
ಬೆಂಗಳೂರು(ಜು.30): ವಾಹನ ಚಾಲನೆ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ ’ಅವೇಕ್’ ನಗರದ ಕಾಸಿಯಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಸಹಭಾಗಿತ್ವದಲ್ಲಿ ಆರಂಭಿಸಲಾಗುತ್ತಿರುವ ‘ಪ್ರಾದೇಶಿಕ ಮಹಿಳಾ ವಾಹನ ಚಾಲಕರ ತರಬೇತಿ ಕೇಂದ್ರದ (ಆರ್‌ಡಿಟಿಸಿ) ಪೂರ್ವಭಾವಿ (ಕರ್ಟನ್ ರೈಸರ್) ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯ ಮಂದಿ ವಾಹನ ಚಾಲನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ವಾಹನ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಉದ್ದೇಶದಿಂದ ಪ್ರತ್ಯೇಕ ಪ್ರಾಧಿಕಾರ ಸ್ಥಾಪನೆ ಮಾಡುವ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ನೂತನ ಪ್ರಾಧಿಕಾರಕ್ಕೆ ಗ್ರಂಥಾಲಯ, ಭಿಕ್ಷುಕರ ಕರ (ಸೆಸ್) ಸಂಗ್ರಹಿಸುವ ಮಾದರಿಯಲ್ಲಿ ಬಂಡವಾಳ ಸಂಗ್ರಹಿಸುವ ಚಿಂತನೆ ಇದೆ ಎಂದರು.
ಪ್ರಸಕ್ತ ವರ್ಷದಿಂದಲೇ ಸಾರಿಗೆ ಇಲಾಖೆಯಿಂದ ಚಾಲಕರ ದಿನ ಆಚರಣೆ ಮಾಡಲಾಗುವುದು. ಈ ವೇಳೆ ಸಾರಿಗೆ ನಿಗಮಗಳ ಮಾದರಿಯಲ್ಲಿ ಅಪಘಾತ ರಹಿತ ವಾಹನ ಚಾಲನೆ ಮಾಡುವ ಆಟೋ, ಟ್ಯಾಕ್ಷಿ ಸೇರಿದಂತೆ ಇನ್ನಿತರೆ ವಾಹನ ಚಾಲನೆ ಮಾಡುತ್ತಿರುವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಕಾಶಿಯಾತ್ರೆ ಸಬ್ಸಿಡಿ 7500ಗೆ ಹೆಚ್ಚಳಕ್ಕೆ ಚಿಂತನೆ: ಸಚಿವ ರಾಮಲಿಂಗಾರೆಡ್ಡಿ
ಆರ್‌ಡಿಟಿಸಿಗೆ ಅಗತ್ಯ ನೆರವು:
ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಅವೇಕ್ ಸಂಸ್ಥೆ ಆರಂಭಿಸುತ್ತಿರುವ ಪ್ರಾದೇಶಿಕ ಮಹಿಳಾ ವಾಹನ ಚಾಲಕರ ತರಬೇತಿ ಸಂಸ್ಥೆಗೆ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಅಗತ್ಯವಿದ್ದರೆ, ಚಾಲನಾ ತರಬೇತಿಯ ಟ್ರ್ಯಾಕ್ ರಚನೆ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಇಲಾಖೆಯ ಎಂಜಿನಿಯರ್‌ಗಳನ್ನು ನಿಯೋಜನೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಗಾಯಿತ್ರಿದೇವಿ ಮಾತನಾಡಿ, ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಪ್ರತಿ ವರ್ಷ ಸಾರಿಗೆ ಇಲಾಖೆಯಿಂದ ಸಂಚಾರ ಸುರಕ್ಷತಾ ಶಿಬಿರಗಳನ್ನು ನಡೆಸಲಾಗುತ್ತಿದ್ದರೂ ಅಪಘಾತ ಪ್ರಮಾಣ ಕಡಿಮೆ ಆಗುತ್ತಿಲ್ಲ. ಮಾನವನ ತಪ್ಪಿನಿಂದ ಅಪಘಾತಗಳು ಸಂಭವಿಸುತ್ತಿದ್ದು, ಪ್ರತಿಯೊಬ್ಬರು ಜವಾಬ್ದಾರಿಯಿಂ¨ ವಾಹನ ಚಾಲನೆ ಮಾಡಬೇಕು. ಆರ್‌ಡಿಟಿಸಿಯಲ್ಲಿ ಅತ್ಯುನ್ನತ ತಂತ್ರಜ್ಞಾನದ ಮೂಲಕ ಚಾಲನಾ ತರಬೇತಿ ನೀಡಬೇಕಿದೆ ಎಂದು ಹೇಳಿದರು.
ಬಿಎಂಟಿಸಿಗೆ ಶೀಘ್ರವೇ 1000 ಎಲೆಕ್ಟ್ರಿಕ್ ಬಸ್ ಸೇರ್ಪಡೆ: ಸಚಿವ ರಾಮಲಿಂಗಾರೆಡ್ಡಿ
ಸಮಾರಂಭದಲ್ಲಿ ಬಿಎಂಟಿಸಿಯ ಮೊದಲ ಚಾಲಕಿ ಪ್ರೇಮಾ ರಾಮಪ್ಪ, ಕೆಎಸ್‌ಆರ್‌ಟಿಸಿಯ ಚಾಲಕಿ/ನಿರ್ವಾಹಕಿ ವಸಂತಮ್ಮ, ಆಟೋ ಚಾಲಕಿ ಛಾಯಾ ಹಾಗೂ ರಾಜೇಶ್ವರಿ ಮೊದಲಾದ ಮಹಿಳಾ ಉದ್ಯಮಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಅವೇಕ್‌ನ ಅಧ್ಯಕ್ಷೆ ಡಾ. ಆರ್.ರಾಜೇಶ್ವರಿ, ಖಜಾಂಚಿ ಭುವನಾ, ಗೌರವ ಕಾರ್ಯದರ್ಶಿ ಎನ್.ಆರ್.ಆಶಾ ಮೊದಲಾದವರಿದ್ದರು.
ಎಲ್ಲ ಕ್ಷೇತ್ರದಲ್ಲಿ ಮಹಿಳೆಯರುವ ಸಾಧನೆ ಮಾಡುತ್ತಿದ್ದಾರೆ. ಆದರೆ, ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬರುತ್ತಿಲ್ಲ. ರಾಜಕೀಯ ಪ್ರವೇಶಕ್ಕೆ ಮೀಸಲಾತಿ ಹುಡುಕಬೇಡಿ. ಶ್ರಮಪಟ್ಟು ಕೆಲಸ ಮಾಡಿ ಆಗ ಜನರು ನಿಮ್ಮನ್ನು ಗುರುತಿಸಿ ಬೆಂಬಲಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