ಬಾಗಲಕೋಟೆ, ವಿಜಯಪುರ, ಬೆಳಗಾವಿ, ಚಿಕ್ಕಮಗಳೂರು, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ಟೀಂ ದಾಳಿ ನಡೆಸಿದೆ. ದಾಳಿ ವೇಳೆ ಹಲವು ದಾಖಲೆಗಳನ್ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರು ಲೋಕಾಯುಕ್ತ ಅಧಿಕಾರಿಗಳು.
ಬೆಂಗಳೂರು(ಜೂ.28): ಇಂದು(ಬುಧವಾರ) ಬೆಳ್ಳಂಬೆಳಗ್ಗೆ ರಾಜ್ಯಾದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಚಿಕ್ಕಮಗಳೂರು, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ಟೀಂ ದಾಳಿ ನಡೆಸಿದೆ. ದಾಳಿ ವೇಳೆ ಹಲವು ದಾಖಲೆಗಳನ್ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬಾಗಲಕೋಟೆಯಲ್ಲಿ ಇಬ್ಬರು ಕೃಷಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಬಾಗಲಕೋಟೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮನೆ ಹಾಗೂ ಮತ್ತೋರ್ವ ಅಧಿಕಾರಿ ಕೃಷಿ ಇಲಾಖೆ ಅಸಿಸ್ಟೆಂಟ್ ಡೈರೆಕ್ಟರ್ ಬೀಳಗಿ ಕೃಷ್ಣ ಶಿರೂರ ಮನೆ ಮೇಲೆ ದಾಳಿ ಮಾಡಿದ್ದಾರೆ. ಇಬ್ಬರೂ ಕೃಷಿ ಅಧಿಕಾರಿಗಳ ಮನೆಗಳು ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿವೆ. ಒಟ್ಟು ಎರಡು ತಂಡಗಳಾಗಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಡಿವೈಎಸ್ಪಿಗಳಾದ ಶಂಕರ ರಾಗಿ, ಪುಷ್ಪಲತಾ ನೇತೃತ್ವದ ತಂಡಗಳಿಂದ ದಾಳಿ ನಡೆದಿದೆ. ಅಧಿಕಾರಿಗಳ ಮನೆಗಳ ಜೊತೆಗೆ ಕಚೇರಿಗಳ ಮೇಲೂ ಸಹ ದಾಳಿ ಮಾಡಿದೆ
Mandya: ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಾಂಡವಪುರ ತಹಶೀಲ್ದಾರ್ ಸೌಮ್ಯ
ವಿಜಯಪುರ ಜಿಲ್ಲೆಯಲ್ಲೂ ಲೋಕಾಯುಕ್ತ ದಾಳಿ
ಇಂದು ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲೆಯ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿದ ಪರಿಶೀಲನೆ ನಡೆಸಿದೆ ಲೋಕಾ ಟೀಂ. ಪಿಡಬ್ಲೂಡಿ ಇಲಾಖೆ ಜೆಇ ಭೀಮನಗೌಡ ಬಿರಾದಾರ ಮನೆ ಹಾಗೂ ಸಂಬಂಧಿ ಶ್ರೀಕಾಂತ ಅಂಗಡಿ ಮನೆ ಮೇಲೆ ದಾಳಿ ಮಾಡಿದೆ. ಭೀಮನಗೌಡ ಬಿರಾದಾರ ಪಿಡಬ್ಲೂಡಿ ಇಲಾಖೆ ಬಸವನಬಾಗೇವಾಡಿ ವಿಭಾಗದಲ್ಲಿ ಪ್ರಭಾರಿ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಗರದ ಆರ್ ಟಿ ಓ ಕಚೇರಿ ಹಿಂಭಾಗದಲ್ಲಿರೋ ಭೀಮನಗೌಡ ಬಿರಾದಾರ ಮನೆ ಮೇಲೆ ದಾಳಿ ನಡೆಸಿದೆ.
ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಸಿಸ್ಟೆಂಟ್ ಎಇಇ ಜೆಪಿ ಶೆಟ್ಟಿ ಮನೆ, ಸ್ವಗ್ರಾಮ ಸಾಕನೂರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ದಾಳಿ ಮಾಡಿ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದೆ. ನಾಲ್ಕು ಕಡೆಗಳಲ್ಲಿ 3 ಡಿವೈಎಸ್ಪಿ,7 ಇನ್ಸಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಿದೆ.
ಇನ್ನು ಬೆಳಗಾವಿಯ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ ಬಹುರೂಪಿ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದೆ. ಶೇಖರ ಬಹುರೂಪಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗಾವಿಯಲ್ಲಿರುವ ಶೇಖರ ಬಹುರೂಪಿ ಮನೆ ಸೇರಿ ವಿವಿಧೆಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶೇಖರ್ ಬಹುರೂಪಿ ಪ್ರವಾಹದ ಸಂದರ್ಭದಲ್ಲಿ ನಡೆದ ಅವ್ಯವಹಾರ ಸಂಬಂಧ ಅಮಾನತುಗೊಂಡಿದ್ದಾರೆ. ಅಥಣಿಯಲ್ಲಿ ಕಾರ್ಯನಿರ್ವಹಿಸುವಾಗ 2019ರಲ್ಲಿ ಶೇಖರ ಅಮಾನತುಗೊಂಡಿದ್ದರು.
ಯಾದಗಿರಿಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
ಯಾದಗಿರಿ ನಗರದ ಗ್ರೀನ್ ಸಿಟಿಯಲ್ಲಿರುವ ಪಿಡಬ್ಲೂಡಿ ಎಇಇ ವಿಶ್ವನಾಥ ರೆಡ್ಡಿ ಮನೆ ಮೇಲೆ ಲೋಕಾ ಟೀಂ ದಾಳಿ ನಡೆಸಿದೆ. ನಿದ್ದೆ ಮಂಪರಿನಲ್ಲಿದ್ದಾಗಲೇ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳಗಿನ ಜಾವ 5 ಗಂಟೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸದ್ಯ ವಿಶ್ವನಾಥ ರೆಡ್ಡಿ ಮನೆಯಲ್ಲಿ ಅಧಿಕಾರಿಗಳ ತಂಡ ತಲಾಷ್ ನಡೆಸುತ್ತಿದೆ.
ಕಲಬುರಗಿಯಲ್ಲೂ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ರೇಡ್
ನಗರ ಯೋಜನಾಧಿಕಾರಿ ಶರಣಪ್ಪ ಮಡಿವಾಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ಹೊರವಲಯದ ನಾಗನಹಳ್ಳಿ ಬಳಿಯ ಫಾರ್ಮ್ ಹೌಸ್ ಮೇಲೆ ಲೋಕಾ ಟೀಂ ರೇಡ್ ಮಾಡಿದೆ. ಶರಣಪ್ಪ ಮಡಿವಾಳ ಸದ್ಯ ಸಿಂಧನೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಂಧನೂರು ಕಲಬುರಗಿ ಎರಡೂ ಕಡೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ತುಮಕೂರು ಜಿಲ್ಲೆ ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕೆಲಸ ಮಾಡ್ತಿದ್ದ ಕೆ.ಎಚ್ ರವಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ರವಿ ಅವರಿಗೆ ಸಂಭಂದಪಟ್ಟ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದೆ. ರಾಮನಗರ ಜಿಲ್ಲೆಯ 4 ಕಡೆ ತುಮಕೂರು ಜಿಲ್ಲೆಯಲ್ಲಿ ಎರಡು ಕಡೆ ದಾಳಿ ನಡೆದಿದೆ.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಮನೆ ಹಾಗೂ ಫಾರಂ ಹೌಸ್ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೆ.ಎಚ್ ರವಿ ತುಮಕೂರು ಕೃಷಿ ಇಲಾಖೆಯಲ್ಲಿ ಜೆಡಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ತುಮಕೂರು ನಗರದ ಶಂಕರಪುರದಲ್ಲಿ ತುಮಕೂರಿನ ಮನೆ ಹಾಗೂ ರಾಮನಗರದ ಫಾರಂ ಹೌಸ್ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಲೋಕಾಯುಕ್ತ ಅಧಿಕಾರಿಗಳು ಹಲವು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.
ಗೌರಿಬಿದನೂರು ಅಬಕಾರಿ ನಿರೀಕ್ಷಕ ರಮೇಶ್ ಮನೆ ಮೇಲೂ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಬೆಂಗಳೂರಿನ ನಾಗರಬಾವಿ ಬಳಿ ಇರೋ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಅಧಿಕಾರಗಳು ದಾಳಿ ಮಾಡಿದ್ದಾರೆ.
ಚಾಮರಾಜನಗರ: ಲಂಚ ಸ್ವೀಕಾರ, ಪಿಡಬ್ಲ್ಯೂಡಿ ಎಎಎ, ಎಇ ಲೋಕಾಯುಕ್ತ ಬಲೆಗೆ
ರಾಮನಗರ ತಾಲ್ಲೂಕಿನ ಜಿಗೇನಹಳ್ಳಿ ಬಳಿಯ ರವಿ ಅವರ ತಂದೆ ತಾಯಿ ವಾಸವಿದ್ದ ಮನೆ ಹಾಗೂ ಕುಂಬಾಪುರ ಬಳಿ ಫಾರಂ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನೆ ಹಾಗೂ ಫಾರಂ ಹೌಸ್ ನಲ್ಲಿ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಹಿನ್ನಲೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನ ವ್ಯವಸ್ಥಾಪಕರಾದ ಗಂಗಾಧರ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಏಕಕಾಲದಲ್ಲಿ ಮನೆ ಸೇರಿದಂತೆ ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆದಿದೆ. ಜಯನಗರ ಬಡಾವಣೆಯಲ್ಲಿ ಇರುವ ಗಂಗಾಧರ್ ಮನೆ, ರಾಮನಹಳ್ಳಿಯಲ್ಲಿರು ಪೆಟ್ರೋಲ್ ಬಂಕ್ ಮೇಲೆ ಲೋಕಾ ಟೀಂ ದಾಳಿ ಮಾಡಿದೆ.