Woman Harassment : ಪತಿಯ ತೊರೆದ ಸ್ತ್ರೀಯನ್ನು ಒತ್ತಾಯವಾಗಿ ‘ಬಂಧಿಸಿಟ್ಟ’ ಇನ್ಸ್‌ಪೆಕ್ಟರ್‌ಗೆ ದಂಡ

Kannadaprabha News   | Asianet News
Published : Dec 27, 2021, 07:45 AM ISTUpdated : Dec 27, 2021, 07:47 AM IST
Woman Harassment :  ಪತಿಯ ತೊರೆದ ಸ್ತ್ರೀಯನ್ನು ಒತ್ತಾಯವಾಗಿ  ‘ಬಂಧಿಸಿಟ್ಟ’ ಇನ್ಸ್‌ಪೆಕ್ಟರ್‌ಗೆ ದಂಡ

ಸಾರಾಂಶ

  ಪತಿಯ ತೊರೆದ ಸ್ತ್ರೀಯನ್ನು ‘ಬಂಧಿಸಿಟ್ಟ’ ಇನ್ಸ್‌ಪೆಕ್ಟರ್‌ಗೆ ದಂಡ  3 ವರ್ಷದ ಹೆಣ್ಣುಮಗು ಸಮೇತ 6 ತಿಂಗಳು ಪುನರ್ವಸತಿ ಕೇಂದ್ರದಲ್ಲಿ ಒತ್ತಾಯ ಪೂರ್ವಕವಾಗಿ ಇರಿಸಿದ್ದರು   ಇನ್ಸ್‌ಪೆಕ್ಟರ್‌, ಪುನರ್ವಸತಿ ಕೇಂದ್ರಕ್ಕೆ ತಲಾ 1 ಲಕ್ಷ ರು. ದಂಡ ಮಗು ಹೆಸರಲ್ಲಿ ಠೇವಣಿಗೆ ಹೈಕೋರ್ಟ್‌ ಆದೇಶ

ವರದಿ :  ವೆಂಕಟೇಶ್‌ ಕಲಿಪಿ

  ಬೆಂಗಳೂರು (ಡಿ.27):   ಪತಿಯೊಂದಿಗೆ (Husband)  ಬಾಳಲು ಬಯಸದ ಗೃಹಿಣಿ ಹಾಗೂ ಆಕೆಯ ಮೂರು ವರ್ಷದ ಹೆಣ್ಣು ಮಗಳನ್ನು ಆರು ತಿಂಗಳ ಕಾಲ ಪುನರ್ವಸತಿ ಕೇಂದ್ರದಲ್ಲಿ ಒತ್ತಾಯಪೂರ್ವಕವಾಗಿ ನೆಲೆಸುವಂತೆ ಮಾಡಿದ್ದ ಪ್ರಕರಣದಲ್ಲಿ ಬೆಳಗಾವಿಯ ಮಾಳಮಾರುತಿ ಠಾಣಾ ಪೊಲೀಸ್‌ ಇನ್ಸ್‌ಪೆಕ್ಟರ್‌ (Police) ಮತ್ತು ಉಜ್ವಲ ಪುನರ್ವಸತಿ ಕೇಂದ್ರಕ್ಕೆ ತಲಾ ಒಂದು ಲಕ್ಷ ರು. ದಂಡ ವಿಧಿಸಿ ಹೈಕೋರ್ಟ್‌ (High Court) ಆದೇಶಿಸಿದೆ. ಪುನರ್ವಸತಿ ಕೇಂದ್ರದಿಂದ ಬಿಡುಗಡೆಗೆ ಕೋರಿ ಶೋಭಾ ಎಂಬಾಕೆ (ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌.ಎಸ್‌. ಸಂಜಯ ಗೌಡ ಅವರು ಈ ಆದೇಶ ಮಾಡಿದ್ದಾರೆ.

ಮಾನವ ಕಳ್ಳಸಾಗಣೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆಯಿಂದ ರಕ್ಷಿಸಲ್ಪಟ್ಟಸಂತ್ರಸ್ತರಿಗೆ ಆಶ್ರಯ ಕಲ್ಪಿಸುವ ಕೇಂದ್ರದಲ್ಲಿ ಆರು ತಿಂಗಳ ಕಾಲ ಮಹಿಳೆಯನ್ನು (woman) ಸೆರೆಯಲ್ಲಿಟ್ಟದುರಾದೃಷ್ಟಕರ ಪ್ರಕರಣ ಇದಾಗಿದೆ ಎಂದು ಹೈಕೋರ್ಟ್‌ ನೊಂದು ನುಡಿದಿದೆ.

