1998ರಲ್ಲಿ ಮೋದಿ ಹಿಮಾಚಲದ ಪ್ರಭಾರಿ ಆಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 33 ಸ್ಥಾನ ಗೆದ್ದವು. ಒಬ್ಬ ಪಕ್ಷೇತರ ಶಾಸಕನನ್ನು ಅಪಹರಿಸಿ ಕಾಂಗ್ರೆಸ್‌ನ ವೀರಭದ್ರ ಸಿಂಗ್ ಮುಖ್ಯಮಂತ್ರಿಯಾದರು. ಆದರೆ ಅಡುಗೆಯವನೊಬ್ಬನ ಬಳಿ ಟಿಶ್ಯೂ ಮೇಲೆ ಸಂದೇಶ ಕಳಿಸಿ ಅದೇ ಶಾಸಕ ಕಾರಿನಿಂದ ಜಿಗಿದು ಬಂದು ಬಿಜೆಪಿ ಕ್ಯಾಂಪ್ ಸೇರುವಂತೆ ಮೋದಿ ಮಾಡಿದ್ದರು. ನಂತರ ಬಿಜೆಪಿಯ ಪ್ರೇಮ್‌ಕುಮಾರ್ ಧುಮಾಲ್ ಸಿಎಂ ಆದರು.
India Gate Column by Prashant Natu
2018ರಲ್ಲಿ ಒಂದು ವೇಳೆ ಸಿದ್ದರಾಮಯ್ಯ ಅನಗತ್ಯ ಹಿಂದೂ ವಿರೋಧದ ಹೇಳಿಕೆಗಳನ್ನು ನೀಡುವ ಗೊಡವೆಗೆ ಹೋಗದೆ 5 ವರ್ಷದ ಆಡಳಿತದ ಸ್ಥಿರತೆ, ಕಳಂಕ ರಹಿತ ಆಡಳಿತ ಇಷ್ಟನ್ನೇ ಮುಖ್ಯ ಪ್ರಚಾರ ವಿಷಯ ಮಾಡಿಕೊಂಡು ಮತದಾರರ ಬಳಿ ಹೋಗಿದ್ದರೆ ಇನ್ನೂ 15 ಸೀಟು ಗೆಲ್ಲುತ್ತಿದ್ದರು ಎಂದು ಕಾಂಗ್ರೆಸ್ ಹೈಕಮಾಂಡ್ ತರಿಸಿಕೊಂಡಿದ್ದ ವರದಿಗಳಲ್ಲಿ ಹೇಳಲಾಗಿತ್ತು. ಒಂದು ಅರ್ಥದಲ್ಲಿ ಬಿಜೆಪಿ ಹಿಂದೂ ವಿರೋಧದ ಇಳಿಜಾರಿನಲ್ಲಿ ಸಿದ್ದು ಅವರನ್ನು ಜಗ್ಗುತ್ತಿತ್ತು. ಸ್ವತಃ ವೈಚಾರಿಕ ಉತ್ಸಾಹಿ ಸಿದ್ದು ಟಿಪ್ಪು ಜಯಂತಿ, ಮೀನು ತಿಂದು ದೇವಸ್ಥಾನಕ್ಕೆ ಹೋಗುವುದು.
