ಬಿಜೆಪೀಲಿ ತತ್ವ, ಸಿದ್ಧಾಂತವಿಲ್ಲದೆ ಹೊಂದಾಣಿಕೆ ರಾಜಕೀಯ: ಸವದಿ

By Kannadaprabha News  |  First Published Jul 16, 2023, 8:32 AM IST

  ತತ್ವ ಸಿದ್ಧಾಂತಗಳಿಗೆ ಹೆಸರಾಗಿದ್ದ ಬಿಜೆಪಿ ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ರಾಜಕೀಯ ಮಾಡುತ್ತಿದೆ. ಬಿಜೆಪಿಯಲ್ಲಿ ಈಗ ಯಾವುದೇ ತತ್ವ, ಸಿದ್ಧಾಂತ ಉಳಿದಿಲ್ಲ. ಹೊಂದಾಣಿಕೆ ರಾಜಕಾರಣ ಬಹಳ ದಿನ ನಡೆಯುವುದಿಲ್ಲ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.


ಅಥಣಿ (ಜು.16) :  ತತ್ವ ಸಿದ್ಧಾಂತಗಳಿಗೆ ಹೆಸರಾಗಿದ್ದ ಬಿಜೆಪಿ ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ರಾಜಕೀಯ ಮಾಡುತ್ತಿದೆ. ಬಿಜೆಪಿಯಲ್ಲಿ ಈಗ ಯಾವುದೇ ತತ್ವ, ಸಿದ್ಧಾಂತ ಉಳಿದಿಲ್ಲ. ಹೊಂದಾಣಿಕೆ ರಾಜಕಾರಣ ಬಹಳ ದಿನ ನಡೆಯುವುದಿಲ್ಲ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಡಾ.ಆರ್‌.ಎಚ್‌.ಕುಲಕರ್ಣಿ ಸಭಾಂಗಣದಲ್ಲಿ ಶನಿವಾರ ಜಾಧವಜಿ ಶಿಕ್ಷಣ ಸಂಸ್ಥೆ ಮತ್ತು ತಾಲೂಕು ಬ್ರಾಹ್ಮಣ ಸಮುದಾಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಬಿಜೆಪಿ ತೊರೆಯುವ ಆಲೋಚನೆ ಎಂದಿಗೂ ಮಾಡಿರಲಿಲ್ಲ. ಆ ವಾತಾವರಣವನ್ನು ಬಿಜೆಪಿಯರಾದ ನೀವೇ ಮಾಡಿದ್ದು ಎಂದು ಹೇಳಿಕೊಳ್ಳಲು ನನಗೆ ಹೃದಯ ಭಾರವಾಗುತ್ತಿದೆ. ಅಭಿನಂದನಾ ಸಮಾರಂಭದಲ್ಲಿ ನಾನು ಈ ಮಾತನ್ನು ಹೇಳಬಾರದು. ಆದರೂ ಹೃದಯಕ್ಕೆ ಭಾರವಾಗಿರುವ ಈ ಮಾತನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದರು.

Tap to resize

Latest Videos

 

ಜೈನಮುನಿ ಹತ್ಯೆ ಕೇಸ್‌ನಲ್ಲಿ ರಾಜಕಾರಣ ಬೆರೆಸುವ ಪ್ರಯತ್ನ ಬೇಡ: ಶಾಸಕ ಲಕ್ಷ್ಮಣ ಸವದಿ

ಬಿಜೆಪಿಯ ಅನೇಕ ಸ್ನೇಹಿತರು ಈಗ ಬಹಳ ನೋವಿನಿಂದ ನೀವು ಪಕ್ಷಾಂತರ ಹೊಂದಿದ್ದರಿಂದ ಪಕ್ಷಕ್ಕೆ ದೊಡ್ಡ ಹಾನಿಯಾಗಿದೆ ಎಂದು ಎನ್ನುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೆಲವು ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳು ಸಿಗದೇ ಕೆಲವರಿಗೆ ಹಣ ಕೊಟ್ಟು ಅಭ್ಯರ್ಥಿಗಳನ್ನು ನಿಲ್ಲಿಸಿದ ಪ್ರಸಂಗಗಳು ಕೂಡ ನಡೆದಿವೆ ಎಂಬ ಚರ್ಚೆಗಳು ಪ್ರಾರಂಭವಾಗಿವೆ ಎಂದು ಕುಟುಕಿದರು.