ಅಲ್ಲದೆ, ಇನ್ಸ್‌ಪೆಕ್ಟರ್‌ ಮತ್ತು ಪುನರ್ವಸತಿ ಕೇಂದ್ರವು ದಂಡ ಮೊತ್ತವನ್ನು ನ್ಯಾಯಾಲಯಕ್ಕೆ ಪಾವತಿಸಬೇಕು. ಆ ಹಣವನ್ನು ರಿಜಿಸ್ಟ್ರಾರ್‌ ಅವರು ಮಗುವಿನ ಹೆಸರಿನಲ್ಲಿ (ಮಗು ಪ್ರೌಢಾವಸ್ಥೆಗೆ ಬರುವವರೆಗೆ) ನಿಶ್ಚಿತ ಠೇವಣಿ ಇಡಬೇಕು. ಎರಡು ಲಕ್ಷಕ್ಕೆ ಬರುವ ಬಡ್ಡಿ ಹಣವನ್ನು ಮಹಿಳೆ ಪಡೆಯಬಹುದು ಎಂದು ಆದೇಶಿಸಿದೆ.

ಏನಿದು ಪ್ರಕರಣ?

22 ವರ್ಷದ ಶೋಭಾ 2007ರಲ್ಲಿ ಸಾಗರ್‌ ಎಂಬಾತನನ್ನು ಮದುವೆಯಾಗಿದ್ದರು (Marriage) . ಕೌಟುಂಬಿಕ ಕಲಹದಿಂದ ಗಂಡನನ್ನು ತೊರೆದು ಪ್ರತ್ಯೇಕವಾಗಿ ವಾಸಿಸಲು ಶೋಭಾ ತೀರ್ಮಾನಿಸಿದ್ದರು. 2021ರ ಮೇ 3ರಂದು ತನ್ನ ಮೂರು ವರ್ಷದ ಮಗಳೊಂದಿಗೆ ಮನೆ ತೊರೆದಿದ್ದರು. ಇದರಿಂದ ಮಾಳಮಾರುತಿ ಠಾಣೆಗೆ ಪತಿ ನಾಪತ್ತೆ ದೂರು ನೀಡಿದ್ದರು. ಮೇ 25ರಂದು ಶೋಭಾರನ್ನು ಠಾಣೆಗೆ ಕರೆಯಿಸಿದ್ದ ಇನ್ಸ್‌ಪೆಕ್ಟರ್‌ ಸುನೀಲ್‌ ಬಾಳಸಾಹೇಬ ಪಾಟೀಲ್‌, ರಾಜಿ ಸಂಧಾನ ಯತ್ನಿಸಿದ್ದರು. ಗಂಡನೊಂದಿಗೆ ಬಾಳಲು ಶೋಭಾ ನಿರಾಕರಿಸಿದ ಕಾರಣ ಆಕೆ ಮತ್ತು ಮೂರು ವರ್ಷದ ಮಗಳನ್ನು ಮಾನವ ಕಳ್ಳಸಾಗಣೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆ ಪ್ರಕರಣದಿಂದ ರಕ್ಷಿಸಲ್ಪಟ್ಟಸಂತ್ರಸ್ತರಿಗೆ ಆಶ್ರಯ ಕಲ್ಪಿಸುವ ಉಜ್ವಲ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದರು.

ಮಾನವೀಯತೆ ಕೊರತೆ

ಪ್ರಕರಣ ಸಂಬಂಧ ಪೊಲೀಸ್‌ ಠಾಣೆ (Police Station) ಹಾಗೂ ಪುರ್ನವಸತಿ ಕೇಂದ್ರದಲ್ಲಿ ಶೋಭಾ ದಾಖಲಿಸಿದ್ದ ಹೇಳಿಕೆ, ಇನ್ಸ್‌ಪೆಕ್ಟರ್‌ ಪ್ರಮಾಣಪತ್ರ ಪರಿಶೀಲಿಸಿದ ಹೈಕೋರ್ಟ್‌, ವಾಸ್ತವವಾಗಿ ಪುನರ್ವಸತಿ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸುವಂತೆ ಶೋಭಾ ಮನವಿಯೇ ಮಾಡಿರಲಿಲ್ಲ. ಪತಿಯೊಂದಿಗೆ ತೆರಳಲು ನಿರಾಕರಿಸಿದ್ದಕ್ಕೆ ಶೋಭಾ ಮತ್ತು ಆಕೆಯ ಮೂರು ವರ್ಷದ ಮಗಳನ್ನು ಇನ್ಸ್‌ಪೆಕ್ಟರ್‌ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇದು ಇನ್ಸ್‌ಪೆಕ್ಟರ್‌ ಅವರಲ್ಲಿನ ಸೂಕ್ಷ್ಮತೆ ಮತ್ತು ಮಾನವೀಯತೆ ಕೊರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ನಿರಂತರವಾಗಿ ಮನವಿ ಮಾಡಿದರೂ ಕೇಂದ್ರದಿಂದ ಹೊರ ಹೋಗಲು ಶೋಭಾಗೆ ಅನುಮತಿ ನೀಡಿರಲಿಲ್ಲ. ಆರು ತಿಂಗಳ ಕಾಲ ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿತು.

