ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಭಾಗವಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು ಇದೇ ಮೊದಲ ಬಾರಿಗೆ ಮೈಸೂರಿನ ಕಾಡಂಚಿನ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಸರಗೂರು(ಮೈಸೂರು) (ನ.19): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲಾಧಿಕಾರಿ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಭಾಗವಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು ಇದೇ ಮೊದಲ ಬಾರಿಗೆ ಮೈಸೂರಿನ ಕಾಡಂಚಿನ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸರಗೂರು ತಾಲೂಕಿನ ಭೀಮನಕೊಲ್ಲಿ ಮಹದೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ನಡೆಯಲಿರುವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಬಳಿಕ ಗ್ರಾಮದ ಆಶ್ರಮ ಶಾಲೆಯಲ್ಲಿ ಅಶೋಕ್ ವಾಸ್ತವ್ಯ ಹೂಡುವರು.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗ್ಗೆ 10ಕ್ಕೆ ಎಚ್.ಡಿ.ಕೋಟೆಯಿಂದ ತೋಟಗಾರಿಕೆ ಕೇಂದ್ರಕ್ಕೆ ಆಗಮಿಸಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ಈ ವೇಳೆ ಸಚಿವರಿಗೆ ಹಾಡಿಯ ಜನ ಪೂರ್ಣಕುಂಭ ಸ್ವಾಗತ ನೀಡುವರು. ನಂತರ ಸಚಿವರು, ಶಾಸಕರು ಮತ್ತು ಅಧಿಕಾರಿಗಳನ್ನು ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್ ಮೂಲಕ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಕರೆತರುವರು. ತರುವಾಯ 11.15ಕ್ಕೆ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಚಿವರು ಮತ್ತು ಗಣ್ಯರಿಂದ ದೇವರಿಗೆ ವಿಶೇಷ ಪೂಜೆ ನಡೆಯಲಿದೆ. ನಂತರ 11.45ಕ್ಕೆ ಗ್ರಾಮದಲ್ಲಿ ವಿವಿಧ ಇಲಾಖೆಯಿಂದ ತೆರೆದ ಮಳಿಗೆಯನ್ನು ಇದೇ ವೇಳೆ ಸಚಿವರು ಉದ್ಘಾಟಿಸುವರು.
ವಿಧಾನಸೌಧ ಮುಂಭಾಗದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ: ಸಚಿವ ಅಶೋಕ್
ಬಳಿಕ ಕಾರ್ಯಕ್ರಮ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಇದೇ ವೇಳೆ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗಿರಿಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆ ನಂತರ ಸಂಜೆ 4ಕ್ಕೆ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಅರ್ಜಿಗಳನ್ನು ವಿಲೇವಾರಿ ನಡೆಸಲಿದ್ದಾರೆ. ಸಂಜೆ 5ಕ್ಕೆ ವೇದಿಕೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದ್ದು, ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಸವಲತ್ತುಗಳನ್ನೂ ಸಚಿವರು ಫಲಾನುಭವಿಗಳಿಗೆ ವಿತರಿಸುವರು.
ಬಳಿಕ ಅಶೋಕ್ ಅವರಿಂದ ಕೆಂಚನಹಳ್ಳಿ ಗ್ರಾಮ ಪರಿಶೀಲನೆ ಮತ್ತು ಗ್ರಾಮದ ಅಭಿವೃದ್ಧಿ ಕುರಿತು ಗ್ರಾಮಸ್ಥರೊಂದಿಗೆ ಚರ್ಚೆ, ರಾತ್ರಿ 8ಕ್ಕೆ ಗ್ರಾಮಸಭೆ, ಸ್ವಾಮಿ ವಿವೇಕಾನಂದ ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಬಳಿಕ ಮಕ್ಕಳೊಡನೆ ಭೋಜನ ಸ್ವೀಕರಿಸಿ, ಅಲ್ಲೇ ವಾಸ್ತವ್ಯ ಹೂಡುವರು.
ಕಾಂಗ್ರೆಸ್ ಭ್ರಷ್ಟ, ಗೂಂಡಾ ಪಕ್ಷ: ಅಶೋಕ್, ಸುಧಾಕರ್
ಮರುದಿನ ಬೆಳಗ್ಗೆ ಹೊಸಹಳ್ಳಿ ಹಾಡಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತ ಕರಿಯಪ್ಪ ಅವರ ಮನೆಗೆ ಭೇಟಿ ನೀಡಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವರು. ಬೆಳಗ್ಗೆ 10ಕ್ಕೆ ಅಲ್ಲೇ ಉಪಾಹಾರ ಸೇವಿಸಿ, ಹಾಡಿ ಜನರೊಂದಿಗೆ ಅಲ್ಲಿನ ಕುಂದುಕೊರತೆ ಕುರಿತು ಚರ್ಚಿಸುವರು. ಬೆಳಗ್ಗೆ 10.30ಕ್ಕೆ ಪೌತಿ ಖಾತೆ ಆಂದೋಲನ ನಡೆಯಲಿದ್ದು, ಬೆಳಗ್ಗೆ 11ಕ್ಕೆ ಕೋಹಳ, ಕೆಂಚನಹಳ್ಳಿ, ಡಿ.ಬಿ.ಕುಪ್ಪೆ, ಬಿದರಹಳ್ಳಿ ಗ್ರಾಮಗಳ ಜಮೀನು ಮತ್ತು ಜನರ ಸಮಸ್ಯೆಗಳ ಬಗ್ಗೆ ಶಾಸಕರು ಮತ್ತು ಸಾರ್ವಜನಿಕರೊಡನೆ ಚರ್ಚಿಸುವರು. ಬಳಿಕ ಸಚಿವರಿಗೆ ಬೀಳ್ಕೊಡುಗೆ ನೀಡಲಾಗುವುದು.