Murugha Mutt sexual harassment case: ಮುರುಘಾ ಮಠದ ಶಿವಾಚಾರ್ಯ ಶರಣರ ಪುರುಷತ್ವ ಪರೀಕ್ಷೆ ನಡೆಸಲಾಗಿದ್ದು ಅವರ ಗಂಡಸ್ತನ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ. ನಿನ್ನೆ ಸಂಜೆಯೇ ಅವರನ್ನು ಪರೀಕ್ಷೆಗೊಳಪಡಿಸಲಾಗಿದ್ದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಈಗಾಗಲೇ ವರದಿ ನೀಡಿದ್ದಾರೆ.
ಚಿತ್ರದುರ್ಗ: ಬಂಧನದ ನಂತರ ಅನಾರೋಗ್ಯದ ಕಾರಣ ನೀಡಿ ಆಸ್ಪತ್ರೆ ಸೇರಲು ಮುಂದಾಗಿದ್ದ ಮುರುಘಾ ಶರಣರಿಗೆ (Murugha Mutt Shivacharya) ಕೋರ್ಟ್ ಶಾಕ್ ನೀಡಿತ್ತು. ಹದಿನಾಲ್ಕು ದಿನ ನ್ಯಾಯಾಂಗ ಬಂಧನದ ಬದಲು, ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಪ್ರಕರಣ ದಾಖಲಾಗಿ ಒಂದು ವಾರವಾದರೂ ಬಂಧನವಾಗದಿದ್ದಾಗ ಪ್ರಕರಣದಿಂದ ಶರಣರು ಬಚಾವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪ್ರತಿಭಟನೆಗಳು ಹೆಚ್ಚಿದ ನಂತರ ಪೊಲೀಸರು ಶ್ರೀಗಳನ್ನು ಬಂಧಿಸಿದ್ದರು. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಶಿವಾಚಾರ್ಯ ಶರಣರ ಪುರುಷತ್ವ ಪರೀಕ್ಷೆ ಮಾಡಿದ್ದಾರೆ. ವರದಿಯಲ್ಲಿ ಶರಣರು ಗಂಡಸತ್ವ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ. ಶರಣರ ಡಿಎನ್‌ಎ, ರಕ್ತ, ಮೂತ್ರ, ಕೂದಲು ಸೇರಿದಂತೆ ಹಲವು ಸ್ಯಾಂಪಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ ಪಡೆದಿದೆ.
ಮೂಲಗಳ ಪ್ರಕಾರ, ನಿನ್ನೆ ಸಂಜೆಯೇ ಶಿವಾಚಾರ್ಯರಿಗೆ ಪುರುಷತ್ವ ಪರೀಕ್ಷೆ (Shivacharya Seer undergoes fertility test) ನಡೆಸಲಾಗಿತ್ತು. ಇಂದು ಬೆಳಗ್ಗೆಯೇ ಈ ಸಂಬಂಧ ವರದಿಯನ್ನು ಕೂಡ ನೀಡಲಾಗಿದೆ. ಉಳಿದ ಮಾದರಿಗಳನ್ನು ಮಡಿವಾಳದ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಈ ಹಿಂದೆ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿ ಪುರುಷನಲ್ಲ ಎಂದು ಅಫಿಡವಿಟ್ ಸಲ್ಲಿಸಿದರೆ ಮಾತ್ರ ಪರೀಕ್ಷೆಗೊಳಪಡಿಸಲಾಗುತ್ತಿತ್ತು. ನಿತ್ಯಾನಂದ ಪ್ರಕರಣದಲ್ಲಿ ಇದೇ ರೀತಿ ಅಫಿಡವಿಟ್ ಸಲ್ಲಿಕೆಯ ನಂತರ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಅಸಾರಾಂ ಬಾಪುವನ್ನು ಕೂಡ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಆದರೆ ಇತ್ತೀಚಿನ ಪ್ರಕರಣಗಳಲ್ಲಿ, ಕಡ್ಡಾಯವಾಗಿ ಪುರುಷತ್ವ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞ ಡಾ. ಗಿರೀಶ್ ಏಷ್ಯಾನೆಟ್ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಮುರುಘಾ ಶರಣರ ಪುರುಷತ್ವ ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ: ಜೈಲುವಾಸ ತಪ್ಪಿಸಲು ಎದೆನೋವು ನಾಟಕ ಆಡಿದರಾ ಮುರುಘಾ ಶ್ರೀ, ಇಲ್ಲಿದೆ ಪೋಕ್ಸೋ ಕೇಸ್ ಸಂಪೂರ್ಣ ವಿವರ!
