ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಖಜಾನೆ ಖಾಲಿಯಾಗಲು ಸಾಧ್ಯವಿಲ್ಲ, ಇದು ಕಮಿಷನ್ ಸರ್ಕಾರವಲ್ಲ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ಶಿವಮೊಗ್ಗ (ಫೆ.25): ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಖಜಾನೆ ಖಾಲಿಯಾಗಲು ಸಾಧ್ಯವಿಲ್ಲ, ಇದು ಕಮಿಷನ್ ಸರ್ಕಾರವಲ್ಲ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ನಗರದ ಅಲ್ಲಮ್ಮ ಪ್ರಭು ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿ, ಐತಿಹಾಸಿಕ ಕಾರ್ಯಕ್ರಮ ಶಿವಮೊಗ್ಗದಲ್ಲಿ ನಡೆಯುತ್ತಿದೆ. ಚುನಾವಣೆ ಪೂರ್ವದಲ್ಲಿ ನನಗೆ ಪ್ರಣಾಳಿಕೆ ಉಪಾಧ್ಯಕ್ಷನ್ನಾಗಿ ಮಾಡಿದ್ದರು. ಚುನಾವಣೆ ಪೂರ್ವದಲ್ಲೇ ನಾವು ಈ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೇವು. ಸಾಮಾನ್ಯ ಜನರ ಕುಟುಂಬಕ್ಕೆ ನಾವು ಪಾಲುದಾರರಾಗಬೇಕೆಂಬ ಸಂಕಲ್ಪ ತೊಟ್ಟಿದ್ದೆವು. ಇವತ್ತು ನಿಮ್ಮ ಮನೆ ಬೆಳಕಾಗಿದೆ ಎಂದರೆ ಕಾಂಗ್ರೆಸ್ ಸರ್ಕಾರದಿಂದ ಆಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಎಲ್ಲ ಜನರ ಮನೆಯ ಬೆಳಕಿನ ಜೊತೆಗೆ ಜೀವನವನ್ನು ಬೆಳಕಾಗಿಸಿದೆ. ಈ ಸರ್ಕಾರ ಹೆತ್ತವರು ಮಹಿಳೆಯರು. ಅದಕ್ಕಾಗಿ ಅವರಿಗೆ ಎಲ್ಲಾ ಯೋಜನೆ ಸಮರ್ಪಿಸಲಾಗಿದೆ. ಹೆಣ್ಣು ಮಕ್ಕಳಿಗೆ ಯೋಜನೆ ತಲುಪಿಸಲಾಗಿದೆ. ಅದರ ಪರಿಣಾಮ ತಿಳಿಯುವ ಕೆಲಸವೇ ಈ ಸಮಾವೇಶ ಎಂದು ಹೇಳಿದರು.
ಮಾಧ್ಯಮಗಳದ್ದು ಲೋಪದೋಷ ತಿದ್ದುವ ಕಾಯಕ: ಸಚಿವ ಮಧು ಬಂಗಾರಪ್ಪ
32 ವರ್ಷದ ಹಿಂದೆ ಉಚಿತ ಕರೆಂಟ್ ಕೊಟ್ಟಿದ್ದು ಬಂಗಾರಪ್ಪ. ಭೂ ಹಕ್ಕು ಕೊಟ್ಟಿದ್ದು ದೇವರಾಜ ಅರಸು, ಬಂಗಾರಪ್ಪ, ಕಾಗೋಡು ತಿಮ್ಮಪ್ಪ. ಹೀಗೆ ವಿವಿಧ ಹಂತಗಳಲ್ಲಿ ಕಾಂಗ್ರೆಸ್ ಜನಪರ ಕೆಲಸ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ಯೋಜನೆಗಳಿಗೆ ಗ್ಯಾರಂಟಿ, ವಾರಂಟಿ ಇಲ್ಲ ಎಂಬ ಟೀಕೆ ಮಾಡುವವರು ಇದನ್ನು ಅರಿಯಬೇಕು. ಟೀಕೆಗಾಗಿ ಟೀಕೆ ಮಾಡಬಾರದು. ಈ ಸತ್ಯ ಜನರಿಗೆ ತಿಳಿದಿದೆ ಎಂದು ಕುಟುಕಿದರು.
