ಉಚಿತ ರೈಲು ಪ್ರಯಾಣಕ್ಕೆ ಮುಗಿಬಿದ್ದ ಜನ: ಐಷಾರಾಮಿ ಸೌಕರ್ಯಕ್ಕೆ ಫಿದಾ

By Govindaraj S  |  First Published Nov 12, 2022, 9:24 AM IST

ಮೊದಲ ದಿನ ಬೆಂಗಳೂರಿನಿಂದ ಚೆನ್ನೈನತ್ತ ಸಾಗಿದ ‘ವಂದೇ ಭಾರತ್‌’ ರೈಲನ್ನು ಈ ಮಾರ್ಗದ 45 ನಿಲ್ದಾಣಗಳಲ್ಲಿ ಸ್ವಾಗತಿಸಿದ್ದು, ವಿಶೇಷ ಉಚಿತ ಪ್ರಯಾಣದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಹೈಸ್ಪೀಡ್‌ ರೈಲಿನಲ್ಲಿ ಸಂಚಾರ ನಡೆಸಿ ಸಂತಸಪಟ್ಟರು. 


ಬೆಂಗಳೂರು (ನ.12): ಮೊದಲ ದಿನ ಬೆಂಗಳೂರಿನಿಂದ ಚೆನ್ನೈನತ್ತ ಸಾಗಿದ ‘ವಂದೇ ಭಾರತ್‌’ ರೈಲನ್ನು ಈ ಮಾರ್ಗದ 45 ನಿಲ್ದಾಣಗಳಲ್ಲಿ ಸ್ವಾಗತಿಸಿದ್ದು, ವಿಶೇಷ ಉಚಿತ ಪ್ರಯಾಣದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಹೈಸ್ಪೀಡ್‌ ರೈಲಿನಲ್ಲಿ ಸಂಚಾರ ನಡೆಸಿ ಸಂತಸಪಟ್ಟರು. ಬೆಳಗ್ಗೆ 10.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಚೆನ್ನೈನತ್ತ ರೈಲು ತೆರಳಿತು. ರೈಲಿನ ಮೊದಲ ಸಂಚಾರದ ಹಿನ್ನೆಲೆ ಉಚಿತವಾಗಿ ಚೆನ್ನೈವರೆಗೂ ವಿಶೇಷ ಪ್ರಯಾಣ ಮಾಡಲು ರೈಲ್ವೆ ಇಲಾಖೆ ಅನುವು ಮಾಡಿಕೊಟ್ಟಿತ್ತು. 

ಈ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ ವರ್ಗ, ರೈಲ್ವೆ ಭದ್ರತಾ ಪಡೆ, ಪೊಲೀಸ್‌ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತರು, ಶಾಲಾ ಮಕ್ಕಳು, ಸ್ಥಳೀಯ ಆಡಳಿತ ಸಮಿತಿಗಳ ಸದಸ್ಯರು ರೈಲಿನಲ್ಲಿ ಸಂಚಾರ ನಡೆಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಚೆನ್ನೈ ಸೆಂಟ್ರಲ್‌ ನಿಲ್ದಾಣದವರೆಗೂ ಮಾರ್ಗ ಮಧ್ಯೆ ಬರುವ 45 ರೈಲು ನಿಲ್ದಾಣಗಳಲ್ಲಿಯೂ ಸ್ಥಳೀಯರು ರೈಲನ್ನು ಸ್ವಾಗತಿಸಿದರು. ರೈಲ್ವೆ ಅಧಿಕಾರಿಗಳು, ಲೋಕೊ ಪೈಲಟ್‌ಗಳು (ಚಾಲಕರು) ಸ್ಥಳೀಯರಿಂದ ಹೂಗುಚ್ಛ ಸ್ವೀಕರಿಸಿದರು. ಅಂತಿಮವಾಗಿ ಸಂಜೆ 6 ಗಂಟೆಗೆ ರೈಲು ಚೆನ್ನೈ ಸೆಂಟ್ರಲ್‌ ನಿಲ್ದಾಣ ತಲುಪಿತು.