ಗೋಮಾಂಸ ತಿಂದರೆ ತಪ್ಪೇನು ಎಂದು ಮಾತನಾಡಿ ಬಿಜೆಪಿ ಬಯಸಿದ್ದ ಇಳಿಜಾರಿನಲ್ಲಿ ಸಾಗುತ್ತಾ ವೇಗವಾಗಿ ಹೋದರು. ಸಿದ್ದು ನೀಡಿದ್ದ ಒಳ್ಳೆಯ ಆಡಳಿತ ಪಕ್ಕಕ್ಕೆ ಸರಿಯಿತು. ಸುನೀಲ್ ಕನ್ನುಗೋಲು ಕಾಂಗ್ರೆಸ್ ರಣತಂತ್ರಗಾರರಾಗಿ ಬಂದ ಮೇಲೆ ಡಿ.ಕೆ.ಶಿವಕುಮಾರ್‌ಗೆ ನೀಡಿದ ಮೊದಲ ಸಲಹೆ ‘ಹಿಜಾಬ್, ಹಲಾಲ್, ಬುರ್ಖಾ ಈ ವಿಷಯಗಳ ಬಗ್ಗೆ ಮಾತಾಡಬೇಡಿ’ ಎಂದು. ಅದರ ಮುಖ್ಯ ಕಾರಣ ಮುಸ್ಲಿಂ ಮತದಾರರು ಹೇಗೂ ಕಾಂಗ್ರೆಸ್ ಜೊತೆ ಇದ್ದಾರೆ, ಅವರನ್ನು ಇನ್ನಷ್ಟುಓಲೈಸಲು ಹೋಗಿ ಕಾಂಗ್ರೆಸ್ ಪರ ಒಲವು ಇರುವ ಹಿಂದೂ ಮತದಾರರನ್ನು ದೂರ ಮಾಡಿಕೊಳ್ಳುವುದು ಬೇಡ ಎಂದು. ಈಗ ಸತೀಶ್ ಜಾರಕಿಹೊಳಿ ಪುನರಪಿ ಅದೇ ಇಳಿಜಾರಿನಲ್ಲಿ ಬಿದ್ದಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಲಾಭ ನಯಾ ಪೈಸೆ ಇಲ್ಲ, ಆದರೆ ನಷ್ಟವೇ ಜಾಸ್ತಿ.
India Gate: ಡಿಕೆಶಿ ಮರಳಿ ಬನ್ನಿ ಫ್ರೆಂಡ್ಸ್ ರಾಗದ ಹಿಂದೆ..!
ಕಾಂಗ್ರೆಸ್ ಮಾಡಿದ್ದ ದಿಲ್ಲಿ ತಪ್ಪುಗಳು: ಹಿಂದುತ್ವ ಇರಲಿ ಅಥವಾ ಹಿಂದೂ ಅವಹೇಳನ ಇರಲಿ ಯಾವುದೇ ಅತಿರೇಕಗಳನ್ನು ಭಾರತೀಯ ಮತದಾರರು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಅನೇಕ ಬಾರಿ ಸಿದ್ಧವಾಗಿದೆ. 1992ರಲ್ಲಿ ಬಾಬರಿ ಮಸೀದಿ ಬಿದ್ದ ನಂತರ ಉತ್ತರ ಪ್ರದೇಶದ ಮತದಾರರೇ ಬಿಜೆಪಿಗೆ ಬಹುಮತ ಕೊಟ್ಟಿರಲಿಲ್ಲ. ಅದೇ ರೀತಿ ಮುಲಾಯಂ, ಲಾಲು ಪ್ರಭಾವ ಕುಂಠಿತವಾಗಲು ಪ್ರಮುಖ ಕಾರಣ ಅತಿಯಾದ ಮುಸ್ಲಿಂ ತುಷ್ಟೀಕರಣ. 2014ರ ನಂತರ ಶುರುವಾದ ಕಾಂಗ್ರೆಸ್ ಶಿಥಿಲತೆಗೆ ಭ್ರಷ್ಟಾಚಾರದ ಆರೋಪಗಳ ಜೊತೆ ಹಿಂದೂ ವಿರೋಧದ ದೊಡ್ಡ ಕಾರಣವೂ ಕೂಡ ಇದೆ.