ಪೊಲೀಸ್ ಕಸ್ಟಡಿ ಅಂತ್ಯದವರೆಗೂ ಜಾಮೀನು ವಿಚಾರಣೆಯಿಲ್ಲ:
ಹೇಗಾದರೂ ಮಾಡಿ ಜೈಲು ಪಾಲಾಗುವುದನ್ನು ತಪ್ಪಿಸಿಕೊಳ್ಳಬೇಕು ಎಂದು ಯತ್ನಿಸುತ್ತಿರುವ ಮುರುಘಾ ಶರಣರು ಮತ್ತೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಪೊಲೀಸ್ ಕಸ್ಟಡಿ ಮುಗಿಯುವ ವರೆಗೂ ಜಾಮೀನು ಅರ್ಜಿ ವಿಚಾರಣೆ ನಡೆಸುವುದಿಲ್ಲ ಎಂದು ಕೋರ್ಟ್ ತಿಳಿಸಿದೆ. ಇದರಿಂದ ಕಾನೂನು ಹೋರಾಟದಲ್ಲಿ ಮುರುಘಾ ಶರಣರಿಗೆ ಮತ್ತೆ ಹಿನ್ನಡೆಯಾಗಿದೆ. ಸೆಪ್ಟೆಂಬರ್ ಐದನೇ ತಾರೀಖು ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ಅದರ ನಂತರ ಅರ್ಜಿ ವಿಚಾರಣೆ ನಡೆಸುವುದಾಗ ನ್ಯಾಯಾಲಯ ತಿಳಿಸಿದೆ.
ಆದರೆ, ಪೊಲೀಸ್ ಕಸ್ಟಡಿ ಮುಗಿದ ನಂತರ ಮತ್ತಷ್ಟು ದಿನಗಳ ಕಾಲ ಕಸ್ಟಡಿಗೆ ಪೊಲೀಸರು ಮನವಿ ಮಾಡುವ ಸಾಧ್ಯತೆಯಿದೆ. ಗಂಭೀರ ಪ್ರಕರಣವಾಗಿರುವುದರಿಂದ ನ್ಯಾಯಾಲಯ ಕಸ್ಟಡಿಯನ್ನು ಮುಂದೂಡುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಕಾನೂನು ತಜ್ಞರೊಬ್ಬರು.
ಇದನ್ನೂ ಓದಿ: Seer Shivamurthy Arrest ಶ್ರೀಗಳ ರಕ್ಷಣೆಗೆ ಪೊಲೀಸರಿಂದಲೇ ನಡೆದಿತ್ತಾ ಹೈಡ್ರಾಮಾ? ತನಿಖೆಯಲ್ಲಿ ವೈಫಲ್ಯದ ವಾಸನೆ!
ಏನದು ಪ್ರಕರಣ?:
ಕಳೆದ ವಾರ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಮಠದ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯಿರಿಂದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಮೈಸೂರಿನಿಂದ ಚಿತ್ರದುರ್ಗಕ್ಕೆ ಪ್ರಕರಣದ ವಿಚಾರಣೆಯನ್ನು ಹಸ್ತಾಂತರಿಸಲಾಗಿತ್ತು. ಅದಾದ ನಂತರ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದ ಬಳಿಕ ಮುರುಘಾ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಪ್ರಕರಣ ದಾಖಲಾಗಿ ವಾರ ಕಳೆದರೂ ಬಂಧನವಾಗದಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಹ ಶ್ರೀಗಳ ಪರ ಹೇಳಿಕೆ ನೀಡಿದ್ದರು. ಇದಕ್ಕೂ ಆಕ್ರೋಶ ಕೇಳಿ ಬಂದಿತ್ತು. ಸದ್ಯ ಆಸ್ಪತ್ರೆಯಲ್ಲಿರುವ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದೆ.