ಅಕ್ರಮ ದಾಖಲೆ ನೀಡಿದ್ದ 4.13 ಲಕ್ಷ Rationl Card ರದ್ದು

By Kannadaprabha NewsFirst Published Dec 27, 2021, 8:45 AM IST
Highlights
  •  ಒಂದೇ ವರ್ಷದಲ್ಲಿ 4.13 ಲಕ್ಷ ಪಡಿತರ ಚೀಟಿ ರದ್ದು
  •  ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ ಪಡೆದವರ ಮೇಲೆ ಸರ್ಕಾರ ಪ್ರಹಾರ

ವರದಿ :  ಸಂಪತ್‌ ತರೀಕೆರೆ

 ಬೆಂಗಳೂರು (ಡಿ.27):  ಸುಳ್ಳು ದಾಖಲೆ ಕೊಟ್ಟು ಅಕ್ರಮವಾಗಿ ಅಂತ್ಯೋದಯ ಹಾಗೂ ಬಿಪಿಎಲ್‌ (BPL)  ಪಡಿತರ ಚೀಟಿ ಪಡೆದವರನ್ನು ಪತ್ತೆ ಮಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಒಂದು ವರ್ಷದಲ್ಲಿ (2021ರ ಜನವರಿ 30ರಿಂದ ಡಿಸೆಂಬರ್‌  22ರವರೆಗೆ) 4,13,571 ಪಡಿತರ ಚೀಟಿಗಳನ್ನು ರದ್ದುಪಡಿಸಿದೆ. ಹಾಗೆಯೇ ಅನ್ನಭಾಗ್ಯ ಯೋಜನೆ ಫಲಾನುಭವಿಯಾಗಿದ್ದು, ಮೃತ ಪಟ್ಟಿರುವ 5,25,805 ಸದಸ್ಯರನ್ನು ಪಡಿತರ ಚೀಟಿಯಿಂದ (Ration Card)  ಕೈಬಿಟ್ಟಿದೆ.

ಅನರ್ಹರು ಸುಳ್ಳು ದಾಖಲೆ ನೀಡಿ ಪಡೆದಿರುವ ಅಂತ್ಯೋದಯ ಮತ್ತು ಬಿಪಿಎಲ್‌ (BPL) ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಸರ್ಕಾರ ಸಾಕಷ್ಟುಸಮಯಾವಕಾಶ ನೀಡಿತ್ತು. ಆದರೂ ಕೆಲವರು ಕಾರ್ಡುಗಳನ್ನು ವಾಪಸ್‌ ಮಾಡದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ, ತೆರಿಗೆ (Tax)  ಇಲಾಖೆಗಳಿಂದ ದತ್ತಾಂಶ ಪಡೆದು ಅನರ್ಹ ಕಾರ್ಡುಗಳನ್ನು ರದ್ದುಪಡಿಸಲು ಆಹಾರ ಇಲಾಖೆ (Food Department) ಕ್ರಮ ಕೈಗೊಂಡಿತ್ತು. ಆಗಸ್ಟ್‌ ಮೊದಲ ವಾರದಲ್ಲಿ 85107 ಮಂದಿ ತೆರಿಗೆದಾರರನ್ನು ಪತ್ತೆ ಮಾಡಿ ಅವರ ಪಡಿತರ ಚೀಟಿಗಳನ್ನು ರದ್ದು ಮಾಡಿತ್ತು.

ಅಕ್ರಮ ಪತ್ತೆ ಹೀಗೆ:

ಇದೀಗ ತೆರಿಗೆ ಪಾವತಿದಾರರು ಒಳಗೊಂಡಂತೆ, ಕುಟುಂಬದ ವಾರ್ಷಿಕ ಆದಾಯ (income) 1.20 ಲಕ್ಷಕ್ಕಿಂತ ಹೆಚ್ಚು ಇರುವಂತವರು ಮತ್ತು 3 ಹೆಕ್ಟೇರ್‌ಗಿಂತ ಅಧಿಕ ಜಮೀನು (Farm Land) ಹೊಂದಿರುವವರ ಮಾಹಿತಿಯನ್ನು ಕಂದಾಯ ಇಲಾಖೆಯಿಂದ ಪಡೆದಿದ್ದು ಡಿ.22ರ ಅವಧಿಗೆ 4,13,571 ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತೆ ಶಾಮ್ಲಾ ಇಕ್ಬಾಲ್‌ ಅವರು  ಮಾಹಿತಿ ನೀಡಿದರು.

5.25 ಲಕ್ಷ ಫಲಾನುಭವಿಗಳು ಬದುಕಿಲ್ಲ!

ಕಂದಾಯ ಇಲಾಖೆ ಮಾಹಿತಿಯಂತೆ ಪಡಿತರ ಚೀಟಿ ಫಲಾನುಭವಿಯಾಗಿದ್ದು ಮರಣ ಹೊಂದಿರುವ 4,58,737 ಮಂದಿ ಮತ್ತು ಇ-ಜನ್ಮ ವೆಬ್‌ಸೈಟ್‌ ಮೂಲಕ ನೋಂದಣಿಯಾದ ಜನನ ಮತ್ತು ಮರಣಗಳ ಮಾಹಿತಿ ಪ್ರಕಾರ 67,069 ಮಂದಿ ಸೇರಿ ಒಟ್ಟು 5,25,806 ಮಂದಿಯನ್ನು ಪಡಿತರ ಚೀಟಿಯಿಂದ ಕೈಬಿಡಲಾಗಿದೆ.

