
ಬೆಂಗಳೂರು(ಜು.30): ಮಹಿಳೆಯರು ಉಚಿತವಾಗಿ ಸರ್ಕಾರಿ ಸಾರಿಗೆಯಲ್ಲಿ ಪ್ರಯಾಣಿಸುವ ‘ಶಕ್ತಿ’ ಯೋಜನೆ ಜಾರಿ ಸಂಬಂಧ ಉಚಿತ ಪ್ರಯಾಣದ ಟಿಕೆಟ್ ಮೌಲ್ಯದ ಮೊತ್ತ ಸರ್ಕಾರದಿಂದ ನಿಗಮಗಳಿಗೆ ಯಾವಾಗ ದೊರೆಯಲಿದೆ ಎಂಬ ಆತಂಕ ಪರಿಹಾರವಾಗಿದ್ದು, ಪ್ರತಿ ತಿಂಗಳ ಮೊದಲ ವಾರದಿಂದ ಟಿಕೆಟ್ ಮೌಲ್ಯದ ಮೊತ್ತ ನೀಡಲು ನಿರ್ಧರಿಸಲಾಗಿದೆ. ಮೊದಲಿಗೆ ಜೂನ್ ತಿಂಗಳ ಮೊತ್ತ 248 ಕೋಟಿ ರು.ಗಳನ್ನು ಆಗಸ್ಟ್ ಮೊದಲ ವಾರದಲ್ಲಿ ನಿಗಮಗಳಿಗೆ ಪಾವತಿಯಾಗಲಿದೆ.
ಜೂನ್ 11ರಿಂದ 30ರವರೆಗೆ ರಾಜ್ಯ ರಸ್ತೆ ಸಾರಿಗೆಯ ಸಾಮಾನ್ಯ ಸಾರಿಗೆಗಳಲ್ಲಿ 10.54 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಅದರ ಟಿಕೆಟ್ ಮೌಲ್ಯ 248.30 ಕೋಟಿ ರು.ಗಳಾಗಿದೆ.
ಶಕ್ತಿ ಯೋಜನೆ ಎಫೆಕ್ಟ್, ಬಸ್ ದರ ಏರಿಕೆ ಮಾಡಿ ಕೆಎಸ್ ಆರ್‌ಟಿಸಿ ಆದೇಶ
ಯೋಜನೆ ಜಾರಿಗೂ ಮುನ್ನ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ 82 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಆದರೀಗ ಈ ಸಂಖ್ಯೆ 1.10 ಕೋಟಿಗೆ ಹೆಚ್ಚಳವಾಗಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆಯೇ 60 ಲಕ್ಷಕ್ಕೂ ಹೆಚ್ಚಿದೆ. ಉಚಿತ ಪ್ರಯಾಣದ ಮೊತ್ತ ಸಕಾಲದಲ್ಲಿ ಸಿಗದೇ ಇದ್ದರೆ ನೌಕರರ ವೇತನ ಇತ್ಯಾದಿಗಳನ್ನು ಆಯಾ ತಿಂಗಳಲ್ಲಿ ನೀಡುವುದು ಕಷ್ಟಕರವಾಗುತ್ತಿತ್ತು. ಹೀಗಾಗಿ ಸರ್ಕಾರ ಹೀಗಾಗಿ ಒಂದು ತಿಂಗಳು ಬಾಕಿ ಉಳಿಸಿಕೊಂಡು, ಎರಡು ತಿಂಗಳ ಹಿಂದಿನ ಮೊತ್ತವನ್ನು ಪಾವತಿಸಲು ನಿರ್ಧರಿಸಿದೆ.
ಜೂನ್ 11ರಂದು ಯೋಜನೆ ಆರಂಭಗೊಂಡಾಗ ಸರಾಸರಿ 55 ಲಕ್ಷವಿದ್ದ ಉಚಿತವಾಗಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಈಗ ಸರಾಸರಿ 62ರಿಂದ 65 ಲಕ್ಷಕ್ಕೆ ಹೆಚ್ಚಳವಾಗಿದೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೊತ್ತದ ಮೌಲ್ಯವನ್ನು ಪ್ರತಿ ಮೂರು ತಿಂಗಳಿಗೆ ಲೆಕ್ಕ ಹಾಕಿ ಪಾವತಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿತ್ತು. ಆದರೆ, ಮೂರು ತಿಂಗಳವರೆಗೆ ಹಣ ಪಾವತಿಸದಿದ್ದರೆ ನಿಗಮಗಳು ಕಾರ್ಯನಿರ್ವಹಿಸುವುದು ಕಷ್ಟವಾಗಲಿದೆ. ಹೀಗಾಗಿ ಪ್ರತಿ ತಿಂಗಳು ಶಕ್ತಿ ಯೋಜನೆ ಮೊತ್ತವನ್ನು ಪಾವತಿಸಬೇಕು ಎಂದು ನಿಗಮಗಳು ಮನವಿ ಮಾಡಿಕೊಂಡಿದ್ದವು.
