
ಬೆಂಗಳೂರು(ಜೂ.28): ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಟ್ ಕಾಯಿನ್, ಪಿಎಸ್‌ಐ ನೇಮಕಾತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್, ಇದೀಗ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸುವ ಸುಳಿವು ನೀಡಿದೆ. ಆದರೆ, ‘ಸಾರಾಸಗಟಾಗಿ ಎಲ್ಲ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸುವುದಿಲ್ಲ. ಅನುಮಾನ ಮೂಡಿಸುವ ಪ್ರರಣಗಳ ತನಿಖೆ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದೆ.
ವಿಧಾನಸೌಧದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಸುಳಿವು ಬಿಟ್ಟುಕೊಟ್ಟಿದ್ದು, ‘ಯಾವ ಪ್ರಕರಣಗಳು ಅನುಮಾನ ಹುಟ್ಟಿಸುತ್ತಿವೆಯೋ ಅಂತಹ ಪ್ರಕರಣಗಳ ಮರು ತನಿಖೆ ನಡೆಸಲಾಗುವುದು. ಈ ಬಗ್ಗೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲೇ ಚರ್ಚೆಯಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪೀಲಿ ಅಂತರ್ಯುದ್ಧ: ವಿಧಾನಸಭೆ ಚುನಾವಣೆ ಸೋಲಿನ ಬೆನ್ನಲ್ಲೇ ಭುಗಿಲೆದ್ದ ಬಣ ರಾಜಕೀಯ..!
ಪರಮೇಶ್ವರ್ ಮಾತನಾಡಿ, ‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಹಳಷ್ಟುಹಗರಣ ನಡೆದಿವೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಯಾವ್ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆಯೋ ಅದನ್ನು ಗುರುತಿಸಿ ತನಿಖೆ ನಡೆಸುತ್ತೇವೆ. ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ನಡೆಸುವುದಾಗಿ ನಾವು ವಿರೋಧ ಪಕ್ಷದಲ್ಲಿದ್ದಾಗಲೇ ಭರವಸೆ ನೀಡಿದ್ದೆವು. ಸಿಐಡಿ ಅಥವಾ ಬೇರೆ ಯಾವ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತೇವೆ’ ಎಂದು ತಿಳಿಸಿದರು.
ಬಿಟ್ ಕಾಯಿನ್ ತನಿಖೆ:
‘ಬಿಟ್ ಕಾಯಿನ್ ಹಗರಣವನ್ನು ಹಿಂದಿನ ಸರ್ಕಾರ ಯಾವ ಕಾರಣಕ್ಕೋ ಸರಿಯಾಗಿ ತನಿಖೆ ನಡೆಸಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬೇಕಾದರೆ ಕಾನೂನಿಗೂ ತಿದ್ದುಪಡಿ ತರಲಾಗುವುದು. ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಕೋರ್ಚ್ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಲೂಟಿ ಮಾಡಿದ ಹಣವಿದ್ದರೆ ತಂದು ‘ಗ್ಯಾರಂಟಿ’ಗೆ ಬಳಸಿ: ಸಂಸದ ಮುನಿಸ್ವಾಮಿ ತಿರುಗೇಟು
ರಾಮಲಿಂಗಾರೆಡ್ಡಿ ಮಾತನಾಡಿ, ‘ಬಿಜೆಪಿ ಕಾಲದ ಹಗರಣಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗಿದೆ. ನಾವು ವಿರೋಧ ಪಕ್ಷದಲ್ಲಿದ್ದಾಗ ಯಾವೆಲ್ಲಾ ಪ್ರಕರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ಹೇಳಿದ್ದೆವೋ ಆ ಎಲ್ಲ ಹಗರಣಗಳನ್ನು ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು ಎಂದು ಚರ್ಚಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಸ್ಪಷ್ಪಡಿಸಿದರು.
ಕೃಷ್ಣ ಬೈರೇಗೌಡ ಮಾತನಾಡಿ, ‘ಬಿಜೆಪಿ ಅವಧಿಯಲ್ಲಿನ ಒಂದೊಂದೇ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸುವುದಕ್ಕೆ ಸರ್ಕಾರ ನಿರ್ಧರಿಸಿದೆ. ಸಾರಾಸಗಟಾಗಿ ಎಲ್ಲ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸುವುದಿಲ್ಲ. ಯಾವ ಇಲಾಖೆಯಲ್ಲಿ ಅಕ್ರಮವಾಗಿದೆ ಎಂದು ನಿರ್ದಿಷ್ಟಪ್ರಕರಣದ ಬಗ್ಗೆ ಮಾಹಿತಿ ಪಡೆದು ತನಿಖೆ ಮಾಡಿಯೇ ಸಿದ್ಧ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಸಹ ತನಿಖೆ ನಡೆಸುವುದಾಗಿ ಸಚಿವ ಸಂಪುಟ ಸಭೆಯಲ್ಲಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