'ಮಹಾ' ಮಳೆಯಿಂದ ಕರ್ನಾಟಕದಲ್ಲಿ ಆತಂಕ, ಕೃಷ್ಣಾ ಪ್ರವಾಹಕ್ಕೆ 4 ಸೇತುವೆ ಜಲಾವೃತ

By Kannadaprabha NewsFirst Published Jun 19, 2020, 7:27 AM IST
Highlights

ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಗುರುವಾರವೂ ಉತ್ತಮ ಮಳೆ ಸುರಿದಿದ್ದು ಕೊಡಗು ಜಿಲ್ಲೆಯಲ್ಲಿ ಈ ವರ್ಷವೂ ಭೂಕುಸಿತದ ಆತಂಕ ಎದುರಾಗಿದೆ.

ಬೆಂಗಳೂರು(ಜೂ.19): ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಗುರುವಾರವೂ ಉತ್ತಮ ಮಳೆ ಸುರಿದಿದ್ದು ಕೊಡಗು ಜಿಲ್ಲೆಯಲ್ಲಿ ಈ ವರ್ಷವೂ ಭೂಕುಸಿತದ ಆತಂಕ ಎದುರಾಗಿದೆ.

ಇದೇವೇಳೆ ಮಹಾರಾಷ್ಟ್ರದ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೃಷ್ಣಾ ಮತ್ತದರ ಉಪನದಿಗಳ ನೀರಿನ ಮಟ್ಟದಲ್ಲಿ ಮತ್ತಷ್ಟುಹೆಚ್ಚಳವಾಗಿದ್ದು ಗುರುವಾರ ಮತ್ತೆ ನಾಲ್ಕು ಕೆಳಹಂತದ ಸೇತುವೆಗಳು ಜಲಾವೃತಗೊಂಡಿವೆ.

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಮಳೆ..!

ಇದರೊಂದಿಗೆ ಜಲಾವೃತಗೊಂಡಿರುವ ಒಟ್ಟು ಸೇತುವೆಗಳ ಸಂಖ್ಯೆ ಏಳಕ್ಕೇರಿದೆ. ಏತನ್ಮಧ್ಯೆ ಶಿವಮೊಗ್ಗದ ಗಾಜನೂರಿನಲ್ಲಿ ತುಂಗಾ ನದಿಗೆ ಕಟ್ಟಿರುವ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಈ ಮೂಲಕ ಪ್ರಸಕ್ತ ಮಳೆಗಾಲದಲ್ಲಿ ಭರ್ತಿಗೊಂಡ ರಾಜ್ಯದ ಮೊದಲ ಜಲಾಶಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟಮತ್ತು ಜಲಾನಯನ ಪ್ರದೇಶಗಳಲ್ಲಿ ಬಿಡದೆ ಮಳೆ ಸುರಿಯುತ್ತಿದ್ದು ರಾಜಾಪುರ ಬ್ಯಾರೇಜ್‌ನಿಂದ 39,375 ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ಪರಿಣಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ತಾಲೂಕಿನಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ 4 ಸೇತುವೆಗಳು ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಮಾತ್ರವಲ್ಲದೆ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾನದಿಗೆ ಕಟ್ಟಿರುವ ಹಿಪ್ಪರಗಿ ಅಣೆಕಟ್ಟಿಗೆ ಒಂದೇ ದಿನದಲ್ಲಿ 44 ಸಾವಿರ ಕ್ಯುಸೆಕ್‌ ನೀರು ಬಂದಿದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಇನ್ನೂ ನಾಲ್ಕೈದು ದಿನ ಭಾರೀ ಮಳೆ ಮುನ್ಸೂಚನೆ

ಭೂಕುಸಿತದ ಭೀತಿ: ಕೊಡಗು ಜಿಲ್ಲೆಯ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಗುರುವಾರ ಭಾರೀ ಮಳೆ ಸುರಿದಿದ್ದು ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟಏರಿಕೆಯಾಗಿದೆ. ಏತನ್ಮಧ್ಯೆ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ಸಣ್ಣಮಟ್ಟಿನ ಬರೆ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಎನ್‌ಡಿಆರ್‌ಎಫ್‌ ಮಡಿಕೇರಿ ಚಾಮುಂಡೇಶ್ವರಿ ನಗರದ 5 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಮಾತ್ರವಲ್ಲದೆ ಅಪಾಯದಂಚಿನಲ್ಲಿರುವ ನಗರದ 127 ಮನೆಗಳಿಗೆ ನೋಟಿಸ್‌ ನೀಡಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗಗಳಲ್ಲೂ ಆಗಾಗ್ಗೆ ಮಳೆ ಸುರಿಯುತ್ತಿರುವುದರಿಂದ ತುಂಗಾ, ಭದ್ರಾ, ಶರಾವತಿ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಉತ್ತರ ಕನ್ನಡ, ಜಿಲ್ಲೆಯ ಕರಾವಳಿ ಭಾಗದಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ಮಲೆನಾಡಿನಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲೂ ಸಾಧಾರಣ ಮಳೆಯಾಗಿದೆ.

ಹಳ್ಳಪಾಲಾಗಿರುವ ವ್ಯಕ್ತಿಯ ದೇಹಕ್ಕೆ ಹುಡುಕಾಟ

ಕುಂದಾಪುರ: ಉಡುಪಿ ಜಿಲ್ಲೆಯ ಕಾಲ್ತೋಡು ಗ್ರಾಮದಲ್ಲಿ ಮಳೆ ನೀರಿಗೆ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಮಂಗಳವಾರ ಸಂಜೆ ಕಾಲುಜಾರಿ ಬಿದ್ದಿದ್ದ ವ್ಯಕ್ತಿಯ ಪತ್ತೆಗಾಗಿ ಗುರುವಾರವೂ ಶೋಧಕಾರ್ಯ ಮುಂದುವರೆದಿದೆ. ಬೈಂದೂರು ತಾಲೂಕು ಕಾಲ್ತೋಡು ಗ್ರಾಮದ ಬೋಳಂಬಳ್ಳಿಯ ಹೆದ್ದಾರಿಕೊಡ್ಲು ನಿವಾಸಿ ಗೋಪಾಲ್‌ ನಾಯ್‌್ಕ (51) ನಾಪತ್ತೆಯಾದವರು. ಕೃಷಿ ಕೆಲಸ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದಾಗ ಮಂಗಳವಾರ ಸಂಜೆ ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಗೋಪಾಲ ನಾಯ್‌್ಕ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದರು ಎನ್ನಲಾಗಿದೆ. ಸ್ಥಳೀಯರು ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಗುರುವಾರವೂ ಶೋಧ ಕಾರ್ಯ ಮುಂದುವರೆಸಿದ್ದಾರೆ.

click me!