ಮಳೆ ಕೊರತೆ: ಕಪ್ಪತ್ತಗುಡ್ಡದಲ್ಲಿ ಕುಡಿವ ನೀರಿಗಾಗಿ ಪರಿತಪಿಸುತ್ತಿರುವ ಪ್ರಾಣಿಗಳು !

By Kannadaprabha News  |  First Published Jul 4, 2023, 9:00 AM IST

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಮಳೆ ಪ್ರಮಾಣದಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಇದರಿಂದಾಗಿ ಜಿಲ್ಲೆಯ ಕೃಷಿ ಚಟುವಟಿಕೆ ತೀವ್ರ ಕುಂಠಿತವಾಗಿದೆ. ಅದರೊಟ್ಟಿಗೆ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಸಿಕೊಳ್ಳುವ ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿಯೂ ನೀರಿನ ಕೊರತೆ ಆಗಿದ್ದು, ಕಾಡು ಪ್ರಾಣಿಗಳು ಪರಿತಪಿಸುವಂತಾಗಿದೆ.


ಬರದ ಬರೆ-ಕ್ಯಾಂಪೇನ್‌ ಸ್ಟೋರಿ -2

ಶಿವಕುಮಾರ ಕುಷ್ಟಗಿ

Tap to resize

Latest Videos

undefined

ಗದಗ (ಜು.4):  ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಮಳೆ ಪ್ರಮಾಣದಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಇದರಿಂದಾಗಿ ಜಿಲ್ಲೆಯ ಕೃಷಿ ಚಟುವಟಿಕೆ ತೀವ್ರ ಕುಂಠಿತವಾಗಿದೆ. ಅದರೊಟ್ಟಿಗೆ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಸಿಕೊಳ್ಳುವ ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿಯೂ ನೀರಿನ ಕೊರತೆ ಆಗಿದ್ದು, ಕಾಡು ಪ್ರಾಣಿಗಳು ಪರಿತಪಿಸುವಂತಾಗಿದೆ.

ತಂಪು ಮಿಶ್ರಿತ ಕುರುಚಲು ಅರಣ್ಯ ಪ್ರದೇಶವಾಗಿರುವ ಕಪ್ಪತ್ತಗುಡ್ಡದಲ್ಲಿ ಸಾಕಷ್ಟುವನ್ಯಜೀವಿ ಸಂಪತ್ತಿದೆ. ಅವುಗಳಿಗೂ ಕೂಡಾ ಮಳೆಕೊರತೆಯ ಬಿಸಿ ತಾಗಿದ್ದು, ಕಪ್ಪತ್ತಗುಡ್ಡ ಪ್ರದೇಶ ವ್ಯಾಪ್ತಿಯಲ್ಲಿ ನೈಸರ್ಗಿಕವಾಗಿ ಹಾಗೂ ಅರಣ್ಯ ಇಲಾಖೆ ನಿರ್ಮಿಸಿರುವ ಸಣ್ಣ ಸಣ್ಣ ಹೊಂಡಗಳಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಗಿದ್ದು ಪ್ರಾಣಿಗಳು ಕುಡಿಯಲು ಸಹ ತೊಂದರೆ ಪಡುತ್ತಿವೆ.

ಚಿರತೆ, ಹೈನಾ, ಕಾಡುಬೆಕ್ಕು, ನರಿ, ನವಿಲು, ಜಿಂಕೆ ಸೇರಿದಂತೆ ನೂರಾರು ಕಾಡು ಪ್ರಾಣಿಗಳಿವೆ. ಅವುಗಳಿಗೆ ನಿತ್ಯವೂ ಬೇಕಾಗುವ ನೀರಿಗೆ ಬರ ಉಂಟಾಗಿದ್ದು, ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿನ ನೀರು ಅಲ್ಪ ಪ್ರಮಾಣದಲ್ಲಿ ಮಾತ್ರ ಉಳಿದಿದ್ದು, ಇದು ಅರಣ್ಯ ಇಲಾಖೆಗೂ ಕೂಡಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸರ್ಕಾರದಿಂದಲೇ ಬರಗಾಲ ಘೋಷಣೆಗೆ ಸಿದ್ಧತೆ, ಸಚಿವ ಸಂತೋಷ್‌ ಲಾಡ್‌