ಫಲಾನುಭವಿಗಳು ಮರಣ ಹೊಂದಿದ್ದರೂ ಅವರ ಹೆಸರಿನಲ್ಲಿ ಪ್ರತಿ ತಿಂಗಳು ಪಡಿತರ ಆಹಾರ ಧಾನ್ಯಗಳನ್ನು ಪಡೆಯುತ್ತಿದ್ದ ಪ್ರಕರಣಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಮೃತರ ಮಾಹಿತಿಯನ್ನು ಆಹಾರ ಇಲಾಖೆ ಕಲೆ ಹಾಕಿದ್ದು ಬರೋಬ್ಬರಿ 5,25,806 ಸಾವನ್ನಪ್ಪಿದ್ದು ಬೆಳಕಿಗೆ ಬಂದಿದೆ.

ಬೆಳಗಾವಿಯಲ್ಲಿ (Belagavi) 36,575, ತುಮಕೂರು (tumakuru) 31,467, ಮೈಸೂರು 29,723, ಮಂಡ್ಯ 25,455, ಬಳ್ಳಾರಿ 24,871, ಕಲಬುರಗಿ 23,295, ಹಾಸನ (Hassan) 20,132 ಮತ್ತು ದಕ್ಷಿಣ ಕನ್ನಡ 20,653 ಮಂದಿ ಪಡಿತರ ಫಲಾನುಭವಿಗಳು ಸಾವನ್ನಪ್ಪಿದ್ದಾರೆ. ಬೆಂಗಳೂರು 9114, ಬೆಂಗಳೂರು ಪಶ್ಚಿಮ 3747, ಬೆಂಗಳೂರು ದಕ್ಷಿಣ 1479, ಬೆಂಗಳೂರು ಉತ್ತರ 1306, ಬೆಂಗಳೂರು ಪೂರ್ವ 698 ಮಂದಿ ಮೃತಪಟ್ಟಿದ್ದಾರೆ.

ಸೋರಿಕೆ ತಡೆಗೆ ಕ್ರಮ

ಪಡಿತರ ಆಹಾರ ಧಾನ್ಯ ಸೋರಿಕೆ ತಡೆಯಲು ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಅನರ್ಹರಾಗಿದ್ದರೂ ಅಂತ್ಯೋದಯ, ಬಿಪಿಎಲ್‌ (BPL) ಕಾರ್ಡು ಪಡೆದಿರುವವರ ಪತ್ತೆ ಕಾರ್ಯ ಮುಂದುವರೆದಿದೆ. ಹಾಗೆಯೇ ಮೃತಪಟ್ಟಫಲಾನುಭವಿಗಳ ಮಾಹಿತಿ ಕಲೆ ಹಾಕುತ್ತಿದ್ದು ಪಡಿತರ ಚೀಟಿಯಿಂದ ಅವರ ಹೆಸರು ತೆಗೆದು ಹಾಕಲಾಗುವುದು.

- ಶಾಮ್ಲಾ ಇಕ್ಬಾಲ್‌, ಆಯುಕ್ತೆ, ಆಹಾರ ಇಲಾಖೆ

ಇಲಾಖೆಗೆ ಮಾಹಿತಿಯಂತೆ 85,204 ತೆರಿಗೆ ಪಾವತಿದಾರರ ಪೈಕಿ 85,186 ಮಂದಿಯನ್ನು ಅಂತ್ಯೋದಯ ಮತ್ತು ಬಿಪಿಎಲ್‌ನಿಂದ ರದ್ದುಪಡಿಸಲಾಗಿದೆ. ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚು ಇರುವ 50,060 ಕುಟುಂಬಗಳನ್ನು ಪತ್ತೆ ಮಾಡಲಾಗಿದ್ದು ಈವರೆಗೆ 23,090 ಕುಟುಂಬಗಳ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿದ್ದು ಅಂತ್ಯೋದಯ ಮತ್ತು ಬಿಪಿಎಲ್‌ ಪಡಿತರ ಚೀಟಿ ಪಡೆದುಕೊಂಡಿದ್ದ 2,18,125 ಕುಟುಂಬಗಳನ್ನು ಗುರುತಿಸಿದ್ದು 1,13,107 ಕಾರ್ಡುಗಳನ್ನು ರದ್ದುಪಡಿಸಿ ಎಪಿಎಲ್‌ ಕಾಡುಗಳನ್ನಾಗಿ ಪರಿವರ್ತಿಸಲಾಗಿದೆ. ಸರ್ಕಾರಿ ಮತ್ತು ನಿವೃತ್ತ ನೌಕರರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ (ಎಚ್‌ಆರ್‌ಎಂಎಸ್‌) ಮಾಹಿತಿಯಲ್ಲಿ 2127 ಪಡಿತರ ಕಾರ್ಡುಗಳನ್ನು ಅಕ್ರಮವಾಗಿ ಪಡೆದಿರುವುದನ್ನು ಪತ್ತೆ ಮಾಡಿದ್ದು ಈ ಪೈಕಿ 2091 ಪಡಿತರ ಚೀಟಿಗಳನ್ನು ಎಪಿಎಲ್‌ ಮಾಡಲಾಗಿದೆ. ಹೀಗೆ 4,13,571 ಕಾರ್ಡುಗಳಲ್ಲಿ 2,81,539 ಪಡಿತರ ಚೀಟಿಗಳನ್ನು ಎಪಿಎಲ್‌ ಆಗಿ ಪರಿವರ್ತಿಸಲಾಗಿದೆ.

ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸುವಂತಹ ಕಾರ್ಯವನ್ನು ಇಲಾಖೆ ಮುಂದುವರೆಸಿದೆ.

click me!