Breaking: ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಬಂಧನ: ಲೋಕಾಯುಕ್ತ ಪೊಲೀಸರಿಂದ ವಶ

By Sathish Kumar KHFirst Published Mar 27, 2023, 7:10 PM IST
Highlights

ಅಕ್ರಮ ಹಣ ಸಂಪಾದನೆ ಹಾಗೂ ಲಂಚ ಪಡೆಯುವ ಆರೋಪದಡಿ ಎ1 ಆರೋಪಿಯಾಗಿದ್ದ ಬಿಜೆಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲಿಸರು ಬಂಧಿಸಿದ್ದಾರೆ.

ಬೆಂಗಳೂರು (ಮಾ.27): ಅಕ್ರಮ ಹಣ ಸಂಪಾದನೆ ಹಾಗೂ ಲಂಚ ಪಡೆಯುವ ಆರೋಪದಡಿ ಎ1 ಆರೋಪಿಯಾಗಿದ್ದ ಬಿಜೆಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲಿಸರು ಬಂಧಿಸಿದ್ದಾರೆ.

ಹೈಕೋರ್ಟ್‌ನಿಂದ ಪಡೆದಿದ್ದ ಮಧ್ಯಂತರ ಜಾಮೀನು ರದ್ದಾದ ಬೆನ್ನಲ್ಲೇ ಚುನಾವಣಾ ಕಾರ್ಯಕ್ರಮವನ್ನು ಮುಗಿಸಿಕೊಂಡು ಖಾಸಗಿ ಕಾರಿನಲ್ಲಿ ಹೊರಟ ಮಾಡಾಳ ವಿರುಪಾಕ್ಷಪ್ಪ ಅವರನ್ನು ತುಮಕೂರಿನ ಕ್ಯಾತಸಂದ್ರ ಟೋಲ್‌ಗೇಟ್‌ ಬಳಿ ಬಂಧಿಸಲಾಗಿದೆ. ಕಳೆದ ತಿಂಗಳು ಮಾಡಾಳು ವಿರುಪಾಕ್ಷಪ್ಪ ಅವರ ಪುತ್ರ ಬೆಂಗಳೂರಿನ ಖಾಸಗಿ ಕಚೇರಿಯಲ್ಲಿ 40 ಲಕ್ಷ ರೂ. ಲಂಚದ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿದ್ದರು. ಒಟ್ಟಾರೆ ದಾಳಿ ಮುಮದುವರಿಕೆ ವೇಳೆ 6 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿತ್ತು.

ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಮತ್ತೆ ಪರಾರಿ.?: ಲೋಕಾಯುಕ್ತ ಪೊಲೀಸರಿಗೆ ಚಳ್ಳೆ ಹಣ್ಣು!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ ಶಾಸಕ ಮಾಡಾಳು ವಿರುಪಾಕ್ಷಪ್ಪ ಸಾರ್ವಜನಿಕವಾಗಿ ಓಡಾಡುತ್ತಿದ್ದರು. ಆದರೆ, ಈ ಕುರಿತು ಲೋಕಾಯುಕ್ತ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಪುನಃ ಹೈಕೋರ್ಟ್‌ಗೆ ವಾಪಸ್‌ ವರ್ಗಾವಣೆ ಮಾಡಲಾಗಿತ್ತು. ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ ಮಾಡಿದ ಹೈಕೋರ್ಟ್‌ ನ್ಯಾಯಮೂರ್ತಿ ಕೆ. ನಟರಾಜನ್‌ ಅವರು ಮಾಡಾಳ್‌ ವಿರುಪಾಕ್ಷಪ್ಪ ಅವರಿಗೆ ನೀಡಲಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ್ದರು. ಇದರ ಬೆನ್ನಲ್ಲೇ, ಖಾಸಗಿ ಕಾರಿನಲ್ಲಿ ಬೆಂಗಳೂರಿನತ್ತ ಹೊರಟ ವಿರುಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬೆನ್ನತ್ತಿ ತುಮಕೂರು ಬಳಿಯ ಕ್ಯಾತಸಂದ್ರ ಟೋಲ್‌ ಬಳಿ ಬಂಧಿಸಿದ್ದಾರೆ.

ರಾತ್ರಿಯೇ ಕೋರ್ಟ್‌ ಮುಂದೆ ಹಾಜರು ಸಾಧ್ಯತೆ?: ಇನ್ನು ತುಮಕೂರು ಹೆದ್ದಾರಿಯ ಕ್ಯಾತಸಂದ್ರ ಟೋಲ್‌ ಬಳಿ ಮಾಡಾಳ್‌ ವಿರುಪಾಕ್ಷಪ್ಪ ಅವರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆದು ತರುತ್ತಿದ್ದಾರೆ. ಇನ್ನು ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕಾಗಿದೆ. ಸಾಧ್ಯವಾದಲ್ಲಿ ರಾತ್ರಿ ವೇಳೆಯೇ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಇಲ್ಲವಾದಲ್ಲಿ ಅವರ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಿ ಲೋಕಾಯುಕ್ತ ಪೊಲೀಸರ ವಶದಲ್ಲಿ ಇಟ್ಟುಕೊಳ್ಳಲಾಗುತ್ತದೆ. ನಾಳೆ, ಕೋರ್ಟ್‌ ಮುಂದೆ ಹಾಜರುಪಡಿಸಲಾಗುತ್ತದೆ. 

ಹೃದಯ ಸಮಸ್ಯೆ ನೆಪವೊಡ್ಡಿ ಜಾಮೀನು: ಇನ್ನು ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಕಚೇರಿ ಹಾಗೂ ಮನೆಯ ಮೇಲೆ ಲೋಕಾಯುಕ್ತರ ದಾಳಿಯ ವೇಳೆ 8 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಕ್ರಮ ಹಣ ಸಂಪಾದನೆಯಲ್ಲಿ ಎ1 ಆರೋಪಿ ಆಗಿದ್ದ ಮಾಡಾಲ್‌ ವಿರುಪಾಕ್ಷಪ್ಪ ಅವರ ವಿರುದ್ಧ ಬಂಧನದ ವಾರೆಂಟ್‌ ಇದ್ದರೂ 6 ದಿನ ಕಣ್ತಪ್ಪಿಸಿಕೊಂಡು ಅಜ್ಞಾತ ಸ್ಥಳದಲ್ಲಿದ್ದರು. ಇನ್ನು ಹೈಕೋರ್ಟ್‌ನಲ್ಲಿ ವಿರುಪಾಕ್ಷಪ್ಪ ಅವರಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೊತೆಗೆ, ಶಾಸಕರಾಗಿ ಹಲವು ಜವಾಬ್ದಾರಿಗಳು ಇರುವ ಹಿನ್ನೆಲೆಯಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರಿಂದ ಅವರಿಗೆ ಹೈಕೋರ್ಟ್‌ನಿಂದ ಜಾಮೀನು ನೀಡಲಾಗಿತ್ತು. 

Breaking: ಶಾಸಕ ಮಾಡಾಳು ವಿರುಪಾಕ್ಷಪ್ಪ ಜಾಮೀನು ರದ್ದು: ಚುನಾವಣೆಗೆ ಮುನ್ನ ಬಂಧನ ಭೀತಿ

ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಭಾರಿ ಮುಜುಗರ: ವಿರುಪಾಕ್ಷಪ್ಪಗೆ ಜಾಮೀನು ಸಿಕ್ಕಿದ ಕೆಲವೇ ಕ್ಷಣಗಳಲ್ಲಿ ಸ್ವಕ್ಷೇತ್ರ ಚನ್ನಗಿರಿಯಲ್ಲಿ ಕಾಣಿಸಿಕೊಂಡು ಅದ್ಧೂರಿ ಮೆರವಣಿಗೆಯಲ್ಲಿ ಮನೆಗೆ ಆಗಮಿಸಿದ್ದರು. ಇದರಿಂದ ತೀವ್ರ ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿತ್ತು. ಆದರೆ, ಎಲ್ಲ ಹಣಕ್ಕೂ ದಾಖಲೆಗಳಿದ್ದು, ದೋಷಮುಕ್ತರಾಗುವ ಬಗ್ಗೆ ಹೇಳಿಕೊಂಡಿದ್ದರು. ಇದರಿಂದ ಬಿಜೆಪಿ ನಾಯಕರು ಕೂಡ ಸಮಾಧಾನ ಆಗಿದ್ದರು. ಆದರೆ, ಈಗ ಪುನಃ ಮಧ್ಯಂತರ ಜಾಮೀನು ರದ್ದು ಆಗಿದ್ದು, ಬಿಜೆಪಿ ಶಾಸಕರೊಬ್ಬರು ಜೈಲು ಸೇರುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಭಾರಿ ಮುಖಭಂಗ ಆಗಲಿದೆ.

ದಾವಣಗೆರೆಯಲ್ಲಿ ಲೋಕಾಯುಕ್ತರ ಪರಿಶೀಲನೆ:  ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ದಾವಣಗೆರೆಯ ಚನ್ನೇಶಪುರದ ಮನೆಯಲ್ಲಿ  ಲೋಕಾಯುಕ್ತ ಅಧಿಕಾರಿಗಳು ವಿರುಪಾಕ್ಷಪ್ಪ ಅವರಿಗಾಗಿ ಶೋಧ ಮಾಡಿದ್ದರು. ಮನೆಯ ಕೋಣೆ ಕೋಣೆಗಳಲ್ಲಿ ಅಧಿಕಾರಿಗಳ ಪರಿಶೀಲನೆ ಮಾಡಿದ ನಂತರ ಪರಾರಿ ಆಗಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇನ್ನು ಮಾಡಾಳ್‌ ವಿರುಪಾಕ್ಷಪ್ಪ ಬೆಂಗಳೂರಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದರು. ಇದರ ಬೆನ್ನಲ್ಲೇ ಎರಡು ತಂಡಗಳಲ್ಲಿ ಅವರ ಬಂಧನಕ್ಕೆ ಬಲೆ ಬೀಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ತುಮಕೂರಿನ ಬಳಿ ಬಂಧಿಸಿ ಕರೆದೊಯ್ದಿದ್ದಾರೆ.

click me!