Tap to resize

Latest Videos

Bengaluru: ಬೆಳ್ಳಂಬೆಳಗ್ಗೆ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ, ತುಂತುರು ಮಳೆ

1509 ಮಂದಿ ಪ್ರಯಾಣ: ಮೊದಲ ದಿನ ರೈಲಿನಲ್ಲಿ 1,509 ಮಂದಿ ಪ್ರಯಾಣಿಸಿದ್ದಾರೆ. ಚೆನ್ನೈ ಮಾರ್ಗದ ಮೊದಲ ನಿಲ್ದಾಣ ಬೆಂಗಳೂರು ದಂಡು (ಕಂಟೋನ್ಮೆಂಟ್‌) ನಿಲ್ದಾಣದಿಂದ ರೈಲ್ವೆ ಅಧಿಕಾರಿ, ಸಿಬ್ಬಂದಿ ವರ್ಗ ರೈಲನ್ನು ಹತ್ತಿದರು. ಬಳಿಕ ಬಂದ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯ್ತಿಗಳ ಸದಸ್ಯರು ರೈಲನ್ನೇರಿ ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣದವರೆಗೂ ಪ್ರಯಾಣ ಮಾಡಿ ಸಂತಸಪಟ್ಟರು. ಮೊದಲ ದಿನದ ಸಂಚಾರ ಹಿನ್ನೆಲೆ ರೈಲಿನಲ್ಲಿ ಪ್ರಯಾಣಿಸಿದವರಿಗೆ ಸಿಹಿ ತಿಂಡಿ ಪೊಟ್ಟಣ ನೀಡಲಾಯಿತು.

ಸೆಲ್ಫಿಗೆ ಮುಗಿಬಿದ್ದರು: ನೂತನ ರೈಲು ಹತ್ತಿದ ಪ್ರಯಾಣಿಕರು ಅತ್ಯಾಕರ್ಷಕ ವಿನ್ಯಾಸ, ಆಸನ ವ್ಯವಸ್ಥೆ, ತಾಂತ್ರಿಕ ಸೌಲಭ್ಯಗಳನ್ನು ಕಂಡು ಅಚ್ಚರಿಪಟ್ಟರು. ಪ್ರತಿ ನಿಲ್ದಾಣದಲ್ಲಿ ಪ್ರಯಾಣಿಕರು ರೈಲಿನ ಮುಂಭಾಗ ಫೋಟೋ ಕ್ಲಿಕ್ಕಿಸಿಕೊಂಡರು. ಒಳಭಾಗದಲ್ಲಿನ ಪ್ರಯಾಣಿಕರು 180 ಡಿಗ್ರಿ ತಿರುಗುವ ಆಸನಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ (ಎ.ಸಿ) ಕುಳಿತು ಆಕರ್ಷಕ ಗಾಜಿನ ಕಿಟಕಿಗಳಲ್ಲಿ ಪರಿಸರವನ್ನು ಕಣ್ತುಂಬಿಕೊಂಡರು. ಜತೆಗೆ ದೇಶದ ಅತಿ ವೇಗದ ರೈಲಿನಲ್ಲಿ ಪ್ರಯಾಣಿಸಿದ ಅನುಭವನ್ನು ಫೋಟೋ/ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಕಾಪಿಟ್ಟುಕೊಂಡರು.

