ಹೊಸ ವರ್ಷಾಚರಣೆ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್‌..!

By Kannadaprabha News  |  First Published Jan 3, 2024, 4:37 AM IST

ಜ.1 ರಿಂದಲೇ ಬ್ಯಾಗ್‌ ಪೈಪರ್‌ (ಬಿಪಿ), ಓಲ್ಡ್‌ ಟಾವೆರಿನ್‌ (ಓಟಿ), 8 ಪಿಎಂ ಮದ್ಯದ ದರ ಒಂದು ಕೇಸ್‌ಗೆ ಸಾವಿರ ರುಪಾಯಿಗೂ ಅಧಿಕ ಹೆಚ್ಚಳವಾಗಿದೆ. ಅಬಕಾರಿ ಇಲಾಖೆ ದರ ಹೆಚ್ಚಳ ಮಾಡಿಲ್ಲ. ಉತ್ಪಾದನಾ ವೆಚ್ಚ ಅಧಿಕವಾಗಿದ್ದರಿಂದ ಮದ್ಯ ತಯಾರಿಕಾ ಕಂಪನಿಗಳು ದರ ಹೆಚ್ಚಳ ಮಾಡಿವೆ ಎಂದು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.


ಬೆಂಗಳೂರು(ಜ.03):  ಹೊಸ ವರ್ಷಾಚರಣೆ ಬೆನ್ನಲ್ಲೇ ಮದ್ಯ ತಯಾರಿಕಾ ಕಂಪನಿಗಳು ಕೆಳ ವರ್ಗ ಹೆಚ್ಚಾಗಿ ಬಳಸುವ ಮೂರು ಬ್ರ್ಯಾಂಡ್‌ ಮದ್ಯಗಳ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದು ಪಾನಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜ.1 ರಿಂದಲೇ ಬ್ಯಾಗ್‌ ಪೈಪರ್‌ (ಬಿಪಿ), ಓಲ್ಡ್‌ ಟಾವೆರಿನ್‌ (ಓಟಿ), 8 ಪಿಎಂ ಮದ್ಯದ ದರ ಒಂದು ಕೇಸ್‌ಗೆ ಸಾವಿರ ರುಪಾಯಿಗೂ ಅಧಿಕ ಹೆಚ್ಚಳವಾಗಿದೆ. ಅಬಕಾರಿ ಇಲಾಖೆ ದರ ಹೆಚ್ಚಳ ಮಾಡಿಲ್ಲ. ಉತ್ಪಾದನಾ ವೆಚ್ಚ ಅಧಿಕವಾಗಿದ್ದರಿಂದ ಮದ್ಯ ತಯಾರಿಕಾ ಕಂಪನಿಗಳು ದರ ಹೆಚ್ಚಳ ಮಾಡಿವೆ ಎಂದು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ಕೆಳ ವರ್ಗದ ಜನರು ಹೆಚ್ಚಾಗಿ ಸೇವಿಸುತ್ತಿದ್ದ ಬ್ರ್ಯಾಂಡ್‌ಗಳ ದರವೇ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ದರ ಹೆಚ್ಚಳಕ್ಕೆ ಪಾನಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರೆ, ಮದ್ಯ ಮಾರಾಟ ಇಳಿಕೆಯಾಗಬಹುದು ಎಂದು ಬಾರ್‌ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಮತ್ತೊಂದೆಡೆ, ಈ ಬ್ರ್ಯಾಂಡ್‌ ಬಿಟ್ಟು ಇದಕ್ಕಿಂತಲೂ ಕಡಿಮೆ ಬೆಲೆಯ ಮದ್ಯಗಳತ್ತ ಪಾನ ಪ್ರಿಯರು ಹೊರಳಬಹುದೂ ಎಂದೂ ಹೇಳಲಾಗುತ್ತಿದೆ.

Tap to resize

Latest Videos

80ನೇ ವರ್ಷದಲ್ಲಿ ಬಿಲಿಯನೇರ್‌ ಪಟ್ಟಿಗೆ ಸೇರಿದ 8ಪಿಎಂ ವಿಸ್ಕಿ ಮಾಲೀಕ!

ಪ್ರದೇಶಕ್ಕೆ ತಕ್ಕಂತೆ ಹೆಚ್ಚಳ: ಎಂಆರ್‌ಪಿ ಔಟ್‌ಲೆಟ್‌ಗಳಲ್ಲಿ 180 ಎಂಎಲ್‌ನ ಓಟಿ ಮತ್ತು 8 ಪಿಎಂ 100 ರಿಂದ 123 ರುಪಾಯಿಗೆ, ಬಿಪಿಯು 123 ರಿಂದ 159 ರುಪಾಯಿಗೆ ಹೆಚ್ಚಳವಾಗಿದೆ. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ವೈನ್‌ ಸ್ಟೋರ್‌ಗಳಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಬೆಲೆ ಹೆಚ್ಚಳಕ್ಕೆ ಮದ್ಯದ ಕಂಪನಿಗಳು ಈ ಮೊದಲೇ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದು ಇದಕ್ಕೆ ಇಲಾಖೆ ಅನುಮತಿ ನೀಡಿದೆ.

