ಜೀವನ ಮುಗಿಯಿತು. ‘ಸತ್ತಂತಿಲ್ಲ, ಬದುಕಿದಂತಿಲ್ಲ’ ಎನ್ನುವಂತಾಗುತ್ತದೆ’ ಇದೇ ಕಾರಣಕ್ಕೆ ನಾನು ಹೆಣ್ಣುಮಕ್ಕಳ ಜೊತೆ ಮಾತನಾಡಲು ಯೋಚಿಸುತ್ತಿದ್ದೇನೆ. ಫೋನ್ ಬಂದರೆ ನನ್ನ ಸಿಬ್ಬಂದಿಯೇ ಮಾತನಾಡುತ್ತಾರೆ. ನಂತರ ನಾನು ಮಾತನಾಡುತ್ತೇನೆ. ಸೆಲ್ಫಿ ಅಥವಾ ಸಿಂಗಲ್ ಪೋಟೋ ಬೇಕೆಂದರೆ ಇಲ್ಲ. ಏನಿದ್ದರೂ ಗ್ರೂಪ್ ಫೋಟೋ ಮಾತ್ರ. ಆ ಸ್ಥಳದಲ್ಲಿ ಯಾರು ಇರುತ್ತಾರೋ ಅವರೊಂದಿಗೆ ಗುಂಪಾಗಿ ಫೋಟೋಗೆ ತೆಗೆಸಿಕೊಳ್ಳುತ್ತೇನೆ. ಕಚೇರಿಯಲ್ಲಿ ಮಾತನಾಡುವುದಿದ್ದರೆ ಸಿಬ್ಬಂದಿ ಮತ್ತು ಸಂಬಂಧಿಸಿದವರ ಜೊತೆಗೆ ಕುಳಿತುಕೊಳ್ಳುತ್ತೇನೆ ಎಂದು ಹೇಳಿಕೊಂಡರು.
ಪರಿಹಾರದ ರೂಟ್ ಕಡಿ ಕರ್ಕೊಂಡು ಹೋಗ್ರಿ!
ಈ ಬಾರಿ ತೊಗರಿ ಕಣಜ ಕಲಬುರಗಿಯೊಳ್ಗ ಹಾಹಾಕಾರ, ಡ್ರೈ ರೂಟ್ ರಾಟ್ (ಒಣ ಕಾಂಡ ಕೊಳೆ ರೋಗ) ಅಂತಹ ರೋಗಬಾಧೆಗೆ ಬೆಳೆದು ನಿಂತ ತೊಗರಿ ಫಸಲು ಕಾಯಿ ಕಟ್ಟೋ ಹಂತದೊಳ್ಗೇ ಒಣಗಿ ನಿಂತು ಅನ್ನದಾತನ ಬದುಕೇ ಬರ್ಬಾದ್ ಆಗಿದೆ.
ಈ ಹೊಸ ನಮೂನೆ ರೋಗದ ಬಗ್ಗೆ ಅರಿಯದ ರೈತರೆಲ್ಲಾರೂ 800 ಕೋಟಿ ರು ಪರಿಹಾರ ಪ್ಯಾಕೇಜ್‌ಗಾಗಿ ಆಗ್ರಹಿಸಿ ಎತ್ತು ಬಂಡಿ, ಟ್ರಾಕ್ಟರ್ ಸಮೇತ ಡಿಸಿ ಕಚೇರಿ ನುಗ್ಗಿ 3 ದಿನ ಅಲ್ಲೇ ಠಿಕಾಣಿ ಹಾಕಿದ್ರೆನ್ನಿ!
ಮೂರು ದಿನಗಳ ನಂತರ ತೊಗರಿ ರೈತರೊಂದಿಗೆ ಮಾತುಕತೆಗೆ ಮುಂದಾದ ಕಲಬುರಗಿ ಡಿಸಿ ಫೌಜಿಯಾ ತರನ್ನುಮ್, ಕಳೆದ ಬಾರಿ ನೆಟೆ ರೋಗ ಕಾಡಿತ್ತು, ಹಸಿಬರ ಘೋಷಣೆಯಾಗಿತ್ತು, ಪರಿಹಾರ ಸಿಕ್ತು, ಈ ಬಾರಿ ಬರ ಇಲ್ಲ, ನೆಟೆ ಜಾಗದಾಗ ಡ್ರೈ ರೂಟ್ ರಾಟ್ ರೋಗ ಕಾಡಿದೆ... ಎಂದು ಇನ್ನೂ ಏನೇನೋ ಹೇಳೋದ್ರಲ್ಲಿದ್ದಾಗಲೇ ಅವರ ಮಾತನ್ನ ಅರ್ಧಕ್ಕೆ ತುಂಡರಿಸಿದ ರೈತರು, ಮೇಡಮ್ಮೋರೆ, ತುಸು ಕೇಳ್ರಿಲ್ಲಿ, ಡ್ರೈರೂಟ್, ನೆಟೆ ಇವೆರಡೂ ರೋಗ ಹೌದಲ್ರಿ? ಈ ರೋಗ ಅಟಕಾಯಿಸಿಕೊಳ್ಳಕ್ಕ ರೂಟ್ ಯಾವ್ದೇ ಇರ್ಲಿರಿ, ನಮ್ಗ ಮಾತ್ರ ಪರಿಹಾರ ಪ್ಯಾಕೇಜ್ ಸಿಗೋ ರೂಟ್‌ನಿಂದ ದೂರ ತಳ್ಳಬ್ಯಾಡ್ರಿ ಅಂದಾಗ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಎಸಿ ಸಾಹಿತ್ಯಾ ಸೇರಿದಂತೆ ಅಲ್ಲಿರೋ ಅಧಿಕಾರಿಗಳೆಲ್ಲಾರೂ ರೈತರ ಜಾಣತನಕ್ಕೆ ದಂಗಾದ್ರೆನ್ನಿ.
ಇದನ್ನೂ ಓದಿ: ಕರ್ನಾಟಕ ಬಂದ್: ಯಾವುದೇ ಅಹಿತರಕರ ಘಟನೆ ಆಗೋಕೆ ನಾವು ಬಿಡೋಲ್ಲ: ಗೃಹ ಸಚಿವ
ಇಷ್ಟಕ್ಕ ಸುಮ್ಮನಾಗದ ರೈತರು, ನೀವು ಕಲಬುರಗಿ ಮಗಳು ಇದ್ಹಂಗ, ಚೆಂದಾಗಿ ಇಲೆಕ್ಷನ್ ಮಾಡೀರಂತ, ಜನಪರ ಡಿಸಿ ಇದ್ದೀರಂತ. ಸರಕಾರಕ್ಕ ನಮ್ಮ ಸಂಕಷ್ಟ ಮನವರಿಕೆ ಮಾಡಿಕೊಟ್ಟು ಪರಿಹಾರ ಕೊಡಸಿ ನೋಡ್ರಿ, ಎಲ್ಲಾರೂ ಸೇರ್ಕೊಂಡು ನಿಮಗೊಂದು ಪ್ರಶಸ್ತಿ ಕೊಟ್ಟು ಸನ್ಮಾನ ಮಾಡ್ತೀವಿ ಅನ್ನಬೇಕೆ?