ಸರ್ಕಾರಿ ಶಾಲಾ ಮಕ್ಕಳ ಸಂಚಾರ: ಬೆಂಗಳೂರು ಚೆನ್ನೈ ಮಾರ್ಗದ ಕೆಲ ರೈಲು ನಿಲ್ದಾಣದಲ್ಲಿ ಅಲ್ಲಿನ ಸ್ಥಳೀಯ ಸರ್ಕಾರಿ ಶಾಲೆಗಳ ಮಕ್ಕಳನ್ನು ವಂದೇ ಭಾರತ್‌ ರೈಲಿನ ಸಂಚಾರಕ್ಕೆ ಕರೆತರಲಾಗಿತ್ತು. ಈ ಮಕ್ಕಳು ರೈಲಿನಲ್ಲಿ ಪ್ರಯಾಣಿಸಿ ಅಚ್ಚರಿ, ಸಂತಸ ವ್ಯಕ್ತಪಡಿಸಿದರು. ಮಕ್ಕಳಿಗೆ ರೈಲಿನ ಸೌಲಭ್ಯಗಳನ್ನು ಪರಿಚಯಿಸಲಾಯಿತು. ಬಳಿಕ ಸಿಹಿ ತಿಂಡಿ ಪೊಟ್ಟಣದ ಜತೆ ಪುಸ್ತಕ, ಪೆನ್‌ ಒಳಗೊಂಡ ಕಿಟ್‌ಗಳನ್ನು ವಿತರಿಸಲಾಯಿತು.

ಹೈಸ್ಪೀಡ್‌ ರೈಲಿನ ವಿಶೇಷತೆ
*ಒಟ್ಟು 16 ಬೋಗಿಗಳಿದ್ದು, ಪ್ರತಿಯೊಂದು ಬೋಗಿಯಲ್ಲಿಯೂ ನಾಲ್ಕು ತುರ್ತು ಕಿಟಕಿಗಳಿವೆ. ಬೋಗಿಯ ಹೊರಗಡೆ ನಾಲ್ಕು ಕ್ಯಾಮರಾಗಳಿವೆ.

*ಅವಘಡ ತಪ್ಪಿಸುವ ವ್ಯವಸ್ಥೆಯನ್ನು ಹೊಂದಿದೆ. ಚಾಲಕರಿಗೆ ಧ್ವನಿಯನ್ನು ರೆಕಾರ್ಡ್‌ ಮಾಡುವ ರಕ್ಷಣಾ ಸಂಪರ್ಕ ವ್ಯವಸ್ಥೆ ಇದೆ.

*ಟಚ್‌ ಫ್ರೀ ಸೌಲಭ್ಯವಿರುವ ಶೌಚಾಲಯಗಳಿದ್ದು, ಇವುಗಳಲ್ಲಿ ಏರೋಸಾಲ್‌ ಆಧಾರಿತ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯ ಉತ್ತಮ ಅಗ್ನಿ ಸುರಕ್ಷತಾ ಕ್ರಮವಿದೆ.

*650 ಮಿ.ಮೀ. ಎತ್ತರದವರೆಗೆ ಪ್ರವಾಹ ತಡೆದುಕೊಳ್ಳಬಲ್ಲದು. ರೈಲಿನ ಕೆಳ ಭಾಗದಲ್ಲಿ ಸ್ಲಂಗ್‌ಎಲೆಕ್ಟ್ರಿಕಲ್‌ ಉಪಕರಣಗಳೊಂದಿಗೆ ಪ್ರವಾಹ ತಡೆ ವ್ಯವಸ್ಥೆ ಇದ್ದು, ವಿದ್ಯುತ್‌ ವಿಫಲವಾದಲ್ಲಿ ಪ್ರತಿಯೊಂದು ಕೋಚ್‌ನಲ್ಲಿ ನಾಲ್ಕು ತುರ್ತು ದೀಪಗಳಿವೆ.

*32 ಇಂಚಿನ ಎಲ್‌ಸಿಡಿ ಟಿವಿ ಮತ್ತು ಪ್ರಯಾಣಿಕರ ಮಾಹಿತಿ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಹೊಂದಿವೆ.

*ಎಲ್ಲ ದರ್ಜೆ ಪ್ರಯಾಣಿಕರಿಗೆ 180 ಡಿಗ್ರಿ ತಿರುಗುವ ಆಸನ ಸೌಲಭ್ಯ ಒದಗಿಸಲಾಗಿದೆ. ವೈ-ಫೈ ವ್ಯವಸ್ಥೆ ಇದೆ.