ಇದು ನೈತಿಕ ಪೊಲೀಸ್‌ಗಿರಿ

ಈ ಮಧ್ಯೆ ‘ತಾನು ನೆರೆಮನೆ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿದ್ದೆ. ಆತನೊಂದಿಗೆ ಜೀವನ ಸಾಗಿಸಲೆಂದು ವಿವಾಹ (Marriage) ರದ್ದುಪಡಿಸಿಕೊಳ್ಳಲು ತೀರ್ಮಾನಿಸಿದ್ದೆ. ಹೀಗಾಗಿ ಹೊರ ಪ್ರಪಂಚ ಅದರಲ್ಲೂ ನೆರೆಮನೆ ವ್ಯಕ್ತಿಯೊಂದಿಗೆ ಸಂಪರ್ಕ ಮಾಡಕೂಡದೆಂದು ಇನ್‌ಪೆಕ್ಟರ್‌ ತನ್ನನ್ನು ಬಲವಂತವಾಗಿ ಸೆರೆಯಲ್ಲಿಟ್ಟರು ’ ಎಂದು ಪುನರ್ವಸತಿ ಕೇಂದ್ರದ ಕೌನ್ಸೆಲಿಂಗ್‌ನಲ್ಲಿ ಶೋಭಾ ಹೇಳಿಕೆ ದಾಖಲಿಸಿದ್ದರು. ಅಂದರೆ ಅನ್ಯ ಕಾರಣಕ್ಕೆ ಇನ್ಸ್‌ಪೆಕ್ಟರ್‌ ಶೋಭಾರನ್ನು ಕೇಂದ್ರದಲ್ಲಿ ಒತ್ತಾಯಪೂರ್ವಕವಾಗಿ ಇರಿಸಿದ್ದರು ಎಂಬುದು ಗೊತ್ತಾಗುತ್ತದೆ. ಆದ್ದರಿಂದ ಇದು ಸೆರೆಯಲ್ಲಿ ಇಡುವುದಲ್ಲದೇ ಮತ್ತೇನೂ ಇಲ್ಲ. ಇನ್ಸ್‌ಪೆಕ್ಟರ್‌ ವೈವಾಹಿಕ ಸಂಬಂಧದಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ಇದು ನೈತಿಕ ಪೊಲೀಸ್‌ಗಿರಿ ಆಗುತ್ತದೆ ಎಂದು ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಮಹಿಳೆ ತನ್ನ ಸಂಗಾತಿಯೊಂದಿಗೆ ಜೀವಿಸಲು ಇಷ್ಟಪಟ್ಟಾಗ, ಅದಕ್ಕೆ ಸಂಬಂಧಪಟ್ಟವರು ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳುತ್ತಾರೆ. ಇನ್ಸ್‌ಪೆಕ್ಟರ್‌ ವೈವಾಹಿಕ ಸಂಬಂಧದಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ಇದು ನೈತಿಕ ಪೊಲೀಸ್‌ಗಿರಿ ಆಗುತ್ತದೆ. ಶೋಭಾ ನಡೆ ಬಗ್ಗೆ ಈ ನ್ಯಾಯಾಲಯ ಯಾವುದೇ ಅಭಿಪ್ರಾಯ ತಿಳಿಸಲು ಬಯಸುವುದಿಲ್ಲ. ಅವರ ಪತಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಆದರೆ, ಸುಮಾರು ಅರ್ಧವರ್ಷ ಶೋಭಾ ಮತ್ತು ಆಕೆಯ ಸಣ್ಣ ವಯಸ್ಸಿನ ಮಗಳನ್ನು ಆಶ್ರಯ ಮಂದಿರದಲ್ಲಿ ಸೆರೆಯಿಟ್ಟಕಾರಣ ಇನ್ಸ್‌ಪೆಕ್ಟರ್‌ ಮತ್ತು ಪುನರ್ವಸತಿ ಕೇಂದ್ರ ದಂಡ ಪಾವತಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