ಕಾಂಗ್ರೆಸ್ ಸರ್ಕಾರ ಮುಂದಿನ ಚುನಾವಣೆಯನ್ನು ಗ್ಯಾರಂಟಿ ಯೋಜನೆಗಳ ಆಧಾರದ ಮೇಲೆ ಕೇಳಿ ಎಂದು ಸೂಚಿಸಿದೆ. ಅದೇ ರೀತಿಯಲ್ಲಿ ನಾನು ಚುನಾವಣೆಯ ತಯಾರಿ ನಡೆಸುತ್ತಿದ್ದೇವೆ. ಈ ಹಿಂದೆ ಬಿಲ್ ಕಟ್ಟಿಲ್ಲ ಎಂದರೆ ಮೆಸ್ಕಾಂ ನವರು ಬಂದು ಮನೆಯ ಕರೆಂಟಿ ತೆಗೆದು ಹೋಗುತ್ತಿದ್ದರು. ಈಗ ನಿಮ್ಮ ಮನೆಯ ಫ್ಯೂಜ್ ಕಟ್ ಮಾಡುವ ಧೈರ್ಯ ಯಾರು ತೋರುವುದಿಲ್ಲ. ಅಂತಹದ್ದೊಂದು ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ತಂದುಕೊಟ್ಟಿದೆ ಎಂದು ತಿಳಿಸಿದರು.
ಈ ಹಿಂದೆ ಬಂಗಾರಪ್ಪರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನೀಡಿದ್ದ ಉಚಿತ ವಿದ್ಯುತ್‌ನಿಂದ ರೈತರ ಹೊಲ ಹಸಿರಾಗಿದೆ. ಇದು ನೀವು ಕೊಟ್ಟಿರುವ ಸರ್ಕಾರ, ವಿರೋಧ ಪಕ್ಷದವರು ಈ ಸರ್ಕಾರಕ್ಕೆ ಬಾಳಿಕೆ ಇಲ್ಲ ಎಂದು ಟೀಕಿಸಿದ್ರು. ಆದರೆ, ಇದು ತಾಯಂದಿರು ಹೆತ್ತಿರುವ ಸರ್ಕಾರ ಎಂದರು.
ಈ ಸಲ ಶಿಕ್ಷಣ ಇಲಾಖೆಗೆ 44 ಸಾವಿರ ಕೋಟಿ ರೂಪಾಯಿಯನ್ನು ಸಿದ್ದರಾಮಯ್ಯ ಸರ್ಕಾರ ನೀಡಿದೆ. ಸಿದ್ದರಾಮಯ್ಯ ಸರ್ಕಾರದ ಖಜಾನೆ ಖಾಲಿಯಾಗುವುದಿಲ್ಲ ಎಂದ ಸಚಿವರು ಸಾಹುಕಾರ ಕೈಯಲ್ಲಿ ದುಡ್ಡಿರಬಾರದು. ಸಾಹುಕಾರರ ಕೈಯಲ್ಲಿ ದುಡ್ಡಿದ್ದರೇ ಬ್ಯಾಂಕ್‌ನಲ್ಲಿ ಇಡುತ್ತಾರೆ, ಬಡವರ ಕೈಗೆ ದುಡ್ಡು ಕೊಟ್ಟರೆ ಅದನ್ನ ವ್ಯಯಿಸುವ ಮೂಲಕ ಸರ್ಕಾರ ನೀಡುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಮಿಷನ್ ಯುಗ ಮುಗಿದುಹೋಗಿದೆ. ರಾಜ್ಯದ ಯೋಜನೆಗಳ ಹಣವು ನೇರವಾಗಿ ನಿಮ್ಮ ಅಕೌಂಟ್‌ಗೆ ಬರುತ್ತಿದೆ. ರಾಜ್ಯದಲ್ಲಿ ಐದು ವರ್ಷ ಅಧಿಕಾರಿದಲ್ಲಿ ಇರುತ್ತದೆ ಎಂದು ಹೇಳಿದರು.
ಶಾಸಕ ಬೇಳೂರು ಗೋಪಾಲಕೃಷ್ಣ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳು ಸದುಪಯೋಗವಾಗುತ್ತಿದೆ. ಯಾರಾದರೂ ಗ್ಯಾರಂಟಿ ಯೋಜನೆ ಬೇಡ ಎಂದು ಹೇಳಿ ಬಿಡಲಿ ನೋಡೋಣ ಎಂದು ಸವಾಲು ಹಾಕಿದರು.