ಅಥಣಿ ಮತಕ್ಷೇತ್ರದ ಮತದಾರರು ಅಭಿವೃದ್ಧಿ ಪರವಾಗಿ ನಿಂತುಕೊಂಡು ನನಗೆ ದಾಖಲೆಯ ಮತಗಳನ್ನು ನೀಡಿದ್ದಾರೆ. ಮತದಾರರು ಮತ್ತು ಕ್ಷೇತ್ರದ ಜನರು ನನ್ನ ಮೇಲೆ ಅಪಾರ ನಿರೀಕ್ಷೆಗಳನ್ನು ಹೊಂದಿದ್ದಾರೆ. ಅವರ ನಿರೀಕ್ಷೆಗಳನ್ನು ಮತ್ತು ನನ್ನ ಕನಸಿನ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದು ನನ್ನ ಅಭಿನಂದನಾ ಸಮಾರಂಭವಲ್ಲ, ದಾಖಲೆಯ ಮತಗಳನ್ನು ನೀಡಿ ನನ್ನನ್ನು ಗೆಲ್ಲಿಸಿದ ನಿಮಗೆ ನಾನೇ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

2004ರಲ್ಲಿ ಇದೇ ಜಾಧವಜಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿಯೇ ದಿ.ಅನಂತಕುಮಾರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗುವ ಮೂಲಕ 20 ವರ್ಷಗಳ ಕಾಲ ಅಥಣಿ ಮತ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. 2004ರ ಮೊದಲಿನ ಅಥಣಿ ಮತ್ತು ನಂತರದ ಅಥಣಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ತಮ್ಮೆಲ್ಲರಿಗೂ ಅಭಿವೃದ್ಧಿಯ ವ್ಯತ್ಯಾಸ ಗೊತ್ತಾಗುತ್ತದೆ. ಅಥಣಿ ಪಟ್ಟಣದಲ್ಲಿ ಕೆಎಲ…ಇ ಸಂಸ್ಥೆಯ ಸಿ.ಎಸ್‌.ಕಿತ್ತೂರು ಪ್ರೌಢಶಾಲೆ ಮತ್ತು ಜಾಧವಜಿ ಶಿಕ್ಷಣ ಸಂಸ್ಥೆಯನ್ನು ಹೊರತುಪಡಿಸಿದರೆ ಇಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳು ಇರಲಿಲ್ಲ. ನಾನು ಶಾಸಕನಾದ ಬಳಿಕ 19 ಸರ್ಕಾರಿ ಪ್ರೌಢಶಾಲೆ, 14 ಪದವಿ ಪೂರ್ವ ಕಾಲೇಜು, 3 ಪ್ರಥಮ ದರ್ಜೆಯ ಪದವಿ ಮಹಾವಿದ್ಯಾಲಯ, 1 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, 1 ಡಿಪ್ಲೊಮಾ ಕಾಲೇಜು ಸ್ಥಾಪನೆ ಮಾಡಿದ್ದೇನೆ. ಇದಲ್ಲದೆ ತಾಲೂಕಿನ ರೈತರ ಮಕ್ಕಳಿಗಾಗಿ ಪಶು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕೃಷಿ ಮಹಾವಿದ್ಯಾಲಯವನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮತಕ್ಷೇತ್ರದ ಪ್ರಮುಖ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನಾನು ಯಾವುದೇ ಪಕ್ಷದಲ್ಲಿ ಇರಲಿ, ಅಧಿಕಾರ ಇರಲಿ, ಬಿಡಲಿ ಮತಕ್ಷೇತ್ರದ ಜನರ ಸೇವೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಮತದಾರರ ಋುಣಭಾರ ನನ್ನ ಮೇಲೆ ಬಹಳಷ್ಟುಇರುವುದರಿಂದ ನನ್ನ ಜೀವಮಾನದವರಿಗೂ ಅವರ ಸೇವೆ ಮಾಡಿದರೂ ತೀರಿಸಲಾಗದು. ಕ್ಷೇತ್ರದ ಅಭಿವೃದ್ಧಿಗಾಗಿ ನನ್ನದೇ ಆದ ಕೆಲವು ಯೋಜನೆಗಳನ್ನು ಹೊಂದಿದ್ದೇನೆ. ಅವುಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ನನ್ನದೇ ಆದ ಕೆಲವು ಕನಸಿನ ಯೋಜನೆಗಳಿವೆ. ನಾನು ಚುನಾವಣೆ ಗಮನದಲ್ಲಿಟ್ಟುಕೊಂಡು ಯಾವುದೇ ಯೋಜನೆಗಳನ್ನು ರೂಪಿಸುವುದಿಲ್ಲ. ಚುನಾವಣೆಗಳು 5 ವರ್ಷಗಳಿಗೊಮ್ಮೆ ಬರುತ್ತವೆ. ನಾವು ಮಾಡುವ ಅಭಿವೃದ್ಧಿ ಯೋಜನೆಗಳು ಶಾಶ್ವತವಾಗಿ ಇರಬೇಕು. ಕ್ಷೇತ್ರದ ಜನತೆಗೆ ಯಾವ ಯೋಜನೆಗಳನ್ನು ತಂದರೆ ಅನುಕೂಲವಾಗುತ್ತದೆಂಬ ಪರಿಕಲ್ಪನೆ ನಮಗೆ ಇರಬೇಕು ಎಂದರು.

