ವಿಜಯಪುರ: ಮುಂಗಾರು ವಿಫಲ, ಜನರಲ್ಲಿ ಬರದ ಭೀತಿ!

By Kannadaprabha News  |  First Published Jul 16, 2023, 8:15 AM IST

 ಜಿಲ್ಲೆಯಲ್ಲಿ ಮುಂಗಾರು ವಿಫಲವಾಗಿದ್ದರಿಂದ ಬರದಛಾಯೆ ದಟ್ಟವಾಗಿದ್ದು, ಭೂಮಿಗೆ ಬೀಜ ಬೀಳದೇ ರೈತರು ಕಂಗಾಲಾಗಿದ್ದಾರೆ. ರೈತರು ಜಮೀನು ಹದಗೊಳಿಸಿ ಬಿತ್ತನೆಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಮನೆಯಲ್ಲಿ ಇಟ್ಟುಕೊಂಡಿದ್ದು, ಕಳೆದ ತಿಂಗಳಿಂದ ಸಮರ್ಪಕ ಮಳೆಯಾಗದೇ ರೈತರು ಆಕಾಶ ನೋಡುತ್ತಿದ್ದಾರೆ.


ರುದ್ರಪ್ಪ ಆಸಂಗಿ

 ವಿಜಯಪುರ(ಜು.16) ಜಿಲ್ಲೆಯಲ್ಲಿ ಮುಂಗಾರು ವಿಫಲವಾಗಿದ್ದರಿಂದ ಬರದಛಾಯೆ ದಟ್ಟವಾಗಿದ್ದು, ಭೂಮಿಗೆ ಬೀಜ ಬೀಳದೇ ರೈತರು ಕಂಗಾಲಾಗಿದ್ದಾರೆ.

Latest Videos

undefined

ಜಿಲ್ಲೆಯ ರೈತರು ಜಮೀನು ಹದಗೊಳಿಸಿ ಬಿತ್ತನೆಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿ ಮನೆಯಲ್ಲಿ ಇಟ್ಟುಕೊಂಡಿದ್ದು, ಕಳೆದ ತಿಂಗಳಿಂದ ಸಮರ್ಪಕ ಮಳೆಯಾಗದೇ ರೈತರು ಆಕಾಶ ನೋಡುತ್ತಿದ್ದಾರೆ. ಸಕಾಲಕ್ಕೆ ಮಳೆಯಾಗಿದ್ದರೆ ಈಗಾಗಲೇ 90 ದಿನಗಳ ಹೆಸರು ಭರಪೂರ ಬೆಳೆಯುತ್ತಿದ್ದರು. ಪಂಚಮಿ ಹಬ್ಬದಲ್ಲಿ ಮಹಿಳೆಯರು ಹೊಸ ಹೆಸರಿನ ಉಂಡಿ ಮಾಡುತ್ತಿದ್ದರು. ಹೆಸರು ಉಂಡಿ ಪಂಚಮಿ ಹಬ್ಬದ ಸೊಬಗು ಹೆಚ್ಚಿಸುತ್ತಿತ್ತು. ಸಕಾಲಕ್ಕೆ ಮಳೆಯಾಗದೇ ಹೆಸರು ಬಾರದೆ ರೈತರು ಚಿಂತೆಗೀಡಾಗಿದ್ದಾರೆ.

ಯಾದಗಿರಿ: ಮಳೆ ಕೊರತೆ, ಬರದ ಭೀತಿ​ಯಲ್ಲಿ ಸುರ​ಪು​ರ ತಾಲೂಕು?

ವಿಳಂಬವಾದರೂ ಉತ್ತಮ ಮಳೆಯಾದರೆ ತೊಗರಿ, ಸಜ್ಜೆ ಬಿತ್ತನೆ ಮಾಡಿ ಹುಲುಸಾದ ಬೆಳೆ ಬೆಳೆಯುವ ಕನಸು ಕಾಣುತ್ತಿದ್ದರು. ಆದರೆ ಮಳೆರಾಯ ಮುನಿಸಿಕೊಂಡಿದ್ದರಿಂದಾಗಿ ರೈತರ ಎಲ್ಲ ಕನಸುಗಳು ಈಗ ನುಚ್ಚು ನೂರಾಗಿವೆ.