ದಿಗ್ವಿಜಯ ಸಿಂಗ್ ಮಾತು ಕೇಳಿಕೊಂಡು ಹಿಂದೂ ಭಯೋತ್ಪಾದನೆ ಎಂಬ ಹೊಸ ಶಬ್ದವನ್ನು ಕೋಶದಿಂದ ಹುಡುಕಿ ತಂದಿದ್ದರಿಂದ ಹಿಡಿದು ಮುಸ್ಲಿಮರಿಗೆ ತುಂಬಾ ಹತ್ತಿರದ ಪಾರ್ಟಿ ಎಂಬ ಹಣೆ ಪಟ್ಟಿಹಚ್ಚಿಕೊಂಡಿದ್ದು ಕೂಡ ಕಾಂಗ್ರೆಸ್‌ನ ಇವತ್ತಿನ ದುಸ್ಥಿತಿಗೆ ಮುಖ್ಯ ಕಾರಣ. ಸೋನಿಯಾ ಗಾಂಧಿ ಆಪ್ತರಾಗಿದ್ದ ಎ.ಕೆ.ಆ್ಯಂಟನಿ ಈ ಎಲ್ಲ ತಪ್ಪುಗಳನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ನೀಡಿದ್ದ ವರದಿಯಲ್ಲಿ ಉಲ್ಲೇಖಿಸಿದ್ದರು. ಇದನ್ನು ಸರಿಪಡಿಸಲು ಅಂತಲೇ ಅಲ್ಲವೇ ರಾಹುಲ್ ಗಾಂಧಿ ಗುಜರಾತ್‌ನಲ್ಲಿ ಮಂದಿರ ಯಾತ್ರೆ, ಮಧ್ಯಪ್ರದೇಶದಲ್ಲಿ ಜನಿವಾರಧಾರಿ ಬ್ರಾಹ್ಮಣ ಎಂದು ತಿರುಗಿದ್ದೇ ತಿರುಗಿದ್ದು. ಸಮಸ್ಯೆ ಏನಪ್ಪ ಅಂದರೆ ನೂರು ಪ್ರಾಣಿ ತಿಂದು ತೀರ್ಥಯಾತ್ರೆಗೆ ಹೋದರೆ ದಯಾಮಯಿ ದೇವರು ಕ್ಷಮಿಸಿ ಬಿಡಬಹುದೋ ಏನೋ, ಆದರೆ ಮತದಾರರು ಕ್ಷಮಿಸಬೇಕಲ್ಲ.
ಖರ್ಗೆಗೆ ‘ಹೊಸ ಆಫೀಸು’: ಕಳೆದ 24 ವರ್ಷಗಳಲ್ಲಿ ಭದ್ರತೆ ಕಾರಣದಿಂದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 24 ಅಕ್ಬರ್ ರೋಡ್‌ನ ಕಾಂಗ್ರೆಸ್ ಅಧ್ಯಕ್ಷರ ಕಚೇರಿಗೆ ಬಂದದ್ದೇ ಕಡಿಮೆ. ಯಾರೇ ಬಂದರೂ 10 ಜನಪಥ್‌ಗೆ ಕರೆಸಿಕೊಂಡು ಮಾತನಾಡುತ್ತಿದ್ದ ಸೋನಿಯಾ ಗಾಂಧಿ ಕಾಲದಲ್ಲಿ ಅಧ್ಯಕ್ಷರ ಕಚೇರಿ ಬಾಗಿಲಿಗೆ ಸದಾ ಬೀಗ ಇರುತ್ತಿತ್ತು. ಸೋನಿಯಾ ಭದ್ರತೆಗೆ ಎಸ್‌ಪಿಜಿ ಇರುವುದರಿಂದ ಬಾಗಿಲಿಗೆ ಕಡ್ಡಾಯವಾಗಿ ಸೀಲು ಬೀಳುತ್ತಿತ್ತು. ಹೀಗಾಗಿ ಮೊನ್ನೆ ಖರ್ಗೆ ಅವರು ಮೊದಲ ಬಾರಿ ಕಚೇರಿಗೆ ಹೋದಾಗ ಪೂರ್ತಿ ಕೋಣೆ ಧೂಳಿನಿಂದ ತುಂಬಿತ್ತು. ಧೂಳು ಮಯವಾಗಿದ್ದ ಸೋಫಾಗಳನ್ನು ಸ್ವಚ್ಛ ಮಾಡಿಸಲು ಕಳುಹಿಸಲಾಯಿತು. ಇನ್ನು ಮೇಲೆ ದಿಲ್ಲಿಯಲ್ಲಿ ಇದ್ದರೆ 24 ಅಕ್ಬರ್ ರೋಡ್‌ಗೆ ದಿನವೂ ಹೋಗುವ ನಿರ್ಧಾರವನ್ನು ಖರ್ಗೆ ಸಾಹೇಬರು ಮಾಡಿದ್ದಾರೆ. ಒಬ್ಬ ಹಿಂದಿ ಬಲ್ಲ, ಕಾಂಗ್ರೆಸ್ ಒಳ ರಾಜಕೀಯ ಗೊತ್ತಿರುವ ರಾಜಕೀಯ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಇದೆ. ಬಳ್ಳಾರಿ ಮೂಲದ ಜೆಎನ್‌ಯುನಲ್ಲಿ ಕಲಿತು ಈಗ ರಾಜ್ಯಸಭಾ ಸಂಸದ ಆಗಿರುವ ನಾಸಿರ್ ಹುಸೇನ್ ಹೆಸರಿನ ಬಗ್ಗೆ ದಿಲ್ಲಿಯಲ್ಲಿ ಗುಸುಗುಸು ಇದೆ.