*ಕೇವಲ 2 ನಿಮಿಷ 20 ಸೆಕೆಂಡ್‌ಗಳಲ್ಲಿ ರೈಲು ಪ್ರತಿ ಗಂಟೆಗೆ ಶೂನ್ಯದಿಂದ 160 ಕಿ.ಮೀ. ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಟಿಕೆಟ್‌ ಬುಕಿಂಗ್‌ ಆರಂಭ: ವಂದೇ ಭಾರತ್‌ ರೈಲು ಶನಿವಾರದಿಂದ ವೇಳಾಪಟ್ಟಿಯಂತೆ ಪ್ರಯಾಣಿಕರ ಸಂಚಾರ ಆರಂಭಿಸುತ್ತಿದೆ. ಈ ರೈಲು ಬುಧವಾರ ಹೊರತುಪಡಿಸಿ ಉಳಿದ ಆರು ದಿನಗಳ ಕಾಲ ಚೆನ್ನೈ- ಮೈಸೂರು ನಡುವೆ ಓಡಾಟ ನಡೆಸಲಿದೆ. ಮಾರ್ಗ ಮಧ್ಯೆ ಕಟ್ಪಾಡಿ ಜಂಕ್ಷನ್‌ ಮತ್ತು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಂಕ್ಷನ್‌ನಲ್ಲಿ ನಿಲುಗಡೆಯಾಗಲಿದೆ. ಈಗಾಗಲೇ ಐಆರ್‌ಸಿಟಿಸಿ ವೆಬ್‌ಸೈಟ್‌, ಆ್ಯಪ್‌ಗಳಲ್ಲಿ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ. 

ಸ್ಯಾನಿ​ಟೈ​ಸರ್‌ ಬಾಟ​ಲಿ ಸ್ಫೋಟ: ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥ

ಬೆಳಿಗ್ಗೆ 5.50ಕ್ಕೆ ಚೆನ್ನೈ ಸೆಂಟ್ರಲ್‌ ನಿಲ್ದಾಣದಿಂದ ಹೊರಟು ಕಟ್ಪಾಡಿ ಜಂಕ್ಷನ್‌ (ಬೆಳಗ್ಗೆ 7.21 ರಿಂದ 7.25ರವರೆಗೂ ನಿಲುಗಡೆ), ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಂಕ್ಷನ್‌ (ಬೆಳಗ್ಗೆ 10.20 ರಿಂದ 10.30ರವರೆಗೂ ನಿಲುಗಡೆ) ಮೂಲಕ ಮೈಸೂರು ಜಂಕ್ಷನ್‌ಗೆ ಮಧ್ಯಾಹ್ನ 12.20ಕ್ಕೆ ತಲುಪಲಿದೆ. ಮಧ್ಯಾಹ್ನ 1.05ಕ್ಕೆ ಮೈಸೂರಿನಿಂದ ಹೊರಟು ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಂಕ್ಷನ್‌ (ಮಧ್ಯಾಹ್ನ 2.55 ರಿಂದ 3ರವರೆಗೂ) , ಕಟ್ಪಾಡಿ ಜಂಕ್ಷನ್‌ (5.36 ರಿಂದ 5.40ರವರೆಗೂ) ರಾತ್ರಿ 7.30ಕ್ಕೆ ಚೆನ್ನೈ ಸೆಂಟ್ರಲ್‌ ತಲುಪಲಿದೆ. 

ಈ ರೈಲಿನಲ್ಲಿ ಮಕ್ಕಳ ಟಿಕೆಟ್‌ ಇಲ್ಲ. ಜತೆಗೆ ಯಾವುದೇ ರಿಯಾಯಿತಿಗೆ ಅವಕಾಶವಿಲ್ಲ. ವಯಸ್ಕರಿಗೆ ಇರುವಂತೆ ಪೂರ್ಣ ಟಿಕೆಟ್‌ ಎಲ್ಲರಿಗೂ ಅನ್ವಯವಾಗಲಿದೆ. ಶತಾಬ್ದಿ ರೈಲುಗಳಲ್ಲಿರುವಂತೆ ಮುಂಗಡ ಕಾಯ್ದಿರಿಸುವ, ರದ್ದುಪಡಿಸುವ, ರೀಫಂಡ್‌ ಮಾಡುವ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

click me!