ಕಳೆದ ಒಂದು ತಿಂಗಳಿಂದ ಭಾರಿ ದಟ್ಟನೆ ಮೋಡ ಕವಿಯುತ್ತದೆ. ಮೋಡ ನೀರಾಗಿ ಧಾರಾಕಾರವಾಗಿ ಸುರಿದರೆ ಭಾರಿ ನೀರು ಉಕ್ಕಿ ಹರಿಯುತ್ತದೆ. ಆದರೆ, ಅಲ್ಲಷ್ಟುಇಲ್ಲಷ್ಟುತುಂತುರು ಹನಿ ಉದುರಿ ಗಾಳಿ ಮೋಡವನ್ನು ಹಾರಿಸಿ ಬಿಡುತ್ತದೆ. ಇದರಿಂದಾಗಿ ರೈತರು ಈಗ ಮಳೆಯಾಗುತ್ತದೆ. ಆಗ ಮಳೆಯಾಗುತ್ತದೆ ಎಂದು ಮುಗಿಲು ನೋಡುತ್ತ ಲೆಕ್ಕಾಚಾರ ಹಾಕುವುದರಲ್ಲಿ ತಲ್ಲೀನರಾಗಿದ್ದಾರೆ. ಒಣಗಿದ ಭೂಮಿಗೆ ನಾಲ್ಕು ಹನಿ ನೀರೆರೆದು ರೈತರ ಬದುಕಿಗೆ ತಂಪೆರೆಯುವಂತೆ ರೈತ ಸಮುದಾಯ ವರುಣನಿಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೃಷಿ ಇಲಾಖೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 7,36,794 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮಿನಲ್ಲಿ ತೊಗರಿ, ಹೆಸರು, ಉದ್ದು, ಮುಸುಕಿನ ಜೋಳ, ಸೂರ್ಯಕಾಂತಿ, ಸಜ್ಜೆ ಹಾಗೂ ಕಬ್ಬು ಮುಖ್ಯ ಬೆಳೆಗಳಾಗಿವೆ. ಇದುವರೆಗೆ 1,03,433 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಅಂದರೆ ಶೇ 14.04 ರಷ್ಟುಮಾತ್ರ ಬಿತ್ತನೆಯಾಗಿದೆ. ತೇವಾಂಶ ಕೊರತೆಯಿಂದಾಗಿ ರೈತರು ಭೂಮಿಗೆ ಬಿತ್ತನೆ ಬೀಜ ಕೂಡ ಹಾಕಿಲ್ಲ. ಹೀಗಾಗಿ ಈಗಾಗಲೇ ಸಂಗ್ರಹ ಮಾಡಿಟ್ಟಬಿತ್ತನೆ ಬೀಜ, ರಸಗೊಬ್ಬರ ರೈತರ ಮನೆಯಲ್ಲಿಯೇ ಗೆದ್ದಲು ಹಿಡಿಯುವಂತಾಗಿದೆ.

