
-ಎಂ.ಅಫ್ರೋಜ್ ಖಾನ್
ರಾಮನಗರ (ಜು.16): ಅನಧಿಕೃತ ಬಡಾವಣೆಗಳ ಆಸ್ತಿಗೆ ಅಧಿಕೃತ ಇ-ಖಾತಾ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು ತಂತ್ರಾಂಶಕ್ಕೆ ಕನ್ನ ಹಾಕುವ ಭೂಗಳ್ಳರ ಪ್ರಯತ್ನಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ.
ಎರಡು ವರ್ಷಗಳ ಹಿಂದೆಯೇ ಇ-ಸ್ವತ್ತು ತಂತ್ರಾಂಶವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದರೂ ಇಲಾಖೆ ಕಠಿಣ ಕ್ರಮಕೈಗೊಳ್ಳಲಿಲ್ಲ. ಇದರ ಪರಿಣಾಮ ಭೂಗಳ್ಳರು ಅನಧಿಕೃತ ಬಡಾವಣೆಗಳಿಗೆ ಅಧಿಕೃತ ಇ - ಖಾತಾ ನೀಡುವ ದಂಧೆ ಎಗ್ಗಿಲ್ಲದೆ ಸಾಗಿದೆ.
ಬೆಂ-ಮೈ ಹೈವೇನಲ್ಲಿ ಅಪಘಾತ ತಡೆಗೆ ಕ್ರಮವಹಿಸಿ: ಸಂಸದ ಸುರೇಶ್ ಸೂಚನೆ
ಜಿಲ್ಲಾ ಕೇಂದ್ರ ರಾಮನಗರದ ಸಮೀಪದಲ್ಲಿರುವ ಹರೀಸಂದ್ರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯ ಇ-ಸ್ವತ್ತು ಲಾಗಿನ್ ಅನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣ ಇ - ಸ್ವತ್ತು ತಂತ್ರಾಂಶಕ್ಕೆ ಕನ್ನ ಹಾಕಲು ವಿಫಲ ಪ್ರಯತ್ನಗಳು ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಹೀಗಾಗಿ ರಿಯಲ್ ಎಸ್ಟೆಟ್ ಉದ್ಯಮಿಗಳು ನಗರ ಮತ್ತು ಪಟ್ಟಣದ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳಲ್ಲಿ ಭೂ ಪರಿವರ್ತನೆ ಮಾಡದೆ ಬಡಾವಣೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ನಿಯಮಗಳ ಪ್ರಕಾರ ಹೊಸ ಬಡಾವಣೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದಿಂದ ಭೂ ಪರಿವರ್ತನೆಗೆ ಅನುಮತಿ ಪಡೆದು ಶೇ.55 ವಸತಿ ಉದ್ದೇಶಕ್ಕೆ, ಶೇ.10 ಉದ್ಯಾನವನ ಮತ್ತು ಉಳಿದ ಜಾಗವನ್ನು ರಸ್ತೆ ಸೇರಿದಂತೆ ನಾಗರಿಕ ಸೌಲಭ್ಯಕ್ಕೆ ಮೀಸಲಿಡಬೇಕು. ಆದರೆ, ನಗರ - ಪಟ್ಟಣ ಸುತ್ತಮುತ್ತಲ ಗ್ರಾಮ ಪಂಚಾಯಿತಿಗಳಲ್ಲಿ ಭೂ ಪರಿವರ್ತನೆ ಮಾಡದೆ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ. ಈ ಸೈಟುಗಳಿಗೆ ಪಂಚಾಯಿತಿ ಮೂಲಕ ಇ-ಸ್ವತ್ತು ತಂತ್ರಾಂಶದಲ್ಲಿ ಇ-ಖಾತಾ ಕೊಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಇದರ ಪರಿಣಾಮ ರಿಯಲ… ಎಸ್ಟೆಚ್ ಉದ್ಯಮಿಗಳಿಗೆ ಹೆಚ್ಚಿನ ಬೆಲೆ ಸಿಕ್ಕಿದರೆ, ಗ್ರಾಹಕರಿಗೆ ಬ್ಯಾಂಕ್ ಸಾಲ ಸಿಗುವುದಿಲ್ಲ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಭೂಗಳ್ಳರು ಇ- ಸ್ವತ್ತು ತಂತ್ರಾಂಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಕೆಲ ಪಿಡಿಒ, ಗುತ್ತಿಗೆ ಕರ ವಸೂಲಿಗಾರರು ಹಾಗೂ ಕಂಪ್ಯೂಟರ್ ಆಪರೇಟರ್ ಗಳು ಹಣದಾಸೆಗೆ ಭೂಗಳ್ಳರೊಂದಿಗೆ ಶಾಮೀಲಾಗಿದ್ದಾರೆ. ಒಂದು ಸೈಟಿಗೆ ಇಷ್ಟೆಂದು ಲಂಚ ಪಡೆದು ಬೇರೆಯವರ ಇ- ಸ್ವತ್ತು ಐಡಿಯಲ್ಲಿ ಲಾಗಿನ್ ಆಗಿ ಇ - ಖಾತಾ ಕೊಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಲೇ ಇವೆ.
