ಮೊಟ್ಟೆ ಎಸೆತ ಪ್ರಕರಣದ ಬಳಿಕ ಎಚ್ಚೆತ್ತಿರುವ ರಾಜ್ಯ ಪೊಲೀಸ್ ಇಲಾಖೆ, ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಪೈಲೆಟ್ (ಬೆಂಗಾವಲು ವಾಹನ) ಭದ್ರತೆಯನ್ನು ರಾಜ್ಯ ವ್ಯಾಪ್ತಿ ವಿಸ್ತರಿಸಲು ನಿರ್ಧರಿಸಿದೆ.
ಬೆಂಗಳೂರು (ಆ.21): ಮೊಟ್ಟೆ ಎಸೆತ ಪ್ರಕರಣದ ಬಳಿಕ ಎಚ್ಚೆತ್ತಿರುವ ರಾಜ್ಯ ಪೊಲೀಸ್ ಇಲಾಖೆ, ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಪೈಲೆಟ್ (ಬೆಂಗಾವಲು ವಾಹನ) ಭದ್ರತೆಯನ್ನು ರಾಜ್ಯ ವ್ಯಾಪ್ತಿ ವಿಸ್ತರಿಸಲು ನಿರ್ಧರಿಸಿದೆ. ಅಲ್ಲದೆ, ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಪೈಲೆಟ್ ಹಾಗೂ ಎಸ್ಕಾರ್ಟ್ (ಬೆಂಗಾವಲು ವಾಹನಗಳು)ಗಳು ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ಸಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೂಚಿಸಿದ್ದಾರೆ.
ವಿರೋಧದ ಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಅವರು ಸಂಪುಟ ದರ್ಜೆ ಸಚಿವರ ಸ್ಥಾನಮಾನ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿಗಳಿಗೆ ಪೈಲೆಟ್ ಹಾಗೂ ಎಸ್ಕಾರ್ಟ್ ಬೆಂಗಾವಲು ವಾಹನಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ ಪೈಲೆಟ್ ವಾಹನವು ಬೆಂಗಳೂರಿಗೆ ಮಾತ್ರ ಸಿಮೀತವಾಗಿದ್ದು, ಎಸ್ಕಾರ್ಟ್ ರಾಜ್ಯವ್ಯಾಪ್ತಿ ಸಂಚರಿಸುತ್ತಿತ್ತು. ಮಡಿಕೇರಿಯಲ್ಲಿ ಮೊಟ್ಟೆಎಸೆತ ಪ್ರಕರಣದ ಬಳಿಕ ಈಗ ಎಸ್ಕಾರ್ಟ್ ಜೊತೆ ಪೈಲೆಟ್ ವಾಹನವನ್ನು ಸಹ ಮಾಜಿ ಮುಖ್ಯಮಂತ್ರಿಗಳ ಭದ್ರತೆಗೆ ನಿಯೋಜಿಸಲು ಅಧಿಕಾರಿಗಳು ಸೂಚಿಸಿದ್ದಾರೆ.
ಸಿದ್ದು ಕಾರಿಗೆ ಮೊಟ್ಟೆ ಎಸೆದಿದ್ದು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ಪೈಲೆಟ್ ವಾಹನಕ್ಕೆ ಓರ್ವ ಸಶಸ್ತ್ರ ಮೀಸಲು ಪಡೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಆರ್‌ಎಎಸ್‌ಐ), ಚಾಲಕ ಹಾಗೂ ಇಬ್ಬರು ಪೊಲೀಸರು ಇರುತ್ತಾರೆ. ಇಲ್ಲಿ ತಲಾ ನಾಲ್ವರಂತೆ ಪಾಳೆಯದಲ್ಲಿ 8 ಮಂದಿ ಕೆಲಸ ಮಾಡುತ್ತಾರೆ. ಅದೇ ರೀತಿ ಎಸ್ಟಾರ್ಟ್ ವಾಹನಕ್ಕೆ ಓರ್ವ ಸಶಸ್ತ್ರ ಮೀಸಲು ಪಡೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಆರ್‌ಎಎಸ್‌ಐ), ಚಾಲಕ ಹಾಗೂ ಮೂವರು ಪೊಲೀಸರು ಕರ್ತವ್ಯ ನಿರತರಾಗಿದ್ದು, ಈ ವಾಹನದಲ್ಲೂ ಸಹ ಐವರಂತೆ ಪಾಳೆಯದ ಮೇರೆಗೆ 10 ಮಂದಿ ದಿನದ 24 ತಾಸು ಕಾರ್ಯನಿರ್ವಹಿಸುತ್ತಾರೆ. ಪೈಲೆಟ್ ವಾಹನ ಮುಂದೆ ಮಧ್ಯೆದಲ್ಲಿ ಸಿದ್ದರಾಮಯ್ಯ ಅವರು ಪ್ರಯಾಣಿಸುವ ಕಾರು ಬಳಿಕ ಅದರ ಹಿಂದೆ ಎಸ್ಕಾರ್ಟ್ ವಾಹನ ಸಂಚರಿಸುತ್ತದೆ. ಅಲ್ಲದೆ ಬೆಂಗಳೂರಿನ ಗಾಂಧಿಭವನದ ಸಮೀಪದಲ್ಲಿರುವ ಸಿದ್ದರಾಮಯ್ಯ ಅವರ ಮನೆಯ ಕಡೆ ಗಸ್ತು ಕೂಡಾ ಹೆಚ್ಚಿಸಲಾಗಿದೆ.
ಕಾಂಗ್ರೆಸ್‌ನಿಂದ ಕಪ್ಪು ಬಾವುಟ ಪ್ರದರ್ಶನ: ಮಡಿಕೇರಿಯಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆಎಸೆದ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟಿಸಿದರು. ನಗರದ ಮೆಟ್ರೋಪೊಲ್ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಆದರೆ, ಈ ವಿಚಾರ ತಿಳಿದು ಸಚಿವ ಎಸ್.ಟಿ. ಸೋಮಶೇಖರ್ ಅವರು ಬೇರೆ ಮಾರ್ಗದಲ್ಲಿ ಕಲಾಮಂದಿರಕ್ಕೆ ತೆರಳಿದರು.
26ರಂದು ಸಿದ್ದರಾಮಯ್ಯ ಕೊಡಗಿಗೆ ಬರಲಿ ನೋಡೋಣ: ಬೋಪಯ್ಯ
ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಮೆಟ್ರೋಪೋಲ್ ವೃತ್ತದಿಂದ ಕಾಂಗ್ರೆಸ್ ಕಚೇರಿಗೆವರೆಗೆ ಸಚಿವ ಎಸ್.ಟಿ. ಸೋಮಶೇಖರ್ ವಿರುದ್ಧ ಘೋಷಣೆ ಕೂಗಿ, ಕಪ್ಪು ಬಾವುಟ ಪ್ರದರ್ಶನ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್, ಮುಖಂಡರಾದ ಭಾಸ್ಕರ್‌ಗೌಡ, ವೆಂಕಟೇಶ್, ಶಿವಮಲ್ಲು, ರಾಜಾರಾಂ ಮೊದಲಾದವರು ಇದ್ದರು.