ಸಮಾನತೆಯ ಬಜೆಟ್ ಯಾರೂ ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳಿಗೂ ಟೀಕೆ ಮಾಡಿದ್ರು. ನಮ್ಮ ಜನಪರ ಬಜೆಟ್‌ಗೂ ಟೀಕೆ ಮಾಡಿದ್ರು. ಚುನಾವಣೆಗೂ ಮುನ್ನ ಡಿ.ಕೆ. ಶಿವಕುಮಾರ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿ ಮುಖ್ಯಮಂತ್ರಿಗಳ ಜೊತೆಗೂಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತಾಗಿದೆ ಎಂದರು.
ಅಲ್ಪಸಂಖ್ಯಾತರಿಗೆ ಅನುದಾನ ಕೊಟ್ಟರೂ ಬಿಜೆಪಿ ಟೀಕಿಸುತ್ತಿದೆ. ಅವರೇನು ತೆರಿಗೆ ಕಟ್ಟುವುದಿಲ್ಲವೇ ? ನಿಮ್ಮ ಸರ್ಕಾರ ಯಾರ್‍ಯಾರಿಗೆ ಅನುದಾನ ಕೊಟ್ಟಿದೆ ಎನ್ನುವುದು ನಮಗೆ ಗೊತ್ತಿದೆ. ಕೇವಲ ಟೀಕೆ ಮಾಡುವುದೇ ಕೆಲಸ ಆಗಬಾರದು. ಇದಕ್ಕೂ ಮುನ್ನ ಬಡವರತ್ತವ ಕಣ್ತೆರದು ನೋಡಿ. ಅವರ ಮನೆಗೆ ಹೋಗಿ ಪರಿಸ್ಥಿತಿ ನೋಡಿ. ಬಡವರ ಧ್ವನಿಯಾಗಿ ಕೆಲಸ ಮಾಡಿದರೂ ಟೀಕೆ ಮಾಡ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.
ಶಾಸಕರಾದ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿದ ಭರವಸೆಯನ್ನು ಸರ್ಕಾರ ಸಾಕಾರಗೊಳಿಸಿದೆ. ಎಲ್ಲರೂ ಐದು ಯೋಜನೆಗಳ ಉಪಯೋಗ ಪಡೆಯಿರಿ ಎಂದ ಅವರು ಜಿಲ್ಲೆಯ ಶರಾವತಿ ಸಂತ್ರಸ್ತರು, ಶುಗರ್ ಫ್ಯಾಕ್ಟರಿ, ರೈತರ ಸಮಸ್ಯೆ ಗಳನ್ನು ಬಗೆಹರಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಸರ್ಕಾರದ ವಿವಿಧ ಯೋಜನೆಗಳ ಮಳಿಗೆಗಳನ್ನು ತೆರೆಯಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ , ಸದುಪಯೋಗ ಪಡೆದುಕೊಂಡರು.
ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳ ಫಲಾನುಭವಿಗಳು ಪಾಲ್ಗೊಂಡು ತೆರೆಯಲಾದ ಯೋಜನೆಗಳ ಸೌಲಭ್ಯವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ರಾಜ್ಯಕ್ಕೆ 5 ಗ್ಯಾರಂಟಿ ಕೊಟ್ಟಿದ್ದೇ ತಡ; ಬಿಜೆಪಿ ಕಮಲ ಮುದುಡಿತು, ಜೆಡಿಎಸ್ ತೆನೆ ಎಸೆದೋಯ್ತು: ಡಿ.ಕೆ. ಶಿವಕುಮಾರ್
ಕಾರ್ಯಕ್ರಮಕ್ಕೂ ಮುನ್ನ ಹತ್ತು ಹೊಸ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ಅಲ್ಲಮಪ್ರಭು ಮೈದಾನದಲ್ಲಿ ಬರೆಸಲಾಗಿರುವ ಅಲ್ಲಮಪ್ರಭು ವಚನಗಳನ್ನುವೀಕ್ಷಿಸಿದರು. ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳಲ್ಲಿ ‘ಅರಿವೇ ಗುರು ಅಲ್ಲಮ ಪ್ರಭು’ ಅಲಂಕಾರ ವಿಶೇಷ ಆಕರ್ಷಣೆಯಾಗಿತ್ತು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ, ಕಾಂಗ್ರೆಸ್ ಮುಖಂಡರಾದ ಕಿಮ್ಮನೆ ರತ್ನಾಕರ್, ಎಚ್.ಎಸ್.ಸುಂದರೇಶ್ ಸೇರಿದಂತೆ ಹಲವರು ಇದ್ದರು.