ಅಧಿಕಾರಿಗಳಿಗೆ ತಪ್ಪದ ಸಂಕಷ್ಟ:
ಇ-ಸ್ವತ್ತಿಗೆ ಲಾಗಿನ್ ಆಗಬೇಕಾದರೆ ಡಾಂಗಲ…, ರಹಸ್ಯ ಸಂಖ್ಯೆ ಮತ್ತು ಬೆರಳಚ್ಚು ಕೊಡಬೇಕು. ಸಾಮಾನ್ಯ ಜನರು ಲಾಗಿನ್ ಆಗಲು ಅಸಾಧ್ಯ. ಇದೆಲ್ಲದರ ಮಾಹಿತಿ ಉಳ್ಳ ಖದೀಮರು ಎಲ್ಲಿಯೊ ಕುಳಿತು ಯಾವುದೊ ಗ್ರಾಮ ಪಂಚಾಯಿತಿ ಕಚೇರಿ ಇ-ಸ್ವತ್ತು ತಂತ್ರಾಂಶಕ್ಕೆ ಲಾಗಿನ್ ಆಗಿ ಮತ್ಯಾರಿಗೊ ಕಾನೂನು ಬಾಹಿರವಾಗಿ ಇ-ಖಾತಾ ಮಾಡಿಕೊಡುತ್ತಿದ್ದಾರೆ. ಇದು ಸಂಬಂಧಪಟ್ಟತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪಿಡಿಒ, ಎಫ್‌ಡಿಎ ಗಮನಕ್ಕೆ ಬರುತ್ತಿಲ್ಲ. ಆದರೆ, ಮಾಡದ ತಪ್ಪಿಗೆ ಪ್ರಾಮಾಣಿಕ ಅಧಿಕಾರಿಗಳು ಸಂಕಷ್ಟಕ್ಕೆ ಗುರಿಯಾಗುತ್ತಲೇ ಇದ್ದಾರೆ.
ಇ-ಸ್ವತ್ತು ವೆಬ…ಸೈಚ್‌ನ್ನು ರಾಷ್ಟಿ್ರಯ ಮಾಹಿತಿ ಕೇಂದ್ರ(ಎನ್‌ಐಸಿ) ನಿರ್ವಹಿಸುತ್ತಿದೆ. ಇ-ಸ್ವತ್ತು ದುರ್ಬಳಕೆ ಮಾಡಿಕೊಂಡ ಬಗ್ಗೆ ಎನ್‌ಐಸಿ ತಜ್ಞರು ಲಾಗಿನ್ ಐಡಿ, ಐಪಿ ವಿಳಾಸ ಪತ್ತೆ ಮಾಡಬಹುದು. ಅಧಿಕಾರಿಗಳು ದೂರು ನೀಡಿ ಪೊಲೀಸರ ತನಿಖೆಗೆ ಸಹಕಾರ ನೀಡಿದಲ್ಲಿ ಇ-ಸ್ವತ್ತು ಅಕ್ರಮದ ಹಿಂದಿರುವ ದೊಡ್ಡ ಜಾಲ ಪತ್ತೆಯಾಗುವುದರಲ್ಲಿ ಅನುಮಾನ ಇಲ್ಲ.