ಕೇಂದ್ರದಿಂದ ಅಕ್ಕಿ ಕೊಡದಿದ್ದರೂ 5 ಕೆಜಿ ಅಕ್ಕಿ, ರೂ.170 ಕೊಡುತ್ತೇವೆ: ಶಾಸಕ ಲಕ್ಷ್ಮಣ ಸವದಿ

ಜಾಧವಜಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ರಾಮ ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಅವರು ಮತಕ್ಷೇತ್ರದಲ್ಲಿ ಮಾಡಿದ ಶೈಕ್ಷಣಿಕ ಸುಧಾರಣೆಗಳನ್ನು ಮತ್ತು ಆರೋಗ್ಯ ಇಲಾಖೆಯ ಸೇವೆಗಳನ್ನು ಸ್ಮರಿಸಿ ಅಭಿನಂದಿಸಿದರು.

ಸಂಸ್ಥೆಯ ಉಪಕಾರ್ಯಾಧ್ಯಕ್ಷ , ನ್ಯಾಯವಾದಿ ಎಸ್‌.ಎಂ. ಪಾಟೀಲ, ಅರವಿಂದರಾವ ದೇಶಪಾಂಡೆ, ನ್ಯಾಯವಾದಿ ಸಂದೀಪ್‌ ಸಂಗೋರಾಮ, ಸಂಜೀವ ಕುಲಕರ್ಣಿ, ರವಿ ಕುಲಕರ್ಣಿ, ಡಾ.ಸುಹಾಸ್‌ ಕುಲಕರ್ಣಿ, ಆರ್‌.ಬಿ.ದೇಶಪಾಂಡೆ, ಅನಿಲರಾವ್‌ ದೇಶಪಾಂಡೆ, ಎಸ್‌.ವಿ.ಜೋಶಿ, ಆನಂದ ದೇಶಪಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಸ್‌.ಎಂ.ಪಾಟೀಲ ಸ್ವಾಗತಿಸಿದರು. ಪ್ರಿಯಂವಧಾ ಅಣ್ಣೆಪ್ಪನವರ ನಿರೂಪಿಸಿದರು. ಎಸ್‌.ವಿ.ಜೋಶಿ ವಂದಿಸಿದರು.

ನನ್ನ 20 ವರ್ಷಗಳ ರಾಜಕೀಯ ಜೀವನದಲ್ಲಿ ಬಿಜೆಪಿ ನನ್ನ ತಾಯಿಯ ಸ್ವರೂಪವೆಂದು ಭಾವಿಸಿದ್ದೆ, ತಾಯಿಯ ಹಾಲೆ ನನಗೆ ನಂಜಾಯಿತು. ನನ್ನನ್ನು ಬೆಳೆಸಿ ಮಾರ್ಗದರ್ಶನ ನೀಡಿದ ನಾಯಕರೇ ನನ್ನನ್ನ ದೂರ ಮಾಡಿದ್ದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಮತಕ್ಷೇತ್ರದ ಜನರ ಅಭಿಪ್ರಾಯ ಪಡೆದು ಅವರು ತೋರಿದ ಮಾರ್ಗದಲ್ಲಿ ಸಾಗಿದ್ದೇನೆ. ಸಂತೆಯಲ್ಲಿ ತಾಯಿ ತನ್ನ ಮಗುವಿನ ಕೈಬಿಟ್ಟಂತೆ ನನ್ನನ್ನು ಕೈ ಬಿಟ್ಟು ಚುನಾವಣೆಯಲ್ಲಿ ಬಿಜೆಪಿ ಹೀನಾ ಸೋಲು ಅನುಭವಿಸಬೇಕಾಯಿತು.

-ಲಕ್ಷ್ಮಣ ಸವದಿ, ಮಾಜಿ ಡಿಸಿಎಂ, ಶಾಸಕರು.

click me!