ಶಾಸಕರಿಗೆ 20% ಟಿಕೆಟ್ ಕಟ್: ಹಿಮಾಚಲ ಇರಲಿ ಗುಜರಾತ್ ಇರಲಿ, ಬಿಜೆಪಿ ಸರಾಸರಿ 20ರಿಂದ 25 ಪ್ರತಿಶತ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಇದರಿಂದ ಹಿಮಾಚಲದಲ್ಲಿ ಒಟ್ಟು 21 ಬಿಜೆಪಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್‌ನಿಂದಲೂ 15 ಬಂಡಾಯ ಅಭ್ಯರ್ಥಿಗಳು ಪೈಪೋಟಿ ನೀಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಬಂಡಾಯ ಅಭ್ಯರ್ಥಿಗಳು ಹಿಮಾಚಲದ ಫಲಿತಾಂಶವನ್ನು ನಿರ್ಧರಿಸಲಿದ್ದಾರೆ. ಇನ್ನು ಗುಜರಾತ್‌ನಲ್ಲೂ ಕೂಡ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಸೇರಿ ಹಲವು ಹಿರಿಯರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ಆಡಳಿತ ವಿರೋಧಿ ಅಲೆ ಇದರಿಂದ ಕಡಿಮೆ ಆಗಬಹುದು ಎಂಬ ನಿರೀಕ್ಷೆಯಲ್ಲಿದೆ.
ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಹಿಮಾಚಲದಲ್ಲಿ ಮುಖ್ಯಮಂತ್ರಿ ಜಯರಾಮ್ ಠಾಕೂರ್, ಅನುರಾಗ್ ಠಾಕೂರ್, ಜೆಪಿ ನಡ್ಡಾ ಗುಂಪುಗಳ ಆಧಾರದಲ್ಲಿ ಟಿಕೆಟ್ ಹಂಚಲು ಹೋಗದೆ ದಿಲ್ಲಿಯಲ್ಲಿ ಸರ್ವೇಗಳ ಆಧಾರದಲ್ಲಿ ಟಿಕೆಟ್ ಫೈನಲ್ ಮಾಡಲಾಗಿದೆ. ಗುಜರಾತ್‌ನಲ್ಲಿ ಕೂಡ ಅಮಿತ್ ಶಾ ಪೂರ್ತಿ ಟಿಕೆಟ್ ಹಂಚಿಕೆಯನ್ನು ಗಮನಿಸುತ್ತಿದ್ದು, ಲಾಬಿಗಳು ಬಣಗಳ ಒತ್ತಡದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಬರೀ ಗೆಲುವು ಒಂದೇ ಮಾನದಂಡ ಎಂದು ಟಿಕೆಟ್ ಕೊಡುತ್ತೇವೆ ಎಂದು ಮೋದಿ ಮತ್ತು ಅಮಿತ್ ಶಾ ಎಲ್ಲಾ ಹಿರಿಯರಿಗೂ 2 ತಿಂಗಳ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದರು.