ಒಂದು ವಾರದಲ್ಲಿ ಮಳೆಯಾಗಬೇಕು

ಜಿಲ್ಲೆಯ ಇನ್ನುಳಿದ ಭಾಗದಲ್ಲಿ ಮಳೆ ಕೊರತೆಯಾದರೆ ಬೇರೆಕಡೆಗಳಿಂದ ನೀರು ತಂದು ಪೂರೈಕೆ ಮಾಡಬಹುದು. ಟ್ಯಾಂಕರ್‌ಗಳ ಮೂಲಕವೇ ನೀರು ಪೂರೈಕೆ ಮಾಡಬಹುದು. ಆದರೆ ಕಪ್ಪತ್ತಗುಡ್ಡದಂತ ಅರಣ್ಯ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾದಲ್ಲಿ ಅಲ್ಲಿಗೆ ನೀರು ಪೂರೈಕೆ ಮಾಡುವುದು ಕಷ್ಟಸಾಧ್ಯ. ಅದಕ್ಕಾಗಿ ಒಂದು ವಾರದಲ್ಲಿ ಮಳೆಯಾಗಬೇಕು, ಅಂದಾಗ ಮಾತ್ರ ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿನ ಕೆರೆಗಳಿಗೆ ನೀರು ಬಂದು ಕಾಡು ಪ್ರಾಣಿಗಳಿಗೂ ನೀರು ಲಭ್ಯವಾಗುತ್ತದೆ. ಇಲ್ಲವಾದಲ್ಲಿ ಸಾರ್ವಜನಿಕರಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಿದಂತೆ ಕಾಡು ಪ್ರಾಣಿಗಳಿಗೂ ನೀರು ತಲುಪಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ.

ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ

ಪರಿಸ್ಥಿತಿಯ ತೀವ್ರತೆಯನ್ನು ಅರಿತುಕೊಂಡಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಈಗಾಗಲೇ ಗುಡ್ಡದ ಮೇಲೆ ಟ್ಯಾಂಕರ್‌ ತಲುಪುವಂತಾ ಸ್ಥಳದಲ್ಲಿಯೇ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಿದ್ದಾರೆ. ಸದ್ಯ ಮಳೆಯಾದರೆ ಆ ಕೆರೆಗಳಿಗೆ ನೀರು ಬರುತ್ತದೆ. ಮಳೆಯಾಗದೇ ಇದ್ದಲ್ಲಿ ಸಾಧ್ಯವಿರುವ ಎಲ್ಲಾ ಕೆರೆಗಳಿಗೂ ಟ್ಯಾಂಕರ್‌ ಮೂಲಕವೇ ನೀರು ತಲುಪಿಸುವ ಕಾರ್ಯವಾದಲ್ಲಿ ಮಾತ್ರ ಕಾಡು ಪ್ರಾಣಿಗಳಿಗೆ ನೀರು ಸಿಗಲು ಸಾಧ್ಯ.

ಗ್ರಾಮಗಳತ್ತ ಬರುತ್ತವೆ

ಕಪ್ಪತ್ತಗುಡ್ಡ ಭಾಗದಲ್ಲಿ ಮಳೆಕೊರತೆಯಿಂದಾಗಿ ಕೆರೆಗಳೆಲ್ಲಾ ಬತ್ತುವ ಹಂತಕ್ಕೆ ಬಂದಿವೆ. ಈಗಾಗಲೇ ಕೆಲ ಕಾಡು ಪ್ರಾಣಿಗಳು ಕಪ್ಪತ್ತಗುಡ್ಡದ ಸಮೀಪದಲ್ಲಿಯೇ ಇರುವ ಗ್ರಾಮಗಳತ್ತ ಮತ್ತು ರೈತರು ತಮ್ಮ ತಮ್ಮ ಜಮೀನುಗಳಲ್ಲಿ ನೀರಾವರಿಗಾಗಿ ನಿರ್ಮಿಸಿಕೊಂಡಿರುವ ಸಣ್ಣ ನೀರು ಸಂಗ್ರಹಗಾರಗಳು, ಕೃಷಿ ಹೊಂಡಗಳತ್ತ ಬರುತ್ತಿವೆ ಎಂದು ಡೋಣಿ, ಅತ್ತಿಕಟ್ಟಿಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಖಚಿತ ಪಡಿಸುತ್ತಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಮಳೆಗಾಗಿ ಹಾಹಾಕಾರ, ಕಲಬುರಗಿಯಲ್ಲಿ ಮುಂಗಾರು ವಿಳಂಬ....

 

ಈ ವಿಷಯವಾಗಿ ಇತ್ತೀಚಿಗೆ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಚರ್ಚಿಸಲಾಗಿದೆ. ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಮಳೆಯಾದಲ್ಲಿ ಸಹಜವಾಗಿಯೇ ಸಮಸ್ಯೆ ಇತ್ಯರ್ಥವಾಗಲಿದೆ. ಇಲ್ಲವಾದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ಡಾ. ಚಂದ್ರು ಲಮಾಣಿ ಶಿರಹಟ್ಟಿಶಾಸಕ

ನಮ್ಮ ವನ್ಯಜೀವಿ ಸಂಪತ್ತು ಅಮೂಲ್ಯವಾಗಿದ್ದು, ಅದು ನಾಡಿನ ಆಸ್ತಿಯಾಗಿದೆ. ಮಳೆ ಕೊರತೆಯಿಂದಾಗಿ ಅಲ್ಪ ಮಟ್ಟಿನ ಸಮಸ್ಯೆಯಾಗಿದೆ. ಇದನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲಿಸಿ, ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತಾರೆ.

ಎಚ್‌.ಕೆ. ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ

click me!