
, ವಿಧಾನಸಭೆ (ಜು.4) : ವಿಧಾನಸಭೆಯಲ್ಲಿ ಸಂವಿಧಾನ ಪೀಠಿಕೆ ಓದುವ ಸಂಪ್ರದಾಯಕ್ಕೆ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಸೋಮವಾರ ಚಾಲನೆ ನೀಡಿದರು. ಆದರೆ ಇದೇ ವೇಳೆ, ಪೀಠಿಕೆ ಓದುವುದರಲ್ಲಿ ಆದ ಸಣ್ಣ ಲೋಪಗಳ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ ಮುಗಿದ ಬಳಿಕ ಸದನವನ್ನು ಮುಂದೂಡಿ ಮತ್ತೆ ಸಮಾವೇಶಗೊಳಿಸಲಾಯಿತು. ಈ ವೇಳೆ ಸದಸ್ಯರಿಗೆ ಮಾಹಿತಿ ನೀಡಿ, ಸಂವಿಧಾನ ಪೀಠಿಕೆ ಓದಲಾರಂಭಿಸಿದ ಸ್ಪೀಕರ್ ಯು.ಟಿ. ಖಾದರ್, ಸದಸ್ಯರಿಗೆ ಪುನರುಚ್ಛಾರ ಮಾಡುವಂತೆ ಕೋರಿದರು.
ಸಿದ್ದು 2.0 ಸರ್ಕಾರದ ಮೊದಲ ಅಧಿವೇಶನ ಆರಂಭ: ಹಸಿವು, ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕೆ ಸರ್ಕಾರ ಪಣ
ಈ ವೇಳೆ ಯು.ಟಿ. ಖಾದರ್(UT Khader), ಸಂವಿಧಾನ ಪೀಠಿಕೆ ಓದಿ ಮುಗಿಸಿದರು. ಸಂವಿಧಾನ ಪೀಠಿಕೆಯಲ್ಲಿ ನಡುವೆ ಅನುಚ್ಛೇದ 51-ಎ ಅಡಿ ಬರುವ ಮೂಲಭೂತ ಕರ್ತವ್ಯಗಳನ್ನು ನೆನಪಿಸಲು ಪ್ರಯತ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ಅಂಬೇಡ್ಕರ್ ಅವರ ರಚನೆಯ ಮೂಲ ಪೀಠಿಕೆಗೂ ನೀವು ಓದಿದ ಪೀಠಿಕೆಗೂ ವ್ಯತ್ಯಾಸವಿದೆ. ಮೂಲ ಪೀಠಿಕೆಯನ್ನು ತೋಚಿದಂತೆ ಓದಲು ಸಾಧ್ಯವಿಲ್ಲ. ಹೀಗಾಗಿ ನೀವು ಓದಿದ ಸಂವಿಧಾನದ ಪೀಠಿಕೆ ಬಗ್ಗೆ ನಮ್ಮ ವಿರೋಧವಿದೆ’ ಎಂದು ಹೇಳಿದರು. ಇದಕ್ಕೆ ಮತ್ತೋರ್ವ ಸದಸ್ಯ ಆರಗ ಜ್ಞಾನೇಂದ್ರ ದನಿಗೂಡಿಸಿದರು.
ಮತ್ತೆ ಮಾತನಾಡಿದ ಯತ್ನಾಳ್ ‘ಸಂವಿಧಾನ ಪೀಠಿಕೆ ಬೇಕಾದಂತೆ ಓದಲು ಬರುವುದಿಲ್ಲ. ನಮಗೂ, ನಿಮಗೂ ಒಂದೇ ಸಂವಿಧಾನ ಇರುವುದು. ಸಂವಿಧಾನ ಪೀಠಿಕೆಗೆ ಅಪಮಾನ ಮಾಡಬಾರದು’ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್‌ನ ಬಾಲಕೃಷ್ಣ ಸೇರಿದಂತೆ ಕೆಲ ಸದಸ್ಯರು ಸಂವಿಧಾನದ ಬಗ್ಗೆ ಯತ್ನಾಳ್ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ ಎಂದು ಕಿಚಾಯಿಸಿದರು.
ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ ಅವರು, ‘ಜ್ಯಾತ್ಯಾತೀತತೆ’ ಎಂಬ ಪದವೇ ಬರಲಿಲ್ಲ. ಜ್ಯಾತ್ಯಾತೀತತೆ ಪದ ಇಲ್ಲದೆ ಸಂವಿಧಾನ ಪೀಠಿಕೆ ಹೇಗೆ ಪೂರ್ಣವಾಗುತ್ತದೆ ಎಂದು ಆಕ್ಷೇಪಿಸಿದರು.
ಭ್ರಷ್ಟಾಚಾರದ ಬಗ್ಗೆ ಸುಮ್ಮನೆ ಮಾತನಾಡಿಲ್ಲ, ನನ್ನ ಬಳಿ ದಾಖಲೆಗಳಿವೆ: ಎಚ್‌ಡಿಕೆ
ವ್ಯತ್ಯಾಸವಾಗಿದ್ದರೂ ಅರ್ಥ ಒಂದೇ:
ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಸಭಾಧ್ಯಕ್ಷರು ಓದಿದ ಪೀಠಿಕೆಗೂ, ನಮಗೆ ಕೊಟ್ಟಿರುವ ಪೀಠಿಕೆಯಲ್ಲಿನ ಅಂಶಗಳಿಗೂ ವ್ಯತ್ಯಾಸವಾಗಿದೆ. ಆದರೆ, ಎರಡರ ಅರ್ಥ ಹಾಗೂ ಉದ್ದೇಶ ಒಂದೇ’ ಎಂದು ಸಮರ್ಥಿಸಿಕೊಂಡರು. ನಂತರ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಆಗಿರುವ ಲೋಪವನ್ನು ಸರಿಪಡಿಸಿಕೊಳ್ಳಲು ತಾವು ನೀಡಿರುವ ಸಲಹೆಯನ್ನು ಪರಿಗಣಿಸಲಾಗುವುದು. ಎಲ್ಲ ಸದಸ್ಯರು ಅವರವರ ಕ್ಷೇತ್ರಗಳಲ್ಲಿ ಸಂವಿಧಾನದ ಆಶಯಗಳ ಅನ್ವಯ ಸರ್ವರ ಏಳಿಗೆಗಾಗಿ ಶ್ರಮಿಸಬೇಕು ಎನ್ನುವ ಮೂಲಕ ತೆರೆ ಎಳೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