ಪತ್ರಕರ್ತೆಯರ ಗೋಳು ಕೇಳೋರಾರಯರು?: ಮಹಾರಾಷ್ಟ್ರದ ಹಿಂದೂವಾದಿ ಸಂಭಾಜಿ ಭಿಡೆ ಕುಂಕುಮ ಹಚ್ಚಲಿಲ್ಲ ಅನ್ನುವ ಕಾರಣಕ್ಕೆ ತರುಣಿ ಪತ್ರಕರ್ತೆ ಒಬ್ಬಳನ್ನು ‘ಬೈಟ್ ಕೊಡೋಲ್ಲ, ಹೋಗು’ ಅಂದಿದ್ದು ಭಾರೀ ಚರ್ಚೆಯಾಗುತ್ತಿದೆ. ಸದಾ ಬಿಸಿಲು ಮಳೆ ಚಳಿ ಅನ್ನದೇ ಫೀಲ್ಡ್‌ನಲ್ಲಿ ಓಡಾಡುವ ಟೀವಿ ಪತ್ರಕರ್ತರ ಕಷ್ಟಗೊತ್ತಿದ್ದವರು ಹೀಗೆಲ್ಲ ಮಾತಾಡುತ್ತಿರಲಿಲ್ಲ. 2008ರ ಒಂದು ಘಟನೆ ಹಂಚಿಕೊಳ್ಳಬೇಕು. ಪರಮಾಣು ಕರಾರು ಬಗ್ಗೆ ಸಂಸತ್ತಿನಲ್ಲಿ ಚರ್ಚೆ, ಪಾರ್ಲಿಮೆಂಟ್ ಹೊರಗಡೆ ಮಾಧ್ಯಮಗಳ ಲೈವ್‌ಗಳು-ಚರ್ಚೆಗಳು. ಓಬಿ ವ್ಯಾನ್‌ಗಳನ್ನು ನಿಲ್ಲಿಸಲು ನಿಗದಿತ ಜಾಗ ಇದೆ. ಪಾರ್ಲಿಮೆಂಟ್ ಪಾಸ್ ಇಲ್ಲದ ಪತ್ರಕರ್ತರು, ಕ್ಯಾಮರಾಮನ್‌ಗಳು ಕೆಲಸ ಮಾಡುವುದು ಅಲ್ಲಿಂದಲೇ. ಬಿಸಿಲಿಗೆ, ಮಳೆಗೆ ಮರಗಳೇ ಆಸರೆ. ಹಳ್ಳಿ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದೇವೆ ಎಂದು ಸಂಸತ್ತಿನಲ್ಲಿ ಅಂಕಿ ಸಂಖ್ಯೆ ಕೊಡುವ ರಾಜಕಾರಣಿಗಳು, ಅದನ್ನು ಬರೆದುಕೊಳ್ಳುವ ಪುರುಷ ಪತ್ರಕರ್ತರಿಗೆ ನೂರಾರು ವೃತ್ತಿಪರ ಪತ್ರಕರ್ತರು ಕೆಲಸ ಮಾಡುವ ಜಾಗದಲ್ಲಿ ಶೌಚಾಲಯ ಬೇಕು ಎಂದು ಅನ್ನಿಸುವುದೇ ಇಲ್ಲ ಅನ್ನುವುದು ಒಂದು ವಿಪರ್ಯಾಸ.