Bengaluru: ಫ್ರೀ ಟಿಕೆಟ್ ತೆಗೆದುಕೊಳ್ಳದೇ ಮಾರ್ಡನ್ ಗರ್ಲ್ ರಂಪಾಟ; ಕಂಡಕ್ಟರ್‌ಗೆ ಅವಾಜ್
ಸಾಲದು ಬಜೆಟ್ ಮೊತ್ತ
ಶಕ್ತಿ ಯೋಜನೆಗಾಗಿ ಸರ್ಕಾರ ಬಜೆಟ್‌ನಲ್ಲಿ 2,800 ಕೋಟಿ ರು. ಮೀಸಲಿಟ್ಟದೆ. ಜೂನ್‌ನಲ್ಲಿ ಯೋಜನೆ ಆರಂಭವಾದ ಕಾರಣ 2023-24ನೇ ಸಾಲಿನಲ್ಲಿ 10 ತಿಂಗಳು ಈ ಮೊತ್ತವನ್ನು ವ್ಯಯಿಸಲಾಗುತ್ತದೆ. ಅದರ ಪ್ರಕಾರ ಪ್ರತಿ ತಿಂಗಳಿಗೆ 280 ಕೋಟಿ ರು. ಶಕ್ತಿ ಯೋಜನೆ ಮೊತ್ತ ಎಂದು ಅಂದಾಜಿಸಲಾಗಿದೆ. ಅದರೆ, ಜುಲೈ ತಿಂಗಳಲ್ಲಿ 28ನೇ ತಾರೀಖಿನವರೆಗೆ ಮಹಿಳೆಯರ ಉಚಿತ ಪ್ರಯಾಣದ ಮೊತ್ತ 414.39 ಕೋಟಿ ರು.ಗಳಾಗಿದೆ. ತಿಂಗಳಾಂತ್ಯಕ್ಕೆ ಮೊತ್ತ 450 ಕೋಟಿ ರು.ಗಳಾಗುವ ಸಾಧ್ಯತೆಗಳಿವೆ. ಪ್ರತಿ ತಿಂಗಳ ಮೊತ್ತ ಸರಾಸರಿ 400 ಕೋಟಿ ರು. ದಾಟಿದರೆ 2023-24ನೇ ಸಾಲಿಗೇ 3,600 ಕೋಟಿ ರು.ಗೂ ಹೆಚ್ಚಿನ ಮೊತ್ತ ಬೇಕಾಗುತ್ತದೆ. ಹೀಗಾಗಿ ವರ್ಷದ ಅಂತ್ಯದಲ್ಲಿ ಶಕ್ತಿ ಯೋಜನೆಗಾಗಿ ಬಜೆಟ್‌ನಲ್ಲಿ ಹೆಚ್ಚುವರಿ ಮೊತ್ತವನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ.
ನಿಗಮಗಳಿಗೆ ಸಂಕಷ್ಟ ಆಗದು
ಶಕ್ತಿ ಯೋಜನೆಗೆ ಸರ್ಕಾರದಿಂದ ಕೊಡಬೇಕಾಗಿರುವ ಅನುದಾನವನ್ನು ಪ್ರತಿ ತಿಂಗಳ ಮೊದಲ ವಾರ ನೀಡಲು ನಿರ್ಧರಿಸಲಾಗಿದೆ. ಜೂನ್ ತಿಂಗಳ ಮೊತ್ತ ಆಗಸ್ಟ್ ಮೊದಲ ವಾರ ಪಾವತಿಯಾಗಲಿದೆ. ನಿಗಮಗಳಿಗೆ ಆರ್ಥಿಕ ಸಂಕಷ್ಟಎದುರಾಗದಂತೆ ಕ್ರಮವಹಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