ಕ್ಲಿನಿಕ್ ನಡೆಸಲು ಅನುಮತಿ ನಿರಾಕರಿಸಿ ಹಿಂಬರಹ ನೀಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಅಣ್ಣಯ್ಯ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಸಮುದಾಯ ವೈದ್ಯಕೀಯ ಸೇವೆ ಮತ್ತು ಅಗತ್ಯ ಔಷಧಗಳು (ಸಿಎಂಎಸ್-ಇಡಿ) ಎಂಬ ವಿಷಯದಲ್ಲಿ ಡಿಪ್ಲೋಮ ಪಡೆದವರನ್ನು ವೈದ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಬೆಂಗಳೂರು(ಜ.03): ಅರೆ ವೈದ್ಯಕೀಯ (ಪ್ಯಾರಾ ಮೆಡಿಕಲ್) ಕೋರ್ಸ್ ಅಧ್ಯಯನ ನಡೆಸಿದ ವ್ಯಕ್ತಿಗೆ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ಒದಗಿಸಲು ಅನುಮತಿ ನಿರಾಕರಿಸಿದ್ದ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿರುವ ಹೈಕೋರ್ಟ್, ನಿಗದಿತ ಅರ್ಹತೆ ಪಡೆಯದೇ ಗ್ರಾಮೀಣ ಭಾಗಗಳಲ್ಲಿ ಅನಧಿಕೃತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವ ಮೂಲಕ ಜನರನ್ನು ವಂಚಿಸುತ್ತಿರುವ ಪ್ರಕರಣಗಳಿಗೆ ಅಂತ್ಯ ಹಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಕ್ಲಿನಿಕ್ ನಡೆಸಲು ಅನುಮತಿ ನಿರಾಕರಿಸಿ ಹಿಂಬರಹ ನೀಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಅಣ್ಣಯ್ಯ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಸಮುದಾಯ ವೈದ್ಯಕೀಯ ಸೇವೆ ಮತ್ತು ಅಗತ್ಯ ಔಷಧಗಳು (ಸಿಎಂಎಸ್-ಇಡಿ) ಎಂಬ ವಿಷಯದಲ್ಲಿ ಡಿಪ್ಲೋಮ ಪಡೆದವರನ್ನು ವೈದ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಇಂಥದ್ದೇ ಸ್ಥಳಕ್ಕೆ ವರ್ಗಾವಣೆ ಕೇಳುವ ಹಕ್ಕು ನೌಕರರಿಗಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು !
ಅರ್ಜಿದಾರರ ವಿದ್ಯಾಭ್ಯಾಸಕ್ಕೆ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆಪಿಎಂಎ) ಕಾಯ್ದೆ ಸೆಕ್ಷನ್ 2(ಕೆ) ಅನ್ವಯವಾಗುವುದಿಲ್ಲ. ಆದ ಕಾರಣ ಅವರನ್ನು ವೈದ್ಯರೆಂದು ಪರಿಗಣಿಸಲು ಹಾಗೂ ಖಾಸಗಿಯಾಗಿ ವೈದ್ಯಕೀಯ ಸೇವೆ ಮುಂದುವರಿಸಲು ಅನುಮತಿಸಲಾಗದು ಆದೇಶದಲ್ಲಿ ತಿಳಿಸಿದೆ.
ಬಂಗಾರಪೇಟೆಯಲ್ಲಿ ಕ್ಲಿನಿಕ್
ಅರ್ಜಿದಾರರು ಸಿಎಂಎಸ್-ಇಡಿ ಪೂರ್ಣಗೊಳಿಸಿ, ದೆಹಲಿಯಲ್ಲಿ ಅರೆ ವೈದ್ಯಕೀಯ ಕೋರ್ಸ್ ತರಬೇತಿ ಪಡೆದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನ ಅಥವಾ ಮಾರ್ಗಸೂಚಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಂಬೈನ ಕೇಂದ್ರ ಅರೆ ವೈದ್ಯಕೀಯ ಶಿಕ್ಷಣ ಮಂಡಳಿಯಿಂದ ಪ್ರಮಾಣಪತ್ರ ಪಡೆದುಕೊಂಡಿದ್ದರು. ಈ ಪ್ರಮಾಣ ಪತ್ರದ ಆಧಾರದಲ್ಲಿ ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್‌ನ ಮಿನಿ ಇಬ್ರಾಹಿಂ ರಸ್ತೆಯಲ್ಲಿ ಸಂಗೀತ ಕ್ಲಿನಿಕ್ ಎಂಬ ಹೆಸರಿನಲ್ಲಿ ಕ್ಲಿನಿಕ್ ಆರಂಭಿಸಿ ಹಲವು ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದರು.
ಆದರೆ, ರಾಜ್ಯ ಸರ್ಕಾರ 2008ರ ಜ.23ರಿಂದ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ-2007’ ಅನ್ನು ಜಾರಿಗೊಳಿಸಿದೆ. ಈ ಕಾಯ್ದೆಯಂತೆ ಖಾಸಗಿಯಾಗಿ ವೈದ್ಯಕೀಯ ಸೇವೆ ಸಲ್ಲಿಸಲು ಅರ್ಜಿ ಸಲ್ಲಿಸಿ ನೋಂದಣಿ ಮಾಡಿದ ಬಳಿಕ ಸೇವೆ ಮುಂದುವರೆಸಬೇಕು ಎಂದು ತಿಳಿಸಲಾಗಿತ್ತು. ಅದರಂತೆ, ಅರ್ಜಿದಾರರು ತಮ್ಮ ಕ್ಲಿನಿಕ್‌ನ ನೋಂದಣಿಗಾಗಿ ಆನ್ ಲೈನ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸರ್ಕಾರ ತಿರಸ್ಕರಿಸಿ ಹಿಂಬರಹ ನೀಡಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.