ಈಗ ಬಹಳ ದೊಡ್ಡ ಹೆಸರು ಮಾಡಿರುವ ಆಗಷ್ಟೇ ಪತ್ರಿಕೋದ್ಯಮಕ್ಕೆ ಬಂದಿದ್ದ ಪತ್ರಕರ್ತೆ ಒಬ್ಬಳು ಲೈವ್ ಕೊಡುತ್ತಿದ್ದಳು. ಅರ್ಜೆಂಟಾಗಿ ಜಲಬಾಧೆ ತೀರಿಸಿಕೊಳ್ಳಲು ಜಾಗ ಇಲ್ಲ. ದೂರ ಹೋಗಲು ಪುರುಸೊತ್ತು ಇಲ್ಲ. ಆಫೀಸ್‌ನವರದೋ ಲೈವ್ ಮೇಲೆ ಲೈವ್‌ಗಳು. ಕೊನೆಗೆ ಆ ಹುಡುಗಿ ಜಲಬಾಧೆ ತಾಳಿಕೊಳ್ಳಲು ಆಗದೆ ಪುರುಷ ಪತ್ರಕರ್ತರಿಗೆ ನೀವೆಲ್ಲ ಆಚೆ ತಿರುಗಿ ಎಂದು ವಿನಂತಿ ಮಾಡಿ ಮೂತ್ರ ವಿಸರ್ಜನೆ ಮಾಡಿ ಬರಬೇಕಾಯಿತು. ಇದು ನಡೆದಿದ್ದು ಸಂಸತ್ತಿನ ಎದುರು. ಕಾರ್ಪೋರೆಟ್ ಕಂಪನಿಗಳು ಬಿಟ್ಟರೆ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳು, ಕಾಲೇಜುಗಳು, ಅಂಗಡಿಗಳಲ್ಲಿ ಕೆಲಸ ನಿರ್ವಹಿಸುವ ಹೆಣ್ಣುಮಕ್ಕಳಿಗೆ ಒಂದು ಸ್ವಚ್ಛ ಶೌಚಾಲಯ ನಿರ್ಮಿಸಿ ಕೊಡಲು ಆಗದ ಪುರುಷ ಪ್ರಧಾನ ಸಮಾಜ, ‘ಮುಖ ತೊಳೆದಿಲ್ಲ, ಬಿಂದಿ ಹಚ್ಚಿಲ್ಲ, ಸೀರೆ ಯಾಕೆ ಉಟ್ಟಿಲ್ಲ’ ಎಂದೆಲ್ಲ ಮಹಿಳೆಯರಿಗೆ ಸಂಸ್ಕೃತಿ ಪಾಠ ಮಾಡುವುದು ಶುದ್ಧ ಮೂರ್ಖತನ.
ಹಿಮಾಚಲದ ಮೋದಿ ಕನೆಕ್ಷನ್: ಕೇಶುಭಾಯಿ ಪಟೇಲ್ ಜೊತೆಗಿನ ಜಗಳದ ಕಾರಣದಿಂದ ದಿಲ್ಲಿಗೆ ಕಳುಹಿಸಲ್ಪಟ್ಟನರೇಂದ್ರ ಮೋದಿ ಅವರನ್ನು 1998ರಲ್ಲಿ ಹಿಮಾಚಲದ ಚುನಾವಣಾ ಪ್ರಭಾರಿ ಮಾಡಲಾಗಿತ್ತು. 68 ಸದಸ್ಯ ಬಲದ ಹಿಮಾಚಲದಲ್ಲಿ 33 ಶಾಸಕರನ್ನು ವೀರಭದ್ರ ಸಿಂಗ್ ನೇತೃತ್ವದ ಕಾಂಗ್ರೆಸ್ ಗೆದ್ದರೆ ಸುಖರಾಮ್ ಜೊತೆಗೆ ಬಿಜೆಪಿ ಗೆದ್ದದ್ದು 33. ಬಿಜೆಪಿ ಬಂಡಾಯ ಅಭ್ಯರ್ಥಿ ರಮೇಶ್ ಧುವಾಲಾ ಗೆದ್ದಿದ್ದರೂ ಕೂಡ ಅವರನ್ನು ಶಿಮ್ಲಾಗೆ ಬರುವ ಮುಂಚೆ ಕಾರ್‌ನಿಂದ ಅಪಹರಿಸಿ ವೀರಭದ್ರ ಸಿಂಗ್ ಮರಳಿ ಮುಖ್ಯಮಂತ್ರಿ ಆದರು.
