ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ (29) ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಬೆಂಗಳೂರು (ನ.24) : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ (29) ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ನಗರದ ಜಿಗಣಿಯ ನಂದನವನ ಬಡಾವಣೆಯಲ್ಲಿ ಪ್ರಾಂಜಲ್ ಅವರ ತಂದೆ ತಾಯಿ ವಾಸವಾಗಿದ್ದು, ಗುರುವಾರ ಇಡೀ ದಿನ ಸಂಬಂಧಿಕರು, ಸೇನಾಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಆಗಮಿಸಿ ಸಾಂತ್ವನ ಹೇಳಿದರು. ಪ್ರಾಂಜಲ್ ಪಾರ್ಥಿವ ಶರೀರ ಶುಕ್ರವಾರ ಸಂಜೆ ಬಳಿಕ ಬರುವ ನಿರೀಕ್ಷೆಯಿದ್ದು, ಸೇನೆಯ ಶಿಷ್ಟಾಚಾರ, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಪಾಕಿಸ್ತಾನದ ಉಗ್ರನನ್ನು ಭಾರತೀಯ ಸೇನೆ ಹತ್ಯೆಗೈದಿದೆ. ಆದರೆ, ಅದಕ್ಕೂ ಮುನ್ನ ಉಗ್ರರು ಹಾಗೂ ಸೇನೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ ಯೋಧ ಪ್ರಾಂಜಲ್ ಸೇರಿ ನಾಲ್ವರು ಹುತಾತ್ಮರಾದರು.
ರಜೌರಿಯಲ್ಲಿ ಗುಂಡಿನ ಚಕಮಕಿ: ಮಂಗಳೂರಿನ ಕ್ಯಾ.ಪ್ರಾಂಜಲ್ ಸೇರಿ ನಾಲ್ವರು ಯೋಧರು ಹುತಾತ್ಮ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಎಂಆರ್‌ಪಿಎಲ್ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವೆಂಕಟೇಶ್ ಅವರ ಏಕೈಕ ಪುತ್ರ ಪ್ರಾಂಜಲ್ ಅವರು ಸೂರತ್ಕಲ್ ಮತ್ತು ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಪೂನಾದ ಸೇನೆ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿದ್ದರು. ಮಂಗಳೂರು, ಬೆಂಗಳೂರಿನಲ್ಲಿಯೂ ಶಿಕ್ಷಣ ಪೂರೈಸಿ ಸೇನೆ ಸೇರಿದ್ದರು. ಎರಡು ವರ್ಷಗಳ ಹಿಂದಷ್ಟೇ ಅದಿತಿ ಅವರನ್ನು ಮದುವೆಯಾಗಿ ಜಮ್ಮು ಕಾಶ್ಮೀರದಲ್ಲಿ ಜೀವನ ನಡೆಸುತ್ತಿದ್ದರು. ಪ್ರಾಂಜಲ್ ಅವರು ಭಾರತೀಯ ಸೇನೆಯ 63 ರಾಷ್ಟ್ರೀಯ ರೈಫಲ್ಸ್ ನಲ್ಲಿ ಕ್ಯಾಪ್ಟನ್ ಆಗಿದ್ದರು.
ಮೈಸೂರಿನಲ್ಲಿರುವ ಚಿಕ್ಕಪ್ಪನ ಮಗಳ ಮದುವೆಗೆಂದು ನವೆಂಬರ್ 1ರಂದು ಪ್ರಾಂಜಲ್ ಮೈಸೂರಿಗೆ ಬಂದಿದ್ದರು.
ಮೃತ ದೇಹವನ್ನು ಸೇನೆಯು ಜಮ್ಮು ಕಾಶ್ಮೀರದಿಂದ ರವಾನಿಸಿದ್ದು, ಶುಕ್ರವಾರ ಬೆಂಗಳೂರಿಗೆ ಬರಲಿದೆ. ಬಳಿಕ ಪಾರ್ಥಿವ ಶರೀರವನ್ನು ಮೃತರ ಸ್ವಗೃಹಕ್ಕೆ ತಂದು ಅಂತಿಮ ವಿಧಿ ವಿಧಾನ ನಡೆಸಲಾಗುತ್ತದೆ.
ಸೇನೆ ಹಿಂಪಡೀರಿ: ಮಾಲ್ಡೀವ್ಸ್ ಅಧ್ಯಕ್ಷನಿಂದ ಭಾರತಕ್ಕೆ ಸೂಚನೆ :ಹಳೆಯ ನೆರವು ಮರೆತ ಮುಯಿಜ್
ಪುತ್ರನ ತ್ಯಾಗದ ಬಗ್ಗೆ ಹೆಮ್ಮೆ ಇದೆ: ತಂದೆ
ಕ್ಯಾಪ್ಟನ್ ಪ್ರಾಂಜಲ್ ಅವರ ಬಗ್ಗೆ ಮಾತನಾಡಿರುವ ತಂದೆ ವೆಂಕಟೇಶ್ ಅವರು, ಪುತ್ರ ಶೋಕದಲ್ಲೂ ಮಗನ ಬಗ್ಗೆ ಹೆಮ್ಮೆಯಿದೆ. ಮಗ ತುಂಬಾ ಮೃದು ಸ್ವಭಾವದವ. ಎಂದಿದ್ದಾರೆ. ಚಿಕ್ಕ ವಯಸ್ಸಿನಲ್ಲೂ ಸೈನಿಕನಾಗಬೇಕು ಅಂತಿದ್ದ ಪ್ರಾಂಜಲ್ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವುದಕ್ಕೆ ಗರ್ವವಿದೆ. ಪ್ರಾಂಜಲ್ ತ್ಯಾಗ, ಬಲಿದಾನ ಅನನ್ಯ. ಪ್ರಾಂಜಲ್ ರೀತಿ ಜೀವವನ್ನು ಮುಡಿಪಾಗಿಟ್ಟು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವವರು ಹಲವರಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಗನನ್ನು ನಗುತ್ತ ಕಳಿಸುತ್ತೇವೆ ಎಂದು ಹೇಳಿದರು.