
ಬೆಂಗಳೂರು(ಸೆ.03): ಪ್ರಕರಣವೊಂದರ ಸಂಬಂಧ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ವಿರುದ್ಧ ಕಿ
ಡಿಕಾರಿರುವ ಹೈಕೋರ್ಟ್, ಪ್ರಕರಣದ ವಿಲೇವಾರಿಯಾಗುವರೆಗೂ ವಿಚಾರಣೆಗೆ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು ಹಾಗೂ ಸರ್ಕಾರದಿಂದ ಯಾವುದೇ ಪ್ರಯಾಣ ಭತ್ಯೆ ಪಡೆದುಕೊಳ್ಳುವಂತಿಲ್ಲ ಎಂದು ತಾಕೀತು ಮಾಡಿದೆ. ಸತ್ಯನಾಥ ಹೌಸಿಂಗ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ನಿರ್ಮಿಸಲಾದ ಬಡಾವಣೆಯಲ್ಲಿ ಸಿಎ ನಿವೇಶನ, ಉದ್ಯಾನ ಜಾಗ ಹಾಗೂ ಸಾರ್ವಜನಿಕ ಸ್ಥಳಕ್ಕೆ ಮೀಸಲಿಟ್ಟಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಮಾಡಿ ಹಂಚಲಾಗಿದೆ ಎಂದು ಆರೋಪಿಸಿ ರಾಯಚೂರು ನಗರದ ತೀಮಾಪುರ ಪೇಟೆ ನಿವಾಸಿ ಟಿ. ಮರೆಪ್ಪ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಶುಕ್ರವಾರ ಅರ್ಜಿ ವಿಚಾರಣೆಗೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಯಪಾಲ ರೆಡ್ಡಿ ಖುದ್ದು ಹಾಜರಾಗಿದ್ದರು. ಆಯುಕ್ತರ ಪರ ವಕೀಲರು ವಾದ ಮಂಡಿಸಿ, ಪ್ರಕರಣದ ಬಗ್ಗೆ ಆಯುಕ್ತರಿಗೆ ಮಾಹಿತಿಯೇ ಇಲ್ಲ ಎಂದರು. ಆಯುಕ್ತರು ಸಹ ತಮ್ಮ ವಿರುದ್ಧ ಹೈಕೋರ್ಟ್ ಜಾಮೀನು ಸಹಿತ ವಾರಂಟ್ ಹೊರಡಿಸಿದ ಬಳಿಕವೇ ಈ ಪ್ರಕರಣದ ಬಗ್ಗೆ ಮಾಹಿತಿ ತಿಳಿಯಿತು ಹೇಳಿದರು.
Marriage life ಲಿವಿಂಗ್ ಟುಗೆದರ್ ಹೆಚ್ಚಳಕ್ಕೆ ಆತಂಕ, ಡಿವೋರ್ಸ್ ತಿರಸ್ಕರಿಸಿ ಜೊತೆಯಾಗಿರಲು ಸೂಚಿಸಿದ ಹೈಕೋರ್ಟ್!
ಆದರೆ, ಪ್ರಕರಣ ದಾಖಲೆಗಳನ್ನು ಪರಿಶೀಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ, ಈ ಪ್ರಕರಣದಲ್ಲಿ ಆಯುಕ್ತರಿಗೆ 2019ರ ಜು.8ರಂದು ನೋಟಿಸ್ ಜಾರಿಯಾಗಿದೆ. ಪ್ರಕರಣದ ಬಗ್ಗೆ 2022ರ ಜು.25ರಂದು ಆಯುಕ್ತರಿಗೆ ಮಾಹಿತಿ ನೀಡಲಾಗಿದೆ ಎಂದು 2022ರ ಆ.8ರಂದು ಸರ್ಕಾರಿ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಅದನ್ನು ಆಧರಿಸಿಯೇ ಆ.8ರಂದು ಆಯುಕ್ತರ ವಿರುದ್ಧ ವಾರಂಟ್ ಹೊರಡಿಸಲಾಗಿದೆ. ಆದರೂ ಆಯುಕ್ತರು ಮತ್ತು ಅವರ ವಕೀಲರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುವುದಕ್ಕೆ ಆಯುಕ್ತರು ಮತ್ತು ವಕೀಲರು ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ, ಪ್ರಕರಣ ಮುಗಿಯುವವರೆಗೆ ಪ್ರತಿ ವಿಚಾರಣೆಗೂ ಆಯುಕ್ತರು ಸ್ವಂತ ಖರ್ಚಿನಲ್ಲೇ ನ್ಯಾಯಾಲಯಕ್ಕೆ ಹಾಜರಾಗಬೇಕು. ಸರ್ಕಾರದಿಂದ ಪ್ರಯಾಣ ಭತ್ಯೆ ಪಡೆಯಬಾರದು ಎಂದು ತಾಕೀತು ಮಾಡಿ ವಿಚಾರಣೆಯನ್ನು ಸೆ.15ಕ್ಕೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