AI ಮತ್ತು ಚಾಟ್‌ಬಾಟ್‌ಗಳಿಂದ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಡಾ। ಹುಲಿಕುಂಟೆ ಮೂರ್ತಿ ಕರೆ ನೀಡಿದರು. ಲೇಖಕಿಯರ ಸಮ್ಮೇಳನದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಮಹಿಳಾ ಬರಹಗಳ ಕುರಿತು ಚರ್ಚಿಸಲಾಯಿತು.
ಬೆಂಗಳೂರು (ಮಾ.24): ಆಧುನಿಕ ತಂತ್ರಜ್ಞಾನದ ಜೊತೆ ಸೇರಿಕೊಂಡಿರುವ ಎಐ, ಚಾಟ್‌ಬಾಟ್‌ಗಳಿಂದ ಮಹಿಳೆಯರೇ ಹೆಚ್ಚು ಅನ್ಯಾಯಕ್ಕೆ ಗುರಿಯಾಗುತ್ತಿದ್ದು, ಇದರ ವಿರುದ್ಧ ಮಹಿಳೆಯರೇ ಧ್ವನಿ ಎತ್ತಿ ಹೋರಾಡಬೇಕಿದೆ ಎಂದು ಡಾ। ಹುಲಿಕುಂಟೆ ಮೂರ್ತಿ ಹೇಳಿದರು.
ಭಾನುವಾರ ನಗರದಲ್ಲಿ ನಡೆದ ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ‘ ಆಧುನಿಕತೆ ಮತ್ತು ಅನ್ವೇಷಣಾ ಕ್ರಮಗಳು’ ಗೋಷ್ಠಿಯಲ್ಲಿ ‘ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಮಹಿಳಾ ಬರಹಗಳು ಕುರಿತು’ ಮಾತನಾಡಿದರು.
ಹತ್ತು ವರ್ಷಗಳಲ್ಲಿ ಎರಡು ಚಿತ್ರಗಳನ್ನು ಸೇರಿಸುವಂತ ಕ್ಲೋನಿಂಗ್ ಮೂಲಕ ಸ್ತ್ರೀಯನ್ನು ಆಂಗಿಕವಾಗಿ ಅವಮಾನಿಸಲಾಗುತ್ತಿದ್ದರೆ ಈಗ ಡೀಪ್ ಫೇಕ್‌ನಿಂದ ಈ ಕೆಲಸ ಮಾಡಲಾಗುತ್ತಿದೆ. ಯುವ ಸಮುದಾಯ ಇದನ್ನು ಸಾಕಷ್ಟು ವಿರೋಧಿಸುತ್ತಿದೆ. ಈಚೆಗೆ ‘ಅಲ್ಗರಿದಮಿಕ್ ಜಸ್ಟೀಸ್ ಲೀಗ್’ ಸಂಘಟನೆಯ ಮೂಲಕ ಹೋರಾಟ ನಡೆದ ಉದಾಹರಣೆಯಿದೆ ಎಂದರು.
ಇದನ್ನೂ ಓದಿ: ‘ಗುಡ್ ಗರ್ಲ್ ಸಿಂಡ್ರೋಮ್’ನಿಂದ ಸ್ತ್ರೀಯರು ಹೊರಬನ್ನಿ: ಖ್ಯಾತ ಲೇಖಕಿ ಬಾನು ಮುಷ್ತಾಕ್
‘ಮಹಿಳಾ ಬರಹಗಳು ಮತ್ತು ಸ್ವ ನಿರ್ವಹಣೆ’ ಕುರಿತು ಮಾತನಾಡಿದ ಡಾ। ಎಚ್.ಎಸ್.ಅನುಪಮಾ, ಲೇಖಕಿಯರು ತಮ್ಮ ಬರಹಗಳನ್ನು ಪುರುಷರ ಹೆಸರಿನಲ್ಲಿ ಪ್ರಕಟಿಸಿದ ಕಾಲವನ್ನು ಎದುರಿಸಿದ್ದುಂಟು. ಇದೀಗ ನಿರ್ಭಿಡೆಯಿಂದ ತಮ್ಮ ಸಂಪೂರ್ಣ ಅಸ್ತಿತ್ವ ತೋರ್ಪಡಿಸಿಕೊಂಡು, ತಮ್ಮ ಐಡಿಯಾಲಜಿ ಬಗ್ಗೆ ಹೇಳಿಕೊಂಡು ಬರೆಯುವ ಹಂತ ತಲುಪಿದ್ದೇವೆ ಎಂದರು.
ಮುಖ್ಯಮಂತ್ರಿಗಳ ಆಪ್ತ ಸಲಹೆಗಾರ ಡಾ। ವೆಂಕಟೇಶಯ್ಯ ನೆಲ್ಲುಕುಂಟೆ ಆಶಯ ಮಾತನಾಡಿ, ಆಧುನಿಕತೆಯ ನಿರಂತರವಾಗಿ ಅನ್ವೇ಼ಷಿಸುವ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು. ಅವರು ತುರ್ತು ಅಗತ್ಯಕ್ಕೆ ಆದ್ಯತೆ ನೀಡುತ್ತಲೇ ಭವಿಷ್ಯ ರೂಪಿಸುವ ಕಡೆಗೆ ಯೋಚನೆ ಮಾಡುತ್ತಾರೆ ಎಂದರು.
ಡಾ। ಸಬಿತಾ ಬನ್ನಾಡಿ ಅವರು ‘ಮಹಿಳಾ ಸಂಕಥನಗಳು ಹಾಗೂ ಹೊಸ ಹೊರಳುಗಳು’ ಕುರಿತು ವಿಚಾರ ಮಂಡಿಸಿದರು.