
ಮೈಸೂರು (ಫೆ.25): ವ್ಯಂಗ್ಯಚಿತ್ರ ಪತ್ರಿಕೆಗಳ ಓದುಗರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಿಕೆ ಅಭಿರುಚಿ ಹೆಚ್ಚಿಸಲು ವ್ಯಂಗ್ಯಚಿತ್ರಕಾರರಿಂದ ಸಾಧ್ಯ. ಹೀಗಾಗಿ, ವ್ಯಂಗ್ಯಚಿತ್ರಕಾರರಿಗೆ ಪತ್ರಿಕೋದ್ಯಮದಲ್ಲಿ ಹೆಚ್ಚಿನ ಅವಕಾಶ, ಮನ್ನಣೆ ದೊರೆಯಬೇಕು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರಿನ ವಿಜಯನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ವಿ. ನಾಗೇಂದ್ರಬಾಬು (ಬ್ಯಾಂಟರ್ ಬಾಬು) ಅವರು ರಚಿಸಿರುವ ವ್ಯಂಗ್ಯ ಚಿತ್ರ ಸಿಂಹಾವಲೋಕನ ಎಂಬ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಕೊಟ್ಟ ಮಾತು ಉಳಿಸಿಕೊಂಡ ಸಂಸದ ಪ್ರತಾಪ್ ಸಿಂಹ; ಬಂತು ಮೈಸೂರು-ರಾಮೇಶ್ವರಂ ಟ್ರೈನ್!
ವ್ಯಂಗ್ಯಚಿತ್ರ ಕಲೆಯು ಪರಿಣಾಮಕಾರಿ ಅಭಿವ್ಯಕ್ತಿ ಮಾಧ್ಯಮ. ಗಂಭೀರವಾದ ವಿಚಾರವನ್ನು ಹಾಸ್ಯದ ಮೂಲಕ ತಿಳಿಸುವುದೇ ವ್ಯಂಗ್ಯಚಿತ್ರದ ಶೈಲಿ. ವ್ಯಂಗ್ಯಚಿತ್ರಕಾರರು ಜನಪ್ರಿಯ ವ್ಯಂಗ್ಯಚಿತ್ರಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ಒಳ್ಳೆಯ ವಿಷಯ ಎಂದು ಅವರು ಶ್ಲಾಘಿಸಿದರು.
ಇಂದು ಡಿಜಿಟಲ್ ಯುಗದಲ್ಲಿ ನಾವಿದ್ದೇವೆ. ಓದುಗರ ಸಂಖ್ಯೆ ಕಡಿಮೆಯಾಗಿದೆ. ಪತ್ರಿಕೆಯನ್ನು ಕಾಯ್ದಿರಿಸಿ ಓದುವ ಮನಸ್ಥಿತಿ ಹೊರಟು ಹೋಗಿದೆ. ಜೊತೆಗೆ ಸುದ್ದಿ ನೀಡುವ ಧಾವಂತದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂದು ಅವರು ಹೇಳಿದರು.
ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಭಾಷೆಗೆ ಧ್ವನಿ ಇರಬೇಕು. ಸದ್ದು ಆದ ಮೇಲೆ ಏನೋ ಕೇಳಬೇಕು. ಅದರಂತೆ ಚಿತ್ರ ನೋಡಿದ ಮೇಲೆಯೂ ಏನೋ ಹೊಳೆಯಬೇಕು. ಅದುವೇ ವ್ಯಂಗ್ಯ ಚಿತ್ರ. ಸರ್ಕಾರ, ಸಮಾಜದ ವ್ಯವಸ್ಥೆಯ ಅಭಿಪ್ರಾಯ, ಭಿನ್ನಾಭಿಪ್ರಾಯ ಅವು ಬಿಂಬಿಸುತ್ತವೆ ಎಂದು ತಿಳಿಸಿದರು.
ಪತ್ರಿಕೋದ್ಯಮಿ ಕೆ.ಬಿ. ಗಣಪತಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಉಪಾಧ್ಯಕ್ಷ ಎನ್. ಅನಂತ್, ಜಂಟಿ ಕಾರ್ಯದರ್ಶಿ ಕೆಂಪಣ್ಣ, ಸಮಾಜ ಸೇವಕ ಕೆ. ರಘುರಾಂ, ಲಕ್ಷ್ಮೀನರಸಿಂಹ ದೇವಸ್ಥಾನ ಸಿಇಒ ಕೆ.ಆರ್. ಯೋಗಾನರಸಿಂಹನ್, ಯೋಗ ವಿತ್ ಶ್ರೀನಾಥ ಸಂಸ್ಥಾಪಕ ಶ್ರೀನಾಥ್, ಕೃತಿಯ ಕರ್ತೃ ಎಂ.ವಿ. ನಾಗೇಂದ್ರಬಾಬು ಮೊದವಲಾದವರು ಇದ್ದರು.
ಪತ್ರಿಕೆಯಲ್ಲಿ ವ್ಯಂಗ್ಯಚಿತ್ರ ಬಹಳ ಪ್ರಮುಖ ಅಂಶ. ಅವು ದಿನನಿತ್ಯದ ಅನೇಕ ವಿಷಯಗಳ ಮೇಲೆ ರಚಿತವಾಗುತ್ತದೆ. ರಾಜಕೀಯ ಘಟನೆ, ನಡೆ, ನುಡಿ ಆಚಾರ, ವಿಚಾರ ಎಲ್ಲವನ್ನೂ ಆದರಿಸುತ್ತದೆ. ಹಾಗೆಯೇ, ಹಾಸ್ಯದೊಂದಿಗೆ ಒಂದು ಸಂದೇಶ ಇರುತ್ತದೆ.
- ಕೆ.ಬಿ. ಗಣಪತಿ, ಪತ್ರಿಕೋದ್ಯಮಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