ಬೆಲೆ ಹೆಚ್ಚಳಕ್ಕೆ ಅಬಕಾರಿ ಇಲಾಖೆ ಅನುಮತಿ ನೀಡಿದ ತಕ್ಷಣ ಇದನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮ( ಕೆಎಸ್‌ಬಿಸಿಎಲ್‌ )ಕ್ಕೆ ತಿಳಿಸಲಿದೆ. ಬಳಿಕ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ವೈನ್ಸ್‌ ಸ್ಟೋರ್‌ ಸೇರಿದಂತೆ ಮದ್ಯ ಸರಬರಾಜುದಾರರಿಗೆ ಕೆಎಸ್‌ಬಿಸಿಎಲ್‌ ಹೊಸ ದರಗಳನ್ನು ವಿಧಿಸಿ ಮದ್ಯ ಪೂರೈಸಲಿದೆ. ಬೆಲೆ ಹೆಚ್ಚಳದ ಮುನ್ಸೂಚನೆ ಇದ್ದುದ್ದರಿಂದ ಕೆಲವರು ಮೊದಲೇ ಹೆಚ್ಚಿನ ಪ್ರಮಾಣದಲ್ಲಿ ನಿಗಮದಿಂದ ಈ ಬ್ರಾಂಡ್‌ನ ಮದ್ಯಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸರ್ಕಾರ ಬೆಲೆ ಹೆಚ್ಚಿಸಿಲ್ಲ

ರಾಜ್ಯ ಸರ್ಕಾರ ಯಾವುದೇ ಮದ್ಯದ ದರ ಹೆಚ್ಚಿಸಿಲ್ಲ, ತೆರಿಗೆಯನ್ನೂ ಜಾಸ್ತಿ ಮಾಡಿಲ್ಲ, ಬದಲಾಗಿ ಮದ್ಯ ತಯಾರಕರು ದರ ಹೆಚ್ಚಿಸಿರಬಹುದು ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದ್ದಾರೆ. 

ತಿಪಟೂರು ನಗರದಲ್ಲಿ ಮದ್ಯ ಮಾರಾಟ ನಿಷೇಧ

ಕೇಸ್‌ ಮದ್ಯ ಹಳೆಯ ದರ ಹೊಸ ದರ

ಬಿಪಿ 5357 6943
ಓಟಿ 4341 5357
8 ಪಿಎಂ 4341 5357

ಮದ್ಯ ತಯಾರಿಕಾ ಕಂಪನಿಗಳು ಗುಣಮಟ್ಟಕ್ಕೆ ತಕ್ಕಂತೆ ಬೆಲೆಯಲ್ಲಿ 18 ಸ್ಲ್ಯಾಬ್‌ಗಳನ್ನು ಹೊಂದಿದ್ದು ಓಟಿ, 8 ಪಿಎಂ ಮೂರನೇ ಸ್ಲ್ಯಾಬ್‌ನಿಂದ 4 ನೇ ಸ್ಲ್ಯಾಬ್‌ಗೆ ಸ್ಥಳಾಂತರವಾಗಿವೆ. 4 ನೇ ಸ್ಲ್ಯಾಬ್‌ನಲ್ಲಿದ್ದ ಬಿಪಿ 5 ನೇ ಸ್ಥಾನಕ್ಕೆ ಪಲ್ಲಟವಾಗಿದೆ ಎಂದು  ಬೆಂಗಳೂರು ಲಿಕ್ಕರ್‌ ಅಸೋಸಿಯೇಷನ್‌ ಅಧ್ಯಕ್ಷ ಲೋಕೇಶ್‌ ತಿಳಿಸಿದ್ದಾರೆ.  

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯದ ತೆರಿಗೆ ಹೆಚ್ಚಿಸುವ ಮುನ್ನ ಸರ್ಕಾರ ತಿಳಿಸುತ್ತದೆ, ಅವರ ಮಾಲು ಅವರ ದರ, ಹಾಗಾಗಿ ಮದ್ಯ ತಯಾರಕರು ದರ ಹೆಚ್ಚಳ ಮಾಡಿಕೊಂಡಿರಬಹುದು. ಆದರೆ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. ತೆರಿಗೆ ಸಂಗ್ರಹಕ್ಕೆ ನಮಗೆ ಯಾವುದೇ ಗುರಿ ನೀಡಿಲ್ಲ, ಆದರೆ ಹೆಚ್ಚಿನ ಆದಾಯ ನಿರೀಕ್ಷೆ ಇದೆ. ಒಳ್ಳೆಯ ಮದ್ಯ ಕೊಡಲು ನಾವು ಪ್ರಯತ್ನಪಡುತ್ತೇವೆ ಎಂದು ತಿಳಿಸಿದರು.

click me!