India Gate: ಕೈ ಬಿಟ್ಟು ಹೋಗದಂತೆ ಗಾಂಧಿಗಳ ಕಸರತ್ತು
ಆಗ ಶಿಮ್ಲಾದ ಪೀಟರ್ ಆಫ್‌ನಲ್ಲಿ ಉಳಿದುಕೊಂಡಿದ್ದ ಮೋದಿ ರಾತ್ರೋರಾತ್ರಿ ಜೆಪಿ ನಡ್ಡಾ ಸಹಾಯದಿಂದ ಒಬ್ಬ ಹಿಮಾಚಲ ಟೂರಿಸಂನಲ್ಲಿ ಕೆಲಸ ಮಾಡುವ ಅಡುಗೆಯವನನ್ನು ಕರೆಸಿ ರಮೇಶ್ ಧುವಾಲಾಗೆ ಮುಖ ಒರೆಸಲು ಬಳಸುವ ಹಾಳೆ ಮೇಲೆ ಸಂದೇಶ ಕಳುಹಿಸಿದ್ದರು. ಅದನ್ನೋದಿದ ಅವರು ಕಾರ್‌ನಿಂದ ಜಿಗಿದು ಬಂದು ಬಿಜೆಪಿ ಕ್ಯಾಂಪ್ ಸೇರಿಕೊಂಡ ನಂತರ ಬಿಜೆಪಿ ಸರ್ಕಾರ ರಚನೆ ಆಗಿತ್ತು. ಅಡ್ವಾಣಿ ಅವರಿಂದ ವಿಶೇಷ ಅನುಮತಿ ಪಡೆದು ಮೋದಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಗುಲಾಬ ಸಿಂಗ್ ಅನ್ನುವ ಶಾಸಕನನ್ನೇ ಸ್ಪೀಕರ್ ಮಾಡಿದ್ದರು. ಅನುರಾಗ ಸಿಂಗ್ ಠಾಕೂರ್ ಅಪ್ಪ ಪ್ರೇಮ್, ಕುಮಾರ ಧುಮಾಲ್ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದೇ 1998ರಲ್ಲಿ ಮೋದಿ ಕಾರಣದಿಂದ. ಏಕೆಂದರೆ ಪ್ರಭಾರಿ ಆಗಿದ್ದ ಶಾಂತ ಕುಮಾರರ ಕಾರ್ಯಶೈಲಿ ಬಗ್ಗೆ ಮೋದಿಗೆ ಇಷ್ಟಇರಲಿಲ್ಲ. ಈಗ ನೋಡಿ ಪ್ರಭಾರಿ ಮೋದಿ ಪ್ರಧಾನಿ ಆಗಿದ್ದಾರೆ, ಆಗ ಬರೀ ಶಾಸಕ ಆಗಿದ್ದ ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಿದ್ದಾರೆ.
ದಿಲ್ಲಿ, ಗುಜರಾತ್: ಆಪ್ ಸಂಕಷ್ಟ!: ಗುಜರಾತ್‌ನಲ್ಲಿ ಡಿಸೆಂಬರ್‌ನಲ್ಲಿ ಎರಡು ಹಂತದ ಚುನಾವಣೆ ಘೋಷಣೆ ಆಗಿರುವಾಗ ದಿಲ್ಲಿ ಮಹಾನಗರ ಪಾಲಿಕೆಗೂ ಚುನಾವಣೆ ಘೋಷಣೆ ಆಗಿವೆ. ಯಾವುದೇ ಚುನಾವಣೆ ಇರಲಿ ದಿಲ್ಲಿ ಆಪ್‌ನ ಸಾವಿರಾರು ಕಾರ್ಯಕರ್ತರು ಮೂರು ತಿಂಗಳು ಮುಂಚೆ ಹೋಗಿ ಠಿಕಾಣಿ ಹೂಡುತ್ತಾರೆ. ಆದರೆ ಗುಜರಾತ್ ಚುನಾವಣೆ ನಡೆಯುವ ಸಮಯದಲ್ಲೇ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಮಾಡಿರುವುದರಿಂದ ಗುಜರಾತ್‌ನಲ್ಲಿದ್ದ ಆಪ್ ಶಾಸಕರು ಹಾಗೂ ಕಾರ್ಯಕರ್ತರು ದಿಲ್ಲಿಗೆ ವಾಪಸು ಬಂದಿದ್ದಾರೆ. ಬಿಜೆಪಿಗೆ, ಕಾಂಗ್ರೆಸ್‌ಗೆ ದೇಶದ ತುಂಬೆಲ್ಲ ಕಾರ್ಯಕರ್ತರು, ನಾಯಕರು ಇದ್ದಾರೆ. ಆದರೆ ಆಪ್‌ಗೆ ಇರುವುದು ಮೊದಲು ದಿಲ್ಲಿ ಮತ್ತು ಈಗ ಪಂಜಾಬ್ ಮಾತ್ರ. ದಿಲ್ಲಿ ಪಾಲಿಕೆ ಚುನಾವಣೆ ದಿನಾಂಕ ಘೋಷಣೆ ಕಾಕತಾಳೀಯವೇ?