ಎರಡು ವರ್ಷದ ಹಿಂದೆಯೇ ಬೆಳಕಿಗೆ
2021ರ ಸೆ.17ರಿಂದ 21ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನಹಳ್ಳಿ ಗ್ರಾಮ ಪಂಚಾಯಿತಿ ಇ-ಸ್ವತ್ತನ್ನು ರಾಮನಗರ ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ನೊಬ್ಬ ಬಿಡದಿ ಹೊಬಳಿ ಭೈರಮಂಗಲ ಗ್ರಾಮ ಪಂಚಾಯಿತಿಯಲ್ಲಿ ಕುಳಿತು ಪಿಡಿಒ ಮತ್ತು ಇಒರವರ ಇ-ಸ್ವತ್ತಿಗೆ ಲಾಗಿನ್ ಆಗಿ ಅಕ್ರಮವಾಗಿ 36 ಕಂದಾಯ ಸೈಟುಗಳಿಗೆ ಇ-ಖಾತಾ ಮಾಡಿಕೊಟ್ಟಿದ್ದನು. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಿಇಒ ಕೊಟ್ಟದೂರಿನ ಮೆರೆಗೆ ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಹರೀಸಂದ್ರ ಗ್ರಾಪಂನಲ್ಲಿ ಇ-ಸ್ವತ್ತು ದುರ್ಬಳಕೆ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ.
ಪಿಡಿಒ ದೂರಿನಲ್ಲಿ ಏನಿದೆ ?
ರಾಮನಗರ ತಾಲೂಕಿನ ಹರೀಸಂದ್ರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್.ಕೆ.ದಯಾನಂದ ಸಾಗರ್ ಅವರು ಇ - ಸ್ವತ್ತು ಲಾಗಿನ್ ದುರ್ಬಳಕೆ ಮಾಡಲು ಪ್ರಯತ್ನಿಸಿರುವ ಕುರಿತು ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹರೀಸಂದ್ರ ಗ್ರಾಪಂನಲ್ಲಿ 15 ತಿಂಗಳಿಂದ ಪಿಡಿಒ ಆಗಿ ದಯಾನಂದ ಸಾಗರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 11 ತಿಂಗಳಿಂದ ವಾರದಲ್ಲಿ 2 ದಿನ ಗರಿಷ್ಠ ಇ - ಸ್ವತ್ತಿಗೆ ಲಾಗಿನ್ ಮಿತಿ ವಿಫಲವಾಗಿದೆ ಎಂಬ ಸಂದೇಶ ತೋರಿಸುತ್ತಿತ್ತು. ನೆಟ್ ವರ್ಕ್ ಅಥವಾ ಸರ್ವರ್ ಸಮಸ್ಯೆ ಇರಬೇಕೆಂದು ಸುಮ್ಮನಾಗಿದ್ದರು.
ಅನಾಮಧೇಯ ವ್ಯಕ್ತಿಗಳು ಲಾಗಿನ್ ಐಡಿ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಅನುಮಾನ ಬಂದ ಹಿನ್ನಲೆಯಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬೆಂಗಳೂರಿನ ಎನ್ ಐಸಿ ಮುಖ್ಯ ಕಚೇರಿಯಲ್ಲಿ ಪರಿಶೀಲನೆ ಮಾಡಿಸಲಾಗಿದೆ.
ದಲಿತರಿಗೆ ಮಾರಕವಾಗಿದ್ದ ಎಸ್‌ಸಿಎಸ್‌ಪಿ, ಟಿಎಸ್‌ಪಿಯ ಸೆಕ್ಷನ್ 7ಡಿ ರದ್ದು ಸ್ವಾಗತಾರ್ಹ: ಮತ್ತೀಕೆರೆ ಹನುಮಂತಯ್ಯ
ಆಗ ಹಲವಾರು ಬಾರಿ ಬೇರೆ ಐಟಿ ಅಡ್ರೆಸ್ ಗಳ ಮೂಲಕ ತಮ್ಮ ಐಡಿಗೆ ಲಾಗಿನ್ ಆಗಿ ವಿಫಲವಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದಯಾನಂದ ಸಾಗರ್ ಇ - ಸ್ವತ್ತು ಖಾತೆ ನೀಡಲು ತಮಗೆ ನೀಡಿದ್ದ ಐಡಿಯನ್ನು ಭೂಗಳ್ಳರು ದುರ್ಬಳಕೆ ಮಾಡಿಕೊಂಡು ಇ - ಸ್ವತ್ತು ಮಾಡಿರುವ ಅನುಮಾನವಿದ್ದು, ಅಂತಹ ಭೂಗಳ್ಳರನ್ನು ಪತ್ತೆ ಮಾಡಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