ಜನವರಿ 2023ರಿಂದ ಜುಲೈ 10ನೇ ತಾರೀಖಿನವರೆಗೆ ವಾಡಿಕೆ ಮಳೆ 173 ಮಿಲಿ ಮೀಟರ್‌ ಇದ್ದು, 147.40 ಮಿಲಿಮೀಟರ್‌ ಮಾತ್ರ ಮಳೆಯಾಗಿದೆ. ಶೇ 15ರಷ್ಟುಮಳೆ ಕೊರತೆಯಾಗಿದೆ. ಶೇ 59ರಷ್ಟುಮಳೆ ಕೊರತೆಯಾಗಿದೆ. ಜೂನ್‌ ತಿಂಗಳಲ್ಲಿ ವಾಡಿಕೆ ಮಳೆ 90 ಮಿಲಿಮೀಟರ್‌ ಇದೆ. ಆದರೆ 38 ಮಿಲಿ ಮೀಟರ್‌ ಮಳೆಯಾಗಿದೆ. ಶೇ 59ರಷ್ಟುಮಳೆ ಕೊರತೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಜೂನ್‌ದಿಂದ ಜುಲೈ 10ರವರೆಗೆ 110 ಮಿಲಿಮೀಟರ್‌ ವಾಡಿಕೆ ಮಳೆ ಇದೆ. 58 ಮಿಲಿಮೀಟರ್‌ ಮಳೆಯಾಗಿದೆ. ಶೇ 47ರಷ್ಟುಕೊರತೆಯಾಗಿದೆ. ಇದರಿಂದ ಭೂಮಿಯಲ್ಲಿ ತೇವಾಂಶ ಇಲ್ಲದೆ ಬಿತ್ತನೆ ಮಾಡಲು ಆಗದೆ ರೈತರು ಕಂಗಾಲಾಗಿದ್ದಾರೆ. ಕೆಲವು ಕಡೆಗಳಲ್ಲಿ ಬಿತ್ತನೆಯಾಗಿದ್ದರೂ ಮಳೆಯಿಲ್ಲದೆ ಆ ಬೆಳೆಯೂ ಕಮರಿದೆ. ಈ ಬಾರಿ ಮಳೆ ಇಲ್ಲದೆ ಬರದ ದಟ್ಟಛಾಯೆ ರೈತರನ್ನು ಕಾಡುತ್ತಿದೆ.

Karnataka monsoon: ಮುಂಗಾರು ಬಿತ್ತೋಣವೇ, ಹಿಂಗಾರಿಗೆ ಹಾರೋಣವೇ? ಗೊಂದಲದಲ್ಲಿ ರೈತರು!


ಮಳೆಯಿಲ್ಲದೆ ಬಿತ್ತನೆ ಬೀಜ, ರಸಗೊಬ್ಬರ ಮನೆಯಲ್ಲಿ ಹಾಗೆ ಕೊಳೆಯುತ್ತ ಬಿದ್ದು ಗೆದ್ದಲು ಹಿಡಿಯುವಂತಾಗಿದೆ. ದಟ್ಟಮೋಡ ಬರುತ್ತದೆ. ಕ್ಷಣಾರ್ಧದಲ್ಲಿ ಕಣ್ಮರೆಯಾಗುತ್ತದೆ. ಇದರಿಂದಾಗಿ ಬರದ ಭೀತಿಯಿಂದ ರೈತರಲ್ಲಿ ನಡುಕ ಹುಟ್ಟಿಸಿದೆ. ಮಳೆರಾಯ ಈಗ ಬಂದರೂ ಪರ್ಯಾಯ ಬೆಳೆ ಬೆಳೆಯಲು ಮುಂದಾಗುತ್ತೇವೆ. ಆದರೆ ವರುಣ ಮುನಿಸಿಕೊಂಡಿರುವುದು ಬದುಕಿನಲ್ಲಿ ದೊಡ್ಡ ಚಿಂತೆಯಾಗಿದೆ.

ಕೆಂಚಪ್ಪ ಲೋಗಾವಿ, ರಂಭಾಪುರ ರೈತ


ಜಿಲ್ಲೆಯಲ್ಲಿ ಶೇ 14.04ರಷ್ಟುಮಳೆ ಕೊರತೆಯಿಂದಾಗಿ ರೈತರು ಭೂಮಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಕುವುದು ಆಗಿಲ್ಲ. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. 9759.99 ಕ್ವಿಂಟಲ್‌ ಬಿತ್ತನೆ ಬೀಜ ಹಾಗೂ 7420361 ಮೆಟ್ರಿಕ್‌ ಟನ್‌ ದಾಸ್ತಾನು ಮಾಡಲಾಗಿದೆ, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ.

- ರೂಪಾ ಎಲ್‌. ಜಂಟಿ ಕೃಷಿ ನಿರ್ದೇಶಕಿ, ವಿಜಯಪುರ
 

click me!