ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ತೆರವಾಗುವ ಏಳು ಸ್ಥಾನಕ್ಕೆ ಒಂಭತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರ ಇಬ್ಬರು ಅಭ್ಯರ್ಥಿಗಳಿಗೆ ಅನುಮೋದಕರಾಗಿ ಶಾಸಕರ ಸಹಿ ಇಲ್ಲದ ಕಾರಣ ಅವರ ನಾಮಪತ್ರ ತಿರಸ್ಕೃತಗೊಳ್ಳಲಿದ್ದು, ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತದಾನವಿಲ್ಲದೆ ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.
ಬೆಂಗಳೂರು(ಜೂ.19): ವಿಧಾನಸಭೆಯಿಂದ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ತೆರವಾಗುವ ಏಳು ಸ್ಥಾನಕ್ಕೆ ಒಂಭತ್ತು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಆದರೆ, ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರ ಇಬ್ಬರು ಅಭ್ಯರ್ಥಿಗಳಿಗೆ ಅನುಮೋದಕರಾಗಿ ಶಾಸಕರ ಸಹಿ ಇಲ್ಲದ ಕಾರಣ ಅವರ ನಾಮಪತ್ರ ತಿರಸ್ಕೃತಗೊಳ್ಳಲಿದ್ದು, ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತದಾನವಿಲ್ಲದೆ ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.
ಪರಿಷತ್ ಟಿಕೆಟ್ ಸಿಕ್ಕರೂ ಆರ್. ಶಂಕರ್ ಗಳಗಳನೇ ಅತ್ತರು!
ಒಟ್ಟು ಏಳು ಸ್ಥಾನಗಳಿಗೆ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು, ಕಾಂಗ್ರೆಸ್‌ನ ಇಬ್ಬರು, ಜೆಡಿಎಸ್‌ನ ಓರ್ವ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿ ಎಂದು ಹೇಳಿ ಮಂಡಿಕಲ್ ನಾಗರಾಜ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಯಡವಳ್ಳಿ ಕೃಷ್ಣಗೌಡ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ.
ಆಡಳಿತಾರೂಢ ಬಿಜೆಪಿಯಿಂದ ಮಾಜಿ ಸಚಿವರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಸುನೀಲ್ ವಲ್ಯಾಪುರೆ ಮತ್ತು ಪಕ್ಷದ ಹಿರಿಯ ಕಾರ್ಯಕರ್ತ ಪ್ರತಾಪ್ ಸಿಂಹ ನಾಯಕ್, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಮತ್ತು ಹಾಲಿ ಸದಸ್ಯ ನಸೀರ್ ಅಹಮ್ಮದ್, ಜೆಡಿಎಸ್‌ನಿಂದ ಮುಖಂಡರಾದ ಗೋವಿಂದರಾಜು ಅವರು ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರ ಮೂರು ಪಕ್ಷದ ಅಭ್ಯರ್ಥಿಗಳು ಪ್ರತ್ಯೇಕವಾಗಿ ತಮ್ಮ ನಾಯಕರೊಂದಿಗೆ ವಿಧಾನಸೌಧಕ್ಕೆ ಆಗಮಿಸಿ ವಿಧಾನಸಭೆಯ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಕೋಲಾರದಲ್ಲಿ ನಸೀರ್ ಅಹಮದ್‌ಗೆ ಕಾಂಗ್ರೆಸ್ ಟಿಕೆಟ್
ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ, ಶಾಸಕ ಅರವಿಂದ ಲಿಂಬಾವಳಿ ಇತರರು ಸಾಥ್ ನೀಡಿದರು. ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಇತರರು ಭಾಗಿಯಾಗಿದ್ದರು. ಇನ್ನು ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಟಿ.ಎ.ಶರವಣ ಇತರರು ಉಪಸ್ಥಿತರಿದ್ದರು.
ಇಬ್ಬರ ನಾಮಪತ್ರ ಕ್ರಮಬದ್ಧ ಇಲ್ಲ:
ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಶುಕ್ರವಾರ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡಿರುವ ಮಂಡಿಕಲ್ ನಾಗರಾಜ್ ಅವರು ಸರಿಯಾದ ಕ್ರಮವಾಗಿ ಅರ್ಜಿ ಸಲ್ಲಿಕೆ ಮಾಡಿಲ್ಲ. ಅಲ್ಲದೇ, ಅನುಮೋದಕರ ಸಹಿಯೂ ಇಲ್ಲ. ಇನ್ನು ಪಕ್ಷೇತರ ಅಭ್ಯರ್ಥಿ ಯಡವಳ್ಳಿ ಕೃಷ್ಣಗೌಡ ಸಹ ಅನುಮೋದಕರ ಸಹಿ ಇಲ್ಲದೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಇಬ್ಬರ ಉಮೇದುವಾರಿಕೆ ತಿರಸ್ಕೃತಗೊಳ್ಳಲಿದೆ.
ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಫೈನಲ್ ಲಿಸ್ಟ್ ಪ್ರಕಟ: ಬಿಎಸ್‌ವೈ ಮೇಲುಗೈ!
ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಅಭ್ಯರ್ಥಿಗಳಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಸುನೀಲ್ ವಲ್ಯಾಪುರೆ, ಪ್ರತಾಪ್ ಸಿಂಹ ನಾಯಕ್ ಮಲ್ಲೇಶ್ವದ ಪಕ್ಷದ ಕಚೇರಿಗೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಬಿ ಫಾರಂ ಪಡೆದುಕೊಂಡರು. ಕ್ವೀನ್ಸ್ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಗೆ ತೆರಳಿದ ಬಿ.ಕೆ.ಹರಿಪ್ರಸಾದ್, ನಜೀರ್ ಅಹಮ್ಮದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿ ಫಾರಂ ನೀಡಿದರು. ಅಂತೆಯೇ ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ಅವರು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಬಿ ಫಾರಂ ಪಡೆದು ಆರ್ಶೀವಾದ ಪಡೆದುಕೊಂಡರು.
ಬಿಜೆಪಿಗೆ ನಾಲ್ಕು ಸ್ಥಾನಗಳು ಲಭಿಸಿದ್ದು, ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸಚಿವರಾಗಿ ಅನುಭವ ಇರುವ ಸುನೀಲ್ ವಲ್ಯಾಪುರೆ, ಪಕ್ಷದ ಕಾರ್ಯಕರ್ತನಾಗಿ ಶ್ರಮಿಸಿದ ಪ್ರತಾಪ್ ಸಿಂಹ ನಾಯಕ್ ಮತ್ತು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಸರ್ಕಾರ ಮತ್ತು ಪಕ್ಷವು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದು, ರಾಜ್ಯದ ಅಭಿವೃದ್ಧಿಗೆ ಸಕಲ ರೀತಿಯಲ್ಲೂ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಕರ್ನಾಟಕ MLC ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಜೆಡಿಎಸ್‌ನಿಂದ ಗೋವಿಂದರಾಜು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೋಲಾರ ಮೂಲದ ಸಾಮಾನ್ಯ ಕಾರ್ಯಕರ್ತರಾಗಿದ್ದು, ಆ ಭಾಗದಲ್ಲಿ ಪಕ್ಷವನ್ನು ಬೆಳೆಸುವುದು ಮತ್ತು ಪಕ್ಷದ ಹಿತದೃಷ್ಟಿಯಿಂದ ಅವರಿಗೆ ಟಿಕೆಟ್ ನೀಡಲಾಗಿದೆ. ಚಿಕ್ಕಬಳ್ಳಾಪುರ-ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟುಶಕ್ತಿ ಸಿಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.